ಬೆಳ್ಳಂಬೆಳಿಗ್ಗೆ ಕರ್ನಾಟಕದ ಹಲವೆಡೆ ಭೀಕರ ಅಪಘಾತ; 18 ವರ್ಷದ ವಿದ್ಯಾರ್ಥಿ ಸೇರಿ 14 ಮಂದಿ ಸಾವು
ಕನ್ನಡ ಸುದ್ದಿ  /  ಕರ್ನಾಟಕ  /  ಬೆಳ್ಳಂಬೆಳಿಗ್ಗೆ ಕರ್ನಾಟಕದ ಹಲವೆಡೆ ಭೀಕರ ಅಪಘಾತ; 18 ವರ್ಷದ ವಿದ್ಯಾರ್ಥಿ ಸೇರಿ 14 ಮಂದಿ ಸಾವು

ಬೆಳ್ಳಂಬೆಳಿಗ್ಗೆ ಕರ್ನಾಟಕದ ಹಲವೆಡೆ ಭೀಕರ ಅಪಘಾತ; 18 ವರ್ಷದ ವಿದ್ಯಾರ್ಥಿ ಸೇರಿ 14 ಮಂದಿ ಸಾವು

Road Accident: ಇಂದು (ಜನವರಿ 22) ಬೆಳ್ಳಂಬೆಳಿಗ್ಗೆ ಕರ್ನಾಟಕದ ಹಲವೆಡೆ ಭೀಕರ ಅಪಘಾತ ಸಂಭವಿಸಿದ್ದು, 18 ವರ್ಷದ ವಿದ್ಯಾರ್ಥಿ ಸೇರಿ 14 ಮಂದಿ ಸಾವನ್ನಪ್ಪಿದ್ದಾರೆ.

ಬೆಳ್ಳಂಬೆಳಿಗ್ಗೆ ಕರ್ನಾಟಕದ ಹಲವೆಡೆ ಭೀಕರ ಅಪಘಾತ; 18 ವರ್ಷದ ವಿದ್ಯಾರ್ಥಿ ಸೇರಿ 14 ಮಂದಿ ಸಾವು
ಬೆಳ್ಳಂಬೆಳಿಗ್ಗೆ ಕರ್ನಾಟಕದ ಹಲವೆಡೆ ಭೀಕರ ಅಪಘಾತ; 18 ವರ್ಷದ ವಿದ್ಯಾರ್ಥಿ ಸೇರಿ 14 ಮಂದಿ ಸಾವು

ಬೆಂಗಳೂರು: ಇಂದು ಬೆಳ್ಳಂಬೆಳಿಗ್ಗೆ ಕರ್ನಾಟಕದ ವಿವಿಧೆಡೆ ಸಂಭವಿಸಿರುವ ಅಪಘಾತ ಪ್ರಕರಣಗಳಲ್ಲಿ ಶಾಲಾ ಮಕ್ಕಳು ಮೂವರು ಸೇರಿ ಒಟ್ಟು 14 ಮಂದಿ ಮೃತಪಟ್ಟಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಗುಳ್ಳಾಪುರದಲ್ಲಿ ತರಕಾರಿ ಟ್ರಕ್ ಪಲ್ಟಿಯಾಗಿ ಭೀಕರ ದುರಂತ ನಡೆದಿದ್ದು, 10 ಮಂದಿ ಸಾವನ್ನಪ್ಪಿದ್ದಾರೆ. 40ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಮತ್ತೊಂದು ಪ್ರಕರಣದಲ್ಲಿ ರಾಯಚೂರು ಜಿಲ್ಲೆಯ ಸಿಂಧನೂರು ಸಮೀಪ ಅರಗಿನಮರ ಕ್ಯಾಂಪ್ ಬಳಿ ಇಂದು (ಜನವರಿ 22) ನಸುಕಿನ ವೇಳೆ ಕ್ರೂಸರ್ ವ್ಯಾನ್‌ ಪಲ್ಪಿಯಾಗಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ಚಾಲಕ ಮತ್ತು ಮೂವರು ವಿದ್ಯಾರ್ಥಿಗಳು ದುರ್ಮರಣಕ್ಕೀಡಾಗಿದ್ದಾರೆ. 10 ಯಾತ್ರಿಕರು ಗಾಯಗೊಂಡಿದ್ದಾರೆ.

