Fish Rate Hike: ಹಕ್ಕಿಜ್ವರ ಪರಿಣಾಮ ಕೋಳಿ, ಮಟನ್ ಬದಲು ಮೀನಿನ ಮಾಂಸಕ್ಕೆ ಆಕರ್ಷಣೆ; ಮೀನಿನ ಬೆಲೆಯಲ್ಲೂ ಶೇ.30ರಷ್ಟು ಹೆಚ್ಚಳ
Fish Rate Hike: ಕೋಳಿ, ಮಟನ್ ಸಹವಾಸ ಬೇಡ ಎಂದು ಮೀನು ತಿನ್ನಲು ಹೋದರೆ ಅದರ ಬೆಲೆಯೂ ಏರಿಕೆಯಾಗಬೇಕೆ? ಬೇಡಿಕೆ ಹೆಚ್ಚುತ್ತಿದ್ದಂತೆ ಮೀನಿನ ಬೆಲೆಯಲ್ಲಿ ಶೇ.30ರಷ್ಟು ಹೆಚ್ಚಳ! ಬೆಲೆ ಏರಿಕೆಗೆ ವೈಜ್ಞಾನಿಕ ಕಾರಣಗಳೂ ಉಂಟು ಎನ್ನುತ್ತಾರೆ ವ್ಯಾಪಾರಸ್ಥರು.ವರದಿ: ಎಚ್ ಮಾರುತಿ. ಬೆಂಗಳೂರು

Fish Rate Hike: ದೇಶಾದ್ಯಂತ ಹಕ್ಕಿ ಜ್ವರದ ಭೀತಿ ಕಾಡುತ್ತಿದೆ. ನೆರೆಯ ಆಂಧ್ರಪ್ರದೇಶಮತ್ತು ತೆಲಂಗಾಣದಲ್ಲಿ ಹಕ್ಕಿ ಜ್ವರ ತಾಂಡವವಾಡುತ್ತಿದೆ. ನಿಧಾನವಾಗಿ ಹಕ್ಕಿ ಜ್ವರ ಕರ್ನಾಟಕಕ್ಕೂ ಕಾಲಿರಿಸಿದೆ. ಯಾವಾಗ ಹಕ್ಕಿ ಜ್ವರದ ಭೀತಿ ಕಾಡಲು ಆರಂಭವಾದ ದಿನದಿಂದಲೇ ಕೋಳಿ ಮಾಂಸಕ್ಕೆ ಬೇಡಿಕೆ ಕಡಿಮೆಯಾಗಿದೆ. ಹೋಟೆಲ್ ಗಳಷ್ಟೇ ಮನೆಗಳಲ್ಲೂ ಚಿಕನ್ ತಯಾರಿಸುವವರ ಸಂಖ್ಯೆ ಕಡಿಮೆಯಾಗಿದೆ. ಅತ್ತ ಕೋಳಿ ತಿನ್ನುವವರ ಸಂಖ್ಯೆ ಕಡಿಮೆಯಾಗುತ್ತಿದ್ದಂತೆ ಇತ್ತ ಮಟನ್ ಗೆ ಬೇಡಿಕೆ ಹೆಚ್ಚಳವಾಗಿದೆ. ಕುರಿ- ಮೇಕೆ ಮಾಂಸದ ಬೆಲೆ 800 ರೂಪಾಯಿ ಗಡಿ ದಾಟಿದ್ದು, ತುಸು ದುಬಾರಿಯಾಗಿದೆ. ಕೋಳಿ, ಮಟನ್ ಸಹವಾಸವೇ ಬೇಡ ಎಂದು ಮೀನಿನತ್ತ ಜನ ವಾಲತೊಡಗಿದರು. ಇದೀಗ ಮೀನು ಪ್ರಿಯರಿಗೂ ಶಾಕ್ ಕಾದಿದ್ದು, ಮೀನಿನ ಬೆಲೆ ದಿಢೀರ್ ಏರಿಕೆಯಾಗಿದೆ.
