Aero India 2025: ಬೆಂಗಳೂರು ಏರ್ ಶೋ ಕಾರಣ ವಿಮಾನ ಯಾನದಲ್ಲಿ ವ್ಯತ್ಯಯ, ಫೆ 5 ರಿಂದ 14 ರ ತನಕದ ವೇಳಾಪಟ್ಟಿ ಪರಿಷ್ಕರಣೆ
Aero India 2025: ಬೆಂಗಳೂರು ಏರ್ ಶೋ ಕಾರ್ಯಕ್ರಮಕ್ಕೆ ದಿನಗಣನೆ ಶುರುವಾಗಿದೆ. ಈ ನಡುವೆ, ಏರ್ ಶೋ ಕಾರಣ ವಿಮಾನ ಯಾನದಲ್ಲಿ ವ್ಯತ್ಯಯವಾಗಿದ್ದು, ಫೆ 5 ರಿಂದ 14 ರ ತನಕದ ವೇಳಾಪಟ್ಟಿ ಪರಿಷ್ಕರಣೆಯಾಗಿದೆ. ಇದಕ್ಕೆ ಸಂಬಂಧಿಸಿ ಬೆಂಗಳೂರು ವಿಮಾನ ನಿಲ್ದಾಣ ಎಕ್ಸ್ ಖಾತೆಯಲ್ಲಿ ಅಪ್ಡೇಟ್ಸ್ ನೀಡಿದೆ. ಅದರ ವಿವರ ಇಲ್ಲಿದೆ

Aero India 2025: ಬೆಂಗಳೂರಿನಲ್ಲಿ ಫೆಬ್ರವರಿ 10 ರಿಂದ 14 ರವರೆಗೆ ನಡೆಯಲಿರುವ ಏರೋ ಇಂಡಿಯಾದ 15 ನೇ ಆವೃತ್ತಿಗೆ ಮುಂಚಿತವಾಗಿ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ವಾಯುಪ್ರದೇಶದ ನಿರ್ಬಂಧಗಳಿಂದಾಗಿ ಫೆಬ್ರವರಿ 5 ಮತ್ತು 14 ರ ನಡುವೆ ತಾತ್ಕಾಲಿಕವಾಗಿ ವಿಮಾನ ಯಾನ ವ್ಯತ್ಯಯವಾಗಲಿದೆ ಎಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹೇಳಿದೆ. ಈ ಕುರಿತು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಎಕ್ಸ್ ಪೋಸ್ಟ್ ಮಾಡಿದ್ದು, ವಿಮಾನ ಯಾನ ಕೈಗೊಳ್ಳುವ ಮೊದಲು ಪ್ರಯಾಣದ ಯೋಜನೆ ರೂಪಿಸಿಕೊಳ್ಳುವುದಕ್ಕೆ ಏರ್‌ಸ್ಪೇಸ್ ಬಂದ್ ಆಗಿರುವ ಸಮಯಗಳ ಬಗ್ಗೆ ಗಮನಹರಿಸುವಂತೆ ವಿನಂತಿಸಿದೆ.
ಬೆಂಗಳೂರು ಏರ್ ಶೋ ಕಾರಣ ವಿಮಾನ ಯಾನದಲ್ಲಿ ವ್ಯತ್ಯಯ
ಫೆಬ್ರವರಿ 5 ರಿಂದ 14 ರವರೆಗೆ ಏರೋ ಇಂಡಿಯಾ ಪ್ರದರ್ಶನ ಇರುವ ಕಾರಣ, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಮೂಲಕ ಪ್ರಯಾಣಿಸುವ ಪ್ರಯಾಣಿಕರು ಆಯಾ ವಿಮಾನಯಾನ ಸಂಸ್ಥೆಯಿಂದ ಪ್ರಕಟಿತ ಪರಿಷ್ಕೃತ ವಾಯುಪ್ರದೇಶದ ಮುಚ್ಚುವ ಸಮಯ ಮತ್ತು ಹಾರಾಟದ ವೇಳಾಪಟ್ಟಿಗಳ ಬಗ್ಗೆ ಗಮನಹರಿಸಬೇಕು ಎಂದು ಸೂಚಿಸಲಾಗಿದೆ. ನಿಮ್ಮ ಪ್ರಯಾಣದ ಸಮಯವನ್ನು ವಿಮಾನ ನಿಲ್ದಾಣಕ್ಕೆ ಮತ್ತು ಹೊರಗಡೆ ಮತ್ತು ನಿಮ್ಮ ಪ್ರಯಾಣದ ಸಮಯವನ್ನು ದಯವಿಟ್ಟು ಅದರಂತೆ ಯೋಜಿಸಿ ಎಂದು ಬಿಎಲ್‌ಆರ್ ಏರ್‌ಪೋರ್ಟ್ ಎಕ್ಸ್ ಪೋಸ್ಟ್‌ನಲ್ಲಿ ವಿವರಿಸಿದೆ.
