ಕನ್ನಡ ಸುದ್ದಿ  /  Karnataka  /  Agreement For Prestigious Raksha University In Karnataka Says Home Minister Araga Gyanendra

Raksha University: ಶಿವಮೊಗ್ಗದಲ್ಲಿ ಪ್ರತಿಷ್ಠಿತ ರಕ್ಷಾ ವಿಶ್ವವಿದ್ಯಾಲಯ ಸ್ಥಾಪನೆಗೆ ಒಡಂಬಡಿಕೆ; ಎಷ್ಟು ಕೋರ್ಸ್ ಗಳಿವೆ, ಯಾರಿಗೆ ಉಪಯೋಗ?

ಶಿವಮೊಗ್ಗದಲ್ಲಿ ಸ್ಥಾಪನೆಯಾಗುತ್ತಿರುವ ಪ್ರತಿಷ್ಠಿತ ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯ, 8 ಎಕರೆ ಪ್ರದೇಶದಲ್ಲಿ ಪ್ರಸ್ತುತ ಇರುವ ಕೇಂದ್ರೀಯ ವಿದ್ಯಾಲಯದಲ್ಲಿರುವ ಕಟ್ಟಡಗಳಲ್ಲಿ ಕಾರ್ಯ ನಿರ್ವಹಿಸಲಿದ್ದು, ಈ ಶೈಕ್ಷಣಿಕ ವರ್ಷದಿಂದಲೇ ಕಾರ್ಯಾರಂಭ ಮಾಡಲಿದೆ ಎಂದು ಗೃಹ ಸಚಿವರು ಹೇಳಿದ್ದಾರೆ.

ಬೆಂಗಳೂರಿನಲ್ಲಿ ನಡೆದ 'ಮಾದಕ ವಸ್ತು ಕಳ್ಳಸಾಗಣೆ ಮತ್ತು ದಕ್ಷಿಣ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ರಾಷ್ಟ್ರೀಯ ಭದ್ರತೆ' ಕುರಿತ ಪ್ರಾದೇಶಿಕ ಸಮ್ಮೇಳನದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಸಿಎಂ ಬಸವರಾಜ ಬೊಮ್ಮಾಯಿ, ಗೃಹ ಸಚಿವ ಆರಗ ಜ್ಞಾನೇಂದ್ರ ಭಾಗವಹಿಸಿದ್ದರು.
ಬೆಂಗಳೂರಿನಲ್ಲಿ ನಡೆದ 'ಮಾದಕ ವಸ್ತು ಕಳ್ಳಸಾಗಣೆ ಮತ್ತು ದಕ್ಷಿಣ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ರಾಷ್ಟ್ರೀಯ ಭದ್ರತೆ' ಕುರಿತ ಪ್ರಾದೇಶಿಕ ಸಮ್ಮೇಳನದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಸಿಎಂ ಬಸವರಾಜ ಬೊಮ್ಮಾಯಿ, ಗೃಹ ಸಚಿವ ಆರಗ ಜ್ಞಾನೇಂದ್ರ ಭಾಗವಹಿಸಿದ್ದರು.

ಬೆಂಗಳೂರು: ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯ(RRU)ದ ಕರ್ನಾಟಕ ಅಧ್ಯಯನ ಕೇಂದ್ರವನ್ನು ಶಿವಮೊಗ್ಗ ನಗರದಲ್ಲಿ ಸ್ಥಾಪಿಸಲು, ರಾಜ್ಯ ಸರ್ಕಾರ ಹಾಗೂ ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯದ ಜತೆಗೆ ಇಂದು ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಲಾಗಿದೆ.

ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ರವರ ಸಮ್ಮುಖದಲ್ಲಿ ವಿಶ್ವ ವಿದ್ಯಾಲಯದ ಉಪಕುಲಪತಿ ಬಿಮಲ್ ಎನ್ ಪಟೇಲ್ ಹಾಗೂ ರಾಜ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಿದ್ದಾರೆ.