ಬೆಂಗಳೂರಿನಲ್ಲಿ ಮೀನಿನ ಬೆಲೆ ಶೇ.30ರಷ್ಟು ಹೆಚ್ಚಳವಾಗಿದೆ. ಬೇಡಿಕೆ ಹೆಚ್ಚಿರುವುದುಮೊದಲ ಕಾರಣವಾದರೆ ಮೀನುಗಾರಿಕೆ ಕುಸಿತ ಕಂಡಿರುವುದು ಎರಡನೆಯ ಕಾರಣವಾಗಿದೆ. ಬೇಡಿಕೆಗೆ ತಕ್ಕಷ್ಟು ಮೀನು ಪೂರೈಕೆ ಆಗದಿರುವುದರಿಂದ ಮೀನಿನ ಬೆಲೆ ಹೆಚ್ಚಳವಾಗುತ್ತಿದೆ.
ಎಲ್ಲಿಂದ ಮೀನು ಸರಬರಾಜು
ಬೆಂಗಳೂರಿನಲ್ಲಿ ರಸೆಲ್ ಮಾರುಕಟ್ಟೆ ಪ್ರಮುಖ ಮೀನು ಮಾರಾಟದ ಮಾರುಕಟ್ಟೆಯಾಗಿದೆ. ಇಲ್ಲಿಗೆ ಕಳೆದ ಒಂದು ವಾರದಿಂದ ಮೀನು ಸರಬರಾಜು ಕಡಿಮೆಯಾಗಿದೆ. ಈ ಮಾರುಕಟ್ಟೆಗೆ ಮಂಗಳೂರು ಮಾತ್ರವಲ್ಲದೆ ಕೇರಳ, ತಮಿಳುನಾಡು ಮತ್ತು ಆಂಧ್ರಪ್ರದೇಶದಿಂದಲೂ ಮೀನು ಪೂರೈಕೆಯಾಗುತ್ತಿತ್ತು.
ಆದರೆ ಇದೀಗ ಸರಬರಾಜಿನಲ್ಲಿ ಕುಂಠಿತವಾಗಿದೆ. ಬೇಸಿಗೆ ಹೆಚ್ಚಾಗಿರುವ ಮತ್ತು ಈ ವರ್ಷ ತಾಪಮಾನ ಹೆಚ್ಚಿರುವುದರಿಂದ ಮೀನುಗಾರಿಕೆಗೆ ಹೊಡೆತ ಬಿದ್ದಿದೆ. ಹಾಗಾಗಿ ಮೀನು ಬೆಲೆ ಏರುತ್ತಿದೆ. ಬೇಡಿಕೆಗೆ ತಕ್ಕಷ್ಟು ಪೂರೈಕೆಯಾಗುತ್ತಿಲ್ಲ ಎಂದು ಮಾರಾಟಗಾರರೊಬ್ಬರು ಹೇಳುತ್ತಾರೆ.
ಪ್ರಸ್ತುತ ಮೀನು ದರ ಪ್ರತಿ ಕೆಜಿಗೆ ಹೀಗಿದೆ: (ಆವರಣದಲ್ಲಿ ಹಳೆಯ ದರ)
ಅಂಜಲ್ ಮೀನು -850(650೦; ಬಂಗುಡೆ –250 (200); ಪ್ರಾನ್ಸ್ – 450 (380); ಶಿಲಾ-
400 (350); ವೈಟ್ ಪಾಂಪ್ಲೆಟ್ – 1200 (900); ಬ್ಲಾಕ್ ಪಾಂಪ್ಲೆಟ್ –850 (600);
ಕ್ರಾಬ್ -300 (180); ಶಂಕರ – 320 (250); ತುನ–300 (200); ಪಾರೆ- 250 (200);
ದರ ಏರಿಕೆ ಕಾರಣಗಳು ಹಲವು
ವೈಜ್ಞಾನಿಕ ಕಾರಣಗಳನ್ನು ಹುಡುಕುವುದಾದರೆ ಕರಾವಳಿಯಲ್ಲಿ ಉಷ್ಣಾಂಶದ ಏರಿಕೆಯಾಗಿರುವುದು ಮೀನುಗಾರಿಕೆ ಮೇಲೆ ಗಂಭೀರ ಪರಿಣಾಮ ಬೀರಿದೆ. ಈ ವರ್ಷ ರಾಜ್ಯದ ಹೈದರಾಬಾದ್ ಕರ್ನಾಟಕಕ್ಕಿಂತಲೂ ಕರಾವಳಿ ಜಿಲ್ಲೆಗಳಲ್ಲಿ ತಾಪಮಾನ ಹೆಚ್ಚಳವಾಗಿದೆ.
