Indian Railways: ಹೊಸ ವರ್ಷದಿಂದ ಕರ್ನಾಟಕದಲ್ಲಿ ಸಂಚರಿಸುವ ಪ್ರಮುಖ ರೈಲುಗಳಿಗೆ ತಾತ್ಕಾಲಿಕವಾಗಿ ಎಸಿ ಬೋಗಿ ಜೋಡಣೆ
ಕನ್ನಡ ಸುದ್ದಿ  /  ಕರ್ನಾಟಕ  /  Indian Railways: ಹೊಸ ವರ್ಷದಿಂದ ಕರ್ನಾಟಕದಲ್ಲಿ ಸಂಚರಿಸುವ ಪ್ರಮುಖ ರೈಲುಗಳಿಗೆ ತಾತ್ಕಾಲಿಕವಾಗಿ ಎಸಿ ಬೋಗಿ ಜೋಡಣೆ

Indian Railways: ಹೊಸ ವರ್ಷದಿಂದ ಕರ್ನಾಟಕದಲ್ಲಿ ಸಂಚರಿಸುವ ಪ್ರಮುಖ ರೈಲುಗಳಿಗೆ ತಾತ್ಕಾಲಿಕವಾಗಿ ಎಸಿ ಬೋಗಿ ಜೋಡಣೆ

ಭಾರತೀಯ ರೈಲ್ವೆಯ ಹುಬ್ಬಳ್ಳಿ ಕೇಂದ್ರಿತ ನೈರುತ್ಯ ರೈಲ್ವೆಯು ಕರ್ನಾಟಕದಲ್ಲಿ ಸಂಚರಿಸುವ ಪ್ರಮುಖ ರೈಲುಗಳಿಗೆ ಹೆಚ್ಚುವರಿ ಎಸಿ ಬೋಗಿಯನ್ನು ಆಳವಡಿಸಲು ಮುಂದಾಗಿದೆ.

ಕರ್ನಾಟಕದಲ್ಲಿ ಸಂಚರಿಸುವ ಕೆಲವು ರೈಲುಗಳಿ ಎಸಿ ಬೋಗಿಗಳನ್ನು ಹೆಚ್ಚುವರಿಯಾಗಿ ಅಳವಡಿಸಲಾಗುತ್ತಿದೆ.
ಕರ್ನಾಟಕದಲ್ಲಿ ಸಂಚರಿಸುವ ಕೆಲವು ರೈಲುಗಳಿ ಎಸಿ ಬೋಗಿಗಳನ್ನು ಹೆಚ್ಚುವರಿಯಾಗಿ ಅಳವಡಿಸಲಾಗುತ್ತಿದೆ.

ಹುಬ್ಬಳ್ಳಿ: ಕರ್ನಾಟಕದಲ್ಲಿ ಸಂಚರಿಸುವ ಪ್ರಮುಖ ರೈಲುಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿರುವ ಜತೆಗೆ ಮುಂಗಡ ಬುಕ್ಕಿಂಗ್‌ಗೆ ಭಾರೀ ಬೇಡಿಕೆ ಬರುತ್ತಿರುವುದರಿಂದ ಹುಬ್ಬಳ್ಳಿ ಕೇಂದ್ರಿತ ನೈರುತ್ಯ ರೈಲ್ವೆ ವಲಯವು ಕೆಲವು ರೈಲುಗಳಿಗೆ ಹೆಚ್ಚುವರಿ ಬೋಗಿಗಳನ್ನು ಅಳವಡಿಸಲಿದೆ. 2025 ರ ಜನವರಿ ಮೊದಲ ವಾರದಿಂದ ನಾಲ್ಕರದಿಂದ ಆರು ತಿಂಗಳ ಕಾಲ ಈ ಬೋಗಿಗಳನ್ನು ಅಳವಡಿಸಲಾಗುವುದು. ಆನಂತರ ಪ್ರಯಾಣಿಕರ ಪ್ರತಿಕ್ರಿಯೆ ನೋಡಿಕೊಂಡು ಬೋಗಿಗಳ ಸೇವೆ ಮುಂದುವರೆಸಲು ನಿರ್ಧರಿಸಲಾಗಿದೆ. ಈ ಕೆಳಗಿನ ರೈಲುಗಳಿಗೆ ತಲಾ ಒಂದು ಫಸ್ಟ್ ಕಮ್ ಸೆಕೆಂಡ್ ಎಸಿ ಹೆಚ್ಚುವರಿ ಬೋಗಿಗಳನ್ನು ತಾತ್ಕಾಲಿಕವಾಗಿ ಜೋಡಿಸಲಾಗುತ್ತಿದೆ, ಜನವರಿ ತಿಂಗಳ ದಿನಾಂಕಗಳಿಂದ ಜಾರಿಗೆ ಬರಲಿದೆ ಎಂದು ಹುಬ್ಬಳ್ಳಿ ನೈರುತ್ಯ ರೈಲ್ವೆ, ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಮಂಜುನಾಥ ಕನಮಡಿ ತಿಳಿಸಿದ್ದಾರೆ.

