Aero India 2023: ಏರೋ ಇಂಡಿಯಾ; ಫೆ.14ಕ್ಕೆ ರಕ್ಷಣಾ ಮಂತ್ರಿಗಳ ಸಮಾವೇಶ, ‘ಸ್ಪೀಡ್’ ಆಯೋಜನೆ
ಬೆಂಗಳೂರಿನಲ್ಲಿ ನಡೆಯುಲಿರುವ 14ನೇ ಆವೃತ್ತಿಯ ಏರೋ ಇಂಡಿಯಾ ಭಾಗವಾಗಿ ರಕ್ಷಣಾ ಮಂತ್ರಿಗಳ ಸಮಾವೇಶವನ್ನು 2023ರ ಫೆಬ್ರವರಿ 14 ರಂದು ಆಯೋಜಿಸಲಾಗಿದೆ.
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆಯಲಿರುವ 14ನೇ ಆವೃತ್ತಿಯ ಏರೋ ಇಂಡಿಯಾಗೆ ಕ್ಷಣಗಣನೆ ಆರಂಭವಾಗಿದೆ. ಬಾನಂಗಳದಲ್ಲಿ ಲೋಹದ ಹಕ್ಕಿಗಳ ಚಿತ್ತಾರವನ್ನು ಕಣ್ತುಂಬಿಕೊಳ್ಳಲು ಉದ್ಯಾನನಗರಿ ಮಂದಿ ಕಾತುರದಿಂದ ಕಾಯುತ್ತಿದ್ದಾರೆ.
ಬೆಂಗಳೂರಿನಲ್ಲಿ ನಡೆಯುಲಿರುವ 14ನೇ ಆವೃತ್ತಿಯ ಏರೋ ಇಂಡಿಯಾದ ನೇಪಥ್ಯದಲ್ಲಿ ರಕ್ಷಣಾ ಮಂತ್ರಿಗಳ ಸಮಾವೇಶವನ್ನು 2023ರ ಫೆಬ್ರವರಿ 14 ರಂದು ಆಯೋಜಿಸಲಾಗಿದೆ.
ಈ ಸಮಾವೇಶ ಏರೋ ಇಂಡಿಯಾ 2023ರಲ್ಲಿ ಭಾಗವಹಿಸಲಿರುವ ವಿದೇಶಿ ಮಿತ್ರ ರಾಷ್ಟ್ರಗಳ ರಕ್ಷಣಾ ಸಚಿವರುಗಳನ್ನು ಒಳಗೊಂಡಿರುತ್ತದೆ. ಸಮಾವೇಶದಲ್ಲಿ ರಕ್ಷಣಾ ವಲಯದಲ್ಲಿ ಹೆಚ್ಚಿನ ಭಾಗಿದಾರಿಕೆ ಮೂಲಕ ಸಮಾನ ಸಮೃದ್ಧಿ (ಸ್ಪೀಡ್) ಎಂಬ ವಿಶಾಲ ಧೇಯದೊಂದಿಗೆ ನಡೆಸಲಾಗುತ್ತಿದೆ.
