Aero India Show 2025: ಏರೋ ಇಂಡಿಯಾ ವೈಮಾನಿಕ ಪ್ರದರ್ಶನಕ್ಕೆ ತೆರಳುವ ಮುನ್ನ ಈ ಸಲಹೆಗಳನ್ನು ಅನುಸರಿಸಿ
ಉದ್ಯಾನ ನಗರಿ ಬೆಂಗಳೂರಿನ ವಾಯುಪಡೆ ನಿಲ್ದಾಣ ಯಲಹಂಕದಲ್ಲಿ ನಡೆಯುವ ವೈಮಾನಿಕ ಪ್ರದರ್ಶನ ವೀಕ್ಷಣೆಗೆ ತೆರಳುವ ಮುನ್ನ ಇದನ್ನು ಓದಿಕೊಂಡೇ ಹೋಗಿ.

Aero India Show 2025: ಉದ್ಯಾನ ನಗರಿ ಬೆಂಗಳೂರಿನ ವಾಯುಪಡೆ ನಿಲ್ದಾಣ ಯಲಹಂಕದಲ್ಲಿ ನಡೆಯುವ ವೈಮಾನಿಕ ಪ್ರದರ್ಶನ ನೋಡಲು ತೆರಳುವ ಮುನ್ನ ಕೆಲ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿದರೆ, ಅನುಕೂಲವಾಗುತ್ತದೆ. ಅತೀವ ಬಿಸಿಲು ಹಾಗೂ ಧೂಳಿನಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ಕೆಲ ಸೂಚನೆಗಳನ್ನು ನಾವಿಲ್ಲಿ ನೀಡಿದ್ದೇವೆ.. ಈ ಕ್ರಮಗಳನ್ನು ಅನುಸರಿಸಿ ನೀವು ಆರಾಮವಾಗಿ ವೈಮಾನಿಕ ಪ್ರದರ್ಶನ ವೀಕ್ಷಿಸಿ.
ನೀವು ಅಗತ್ಯವಾಗಿ ಕೊಂಡೊಯ್ಯಬೇಕಾದ ವಸ್ತುಗಳಿವು
ಟೋಪಿ: ವಾಯುಪಡೆ ನಿಲ್ದಾಣ ಯಲಹಂಕದಲ್ಲಿ ನಡೆಯುವ ಏರೋ ಇಂಡಿಯಾ ಶೋ ಸ್ಥಳದಲ್ಲಿ ತೀವ್ರ ಬಿಸಿಲಿರುವ ಕಾರಣ ಟೋಪಿಯನ್ನು ಕಡ್ಡಾಯವಾಗಿ ಕೊಂಡೊಯ್ಯಿರಿ. ಇಲ್ಲವಾದರೆ ಅಲ್ಲಿನ ತೀವ್ರ ಬಿಸಿಲಿನ ತಾಪಕ್ಕೆ ತಲೆಸುತ್ತುವ ಸಂಭವ ಇದೆ. ನಿತ್ರಾಣರಾಗುವ ಬದಲು ಬಿಸಿಲಿನಿಂದ ರಕ್ಷಣೆ ಪಡೆಯುವ ಸಲುವಾಗಿ ಟೋಪಿ ಬಳಸಿ.
ಕರವಸ್ತ್ರ: ಧೂಳು ಹಾಗೂ ಹೆಚ್ಚಿನ ಗಾಳಿ ಬೀಸುವ ಕಾರಣ ಕೆಲ ಸಂದರ್ಭಗಳಲ್ಲಿ ನಿಮಗೆ ಕರವಸ್ತ್ರದ ಅವಶ್ಯಕತೆ ಇರುತ್ತದೆ.
ಮುಖಗವಸು: ವೈಮಾನಿಕ ಪ್ರದರ್ಶನ ನಡೆಯುವ ಸ್ಥಳ ಹೆಚ್ಚು ಧೂಳಿನಿಂದ ಕೂಡಿದ ಸ್ಥಳವಾಗಿರುವ ಕಾರಣ ಗಾಳಿ ಬೀಸಿದಾಗ ಧೂಳು ಮುಸುಕುತ್ತದೆ. ಅಂತಹ ಸಂದರ್ಭದಲ್ಲಿ ನೀವು ನಿಮ್ಮನ್ನು ರಕ್ಷಿಸಿಕೊಳ್ಳಲು ಮುಖಗವಸು ತುಂಬಾ ಮುಖ್ಯ. ಮೂಗು ಮತ್ತು ಕಣ್ಣಿನಲ್ಲಿ ಮಣ್ಣಿನ ಕಣಗಳು ಸಿಲುಕುವ ಸಾಧ್ಯತೆ ಅಲ್ಲಿ ಹೆಚ್ಚಿದೆ.
ನೀರಿನ ಬಾಟಲ್: ಏರ್ ಶೋ ಆಗಿರುವ ಕಾರಣ ಅಲ್ಲಿ ಯಾವುದೇ ಮೇಲ್ಚಾವಣಿ ಇರುವುದಿಲ್ಲ. ತಂಪು ನೀಡುವ ಬಿಸಿಲಿನಿಂದ ರಕ್ಷಿಸಿಕೊಳ್ಳಬಹುದಾದ ಸ್ಥಳಾವಕಾಶ ಕಡಿಮೆ ಇದೆ. ಆ ಕಾರಣಕ್ಕಾಗಿ ಹೆಚ್ಚಿನ ದಾಹ ಉಂಟಾಗಬಹುದು. ನಿಮ್ಮ ದಾಹ ತಣಿಸಿಕೊಳ್ಳಲು ನೀವೇ ಸ್ಟೀಲ್ ಅಥವಾ ಮರುಬಳಕೆ ಮಾಡಬಹುದಾದ ನೀರಿನ ಬಾಟಲ್ ಕೊಂಡು ಹೋಗಿ. ಸಾಧ್ಯವಾದಷ್ಟು ಪ್ಲಾಸ್ಟಿಕ್ ಬಳಸದಂತೆ ಜಾಗ್ರತೆವಹಿಸಿ.