ವಿಮಾನ ನಿಲ್ದಾಣ ಕಾರ್ಯಾಚರಣೆ ಸ್ಥಗಿತ ಯಾವ ದಿನ ಎಷ್ಟು ಗಂಟೆಗೆ
ಬೆಂಗಳೂರು ಏರ್‌ಪೋರ್ಟ್ ಕಾರ್ಯಾಚರಣೆಯು ಫೆಬ್ರವರಿ 5ರಿಂದ 15ರ ವರೆಗೆ 10 ದಿನಗಳಲ್ಲಿ ಬೇರೆ ಬೇರೆ ಸಮಯದಲ್ಲಿ ಬಂದ್ ಆಗಿರಲಿದೆ. ಆ ವೇಳಾಪಟ್ಟಿ ವಿವರ ಹೀಗಿದೆ.
ಫೆಬ್ರವರಿ 5: ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ, ಅಪರಾಹ್ನ 3 ರಿಂದ ಸಂಜೆ 4:30 ರವರೆಗೆ ಕಾರ್ಯಾಚರಣೆ ಸ್ಥಗಿತವಾಗಿರಲಿದೆ.
ಫೆಬ್ರವರಿ 6: ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ ಮತ್ತು ಅಪರಾಹ್ನ 3 ರಿಂದ ಸಂಜೆ 4:30 ರವರೆಗೆ ಕಾರ್ಯಾಚರಣೆ ಸ್ಥಗಿತವಾಗಿರಲಿದೆ.
ಫೆಬ್ರವರಿ 7: ಬೆಳಿಗ್ಗೆ 09 ರಿಂದ 11 ರವರೆಗೆ ಮತ್ತು ಅಪರಾಹ್ನ 3 ರಿಂದ ಸಂಜೆ 4:30 ರವರೆಗೆ ಕಾರ್ಯಾಚರಣೆ ಸ್ಥಗಿತವಾಗಿರಲಿದೆ.
ಫೆಬ್ರವರಿ 8: ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ ಮತ್ತು ಅಪರಾಹ್ನ 3 ರಿಂದ ಸಂಜೆ 4:30 ರವರೆಗೆ ಕಾರ್ಯಾಚರಣೆ ಸ್ಥಗಿತವಾಗಿರಲಿದೆ.
ಫೆಬ್ರವರಿ 9: ಬೆಳಿಗ್ಗೆ 9 ರಿಂದ 11 ರವರೆಗೆ ಕಾರ್ಯಾಚರಣೆ ಸ್ಥಗಿತವಾಗಿರಲಿದೆ.
ಫೆಬ್ರವರಿ 10: ಬೆಳಿಗ್ಗೆ 9 ರಿಂದ 11:30 ರವರೆಗೆ ಮತ್ತು ಅಪರಾಹ್ನ 2:30 ರಿಂದ 3:30 ರವರೆಗೆ ಕಾರ್ಯಾಚರಣೆ ಸ್ಥಗಿತವಾಗಿರಲಿದೆ.
ಫೆಬ್ರವರಿ 11-12: ಮಧ್ಯಾಹ್ನ 12:00 ರಿಂದ ಅಪರಾಹ್ನ 2:30 ರವರೆಗೆ ಕಾರ್ಯಾಚರಣೆ ಸ್ಥಗಿತವಾಗಿರಲಿದೆ.
ಫೆಬ್ರವರಿ 13-14: ಬೆಳಿಗ್ಗೆ 9:30 ರಿಂದ ಮಧ್ಯಾಹ್ನ 12 ರವರೆಗೆ ಮತ್ತು ಅಪರಾಹ್ನ 2:30 ರಿಂದ ಸಂಜೆ 5:00 ರವರೆಗೆ ಕಾರ್ಯಾಚರಣೆ ಸ್ಥಗಿತವಾಗಿರಲಿದೆ.
ಏರೋ ಇಂಡಿಯಾ 2025; ಬೆಂಗಳೂರು ಏರ್ ಶೋ ಫೆಬ್ರವರಿ 10- 14
ಎರಡು ವರ್ಷಗಳಿಗೆ ಒಮ್ಮೆ ನಡೆಯುವ ಬೆಂಗಳೂರು ಏರ್ ಶೋ ಈ ಸಲ ಫೆಬ್ರವರಿ 10 ರಿಂದ 14ರ ತನಕ ನಡೆಯಲಿದೆ. ಇದು 15ನೇ ಆವೃತ್ತಿಯ ಏರೋ ಇಂಡಿಯಾ ಆಗಿದ್ದು, ಬೆಂಗಳೂರು ಯಲಹಂಕದ ವಾಯು ನೆಲೆಯಲ್ಲಿ ನಡೆಯಲಿದೆ. ಈ ಏರ್ ಶೋ "ದಿ ರನ್ವೇ ಟು ಎ ಬಿಲಿಯನ್ ಅವಕಾಶಗಳು", ಜಾಗತಿಕ ಸಹಭಾಗಿತ್ವವನ್ನು ಬೆಳೆಸಲು, ಸ್ಥಳೀಯೀಕರಣವನ್ನು ಉತ್ತೇಜಿಸಲು ಮತ್ತು ಜಾಗತಿಕ ಏರೋಸ್ಪೇಸ್ ಮೌಲ್ಯ ಸರಪಳಿಯಲ್ಲಿ ಹೊಸ ಮಾರ್ಗಗಳನ್ನು ಅನ್ವೇಷಿಸಲು ಉದ್ದೇಶಿಸಿದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ.
