Aero India-2023: 'ಏರ್​ ಶೋನ ಎತ್ತರ ಮತ್ತು ವೇಗ ಪ್ರಧಾನಿ ಮೋದಿಯ ಕೆಲಸ ಮತ್ತು ವ್ಯಕ್ತಿತ್ವವನ್ನು ವ್ಯಾಖ್ಯಾನಿಸುತ್ತವೆ' - ರಾಜನಾಥ್ ಸಿಂಗ್
ಕನ್ನಡ ಸುದ್ದಿ  /  ಕರ್ನಾಟಕ  /  Aero India-2023: 'ಏರ್​ ಶೋನ ಎತ್ತರ ಮತ್ತು ವೇಗ ಪ್ರಧಾನಿ ಮೋದಿಯ ಕೆಲಸ ಮತ್ತು ವ್ಯಕ್ತಿತ್ವವನ್ನು ವ್ಯಾಖ್ಯಾನಿಸುತ್ತವೆ' - ರಾಜನಾಥ್ ಸಿಂಗ್

Aero India-2023: 'ಏರ್​ ಶೋನ ಎತ್ತರ ಮತ್ತು ವೇಗ ಪ್ರಧಾನಿ ಮೋದಿಯ ಕೆಲಸ ಮತ್ತು ವ್ಯಕ್ತಿತ್ವವನ್ನು ವ್ಯಾಖ್ಯಾನಿಸುತ್ತವೆ' - ರಾಜನಾಥ್ ಸಿಂಗ್

ಏರೋ ಇಂಡಿಯಾವು ಏರೋಸ್ಪೇಸ್‌ನ ಪ್ರದರ್ಶನವಾಗಿದ್ದು ಅದು 2 ಪ್ರಮುಖ ಗುಣಲಕ್ಷಣಗಳನ್ನು ಹೊಂದಿದೆ - ಎತ್ತರ ಮತ್ತು ವೇಗ. ಈ 2 ಗುಣಗಳು ಪ್ರಧಾನಿ ಮೋದಿ ಅವರ ಕೆಲಸ ಮತ್ತು ವ್ಯಕ್ತಿತ್ವವನ್ನು ವ್ಯಾಖ್ಯಾನಿಸುತ್ತವೆ. ಅಂದರೆ ಭಾರತಕ್ಕಾಗಿ ಸಮಗ್ರತೆ ಮತ್ತು ಬದ್ಧತೆಯ ಎತ್ತರ ಹಾಗೂ ನಿರ್ಧಾರ ತೆಗೆದುಕೊಳ್ಳುವ ಮತ್ತು ಫಲಿತಾಂಶಗಳನ್ನು ನೀಡುವ ವೇಗ ಇದಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು.

ರಕ್ಷಣಾ ಸಚಿವ ರಾಜನಾಥ್ ಸಿಂಗ್
ರಕ್ಷಣಾ ಸಚಿವ ರಾಜನಾಥ್ ಸಿಂಗ್

ಬೆಂಗಳೂರು: ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಇಂದಿನಿಂದ ಫೆಬ್ರವರಿ 17ರ ವರೆಗೆ ನಡೆಯಲಿರುವ ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನವಾದ 'ಏರೋ ಇಂಡಿಯಾ-2023' ಅನ್ನು ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಉದ್ಘಾಟಿಸಿದ್ದಾರೆ. 14ನೇ ಆವೃತ್ತಿಯ ಏರೋ ಇಂಡಿಯಾ ಶೋ ಇದಾಗಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಾಜ್ಯಪಾಲರಾದ ಥಾವರ್​ ಚಂದ್​ ಗೆಹ್ಲೋಟ್​​, ಸಚಿವರಾದ ಆರಗ ಜ್ಞಾನೇಂದ್ರ, ನಿರಾಣಿ, ಆರ್​. ಅಶೋಕ್​​ ಸೇರಿ ಹಲವರು ಸಮಾರಂಭದಲ್ಲಿ ಭಾಗಿ​​ಯಾಗಿದ್ದಾರೆ.

ಈ ವೇಳೆ ಮಾತನಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, "ಏರೋ ಇಂಡಿಯಾವು ಏರೋಸ್ಪೇಸ್‌ನ ಪ್ರದರ್ಶನವಾಗಿದ್ದು ಅದು 2 ಪ್ರಮುಖ ಗುಣಲಕ್ಷಣಗಳನ್ನು ಹೊಂದಿದೆ - ಎತ್ತರ ಮತ್ತು ವೇಗ. ಈ 2 ಗುಣಗಳು ಪ್ರಧಾನಿ ಮೋದಿ ಅವರ ಕೆಲಸ ಮತ್ತು ವ್ಯಕ್ತಿತ್ವವನ್ನು ವ್ಯಾಖ್ಯಾನಿಸುತ್ತವೆ. ಅಂದರೆ ಭಾರತಕ್ಕಾಗಿ ಸಮಗ್ರತೆ ಮತ್ತು ಬದ್ಧತೆಯ ಎತ್ತರ ಹಾಗೂ ನಿರ್ಧಾರ ತೆಗೆದುಕೊಳ್ಳುವ ಮತ್ತು ಫಲಿತಾಂಶಗಳನ್ನು ನೀಡುವ ವೇಗ ಇದಾಗಿದೆ" ಎಂದರು.

