Shivamogga Airport: ಶಿವಮೊಗ್ಗ ವಿಮಾನ ನಿಲ್ದಾಣ ಕರ್ನಾಟಕದ ಮೂರನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ?
ಇನ್ನೆರಡು ವರ್ಷಗಳಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಶಿವಮೊಗ್ಗ: ರಾಜ್ಯದಲ್ಲಿ ಬೆಂಗಳೂರು ಮತ್ತು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಾಗಿದ್ದು, , ಮೈಸೂರು, ಬಳ್ಳಾರಿ, ಬೀದರ್, ಹುಬ್ಬಳ್ಳಿ, ಕಲಬುರಗಿ, ಬೆಳಗಾವಿ ಮತ್ತು ಇಂದು ಉದ್ಘಾಟನೆಗೊಂಡ ಶಿವಮೊಗ್ಗ ವಿಮಾನ ನಿಲ್ದಾಣಗಳು ರಾಷ್ಟ್ರೀಯ ವಿಮಾನ ನಿಲ್ದಾಣಗಳಾಗಿವೆ. ಆದರೆ, ಇಂದು ಉದ್ಘಾಟನೆಗೊಂಡ ಶಿವಮೊಗ್ಗ ಕುವೆಂಪು ವಿಮಾನ ನಿಲ್ದಾಣವು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಲಿದೆಯೇ? ಹೌದು, ಇನ್ನೆರಡು ವರ್ಷಗಳಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಲಿದೆ ಎಂದಿದ್ದಾರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ.
ಇನ್ನೆರಡು ವರ್ಷಗಳಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಶಿವಮೊಗ್ಗ ನಿಲ್ದಾಣದ ಉದ್ಗಾಟನಾ ಸಮಾರಂಭದಲ್ಲಿ ಈ ಭರವಸೆ ನೀಡಿದ್ದಾರೆ.
ಕರ್ನಾಟಕದಲ್ಲಿ ಶಿವಮೊಗ್ಗ ವಿಮಾನನಿಲ್ದಾಣ ಉದ್ಘಾಟನೆಗೊಂಡಿದೆ. ಬಿಜಾಪುರ ವಿಮಾನನಿಲ್ದಾಣ ಈಗಾಗಲೇ ಸಿದ್ದವಿದ್ದು, ಹಾಸನದಲ್ಲಿ ಪ್ರಗತಿಯಲ್ಲಿದೆ. ಕಾರವಾರದಲ್ಲಿ ಕಾಮಗಾರಿ ಪ್ರಾರಂಭವಾಗುತ್ತಿದ್ದು, ರಾಯಚೂರು, ಕೊಪ್ಪಳ ಮತ್ತು ದಾವಣಗೆರೆಯಲ್ಲಿ ಈ ವರ್ಷ ಕಾಮಗಾರಿಗಳು ಪ್ರಾರಂಭವಾಗಲಿದೆ. ವಿಮಾನನಿಲ್ದಾಣದ ಜಾಲ ಹಾಗೂ ಪ್ರಧಾನಿಗಳ ಆಶಯದಂತೆ ಸಾಗರಮಾಲಾ ಯೋಜನೆಯಡಿ ಏಳು ಬಂದರುಗಳ ಅಭಿವೃದ್ಧಿಯನ್ನು ಕೈಗೊಳ್ಳಲಾಗಿದೆ. ಕಳೆದ 5 ವರ್ಷಗಳಲ್ಲಿ ಆರು ಸಾವಿರ ಕಿಮೀ ರಾಷ್ಟ್ರೀಯ ಹೆದ್ದಾರಿ ಮಂಜೂರಾತಿಯಾಗಿದೆ. ಈ ಕಾರ್ಯಕ್ಕಾಗಿ 64 ಸಾವಿರ ಕೋಟಿ ಮಂಜೂರಾಗಿದ್ದು, ಈ ಪೈಕಿ 34 ಕೋಟಿ ರೂ.ಗಳು ಕರ್ನಾಟಕಕ್ಕೆ ಪ್ರಧಾನಿಗಳು ಬಿಡುಗಡೆ ಮಾಡಿದ್ದಾರೆ ಎಂದು ಅವರು ಹೇಳಿದರು.
ಮಲೆನಾಡಿನ ಹೆಬ್ಬಾಗಿಲಾಗಿರುವ ಶಿವಮೊಗ್ಗದ ವಾಣಿಜ್ಯೋದ್ಯಮ, ವ್ಯಾಪಾರ, ವಹಿವಾಟು, ಕೃಷಿ, ಕೈಗಾರಿಕೆ, ಔದ್ಯೋಗೀಕರಣ ಇವೆಲ್ಲಕ್ಕೂ ಈ ವಿಮಾನ ನಿಲ್ದಾಣ ಹೆಬ್ಬಾಗಿಲಾಗಲಿದೆ. ಇಡೀ ಭಾರತದ ಮೂಲೆ ಮೂಲೆಗೆ ಈ ವಿಮಾನ ನಿಲ್ದಾಣ ಸಂಪರ್ಕ ಕಲ್ಪಿಸಲಿದೆ ಎಂದು ಅವರು ಹೇಳಿದ್ದಾರೆ.