ಸಾಮರ್ಥ್ಯ ವೃದ್ಧಿಗಾಗಿ ಸಹಕಾರ ಸಂಬಂಧಗಳನ್ನು ಬಲವರ್ಧನೆಗೊಳಿಸುವುದು (ಹೂಡಿಕೆಗಳು, ಸಂಶೋಧನೆ & ಅಭಿವೃದ್ಧಿ, ಜಂಟಿ ಉದ್ಯಮ, ಸಹ-ಅಭಿವೃದ್ಧಿ, ಸಹ-ಉತ್ಪಾದನೆ ಮತ್ತು ನಿಬಂಧನೆಗಳ ಮೂಲಕ), ತರಬೇತಿ, ಬಾಹ್ಯಾಕಾಶ, ಕೃತಕ ಬುದ್ಧಿಮತ್ತೆ ಮತ್ತು ಸಾಗರ ಭದ್ರತೆಯೊಂದಿಗೆ ಎಲ್ಲರೂ ಒಗ್ಗೂಡಿ ಪ್ರಗತಿ ಸಾಧಿಸುವ ಉದ್ದೇಶ ಹೊಂದಲಾಗಿದೆ. ಈ ಸಮಾವೇಶವು ಎಲ್ಲಾ ವಿದೇಶಿ ಮಿತ್ರ ರಾಷ್ಟ್ರಗಳು ಮತ್ತು ಭಾರತದ ರಕ್ಷಣಾ ಮಂತ್ರಿಗಳು ಒಂದೆಡೆ ಸೇರಲು ಮತ್ತು ಮುಂದಿನ ಪೀಳಿಗೆಗೆ ಸುರಕ್ಷಿತ ಮತ್ತು ಸಮೃದ್ಧ ಭವಿಷ್ಯಕ್ಕಾಗಿ 'ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ದ ವರ್ಲ್ಡ್' ಎಂಬ ಪ್ರಧಾನಿ ಮೋದಿ ಅವರ ದೂರದೃಷ್ಟಿಯನ್ನು ಕೊಂಡೊಯ್ಯಲು ಅವಕಾಶ ದೊರಕಲಿದೆ ರಕ್ಷಣಾ ಸಚಿವಾಲಯದ ಮೂಲಗಳು ತಿಳಿಸಿವೆ.
ರಕ್ಷಣಾ ವಲಯದಲ್ಲಿ ‘ಆತ್ಮನಿರ್ಭರ ಭಾರತ’ (ಸ್ವಾವಲಂಬಿ ಭಾರತ) ಅಭಿಯಾನಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದಾರೆ. ಅದು ಈ ಕೆಳಗೆ ನೀಡಿರುವ ಗುರಿಗಳನ್ನು ಹೊಂದಿದೆ.
· ಸ್ವಾವಲಂಬಿ ರಕ್ಷಣಾ ಪೂರಕ ವ್ಯವಸ್ಥೆ ಅಭಿವೃದ್ಧಿಪಡಿಸಲು ದೇಶೀಯ ರಕ್ಷಣಾ ಉತ್ಪಾದನೆ ಮತ್ತು ಉತ್ಪಾದನಾ ಸಾಮರ್ಥ್ಯ ವೃದ್ಧಿಸುವುದು
· ಕೆಲವು ಪಾಲುದಾರರಿಂದ ಶೋಷಣೆ ಮತ್ತು ಅಡೆತಡೆಗಳಿಲ್ಲದ ವಿಶ್ವಾಸಾರ್ಹ ಪೂರೈಕೆ ಸರಪಳಿ ಅಭಿವೃದ್ಧಿಪಡಿಸಲು ಸಮಾನಮನಸ್ಕ ರಾಷ್ಟ್ರಗಳೊಂದಿಗೆ ಕೈ ಜೋಡಿಸುವುದು
· ಮಿತ್ರ ರಾಷ್ಟ್ರಗಳಿಗೆ ಕೈಗೆಟುಕುವ ಮತ್ತು ಸದೃಢವಾದ ರಕ್ಷಣಾ ಸಾಧನಗಳನ್ನು ಒದಗಿಸುವುದು
ಕೋವಿಡ್ -19 ಸಾಂಕ್ರಾಮಿಕ ರೋಗದಿಂದ ಉಂಟಾದ ಅಡೆತಡೆಗಳ ಹೊರತಾಗಿಯೂ ಭಾರತೀಯ ರಕ್ಷಣಾ ವಲಯವು ಭರವಸೆಯ ಪ್ರಗತಿ ಸಾಧಿಸಿದೆ. ಭವಿಷ್ಯದ ಶಸ್ತ್ರಾಸ್ತ್ರ ವ್ಯವಸ್ಥೆಗಳನ್ನು ವಿನ್ಯಾಸಗೊಳಿಸಲು ಮತ್ತು ಅಭಿವೃದ್ಧಿಪಡಿಸಲು ಭಾರತವು ರಕ್ಷಣಾ ನಾವೀನ್ಯತೆ ಮತ್ತು ತಂತ್ರಜ್ಞಾನ ಸಂಯೋಜನೆಯತ್ತ ಹೆಚ್ಚಿನ ಗಮನವನ್ನು ಹರಿಸುತ್ತಿದೆ.
