ಕನ್ನಡ ಸುದ್ದಿ  /  Karnataka  /  Adani Is A Symbol Of Corruption, Rahul Gandhi Speach In Kolar Pcp

Rahul Gandhi in Karnataka: ಅದಾನಿ ಬಗ್ಗೆ ಪ್ರಶ್ನಿಸಿದರೆ ಮೈಕ್‌ ಆಫ್‌, ಅದಾನಿಯು ಮೋದಿಗೆ ಭ್ರಷ್ಟಾಚಾರದ ಮಾದರಿ: ರಾಹುಲ್‌ ಗಾಂಧಿ ವಾಗ್ದಾಳಿ

Rahul Gandhi in Karnataka: ಅದಾನಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭ್ರಷ್ಟಾಚಾರದ ಮಾದರಿಯಾಗಿದ್ದಾರೆ. ಒಬ್ಬ ವ್ಯಕ್ತಿ ದೇಶದ ಎಲ್ಲಾ ಮೂಲಸೌಕರ್ಯ ಕ್ಷೇತ್ರದ ಸಂಪತ್ತನ್ನು ಪಡೆಯುತ್ತಾನೆ ಇದು 21ನೇ ಶತಮಾನದ ಇತಿಹಾಸ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವ್ಯಂಗ್ಯವಾಡಿದ್ದಾರೆ.

ರಾಹುಲ್‌ ಗಾಂಧಿ
ರಾಹುಲ್‌ ಗಾಂಧಿ

ಕೋಲಾರ: ಅದಾನಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭ್ರಷ್ಟಾಚಾರದ ಮಾದರಿಯಾಗಿದ್ದಾರೆ. ಒಬ್ಬ ವ್ಯಕ್ತಿ ದೇಶದ ಎಲ್ಲಾ ಮೂಲಸೌಕರ್ಯ ಕ್ಷೇತ್ರದ ಸಂಪತ್ತನ್ನು ಪಡೆಯುತ್ತಾನೆ ಇದು 21ನೇ ಶತಮಾನದ ಇತಿಹಾಸ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ. ಕೋಲಾರದಲ್ಲಿ ನಡೆದ ಜೈ ಭಾರತ ಸಮಾವೇಶದಲ್ಲಿ ಭಾಗವಹಿಸಿದ ರಾಹುಲ್ ಗಾಂಧಿ ಅವರು ಅದಾನಿ ವಿಷಯವನ್ನು ಮತ್ತೊಮ್ಮೆ ಕೆದಕಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ನಾನು ಸಂಸತ್ತಿನಲ್ಲಿ ಅಧಾನಿ ಅವರ ಬಗ್ಗೆ ಪ್ರಶ್ನೆ ಕೇಳಿದಾಗ, ಅವರು ನನ್ನ ಮೈಕ್ ಆಫ್ ಮಾಡಿದ್ದರು. ನಾನು ಪ್ರಧಾನಮಂತ್ರಿಗಳಿಗೆ ಅದಾನಿ ಅವರ ಜತೆಗಿನ ಸಂಬಂಧವೇನು ಎಂದು ಕೇಳಿದೆ. ನಾನು ಸಂಸತ್ತಿನಲ್ಲಿ ಮೋದಿ ಅವರು ಹಾಗೂ ಅದಾನಿ ಅವರ ವಿಮಾನದಲ್ಲಿ ವಿಶ್ರಾಂತಿ ಪಡೆಯುತ್ತಿರುವ ಚಿತ್ರ ತೋರಿಸಿದೆ. ನಿಮ್ಮ ನಡುವಿನ ಸಂಬಂಧವೇನು ಎಂದು ಕೇಳಿದೆ. ದೇಶದ ವಿಮಾನನಿಲ್ದಾಣಗಳು ಅದಾನಿಗೆ ನೀಡುತ್ತಿದ್ದು, ಇದಕ್ಕಾಗಿ ನಿಯಮ ಬದಲಾಯಿಸಿದ್ದು ಯಾಕೆ? ಎಂದು ಕೇಳಿದೆ. ಈ ಹಿಂದೆ ವಿಮಾನ ನಿಲ್ಧಾಣವನ್ನು ಅನುಭವಿಗಳಿಗೆ ನೀಡಬೇಕು ಎಂಬ ನಿಯಮವಿತ್ತು, ಆದರೆ ಅದಾನಿ ಅವರಿಗೆ ಅನುಭವವಿಲ್ಲದಿದ್ದರೂ ಅವರಿಗೆ ವಿಮಾನ ನಿಲ್ದಾಣ ನೀಡುತ್ತಿರುವುದೇಕೆ? ಎಂದು ರಾಹುಲ್‌ ಗಾಂಧಿ ಪ್ರಶ್ನಿಸಿದ್ದಾರೆ.