ನರೇಂದ್ರ ಮೋದಿಯವರು ದೇಶ ಸೇರಿದಂತೆ ಕರ್ನಾಟಕಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಭಾರತ ವಿಶ್ವಮಾನ್ಯವಾದಂತೆ ಕರ್ನಾಟಕ ದೇಶದಲ್ಲಿ ನಂಬರ್ ಒನ್ ಆಗಲಿದೆ ಎಂದರು. 2014 ರಿಂದೀಚೆಗೆ 30 ಕ್ಕಿಂತ ಹೆಚ್ಚು ವಿಮಾನ ನಿಲ್ದಾಣಗಳು ಈ ದೇಶದಲ್ಲಿ ಉದ್ಘಾಟನೆಗೊಂಡಿವೆ. ಇನ್ನು 10-15 ವಿಮಾನ ನಿಲ್ದಾಣಗಳು ಉದ್ಘಾಟನೆಗೊಳ್ಳಲಿವೆ. ಸ್ವಾತಂತ್ರ್ಯ ನಂತರ ಆಗಿರುವ ವೈದ್ಯಕೀಯ ಕಾಲೇಜುಗಳಿಗಿಂತಲೂ 2014 ರಿಂದೀಚೆಗೆ ಅತ್ಯಧಿಕ ವೈದ್ಯಕೀಯ ಕಾಲೇಜು ದೇಶದಲ್ಲಿ ಆಗಿವೆ ಎಂದರು.
ಕಳೆದ ವರ್ಷ ರಾಜ್ಯಕ್ಕೆ ನಾಲ್ಕು ವೈದ್ಯಕೀಯ ಕಾಲೇಜುಗಳನ್ನು ಮಂಜೂರು ಮಾಡಲಾಗಿದೆ. ಸ್ವಾತಂತ್ರ್ಯಾ ನಂತರದಲ್ಲಿ ಆಗಿರುವ ಕುಡಿಯುವ ನೀರಿನ ಸೌಲಭ್ಯಕಿಂತ ಮೂರು ಪಟ್ಟು ಹೆಚ್ಚು ಕುಡಿಯುವ ನೀರಿನ ಸೌಲಭ್ಯವನ್ನು ಮನೆಮನೆಗೆ ಜಲ್ ಜೀವನ್ ಮಿಷನ್ ಅಡಿಯಲ್ಲಿ ನೀಡಲಾಗಿದೆ ಎಂದರು. 2014 ರ ನಂತರ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಪ್ರಧಾನಿಗಳು ದುಪ್ಪಟ್ಟು ಮನೆಗಳನ್ನು ಕಟ್ಟಿದ್ದಾರೆ. ಸ್ವಾತಂತ್ರ್ಯಾನಂತರದಲ್ಲಿ ಆಗಿರುವ ಶೌಚಾಲಯಗಳಿಗಿಂತಲೂ ಮೂರು ಪಟ್ಟು ಶೌಚಾಲಯಗಳನ್ನು ಕೇವಲ 7 ವರ್ಷಗಳಲ್ಲಿ ನೀಡಿದ್ದಾರೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ.
ಭಾರತ ದೇಶ ಆರ್ಥಿಕವಾಗಿ ಸಬಲವಾಗಿದ್ದು, ಜಿ 20 ಅಧ್ಯಕ್ಷ ಸ್ಥಾನ ಭಾರತಕ್ಕೆ ಬಂದಿದೆ. ಅದಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕಾರಣೀಭೂತರು. ಈ 20 ಇಡೀ ವಿಶ್ವದ ಆರ್ಥಿಕ, ಸಾಮಾಜಿಕ ಸೇರಿದಂತೆ ಎಲ್ಲಾ ವಲಯಗಳಲ್ಲಿ ನಿರ್ಣಯ ಕೈಗೊಳ್ಳುವ ಜಿ 20 ಅಧ್ಯಕ್ಷ ಸ್ಥಾನ ಭಾರತದ ಪ್ರಧಾನಿಗಳಿಂದ ಲಭಿಸಿರುವುದು ಹೆಮ್ಮೆಯ ವಿಚಾರ. ಕರ್ನಾಟಕ ಭಾರತದ ನಿರ್ಮಾಣದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದೆ. ಆರ್ಥಿಕವಾಗಿ ಅತಿ ಹೆಚ್ಚು ವಿದೇಶಿ ಬಂಡವಾಳ ರಾಜ್ಯಕ್ಕೆ ಬರುತ್ತದೆ. ನಾವೀನ್ಯತೆ, ತಂತ್ರಜ್ಞಾನದಲ್ಲಿ ನಂಬರ್ ಒನ್ ಸ್ಥಾನದಲ್ಲಿದ್ದು, ಸಾಮಾಜಿಕವಾಗಿಯೂ ನಂಬರ್ ಒನ್ ಸ್ಥಾನದಲ್ಲಿದೆ ಎಂದರು.
ಮಾರ್ಚ್ 11 ಕ್ಕೆ ಬೆಂಗಳೂರು – ಮೈಸೂರು ಹೆದ್ದಾರಿ ಉದ್ಘಾಟನೆಗೊಳ್ಳುತ್ತಿದ್ದು, ಧಾರವಾಡದಲ್ಲಿ ಐಐಟಿ ಉದ್ಘಾಟನೆಯಾಗುತ್ತಿದೆ. ಇವೆಲ್ಲವೂ ಡಬಲ್ ಇಂಜಿನ್ ಸರ್ಕಾರದಿಂದ ಆಗುತ್ತಿರುವುದು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ಮೇಲೆ ಮಾರಾಣಾಂತಿಕ ಹಲ್ಲೆಯಾದರೂ, ಪುನ: ಹುಟ್ಟಿ ಬಂದು ಹೋರಾಟ ಮಾಡಿದರು. ಜನಪರ ಯೋಜನೆಗಳನ್ನು ರಾಜ್ಯಕ್ಕೆ ನೀಡಿದರು ಎಂದು ತಿಳಿಸಿದರು.