"ಜಾಗತಿಕ ಆಕಾಶದಲ್ಲಿ ಭಾರತವು ನಕ್ಷತ್ರವಾಗಿ ಹೊರಹೊಮ್ಮಿದೆ, ಅದು ಹೊಳೆಯುವುದು ಮಾತ್ರವಲ್ಲದೆ ಇತರರನ್ನು ತನ್ನ ಹೊಳಪಿನಿಂದ ಬೆಳಗಿಸುತ್ತದೆ" ಎಂದು ರಕ್ಷಣಾ ಸಚಿವರು ಹೇಳಿದರು.

"ಏರೋ ಇಂಡಿಯಾ 2023 ದೇಶದ ಉತ್ಪಾದನಾ ಸಾಮರ್ಥ್ಯ ಮತ್ತು ಪ್ರಧಾನಮಂತ್ರಿಯವರು ರೂಪಿಸಿದ ‘ಆತ್ಮನಿರ್ಭರ ಭಾರತ’ ಸಾಕಾರಗೊಳಿಸುವಲ್ಲಿ ಸಾಧಿಸಿದ ಪ್ರಗತಿಯನ್ನು ಪ್ರದರ್ಶಿಸುತ್ತದೆ. ಇದು ಏರೋಸ್ಪೇಸ್ ಮತ್ತು ವಾಯುಯಾನ ಕ್ಷೇತ್ರದ ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡುತ್ತದೆ" ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.

ಇನ್ನು, ಭಾರತೀಯ ವಾಯುಸೇನೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿಆರ್ ಚೌಧರಿ ಅವರು ಫ್ಲೈಪಾಸ್ಟ್ ಸಮಯದಲ್ಲಿ ಗುರುಕುಲ ರಚನೆಯನ್ನು ಮುನ್ನಡೆಸಿದರು. ಏರ್​ ಶೋ ಉದ್ಘಾಟನೆ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಸ್ಮರಣಾರ್ಥ ಅಂಚೆಚೀಟಿಗಳನ್ನು ಬಿಡುಗಡೆ ಮಾಡಿದರು.

'ಒಂದು ಬಿಲಿಯನ್ ಅವಕಾಶಗಳಿಗೆ ರನ್ವೇ' (The Runway to a Billion Opportunities) ಥೀಮ್​ನಡಿ ಏರೋ ಇಂಡಿಯಾ ಶೋ ನಡೆಯಲಿದೆ. ಏರೋ ಇಂಡಿಯಾ ವೆಬ್‌ಸೈಟ್‌ ಪ್ರಕಾರ ಐದು ದಿನಗಳ ಕಾಲ ನಡೆಯುವ ವೈಮಾನಿಕ ಪ್ರದರ್ಶನದಲ್ಲಿ 809 ಎಕ್ಸಿಬಿಟರ್‌ಗಳು ನೋಂದಣಿ ಮಾಡಿದ್ದಾರೆ. ಇದರಲ್ಲಿ 699 ಭಾರತದ ಪ್ರದರ್ಶಕರಾಗಿದ್ದಾರೆ, 110 ವಿದೇಶಿ ಪ್ರದರ್ಶಕರಾಗಿದ್ದಾರೆ. 2021ರಲ್ಲಿ ನಡೆದ ಏರ್‌ಶೋನಲ್ಲಿ 55 ದೇಶಗಳ 540 ಕ್ಕೂ ಹೆಚ್ಚು ಪ್ರದರ್ಶಕರು ಪಾಲ್ಗೊಂಡಿದ್ದರು.

ತೇಜಸ್‌ ಯುದ್ಧವಿಮಾನ ಹಾಗೂ ರಫೆಲ್‌ ಯುದ್ಧವಿಮಾನವು ಈ ಬಾರಿಯ ವೈಮಾನಿಕ ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಿದೆ. ದೇಶ ಹಳೆಯ ವಿಮಾನ ಡಕೋಟಾ ಡಿಸಿ 3ಯು ಈ ಬಾರಿಯ ವೈಮಾನಿಕ ಪ್ರದರ್ಶನದಲ್ಲಿ ನೋಡುಗರನ್ನು ಸೆಳೆಯಲಿದೆ. ಸೂರ್ಯಕಿರಣ್‌, ಎಂಐ17, ತೇಜಸ್‌ ಯುದ್ಧ ವಿಮಾನ, ಹಾಕ್‌, ಸುಖೋಯ್‌, ಐಜೆಟಿ, ಎಚ್‌ಟಿಟಿ ತರಬೇತಿ ವಿಮಾನ, ಸುಖೋಯ್‌ 30, ಎಂಕೆಐ, ಮಿಗ್‌ 29, ಜಾಗ್ವಾರ್‌ ಯುದ್ಧ ವಿಮಾನಗಳು ಈ ಬಾರಿಯ ವೈಮಾನಿಕ ಶೋದ ಪ್ರಮುಖ ಆಕರ್ಷಣೆಗಳಾಗಿರಲಿವೆ.

ಏಷ್ಯಾದ ಅತಿದೊಡ್ಡ ಏರೋ ಶೋ -- ಏರೋ ಇಂಡಿಯಾ 2023ರ 14 ನೇ ಆವೃತ್ತಿಯನ್ನು ಆಯೋಜಿಸುತ್ತಿರುವುದು ಕರ್ನಾಟಕದ ಪಾಲಿಗೆ ಹೆಮ್ಮೆಯ ವಿಷಯವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

Whats_app_banner