ರಾಹುಲ್‌ ಗಾಂಧಿ ಹೇಳಿದ್ದೇನು?

ಮುಂಬೈ ವಿಮಾನ ನಿಲ್ದಾಣ ಅದಾನಿಗೆ ಕೊಟ್ಟರು. ಈ ವಿಮಾನ ನಿರ್ಮಾಣ ಮಾಡಿದವರ ವಿರುದ್ಧ ಇಡಿ ಐಟಿ ದಾಳಿ ಮಾಡಿಸಿ ಅವರಿಂದ ಕಿತ್ತು ಅದಾನಿಗೆ ಕೊಟ್ಟಿದ್ದಾರೆ. ಪ್ರಧಾನಿ ಆಸ್ಟ್ರೇಲಿಯಾದ ವೇದಿಕೆಯಲ್ಲಿ ಅದಾನಿ ಹಾಗೂ ಎಸ್ಬಿಐ ಅಧಿಕಾರಿಗಳು ಕೂತಿದ್ದರು. ನಂತರ ಸಾವಿರಾರು ಕೋಟಿ ಹಣವನ್ನು ಎಸ್ಬಿಐ ನಿಂದ ಅದಾನಿ ಅವರಿಗೆ ಸಾಲ ಸಿಗುತ್ತದೆ. ಯಾವ ಅಧಿಕಾರದಿಂದ ಈ ಸಾಲ ಕೊಟ್ಟರು. ಶ್ರೀಲಂಕಾ ಬಂದರಿನ ಅಧ್ಯಕ್ಷರ ಪ್ರಕಾರ ಲಂಕಾದ ಬಂದರುಗಳನ್ನು ಅದಾನಿ ಅವರಿಗೆ ನೀಡಲು ಮೋದಿ ಅವರು ಹೇಳಿದ್ದರು ಎಂದಿದ್ದಾರೆ.

ಮೋದಿ ಅವರು ಬಾಂಗ್ಲಾದೇಶ ಪ್ರವಾಸ ಮಾಡಿದ ಬೆನ್ನಲ್ಲೇ ಅದಾನಿ ಅವರಿಗೆ ಬಾಂಗ್ಲಾದೇಶದಲ್ಲಿ ಗುತ್ತಿಗೆ ಸಿಗುತ್ತದೆ. ಪ್ರಧಾನಿ ಇಸ್ರೇಲ್ ಪ್ರವಾಸ ಮಾಡಿದ ನಂತರ ಅಲ್ಲಿಯೂ ಅದಾನಿ ಅವರಿಗೆ ಬಂದರು ಹಾಗೂ ರಕ್ಷಣಾ ವಲಯದ ಗುತ್ತಿಗೆಯನ್ನು ಕೊಡಿಸುತ್ತಾರೆ. ಹೀಗಾಗಿ ಪ್ರಧಾನಮಂತ್ರಿಗಳಿಗೆ ಅದಾನಿ ಅವರ ಬೋನಾಮಿ ಕಂಪನಿಗಳು ಯಾರದ್ದು, ಇದರಲ್ಲಿರುವ 20 ಸಾವಿರ ಕೋಟಿ ಯಾರದ್ದು ಎಂದು ಕೇಳಿದೆ.

ನಂತರ ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಸರ್ಕಾರವೇ ಸಂಸತ್ತನ್ನು ನಡೆಯಲು ಬಿಡಲಿಲ್ಲ. ಸರ್ಕಾರದ ಸಂಸದರೇ ಸಂಸತ್ತಿನ ಕಲಾಪಕ್ಕೆ ಅಡ್ಡಿಪಡಿಸಿದರು. ನಂತರ ಬಿಜೆಪಿ ಮಂತ್ರಿಗಳು ನನ್ನ ವಿರುದ್ಧ ಸುಳ್ಳು ಹೇಳಿದರು. ಸಂಸತ್ತಿನ ನಿಯಮದ ಪ್ರಕಾರ ಒಬ್ಬ ಸದಸ್ಯ ಮತ್ತೊಬ್ಬ ಸದಸ್ಯನ ಬಗ್ಗೆ ಮಾತನಾಡಿದಾಗ ಆತನಿಗೆ ಮಾತನಾಡಲು ಅವಕಾಶ ನೀಡಬೇಕು. ಹೀಗಾಗಿ ನನ್ನ ಮೇಲಿನ ಆರೋಪದ ಬಗ್ಗೆ ಮಾತನಾಡಲು ಸ್ಪೀಕರ್ ಅವರಿಗೆ 2 ಬಾರಿ ಪತ್ರ ಬರೆದೆ. ಆದರೆ ಅವಕಾಶ ನೀಡಲಿಲ್ಲ. ನಂತರ ಸ್ಪೀಕರ್ ಅವರ ಕಚೇರಿಗೆ ಹೋಗಿ ಉತ್ತರ ನೀಡಲು ಅವಕಾಶ ನೀಡಿ ಎಂದು ಕೇಳಿದೆ. ಆದರೆ ಅವರು ನಗುತ್ತಾ ನಾನು ಏನು ಮಾಡಲು ಸಾಧ್ಯವಿಲ್ಲ ಎಂದರು. ನೀವು ಸ್ಪೀಕರ್ ಆಗಿದ್ದು, ನೀವು ಅವಕಾಶ ನೀಡುವ ಅಧಿಕಾರವಿದೆ, ಆದರೂ ಯಾಕೆ ಅವಕಾಶ ನೀಡುತ್ತಿಲ್ಲ ಎಂದು ಕೇಳಿದೆ. ಪುನಃ ನಗುತ್ತಾ ನನ್ನತ್ತ ನೋಡಿದರು.