ತಾಪಮಾನ ಹೆಚ್ಚಳದಿಂದಾಗಿ ಮೀನುಗಳು ಸಮುದ್ರದ ಮೇಲ್ಮಟ್ಟಕ್ಕೆ ಬರುವುದನ್ನು ಕಡಿಮೆ ಮಾಡಿ ತಂಪಾದ ವಾತಾವರಣವನ್ನು ಹುಡುಕಿಕೊಂಡು ಸಮುದ್ರದ ಆಳಕ್ಕೆ ಹೋಗುತ್ತಿವೆ. ಆದ್ದರಿಂದ ಮೀನುಗಳ ಪ್ರಮಾಣ ಕಡಿಮೆಯಾಗಿದೆ ಎಂದು ಮೀನುಗಾರಿಕೆ ತಜ್ಞರು ಅಭಿಪ್ರಾಯಪಡುತ್ತಾರೆ.
ಮೀನುಗಳು ಸಮುದ್ರದ ಮೇಲ್ಬಾಗದಲ್ಲಿ ಸಂಚರಿಸುವಾಗ ಸುಲಭವಾಗಿ ಮೀನುಗಾರರ ಬಲೆಗೆ ಬೀಳುತ್ತವೆ. ಆದರೆ ಯಾವಾಗ ಮೀನುಗಳು ಸಮುದ್ರದಾಳದಲ್ಲಿ ಆಶ್ರಯ ಪಡೆಯುತ್ತವೆಯೋ ಅಂತಹ ಸಂದರ್ಭದಲ್ಲಿ ಸಿಗುವುದಿಲ್ಲ. ಇದರ ಪರಿಣಾಮವಾಗಿ ಮೀನುಗಾರರಿಗೆ ಸಂಕಷ್ಟ ಎದುರಾಗಿದೆ.
ಹವಾಮಾನ ವೈಪರೀತ್ಯದಿಂದ ಮೀನಿನ ಪೂರೈಕೆಯಲ್ಲಿ ಕುಂಠಿತವಾಗಿದೆ. ಮಾಂಸಪ್ರಿಯರು ಚಿಕನ್ ಮಟನ್ ಬಿಟ್ಟು ಮೀನಿನತ್ತ ವಾಲಿರುವುದರಿಂದಲೂ ಬೇಡಿಕೆ ಹೆಚ್ಚಾಗಿ ಬೆಲೆ ಏರಿಕೆಯಾಗಿರಬಹುದು. ಕಲೆವು ಮೀನುಗಳು ಸೀಸನಲ್ ಆಗಿದ್ದು ನಿರ್ಧಿಷ್ಟ ತಿಂಗಳು ಮತ್ತು ನಿರ್ಧಿಷ್ಟ ಹವಾಮಾನದಲ್ಲಿ ಮಾತ್ರ ಲಭ್ಯವಾಗುತ್ತವೆ. ಹಾಗಾಗಿ ಕೆಲವು ಮೀನುಗಳ ಬೆಲೆಯಲ್ಲಿ ಬೇಸಿಗೆಯಲ್ಲಿ ಬೆಲೆ ಏರಿಕೆ ಸಾಮಾನ್ಯವಾಗಿದೆ. ಜತೆಗೆ ಸಾಗಾಣೆ ವೆಚ್ಚ, ಸಂಗ್ರಹ, ಕೋಲ್ಡ್ ಸ್ಟೋರೇಜ್, ಇಂಧನ ಬೆಲೆ ಏರಿಕೆ ಕಾರಣದಿಂದಾಗಿಯೂ ಬೆಲೆ ಹೆಚ್ಚಳವಾಗಿದೆ.
ವರದಿ: ಎಚ್ ಮಾರುತಿ. ಬೆಂಗಳೂರು