1. ಜನವರಿ 4 ರಿಂದ ಮೇ 3, 2025 ರವರೆಗೆ ರೈಲು ಸಂಖ್ಯೆ 17301 ಮೈಸೂರು-ಬೆಳಗಾವಿ ಡೈಲಿ ಎಕ್ಸ್ ಪ್ರೆಸ್.

2. ಜನವರಿ 1 ರಿಂದ ಏಪ್ರಿಲ್ 30, 2025 ರವರೆಗೆ ರೈಲು ಸಂಖ್ಯೆ 17302 ಬೆಳಗಾವಿ-ಮೈಸೂರು ಡೈಲಿ ಎಕ್ಸ್ ಪ್ರೆಸ್.

3. ಜನವರಿ 2 ರಿಂದ ಮೇ 1, 2025 ರವರೆಗೆ ರೈಲು ಸಂಖ್ಯೆ 17307 ಮೈಸೂರು-ಬಾಗಲಕೋಟೆ ಬಸವ ಡೈಲಿ ಎಕ್ಸ್ ಪ್ರೆಸ್.

4. ಜನವರಿ 3 ರಿಂದ ಮೇ 2, 2025 ರವರೆಗೆ ರೈಲು ಸಂಖ್ಯೆ 17308 ಬಾಗಲಕೋಟೆ-ಮೈಸೂರು ಬಸವ ಡೈಲಿ ಎಕ್ಸ್ ಪ್ರೆಸ್.

ಪ್ರಗತಿ ಪರಿಶೀಲನಾ ಸಭೆ

ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಮತ್ತು ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್ ಜೋಶಿ, ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಉಪಸ್ಥಿತಿಯಲ್ಲಿ ಹುಬ್ಬಳ್ಳಿ ಕೇಂದ್ರ ರೈಲ್ವೆ ಕಚೇರಿಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಯಿತು.

ಈ ಸಭೆಯಲ್ಲಿ ಹೊಸ ಮಾರ್ಗಗಳಾದ ಧಾರವಾಡ-ಬೆಳಗಾವಿ, ಹುಬ್ಬಳ್ಳಿ-ಅಂಕೋಲಾ, ಹುಬ್ಬಳ್ಳಿ-ಶಿರಸಿ-ತಾಳಗುಪ್ಪ ,ಹಾಗೂ ರಸ್ತೆ ಮೇಲ್ಸೇತುವೆ(ROB) ಮತ್ತು ರಸ್ತೆ ಕೆಳ ಸೇತುವೆಗಳ (RUB) ನಿರ್ಮಾಣ ಮತ್ತು ಅಮೃತ್ ಭಾರತ್ ಸ್ಟೇಷನ್ ಸ್ಕೀಮ್ (ABSS) ಅಡಿಯಲ್ಲಿ ಬರುವ ಪ್ರಮುಖ ರೈಲ್ವೆ ನಿಲ್ದಾಣಗಳ ಅಭಿವೃದ್ಧಿ ಕಾಮಗಾರಿಗಳು ಹಾಗೂ ಪ್ರಯಾಣಿಕರ ಸೌಲಭ್ಯಗಳ ಹೆಚ್ಚಳ ಸೇರಿದಂತೆ ಪ್ರಮುಖ ಯೋಜನೆಗಳನ್ನು ಪರಿಶೀಲಿಸಲಾಯಿತು.