ಮೊದಲ ಮೂರು ದಿನಗಳ ಅಂದರೆ ಫೆಬ್ರವರಿ 10, 11 ಮತ್ತು 12 ರಂದು ವ್ಯವಹಾರಗಳಿಗಾಗಿ ಕಾಯ್ದಿರಿಸಲಾಗಿದೆ. ಇದು ಭಾರತೀಯ ಮತ್ತು ವಿದೇಶಿ ಕಂಪನಿಗಳ ಪಾಲುದಾರಿಕೆಗೆ ಸಹಕರಿಸಲು ಒಂದು ವೇದಿಕೆಯನ್ನು ಒದಗಿಸುತ್ತದೆ.
ಕೊನೆಯ ಎರಡು ದಿನಗಳು ಅಂದರೆ ಫೆ 13 ಮತ್ತು 14 ರಂದು ಸಾರ್ವಜನಿಕರಿಗೆ ಪ್ರವೇಶಾಕವಾಶ ನೀಡಲಾಗಿದೆ. ಇದರಲ್ಲಿ ವೈಮಾನಿಕ ಪ್ರದರ್ಶನ, ಸುಧಾರಿತ ಸೇನಾ ಉಪಕರಣಗಳ ಪ್ರದರ್ಶನವನ್ನೂ ವೀಕ್ಷಿಸುವುದಕ್ಕೆ ಅವಕಾಶ ನೀಡಲಾಗಿದೆ. ಈ ಕಾರ್ಯಕ್ರಮದಲ್ಲಿ ಉದ್ಘಾಟನಾ ಸಮಾರಂಭ, ರಕ್ಷಣಾ ಮಂತ್ರಿಗಳ ಸಮಾವೇಶ, ಸಿಇಒಗಳ ರೌಂಡ್ ಟೇಬಲ್, ಮಂಥಾನ್ ಸ್ಟಾರ್ಟ್-ಅಪ್ ಈವೆಂಟ್ ಮತ್ತು ಡೈನಾಮಿಕ್ ಏರೋಬ್ಯಾಟಿಕ್ ಪ್ರದರ್ಶನಗಳು ಸೇರಿವೆ.
"BRIDGE- ಬಿಲ್ಡಿಂಗ್ ರಿಸಲೈನ್ಸ್ ಥ್ರೂ ಇಂಟರ್‌ನ್ಯಾಷನಲ್ ಡಿಫೆನ್ಸ್ ಆಂಡ್ ಗ್ಲೋಬಲ್ ಎಂಗೇಜ್‌ಮೆಂಟ್" ಥೀಮ್‌ನಲ್ಲಿ ಈ ಏರ್ ಶೋ ನಡೆಯುತ್ತಿದೆ. ಏರೋ ಇಂಡಿಯಾ 2025 ಎಂಬುದು ರಕ್ಷಣಾ ಸಚಿವರ ಸಮಾವೇಶವಾಗಿದ್ದು, ಈ ವೇದಿಕೆಯು ಕಾರ್ಯತಂತ್ರದ ಸಹಭಾಗಿತ್ವವನ್ನು ಪ್ರೋತ್ಸಾಹಿಸುತ್ತದೆ, ಭೌಗೋಳಿಕ ರಾಜಕೀಯ ಸವಾಲುಗಳ ನಡುವೆ ಜಾಗತಿಕ ಸ್ಥಿತಿಸ್ಥಾಪಕತ್ವ ಮತ್ತು ಸಹಕಾರದ ಮೇಲೆ ಕೇಂದ್ರೀಕರಿಸುತ್ತದೆ ಎಂದು ಸರ್ಕಾರ ಹೇಳಿದೆ.
ರಕ್ಷಣಾ ಮಂತ್ರಿ, ರಕ್ಷಣಾ ಖಾತೆ ರಾಜ್ಯ ಮಂತ್ರಿ, ರಕ್ಷಣಾ ಸಿಬ್ಬಂದಿ ಮತ್ತು ಇತರರು ಸೇರಿ ಪ್ರಮುಖ ಅಧಿಕಾರಿಗಳೊಂದಿಗೆ ದ್ವಿಪಕ್ಷೀಯ ಸಭೆಗಳು ರಕ್ಷಣಾ ಸಂಬಂಧಗಳನ್ನು ಮತ್ತಷ್ಟು ಹೆಚ್ಚಿಸುತ್ತವೆ ಮತ್ತು ಸ್ನೇಹಪರ ರಾಷ್ಟ್ರಗಳೊಂದಿಗೆ ಹೊಸ ಸಹಯೋಗಕ್ಕೆ ಈ ಏರ್ ಶೋ ದಾರಿ ಮಾಡಿಕೊಡುತ್ತವೆ ಎಂದು ಭಾರತ ಸರ್ಕಾರ ವಿಶ್ವಾಸ ವ್ಯಕ್ತಪಡಿಸಿದೆ.