ಯಲ್ಲಾಪುರ: 10 ಮಂದಿ ದುರ್ಮರಣ

ಹಾವೇರಿಯ ಸವಣೂರಿನಿಂದ ಕುಮಟಾದ ಸಂತೆಗೆ ತೆರಳುತ್ತಿದ್ದ ಲಾರಿಯಲ್ಲಿ ಸುಮಾರು 40ಕ್ಕೂ ಹೆಚ್ಚು ವ್ಯಾಪಾರಸ್ಥರು ತರಕಾರಿಗಳನ್ನು ತುಂಬಿಕೊಂಡು ಹೋಗುತ್ತಿದ್ದರು. ಆದರೆ ಈ ವೇಳೆ ಯಲ್ಲಾಪುರದ ಅರೆಬೈಲ್ ಘಟ್ಟದ ಬಳಿ ಲಾರಿ ಕಂದಕಕ್ಕೆ ಉರುಳಿದೆ‌. ಪರಿಣಾಮ ಲಾರಿಯಲ್ಲಿದ್ದ 10 ಹೆಚ್ಚು ಮಂದಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಮೃತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಯಲ್ಲಾಪುರದ ಗುಳ್ಳಾಪುರದಲ್ಲಿ ಸಂಭವಿಸಿದ ಅವಘಡದಲ್ಲಿ ವಾಸೀಮ್ ವಿರುಲ್ಲಾ ಮುಡಗೇರಿ (35), ಫಯಾಜ್ ಇಮಾಮ್ ಸಾಬ್ ಜಮಖಂಡಿ (45), ಇಜಾಜ್ ಮುಸ್ತಕಾ ಮುಲ್ಲಾ (20), ಸಾದೀಕ್ ಭಾಷ್ ಫಾರಷ್ (30), ಗುಲಾಮ್ಉಷೇನ್ ಜವಳಿ (40), ಇಮ್ತಿಯಾಜ್ ಮಮಜಾಪರ್ ಮುಳಕೇರಿ (36), ಅಲ್ಪಾಜ್ ಜಾಫರ್ ಮಂಡಕ್ಕಿ (25), ಜೀಲಾನಿ ಅಬ್ದುಲ್ ಜಖಾತಿ( 25), ಅಸ್ಲಂ ಬಾಬುಲಿ ಬೆಣ್ಣಿ (24) ಅವರು ಮೃತಪಟ್ಟಿದ್ದಾರೆ. ಮತ್ತೊಬ್ಬರ ಹೆಸರು ತಿಳಿದು ಬಂದಿಲ್ಲ.

ಸಿಂಧನೂರು: ವಿದ್ಯಾರ್ಥಿ ಸೇರಿ ನಾಲ್ವರು ಸಾವು

ಮಂತ್ರಾಲಯದಿಂದ ಕೊಪ್ಪಳದ ಆನೆಗುಂದಿಯ ನರಹರಿ ತೀರ್ಥರ ವೃಂದಾವನಕ್ಕೆ ತೆರಳುತ್ತಿದ್ದ ಸಂಸ್ಕೃತ ಪಾಠಶಾಲೆ ಮಕ್ಕಳಿದ್ದ ಕ್ರೂಸರ್ ವ್ಯಾನ್ ಅಪಘಾತಕ್ಕೀಡಾಗಿದೆ. ಕ್ರೂಸರ್ ವ್ಯಾನ್‌ನಲ್ಲಿ 14 ಮಂದಿ ಇದ್ದರು. ಆದರೆ ನರಹರಿ ತೀರ್ಥರ ವೃಂದಾವನದಲ್ಲಿ ಆರಾಧನಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಪ್ರಯಾಣಿಸುತ್ತಿದ್ದರು. ಆದರೆ ನಸುಕಿನ ವೇಳೆ ಪ್ರಯಾಣಿಸುತ್ತಿದ್ದಾಗ ವ್ಯಾನ್‌ ಟೈರ್ ಸ್ಪೋಟಗೊಂಡಿದೆ. ಹೀಗಾಗಿ ನಿಯಂತ್ರಣ ಕಳೆದುಕೊಂಡು ವ್ಯಾನ್ ಪಲ್ಟಿ ಹೊಡೆದು ರಸ್ತೆಯಲ್ಲಿ ಬಿದ್ದಿದೆ. ಅತಿ ವೇಗದ ಚಾಲನೆ ಕಾರಣ ವಾಹನ ನಿಯಂತ್ರಿಸಲು ಚಾಲಕ ವಿಫಲನಾಗಿದ್ದಾನೆ ಎಂದು ಹೇಳಲಾಗಿದೆ. ಸ್ಥಳದಲ್ಲೇ ಚಾಲಕ ಮತ್ತು ಮೂವರು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟರೆ, ಗಂಭೀರ ಗಾಯಗೊಂಡವರನ್ನು ಸಿಂಧನೂರು ತಾಲೂಕು ಆಸ್ಪತ್ರೆಯಿಂದ ರಾಯಚೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಮರಣೋತ್ತರ ಪರೀಕ್ಷೆ ಮುಗಿಸಿ ಮೃತ ದೇಹಗಳನ್ನು ಅವರ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ. ಚಾಲಕನ ಅತೀ ವೇಗ ಹಾಗೂ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣವಿರಬಹುದು ಎಂದು ಶಂಕಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಿಂಧನೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಅಪಘಾತಕ್ಕೆ ಕಾರಣವೇನು ಎಂಬುದ ತನಿಖೆ ನಡೆದಿದೆ. ಈ ದುರಂತದ ಮಾಹಿತಿ ಸಿಗುತ್ತಿದ್ದಂತೆ ಮಂತ್ರಾಲಯದ ಸುಬುಧೇಂದ್ರ ತೀರ್ಥ ಸ್ವಾಮೀಜಿ ತಕ್ಷಣವೇ ಸಿಂಧನೂರಿಗೆ ಆಗಮಿಸಿದ್ದಾರೆ. ಸಿಂಧನೂರು ಸಮೀಪ ಸಂಭವಿಸಿದ ದುರಂತದಲ್ಲಿ ಮೃತರನ್ನು ಕ್ರೂಸರ್ ಚಾಲಕ ಕಂಸಾಲಿ ಶಿವ (24), ಮಂತ್ರಾಲಯದ ಸಂಸ್ಕೃತ ಪಾಠ ಶಾಲೆಯ ವಿದ್ಯಾರ್ಥಿಗಳಾದ ಹಯವದನ (18), ಸುಜಯೇಂದ್ರ (22), ಅಭಿಲಾಷ್​(20) ಎಂದು ಗುರುತಿಸಲಾಗಿದೆ.

Whats_app_banner