ಸ್ಥಳೀಯ ಉದ್ಯಮವನ್ನು ಉಳಿಸಿಕೊಳ್ಳಲು ದೇಶೀಯ ಅವಶ್ಯಕತೆಗಳಿಗೆ ಹೆಚ್ಚಿನ ಬೇಡಿಕೆ ಇದ್ದರೂ, ರಕ್ಷಣಾ ಉತ್ಪಾದನೆ ಸಾಮರ್ಥ್ಯವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಮತ್ತು ಪರಸ್ಪರ ಸಮಾನ ಏಳಿಗೆಯನ್ನು ಖಾತ್ರಿಪಡಿಸಿಕೊಳ್ಳಲು ಭಾರತವು ಮಿತ್ರ ರಾಷ್ಟ್ರಗಳೊಂದಿಗೆ ಪಾಲುದಾರಿಕೆಯನ್ನು ಹೊಂದಲು ಬಯಸುತ್ತದೆ.
ವೈಮಾನಿಕ ಕ್ಷೇತ್ರದ ಬೆಳವಣಿಗೆಯು ಪರಿಣಾಮಕಾರಿಯಾಗಿದೆ ಮತ್ತು ಇತರ ಕ್ಷೇತ್ರಗಳು ಸಹ ಭಾರಿ ಪ್ರಮಾಣದ ವಿಸ್ತರಣೆಗೆ ಸಿದ್ಧವಾಗಿವೆ. ರಕ್ಷಣಾ ಪಡೆಗಳಿಂದ ಮಿಲಿಟರಿ ಉಪಕರಣಗಳ ಬೇಡಿಕೆಯಲ್ಲಿ ಭಾರಿ ಪ್ರಮಾಣದ ಏರಿಕೆಯೊಂದಿಗೆ ವೈಮಾನಿಕ ಮಾರುಕಟ್ಟೆಯು ಭಾರತದಲ್ಲಿ ವಿಸ್ತರಿಸುತ್ತಿದೆ.
ವೈಮಾನಿಕ ಉದ್ಯಮವು ವಿಮಾನಗಳ (ಸ್ಥಿರ ಮತ್ತು ರೋಟರಿ ರೆಕ್ಕೆಗಳು), ಯುಎವಿ ಗಳು ಮತ್ತು ಸಂವಹನ ವ್ಯವಸ್ಥೆಗಳ ಬೇಡಿಕೆಯನ್ನು ಪೂರೈಸಲು ಪ್ರಮುಖವಾಗಿ ಸಜ್ಜಾಗಿದೆ. ಭಾರತದಲ್ಲಿ ಪೂರಕ ವ್ಯವಸ್ಥೆಯನ್ನು ನಿರ್ಮಿಸುವ ಮೂಲಕ ಇತರ ದೇಶಗಳೊಂದಿಗೆ ಅನುಕೂಲಕರವಾದ ರಕ್ಷಣಾ ನೀತಿಗಳೊಂದಿಗೆ ಭಾರತೀಯ ಕೈಗಾರಿಕೆಗಳಿಗೆ ವೈಮಾನಿಕ ಉದ್ಯಮದಲ್ಲಿನ ಅವಕಾಶಗಳನ್ನು ವೃದ್ಧಿಸುತ್ತದೆ. ಮಾಹಿತಿ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್-AI), ಚಿಪ್ ತಯಾರಿಕೆ ಮತ್ತು ಸಂವಹನ ತಂತ್ರಜ್ಞಾನದಂತಹ ಉಪಗ್ರಹ ಆಧಾರಿತ ತಂತ್ರಜ್ಞಾನಗಳಲ್ಲಿ ಜಂಟಿಯಾಗಿ ಕಾರ್ಯನಿರ್ವಹಿಸುವ ಭಾರಿ ಅವಕಾಶಗಳು ಲಭ್ಯವಿವೆ ಎಂದು ಹೇಳಲಾಗಿದೆ.