ಬೈನಾಕ್ಯುಲರ್: ಬಾನೆತ್ತರಲ್ಲಿ ಹಾರಾಡುವ ಹಾಗೂ ಸಾಹಸ ಪ್ರದರ್ಶನ ಮಾಡುವ ವಿಮಾನಗಳನ್ನು ಹತ್ತಿರದಿಂದ ನೋಡಲು ನೀವು ಬೈನಾಕ್ಯುಲರ್ ತೆಗೆದುಕೊಂಡು ಹೋಗಿ. ಹೀಗೆ ಮಾಡಿದಲ್ಲಿಇನ್ನಷ್ಟು ಸುಂದರವಾಗಿ ಹಾಗೂ ಸ್ಪಷ್ಟವಾಗಿ ವೈಮಾನಿಕ ಪ್ರದರ್ಶನವನ್ನು ನೀವು ಕಣ್ತುಂಬಿಕೊಳ್ಳಬಹುದು.
ಕೂಲಿಂಗ್ ಗ್ಲಾಸ್: ನೇರವಾಗಿ ಉರಿ ಬಿಸಿಲಿಗೆ ಕಣ್ಣೊಡ್ಡಲು ಕಷ್ಟವಾಗುವ ಕಾರಣ ನೀವು ಕೂಲಿಂಗ್ ಗ್ಲಾಸ್ ಹಾಕಿಕೊಳ್ಳಿ. ಇದರಿಂದ ಗಾಳಿಯಲ್ಲಿ ಮಿಶ್ರವಾಗುವ ಧೂಳಿನ ಕಣಗಳು ಹಾಗೂ ಕಣ್ಣಿಗೆ ರಾಚುವ ಸೂರ್ಯಕಿರಣಗಳು ಇವೆರಡರಿಂದಲೂ ಬಚಾವ್ ಆಗಬಹುದು.
ಆಧಾರ್ ಕಾರ್ಡ್: ನಿಮ್ಮ ಜತೆ ನಿಮ್ಮ ಆಧಾರ್ ಕಾರ್ಡ್ ಇಟ್ಟುಕೊಳ್ಳಿ. ಅಲ್ಲಿನ ಶಿಸ್ತು ಹಾಗೂ ವೈಮಾನಿಕ ಪ್ರದರ್ಶನಕ್ಕೆ ಸೂಚಿಸಲಾದ ನಿಯಮಗಳನ್ನು ಅನುಸರಿಸಿ.
ಛತ್ರಿ: ವೈಮಾನಿಕ ಪ್ರದರ್ಶನವನ್ನು ವೀಕ್ಷಿಸುವ ಸಮಯದಲ್ಲಿ ಅಲ್ಲದೇ ಇದ್ದರೂ ಅಲ್ಲಿ ನಡೆಯಬೇಕಾಗುತ್ತದೆ. ಅಂತಹ ಸಂದರ್ಭದಲ್ಲಿ ಬಿಸಿಲಿನಿಂದ ರಕ್ಷಿಸಿಕೊಳ್ಳಲು ಛತ್ರಿ ಬಳಸಿ.
ಆರಾಮದಾಯಕ ಪಾದರಕ್ಷೆ: ಗೇಟ್ ನಂಬರ್‍ಗಳನ್ನು ಮೊದಲೇ ನೀವು ಪರೀಕ್ಷಿಸಿಕೊಂಡಿದ್ದರೂ ಸಹ ಬಹಳ ದೂರ ನಡೆಯಬೇಕಾದ ಸಂದರ್ಭಗಳು ಎದುರಾಗಬಹುದು. ಹಲವಾರು ಜನ ವೀಕ್ಷಿಸಲು ಬರುವ ಕಾರಣ ವಾಹನ ದಟ್ಟನೆ ಹೆಚ್ಚಿರುತ್ತದೆ. ಆ ಕಾರಣಕ್ಕಾಗಿ ವಾಹನಗಳವರೆಗೆ ನಡೆಯುವ ಅಂತರವೂ ಹೆಚ್ಚಿರುತ್ತದೆ. ಆ ಕಾರಣಕ್ಕಾಗಿ ಆರಾಮದಾಯಕ ಪಾದರಕ್ಷೆ ಬಳಸಿ.
ಹಾ…ಟಿಕೆಟ್ ಮರೆಯದಿರಿ!
ಇದನ್ನೂ ಓದಿ: ಬೆಂಗಳೂರಿನಲ್ಲಿ ನಾಳೆಯಿಂದ ಏರೋ ಇಂಡಿಯಾ ಶೋ; ನೀವೂ ಹೋಗ್ತಿದ್ದೀರಾ? ಹಾಗಿದ್ರೆ ಈ 5 ಅಂಶಗಳನ್ನು ಗಮನಿಸಿ