ಹುಬ್ಬಳ್ಳಿ ಮತ್ತು ವಾರಣಾಸಿ ನಡುವೆ ವಾರಕ್ಕೆ ಒಂದು ಸಲ ಸಂಚರಿಸುವ ರೈಲು ಸೇವೆಯನ್ನು ವಾರಕ್ಕೆ ಎರಡು ಸಲ ಹೆಚ್ಚಿಸಲು ಮತ್ತು ಹುಬ್ಬಳ್ಳಿಯಿಂದ ಅಜ್ಮೀರ್, ಜೋಧಪುರ, ಅಹಮದಾಬಾದ ನಿಲ್ದಾಣಗಳಿಗೆ ಸಂಪರ್ಕಿಸುವ ಹೊಸ ರೈಲು ಸೇವೆಗಳನ್ನು ಪರಿಚಯಿಸಲು ಮತ್ತು ಹುಬ್ಬಳ್ಳಿ ಸುತ್ತ ಮುತ್ತಲಿನ ಪ್ರದೇಶವನ್ನು ಹೊಂದಿರುವ ಅಣ್ಣಿಗೇರಿ, ಕುಂದಗೋಳ, ಸಂಶಿ, ಗುಡಿಗೇರಿ ಮತ್ತು ಧಾರವಾಡದಂತಹ ನಿಲ್ದಾಣಗಳೊಂದಿಗೆ ಸಂಪರ್ಕಿಸುವ ಸ್ಥಳೀಯ ಲೋಕಲ್ ಮೆಮು ರೈಲುಗಳನ್ನು ಪ್ರಾರಂಭಿಸಲು ಪ್ರಲ್ಹಾದ್ ಜೋಶಿ ಯವರು ಒತ್ತಾಯಸಿದರು.
ದಾಂಡೇಲಿ ಮತ್ತು ಧಾರವಾಡ ನಡುವೆ ರೈಲು ಸೇವೆ ಆರಂಭಿಸಬೇಕು ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಒತ್ತಾಯಿಸಿದರು.

ಭೂಸ್ವಾಧೀನ, ಡಿಪಿಆರ್, ಟೆಂಡರ್ ಪ್ರಗತಿ ಇತ್ಯಾದಿಗಳಿಗೆ ಸಂಬಂಧಿಸಿದಂತೆ ಎಲ್ಲಾ ಯೋಜನೆಗಳನ್ನು ಅವುಗಳ ಪೂರ್ವನಿರ್ಧರಿತ ಸ್ಥಿತಿಯೊಂದಿಗೆ ವಿವರವಾಗಿ ಚರ್ಚಿಸಲಾಯಿತು ಮತ್ತು ನಿಗದಿತ ಸಮಯದೊಳಗೆ ಆದ್ಯತೆಯ ಆಧಾರದ ಮೇಲೆ ಯೋಜನೆಗಳನ್ನು ಪೂರ್ಣಗೊಳಿಸಲು ಮಾನ್ಯ ಸಚಿವರು ಎಲ್ಲಾ ರೈಲ್ವೆ ಅಧಿಕಾರಿಗಳಿಗೆ ಸಲಹೆ ನೀಡಿದೆ. ಯೋಜನೆಗಳ ಅನುಷ್ಠಾನದ ಸಮಯದಲ್ಲಿ ಅಡತಡೆಗಳನ್ನು ನಿವಾರಿಸುವಂತೆ ಅವರು ರೈಲ್ವೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ , ಶಾಸಕರಾದ ಮಹೇಶ್ ಟೆಂಗಿನಕಾಯಿ, ಅರವಿಂದ ಬೆಲ್ಲದ, ಹಾಗೂ ಎಂ.ಆರ್.ಪಾಟೀಲ್ , ಪ್ರಧಾನ ವ್ಯವಸ್ಥಾಪಕ ಅರವಿಂದ್ ಶ್ರೀವಾಸ್ತವ, ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕ ಕೆ.ಎಸ್.ಜೈನ್, ಹುಬ್ಬಳ್ಳಿ ವಿಭಾಗದ ಡಿಆರ್ ಎಂ ಶ್ರೀ ಹರ್ಷ್ ಖರೆ, ನೈಋತ್ಯ ರೈಲ್ವೆ ಇಲಾಖೆಗಳ ಪ್ರಧಾನ ಮುಖ್ಯಸ್ಥರು, ಧಾರವಾಡ ಜಿಲ್ಲಾಧಿಕಾರಿ ದಿವ್ಯಾ ಪ್ರಭು, ಕೆಐಎಡಿಬಿ ಅಧಿಕಾರಿಗಳು ಮತ್ತು ಇತರ ಹಿರಿಯ ರೈಲ್ವೆ ಅಧಿಕಾರಿಗಳು ಉಪಸ್ಥಿತರಿದ್ದರು.

Whats_app_banner