ಆ ಮೂಲಕ ಕರ್ನಾಟಕ ದಕ್ಷಿಣ ಭಾರತದಲ್ಲಿ, ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯದ ಅಧ್ಯಯನ ಕೇಂದ್ರ ಹೊಂದಿದ ಮೂರನೇ ರಾಜ್ಯವಾಗಿದೆ.

ನಾಡಿನ ಯುವ ಜನತೆಗೆ ಭದ್ರತೆ ಹಾಗೂ ಪೊಲೀಸ್ ಸೇವೆಗಳ ಕ್ಷೇತ್ರದಲ್ಲಿ, ಅತ್ಯಾಧುನಿಕ ತರಬೇತಿ, ಶಿಕ್ಷಣ, ಸಂಶೋಧನೆ ಇತ್ಯಾದಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಹಾಗೂ ಈ ಕ್ಷೇತ್ರದಲ್ಲಿ ಅಗತ್ಯವಾಗಿ ಬೇಕಾಗಿದ್ದ ಮಾನವ ಸಂಪನ್ಮೂಲವನ್ನು ಸೃಷ್ಟಿಸುವುದು ಈ ವಿಶ್ವವಿದ್ಯಾಲಯ ಮಹತ್ವದ ಕಾಣಿಕೆ ನೀಡಲಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಒಡಂಬಡಿಕೆ ಬಳಿಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಶಿವಮೊಗ್ಗದಲ್ಲಿ ಸ್ಥಾಪನೆಯಾಗುತ್ತಿರುವ ಪ್ರತಿಷ್ಠಿತ ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯ, 8 ಎಕರೆ ಪ್ರದೇಶದಲ್ಲಿ ಪ್ರಸ್ತುತ ಇರುವ ಕೇಂದ್ರೀಯ ವಿದ್ಯಾಲಯದಲ್ಲಿರುವ ಸುಸಜ್ಜಿತ ಕಟ್ಟಡಗಳಲ್ಲಿ ಕಾರ್ಯ ನಿರ್ವಹಿಸಲಿದ್ದು, ಈ ಶೈಕ್ಷಣಿಕ ವರ್ಷದಿಂದಲೇ ಕಾರ್ಯಾರಂಭ ಮಾಡಲಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ರಾಷ್ಟ್ರದ ಪ್ರತಿಷ್ಠಿತ ವಿಶ್ವ ವಿದ್ಯಾಲಯದ ಅಧ್ಯಯನ ಕೇಂದ್ರದಲ್ಲಿ ಪ್ರಾರಂಭಿಕವಾಗಿ ಡಿಪ್ಲೊಮಾ, ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಕೋರ್ಸ್ ಗಳಿಗೆ ಶಿಕ್ಷಣ ನೀಡಲಿದ್ದು, ಪೊಲೀಸ್ ವಿಜ್ಞಾನ, ಆಡಳಿತ, ಸೈಬರ್ ಸೆಕ್ಯೂರಿಟಿ ಹಾಗೂ ಡಿಜಿಟಲ್ ಸಂಶೋಧನೆ, ರಕ್ಷಣಾ ನಿರ್ವಹಣೆ, ನ್ಯಾಯ ಅಪರಾಧಿಕಾರಣ, ಕರಾವಳಿ ಸಂರಕ್ಷಣೆ, ರಸ್ತೆ ಸುರಕ್ಷತೆ, ದೈಹಿಕ ಶಿಕ್ಷಣ ಸಂಬಂಧ ವಿಷಯಗಳನ್ನೂ ಒಳಗೊಂಡಂತೆ, ಪದವಿ ಹಾಗೂ ಸರ್ಟಿಫಿಕೇಟ್ ಪ್ರದಾನ ಮಾಡಲಾಗುತ್ತದೆ.