ಅವರಿಗೆ ನಾನು ಸಂಸತ್ತಿನಲ್ಲಿ ಅದಾನಿ ಅವರ ಬಗ್ಗೆ ಪ್ರಸ್ತಾಪ ಮಾಡುವುದು ಬೇಕಾಗಿಲ್ಲ. ನಂತರ ನನ್ನನ್ನು ಸಂಸತ್ತಿನಿಂದ ಅನರ್ಹರನ್ನಾಗಿ ಮಾಡುತ್ತಾರೆ. ಇದರಿಂದ ಅವರು ಹೆದರಿಸಬಹುದು ಎಂದು ಭಾವಿಸಿರಬಹುದು. ಆದರೆ ನಾನು ಇದಕ್ಕೆಲ್ಲಾ ಹೆದರುವವನಲ್ಲ. ನಾನು ಮತ್ತೆ ಮತ್ತೆ ಪ್ರಧಾನಮಂತ್ರಿಗಳಿಗೆ ಅದಾನಿ ಅವರ ಜತೆಗಿನ ಸಂಬಂಧ ಹಾಗೂ ಅದಾನಿ ಅವರ ಬೇನಾಮಿ ಕಂಪನಿಗಳಲ್ಲಿರುವ 20 ಸಾವಿರ ಕೋಟಿ ಯಾರದ್ದು ಎಂದು ಈಗಲೂ ಪ್ರಶ್ನೆ ಮಾಡುತ್ತೇನೆ. ಈ ಪ್ರಶ್ನೆಗೆ ಉತ್ತರ ಸಿಗುವವರೆಗೂ ಹೋರಾಟ ಮುಂದುವರಿಸುತ್ತೇನೆ. ನೀವು ನನ್ನನ್ನು ಅನ್ರಹರನ್ನಾಗಿ ಮಾಡಿರಿ, ಜೈಲಿಗೆ ಹಾಕಿರಿ ನನಗೆ ಯಾವುದೇ ತೊಂದರೆ ಇಲ್ಲ.

ಅದಾನಿ ಅವರು ಮೋದಿ ಅವರಿಗೆ ಭ್ರಷ್ಟಾಚಾರದ ಮಾದರಿಯಾಗಿದ್ದಾರೆ. ಒಬ್ಬ ವ್ಯಕ್ತಿ ದೇಶದ ಎಲ್ಲಾ ಮೂಲಸೌಕರ್ಯ ಕ್ಷೇತ್ರದ ಸಂಪತ್ತನ್ನು ಪಡೆಯುತ್ತಾನೆ ಇದು 21ನೇ ಶತಮಾನದ ಇತಿಹಾಸ. ಸಾವಿರಾರು ಕೋಟಿ ಹಣ ಮಾಯಾ ಮಂತ್ರದಂತೆ ಅವರ ಖಾತೆಗೆ ಬರುತ್ತದೆ.ಅದಾನಿ ಅವರ ರಕ್ಷಣಾ ಸಂಸ್ಥೆಯ ನಕಲಿ ಕಂಪನಿಯಲ್ಲಿ ಚೀನಾದ ವ್ಯಕ್ತಿ ನಿರ್ದೇಶಕರಾಗಿದ್ದಾರೆ. ಈತನನ್ನು ಯಾರು, ಯಾಕೆ ಕೂರಿಸಿದ್ದಾರೆ ಎಂಬುದರ ಬಗ್ಗೆ ಯಾರೂ ತನಿಖೆ ಮಾಡುತ್ತಿಲ್ಲ. ಕೇವಲ ಜನರ ಗಮನ ಬೇರೆಡೆ ಸೆಳೆಯಲು ಪ್ರಯತ್ನಿಸುತ್ತಾರೆ.

