Leopard in Mysore Aparment: ಇನ್ಫೋಸಿಸ್‌ ಆಯ್ತು, ಮೈಸೂರಿನ ಪ್ರತಿಷ್ಠಿತ ಅಪಾರ್ಟ್‌ಮೆಂಟ್‌ ಪ್ರದೇಶಕ್ಕೆ ಬಂತು ಚಿರತೆ, ಭಯದಲ್ಲಿ ನಿವಾಸಿಗಳು
ಕನ್ನಡ ಸುದ್ದಿ  /  ಕರ್ನಾಟಕ  /  Leopard In Mysore Aparment: ಇನ್ಫೋಸಿಸ್‌ ಆಯ್ತು, ಮೈಸೂರಿನ ಪ್ರತಿಷ್ಠಿತ ಅಪಾರ್ಟ್‌ಮೆಂಟ್‌ ಪ್ರದೇಶಕ್ಕೆ ಬಂತು ಚಿರತೆ, ಭಯದಲ್ಲಿ ನಿವಾಸಿಗಳು

Leopard in Mysore Aparment: ಇನ್ಫೋಸಿಸ್‌ ಆಯ್ತು, ಮೈಸೂರಿನ ಪ್ರತಿಷ್ಠಿತ ಅಪಾರ್ಟ್‌ಮೆಂಟ್‌ ಪ್ರದೇಶಕ್ಕೆ ಬಂತು ಚಿರತೆ, ಭಯದಲ್ಲಿ ನಿವಾಸಿಗಳು

Leopard in Mysore Aparment: ಮೈಸೂರಿನ ಕೆಆರ್‌ಎಸ್‌ ರಸ್ತೆಯ ಪ್ರತಿಷ್ಠಿತ ಅಪಾರ್ಟ್‌ಮೆಂಟ್‌ನಲ್ಲಿ ಚಿರತೆ ಕಾಣಿಸಿಕೊಂಡಿದ್ದು ಇಲ್ಲಿನ ನಿವಾಸಿಗಳಲ್ಲಿ ಆತಂಕ ಹೆಚ್ಚಿಸಿದೆ.

ಮೈಸೂರಿನ ಕೆಆರ್‌ಎಸ್‌ ರಸ್ತೆಯ ಬ್ರಿಗೇಡ್‌ ಸಿಂಪೋನಿ ಅಪಾರ್ಟ್‌ಮೆಂಟ್‌ನಲ್ಲಿ ಚಿರತೆ ಕಾಣಿಸಿಕೊಂಡಿದೆ.
ಮೈಸೂರಿನ ಕೆಆರ್‌ಎಸ್‌ ರಸ್ತೆಯ ಬ್ರಿಗೇಡ್‌ ಸಿಂಪೋನಿ ಅಪಾರ್ಟ್‌ಮೆಂಟ್‌ನಲ್ಲಿ ಚಿರತೆ ಕಾಣಿಸಿಕೊಂಡಿದೆ.

Leopard in Mysore Aparment: ಕಳೆದ ತಿಂಗಳು ಮೈಸೂರಿನ ಇನ್ಫೋಸಿಸ್‌ ಕ್ಯಾಂಪಸ್‌ನಲ್ಲಿ ಚಿರತೆ ಕಂಡು ಎರಡು ವಾರಕ್ಕೂ ಹೆಚ್ಚು ಕಾಲ ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ. ಈಗ ಮೈಸೂರಿನ ಕೆಆರ್‌ಎಸ್‌ ರಸ್ತೆಯಲ್ಲಿರುವ ಪ್ರತಿಷ್ಠಿತ ಅಪಾರ್ಟ್‌ಮೆಂಟ್‌ನಲ್ಲಿ ಚಿರತೆ ಕಾಣಿಸಿಕೊಂಡಿದೆ. ಕೆಲವು ದಿನಗಳಿಂದ ಇದೇ ಭಾಗದಲ್ಲಿ ಓಡಾಡುತ್ತಿದ್ದ ಚಿರತೆ ಈಗ ಅಪಾರ್ಟ್‌ಮೆಂಟ್‌ ಅನ್ನೇ ಪ್ರವೇಶಿಸಿದೆ. ಚಿರತೆ ಹೆಜ್ಜೆ ಗುರುತು ಗಮನಿಸಿ ಅಪಾರ್ಟ್‌ಮೆಂಟ್‌ ನಿವಾಸಿಗಳು ಅರಣ್ಯ ಇಲಾಖೆಯವರಿಗೆ ದೂರು ನೀಡಿದ್ದರು. ಚಿರತೆ ಕಾರ್ಯಪಡೆಯ ಸಿಬ್ಬಂದಿ ಇಲ್ಲಿಗೆ ಆಗಮಿಸಿ ಹೆಜ್ಜೆ ಗುರುತು ನೋಡಿ ಇದು ಚಿರತೆಯದ್ದೇ ಎಂದು ಖಚಿತಪಡಿಸಿದ್ದಾರೆ. ಈ ಭಾಗದಲ್ಲಿ ಚಿರತೆ ಸಂಚಾರ ಇದೆ. ಭಯ ಎಂದು ಅರಣ್ಯ ಇಲಾಖೆಯವರು ಹೇಳಿ ಹೋದ ಬೆನ್ನಲ್ಲೇ ಮಂಗಳವಾರ ಮತ್ತೆ ಬಂದಿರುವ ಚಿರತೆ ನವಿಲನ್ನು ಕೊಂದು ಹಾಕಿ ಹೋಗಿದೆ.

ಚಿರತೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸಂಜೆ 7ರಿಂದ ಬೆಳಿಗ್ಗೆ 7ರವರೆಗೆ ಬ್ರಿಗೇಡ್‌ ಸಿಂಪೋನಿ ಅಪಾರ್ಟ್‌ಮೆಂಟ್‌ನಲ್ಲಿ ಅನಗತ್ಯವಾಗಿ ಸಂಚಾರ ಮಾಡದಂತೆ ಅರಣ್ಯ ಇಲಾಖೆ ಸೂಚನೆ ನೀಡಿದೆ. ಅಲ್ಲದೇ ಚಿರತೆ ಬಂದು ಹೋಗಿರುವ ಭಾಗದ ಕಡೆಗೆ ಹೋಗದಂತೆಯೂ ಬಂದ್‌ ಮಾಡಲಾಗಿದೆ.

ಕೆಆರ್‌ಎಸ್‌ ರಸ್ತೆ ಹಾಗೂ ರಿಂಗ್‌ ರಸ್ತೆಗೆ ಹೊಂದಿಕೊಂಡಂತೆ ಇರುವ ಒಂಬತ್ತು ವರ್ಷದ ಹಿಂದೆ ನಿರ್ಮಿಸಿರುವ ಬ್ರಿಗೇಡ್‌ ಅಪಾರ್ಟ್‌ಮೆಂಟ್‌ ವಿಶಾಲವಾಗಿದೆ. ಸುಮಾರು 290 ಮನೆಗಳಿವೆ. ಒಂದು ಸಾವಿರಕ್ಕೂ ಅಧಿಕ ನಿವಾಸಿಗಳು ಇಲ್ಲಿ ವಾಸವಿದ್ದಾರೆ. ಪಕ್ಕದಲ್ಲಿಯೇ ಅರಣ್ಯ ರೀತಿಯ ಪ್ರದೇಶ, ಕೈಗಾರಿಕೆಗಳು ಇವೆ. ಈ ಭಾಗದಲ್ಲಿ ನವಿಲುಗಳ ಸಂಖ್ಯೆ ಮೊದಲಿನಿಂದಲೂ ಇದ್ದು. ಅಪಾರ್ಟ್‌ಮೆಂಟ್‌ ಒಳಗೂ ಬಂದು ಹೋಗಿರುವುದನ್ನು ಜನರು ನೋಡಿದ್ದಾರೆ. ಇವುಗಳ ಸಂಖ್ಯೆ ಹೆಚ್ಚಾಗಿದ್ದವು ಕೂಡ. ಆದರೆ ಆರು ತಿಂಗಳಿನಿಂದ ನವಿಲುಗಳ ಸಂಖ್ಯೆ ಕ್ಷೀಣಿಸಿತ್ತು. ಕೆಲವು ದಿನಗಳ ಹಿಂದೆ ಅಪಾರ್ಟ್‌ ಆವರಣದಲ್ಲಿಯೇ ಚಿರತೆ ಬಂದು ಹೋಗಿರುವ ಹೆಜ್ಜೆ ಗುರುತನ್ನು ನೋಡಿದ್ದರು. ಆದರೆ ನಾಯಿಯ ಹೆಜ್ಜೆ ಗುರುತು ಇದ್ದರೂ ಇರಬಹುದು ಎಂದು ಸುಮ್ಮನಾಗಿದ್ದರು.ಭಾನುವಾರ ಮತ್ತೆ ಹೆಜ್ಜೆ ಕಾಣಿಸಿಕೊಂಡಿದ್ದು ನೋಡಿದಾಗ ಇದು ಚಿರತೆಯದ್ದೇ ಎನ್ನುವ ಅನುಮಾನ ಬಂದಿದೆ. ಕೂಡಲೇ ನಿವಾಸಿಗಳು ಅರಣ್ಯ ಇಲಾಖೆ ಮೈಸೂರು ಚಿರತೆ ಕಾರ್ಯಪಡೆಗೆ ಮಾಹಿತಿ ನೀಡಿದ್ದರು. ಸಿಬ್ಬಂದಿಗಳು ಇಲ್ಲಿಗೆ ಆಗಮಿಸಿ ವೀಕ್ಷಿಸಿದಾಗ ಅದು ಚಿರತೆ ಹೆಜ್ಜೆಯೇ ಎನ್ನುವುದು ಖಚಿತವಾಗಿತ್ತು. ಅರಣ್ಯ ಇಲಾಖೆಯ ಸಿಬ್ಬಂದಿಯೂ ಎಚ್ಚರಿಕೆಯಿಂದ ಇರುವಂತೆ ಅಪಾರ್ಟ್‌ಮೆಂಟ್‌ ನಿವಾಸಿಗಳಿಗೆ ಹೇಳಿದ್ದರು. ಮಂಗಳವಾರ ಮತ್ತೆ ಚಿರತೆ ಹೆಜ್ಜೆ ಕಾಣಿಸಿಕೊಂಡಿದೆ. ಅದೂ ಪಕ್ಕದಲ್ಲಿಯೇ ನವಿಲನ್ನು ಬೇಟೆಯಾಡಿ ತಿಂದು ಹೋಗಿರುವುದು ಕಂಡು ಬಂದಿದೆ.