ರಾಜ್ಯದ ರಕ್ಷಾ ವಿಶ್ವವಿದ್ಯಾಲಯದ ಕೇಂದ್ರವು, ರಕ್ಷಣಾ ವಲಯಕ್ಕೆ ಸಂಬಂಧಿಸಿದಂತೆ ಶಿಕ್ಷಣ, ಅಧ್ಯಯನ ಕೇಂದ್ರವಾಗಿ ಕಾರ್ಯವನ್ನು ನಿರ್ವಹಿಸುವಲ್ಲದೆ, ಪೊಲೀಸ್ ಇಲಾಖೆಗೆ ವಿವಿಧ ಹುದ್ದೆಗಳಿಗೆ ಸೆೇರಲು ಬಯಸುವ ಅಭ್ಯರ್ಥಿಗಳಿಗೆ, ತರಬೇತಿ ಹಾಗೂ ಕೋಚಿಂಗ್ ಕೇಂದ್ರವಾಗಿಯೂ ಕಾರ್ಯ ನಿರ್ವಹಿಸಲಿದೆ.

ಶಿವಮೊಗ್ಗದ ರಕ್ಷಾ ವಿಶ್ವ ವಿದ್ಯಾಲಯದ ಕೇದ್ರವು, ರಕ್ಷಣಾ ವಲಯಕ್ಕೆ ಸಂಬಂಧಿಸಿದಂತಹ ವಿವಿಧ ವಿಷಯಗಳ ಶಿಕ್ಷಣಕ್ಕೆ ಸಂಬಂಧಿಸಿದಂತೆ, ವಿಶ್ವ ಮಟ್ಟದ ಕೇಂದ್ರವಾಗಿ ಗುರುತಿಸಿಕೊಳ್ಳಲಿದೆ ಹಾಗೂ ಇಂತಹ ಕೇಂದ್ರವು ರಾಜ್ಯದ ಅದರಲ್ಲೂ ಶಿವಮೊಗ್ಗ ಜಿಲ್ಲೆಗೆ ಮಂಜೂರಾತಿ ನೀಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು, ರಕ್ಷಾ ವಿಶ್ವವಿದ್ಯಾಲಯ ವನ್ನು, ರಾಷ್ಟ್ರದ ರಕ್ಷಣಾ ಸಂಬಂಧಿ ಶೈಕ್ಷಣಿಕ ಕ್ಷೇತ್ರದ ಮಹತ್ವದ ಸಂಸ್ಥೆಯಾಗಲಿದೆ ಎಂದಿದ್ದು, ಅಂತಹ ಒಂದು ಸಂಸ್ಥೆಯ ಕೇಂದ್ರವು ರಾಜ್ಯಕ್ಕೆ ಅದರಲ್ಲಿಯೂ ಶಿವಮೊಗ್ಗ ಜಿಲ್ಲೆಗೆ ಬರುತ್ತಿರುವುದು ಹೆಮ್ಮೆಯ ವಿಷಯ ಎಂದಿದ್ದಾರೆ.

ಶಿವಮೊಗ್ಗದ ರಾಗಿಗುಡ್ಡದಲ್ಲಿ ಇರುವ ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯದ ಮೂರನೇ ಕ್ಯಾಂಪಸ್ ಅನ್ನು ವರ್ಚುವಲ್ ಮೂಲಕ ಗೃಹ ಸಚಿವ ಅಮಿತ್ ಶಾ ಉದ್ಘಾಟಿಸಿದ್ದಾರೆ. ಈ ವಿಶ್ವವಿದ್ಯಾನಿಲಯ ಕ್ಯಾಂಪಸ್ ಉದ್ಯೋಗ ಹುಡುಕುತ್ತಿರುವ ಸಾವಿರಾರು ಯುವಕರಿಗೆ ಸಹಾಯ ನೆರವಾಗಲಿದೆ. ರಾಜ್ಯದ ಆಂತರಿಕ ಭದ್ರತೆಯನ್ನು ಕಾಪಾಡುವ ನಿಟ್ಟಿನಲ್ಲಿ ಈ ವಿಶ್ವವಿದ್ಯಾಲಯವನ್ನು ಪ್ರಾರಂಭಿಸಲಾಗಿದೆ ಎಂದು ಸಂಸದ ಬಿ ವೈ ರಾಘವೇಂದ್ರ ನಿನ್ನೆಯಷ್ಟೇ ಮಾಧ್ಯಮ ಪ್ರಕಟನೆಯಲ್ಲಿ ಹೇಳಿದ್ದರು.

IPL_Entry_Point