ನಾನು ಹಿಂದುಳಿದ ವರ್ಗಗಳಿಗೆ ಅಪಮಾನ ಮಾಡುತ್ತೇನೆ ಎಂದು ಸುಳ್ಳು ಹೇಳುತ್ತೇನೆ. ಹಿಂದುಳಿದವರು, ದಲಿತರ ಬಗ್ಗೆ ಮಾತನಾಡಿದರೆ ಅವರ ದೊಡ್ಡ ಸವಾಲು ಏನು? ಯಾರ ಜನಸಂಖ್ಯೆ ಹೆಚ್ಚಾಗಿದೆ? ಮೋದಿ ಅವರ ಸರ್ಕಾರದಲ್ಲಿರುವ ಕಾರ್ಯದರ್ಶಿ ಮಟ್ಟದ ಅಧಿಕಾರಿಗಳನ್ನು ನೋಡಿದರೆ ಕೇವಲ ಶೇ.7ರಷ್ಟು ಮಂದಿ ಮಾತ್ರ ದಲಿತರು, ಹಿಂದುಳಿದವರು, ಆದಿವಾಸಿಗಳು ಇದ್ದಾರೆ. ಭಾರತದಲ್ಲಿ ಎಷ್ಟು ಜನ ಓಬಿಸಿ, ದಲಿತರು, ಆದಿವಾಸಿಗಳಿದ್ದಾರೆ? ಸಂಪತ್ತು, ಅಧಿಕಾರ ಹಂಚಿಕೆ ವಿಚಾರ ಮಾತನಾಡುವುದಾದರೆ ಯಾರಿಗೆ ಹೆಚ್ಚಿನ ಪಾಲು ಸಿಗಬೇಕು. ನಿಮ್ಮ ಸರ್ಕಾರದಲ್ಲಿ ಕೇವಲ ಶೇ.7ರಷ್ಟು ಮಾತ್ರ ಒಬಿಸಿ ಹಾಗೂ ದಲಿತರು ಇರುವುದೇಕೆ ಎಂದು ಉತ್ತರಿಸಿ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ. ಮೋದಿ ಅವರು ಅದಾನಿಯಂತಹವರಿಗೆ ನೆರವು ನೀಡುತ್ತಿದೆ. ಕಾಂಗ್ರೆಸ್ ಸರ್ಕಾರ ಕರ್ನಾಟಕದ ರೈತರು, ಕಾರ್ಮಿಕರು ಸಣ್ಣ ಉದ್ಯಮಿಗಳಿಗೆ ನರವು ನೀಡುತ್ತದೆ. ಮೋದಿ ಸರ್ಕಾರ ಕೋಟ್ಯಾಧಿಪತಿಗಳಿಗೆ ಮಾತ್ರ ಬ್ಯಾಂಕುಗಳ ಬಾಗಿಲನ್ನು ತೆಗೆದಿದ್ದು, ಕಾಂಗ್ರೆಸ್ ಸರ್ಕಾರ ಜನಸಾಮಾನ್ಯರಿಗಾಗಿ ಬ್ಯಾಂಕುಗಳ ಬಾಗಿಲು ತೆಗೆಯಲಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರೈತರು, ಬಡವರು, ಕಾರ್ಮಿಕರ ಸರ್ಕಾರವಾಗಲಿದೆ.

ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲಿ ಒಟ್ಟಾಗಿ ಹೋರಾಟ ಮಾಡುತ್ತಿರುವುದು ಸಂತೋಷದ ವಿಚಾರ. ಕಾಂಗ್ರೆಸ್ ಪಕ್ಷ ಇಲ್ಲಿ ಸ್ಪಷ್ಟ ಬಹುಮತದಿಂದ ಗೆಲುವು ಸಾಧಿಸಬೇಕಾಗಿದೆ. ಒಂದು ಮಾತು ನೆನಪಿನಲ್ಲಿಡಿ. ಬಿಜೆಪಿ ಸರ್ಕಾರ 40% ಕಮಿಷನ್ ಹಣದಲ್ಲಿ ಸರ್ಕಾರವನ್ನು ಬೀಳಿಸಲು ಪ್ರಯತ್ನಿಸುತ್ತಾರೆ. ನಿಮ್ಮಿಂದ ಕದ್ದ ಹಣದಲ್ಲಿ ಸರ್ಕಾರ ಬೀಳಿಸಿ ಮತ್ತೆ ಅಧಿಕಾರಕ್ಕೆ ಬರಲು ಪ್ರಯತ್ನಿಸುತ್ತಾರೆ. ಹೀಗಾಗಿ ನೀವು ಕನಿಷ್ಠ 150 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಿಸಬೇಕು. ಆಗ ಬಿಜೆಪಿಗೆ ಭ್ರಷ್ಟಾಚಾರ ಮಾಡಲು ಅವಕಾಶ ತಪ್ಪಿಸಬಹುದು ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ.

IPL_Entry_Point