ಚಿರತೆ ನಿರಂತರವಾಗಿ ಈ ಭಾಗದಲ್ಲಿ ಸಂಚರಿಸುತ್ತಿರುವುದರಿಂದ ಭಯಗೊಂಡ ನಿವಾಸಿಗಳು ಅರಣ್ಯ ಇಲಾಖೆಯವರಿಗೆ ಕರೆ ಮಾಡಿ ತಿಳಿಸಿ ಚಿರತೆ ಸೆರೆ ಹಿಡಿಯವಂತೆ ಮನವಿ ಮಾಡಿದ್ದಾರೆ. ಡ್ರೋಣ್‌ ಕ್ಯಾಮರಾ ಬಳಸಿ ಚಿರತೆ ಎಲ್ಲಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಮಕ್ಕಳು. ಹಿರಿಯರು, ಹೆಣ್ಣು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಅನಗತ್ಯ ಭಯವಾಗದಂತೆ ಗಮನ ಕೊಡಿ ಎಂದು ಇಲಾಖೆಯಲ್ಲಿ ಸ್ಥಳೀಯರು ಕೋರಿದ್ದಾರೆ.

ಅಕ್ಕಪಕ್ಕದಲ್ಲಿ ಅರಣ್ಯ ರೀತಿಯ ಪ್ರದೇಶವೇ ಇದೆ. ಇದರಿಂದ ಈ ಭಾಗದಲ್ಲಿ ಚಿರತೆ ಇರಬಹುದು. ಆದರೆ ಅಪಾರ್ಟ್‌ಮೆಂಟ್‌ ಒಳಗೆ ಅದು ಬಂದಿರಲಿಲ್ಲ. ಪಕ್ಕದಲ್ಲಿ ನವಿಲು ಬೇಟೆ ಆಡಿ ಹೋಗುತ್ತಿತ್ತು. ಈಗ ಅಪಾರ್ಟ್‌ಮೆಂಟ್‌ ಪ್ರದೇಶದಲ್ಲಿಯೇ ಬಂದಿರುವುರಿಂದ ಆತಂಕ ಶುರುವಾಗಿದೆ. ಅರಣ್ಯ ಇಲಾಖೆ ಈಗಾಗಲೇ ಚಿರತೆ ಕುರಿತು ಮಾಹಿತಿ ನೀಡಿದ್ದಾರೆ. ಆದರೂ ಭಯ ಇದ್ದೇ ಇರುತ್ತದೆ. ಕೂಡಲೇ ಚಿರತೆ ಸೆರೆ ಹಿಡಿಯುವ ಇಲ್ಲವೇ ಈ ಕಡೆ ಬಾರದಂತೆ ಗಮನ ನೀಡಬೇಕು ಎನ್ನುವುದು ಅಪಾರ್ಟ್‌ಮೆಂಟ್‌ ನಿವಾಸಿಯಾಗಿರುವ ಸಹಕಾರ ಇಲಾಖೆಯ ನಿವೃತ್ತ ಉಪನಿರ್ದೇಶಕ ಹಾಗೂ ಹಿರಿಯ ವಕೀಲ ಡಿ.ಬಿ.ಜೋಶಿ ಅವರ ಮನವಿ.

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.
Whats_app_banner