ಕನ್ನಡ ಸುದ್ದಿ  /  Karnataka  /  Agricultural Scientist Dr L C Soans Who Is Dr L C Soans A Brief Profile Of Noted Agricultural Scientist

Agricultural Scientist Dr L C Soans: ಸಮಾಜಮುಖಿ ಕೃಷಿ ಋಷಿ ಡಾ.ಎಲ್‌.ಸಿ.ಸೋನ್ಸ್‌

Agricultural Scientist Dr L C Soans: ಡಾ.ಲಿವಿಂಗ್ ಸ್ಟನ್ ಚಂದ್ರಮೋಹನ ಸೋನ್ಸ್ ಎಂಬುದು ಡಾ.ಎಲ್‌.ಸಿ ಸೋನ್ಸ್‌ ಅವರ ಪೂರ್ಣ ಹೆಸರು. 1934ರ ಏಪ್ರಿಲ್ 4ರಂದು ಜನನ. ನಿನ್ನೆಯಷ್ಟೆ ಅವರು 89 ಮುಗಿಸಿ 90ಕ್ಕೆ ಕಾಲಿರಿಸಿದ್ದರು. ಕೃಷಿ ಕ್ಷೇತ್ರವನ್ನೇ ಉಸಿರಾಗಿಸಿಕೊಂಡು ಕೆಲಸ ಮಾಡಿದ ಕಾಯಕ ಯೋಗಿ. ತಮ್ಮ ಜೀವನವನ್ನೇ ಕೃಷಿಗೆ ಮುಡಿಪಾಗಿಟ್ಟವರು.

ಡಾ.ಲಿವಿಂಗ್ ಸ್ಟನ್ ಚಂದ್ರಮೋಹನ ಸೋನ್ಸ್
ಡಾ.ಲಿವಿಂಗ್ ಸ್ಟನ್ ಚಂದ್ರಮೋಹನ ಸೋನ್ಸ್

ವಿದೇಶಿ ಹಣ್ಣುಗಳನ್ನು ದೇಶೀಯವಾಗಿ ಬೆಳೆಯಬಹುದು ಎಂಬುದನ್ನು ತೋರಿಸಿಕೊಟ್ಟ ʻಕೃಷಿ ಋಷಿʼ ಡಾ.ಎಲ್‌.ಸಿ ಸೋನ್ಸ್‌ ತಮ್ಮ ಇಹಲೋಕ ಯಾತ್ರೆಯನ್ನು ಇಂದು ಮುಗಿಸಿದರು. ಅವರು ಸ್ಥಾಪಿಸಿದ ಸೋನ್ಸ್ ಫಾರ್ಮ್ ಅನಾನಸ್, ಮಾವು ಮತ್ತು ವಿವಿಧ ಬಿದಿರುಗಳಿಗೆ ಹೆಸರುವಾಸಿ. ಅದರ ಮೂಲಕ ಅವರ ನೆನಪುಗಳು ಚಿರಸ್ಥಾಯಿ ಆಗಿದೆ.

ಹೌದು, ಅವರು ಎಗ್ ಫ್ರೂಟ್ (ದಕ್ಷಿಣ ಅಮೆರಿಕ), ಡೀಸೆಲ್ ಟ್ರೀ (ಅಮೆಜಾನ್ ಕಾಡು), ರಂಬುಟಾನ್, ಡುರಿಯನ್, ಲ್ಯಾಂಗ್‌ಸಾಟ್ ಸೇರಿ ಅನೇಕ ವಿದೇಶಿ ಹಣ್ಣುಗಳನ್ನು ಅವಿಭಜಿತ ದಕ್ಷಿಣ ಕನ್ನಡ ಪ್ರದೇಶಕ್ಕೆ ಪರಿಚಯಿಸಿದವರು.

ಡಾ.ಲಿವಿಂಗ್ ಸ್ಟನ್ ಚಂದ್ರಮೋಹನ ಸೋನ್ಸ್ ಎಂಬುದು ಡಾ.ಎಲ್‌.ಸಿ ಸೋನ್ಸ್‌ ಅವರ ಪೂರ್ಣ ಹೆಸರು. 1934ರ ಏಪ್ರಿಲ್ 4ರಂದು ಜನನ. ನಿನ್ನೆಯಷ್ಟೆ ಅವರು 89 ಮುಗಿಸಿ 90ಕ್ಕೆ ಕಾಲಿರಿಸಿದ್ದರು. ಕೃಷಿ ಕ್ಷೇತ್ರವನ್ನೇ ಉಸಿರಾಗಿಸಿಕೊಂಡು ಕೆಲಸ ಮಾಡಿದ ಕಾಯಕ ಯೋಗಿ. ತಮ್ಮ ಜೀವನವನ್ನೇ ಕೃಷಿಗೆ ಮುಡಿಪಾಗಿಟ್ಟವರು.

ಅನಾನಸು ಕೃಷಿ, ಬಿದಿರಿನ ವಿವಿಧ ಪ್ರಭೇದ, ದೇಶ-ವಿದೇಶಗಳ ಹಣ್ಣು-ತರಕಾರಿ ಪ್ರಭೇದಗಳನ್ನು ಊರಿನಲ್ಲೂ ಬೆಳೆಸಬಹುದು ಎಂಬುದನ್ನು ತೋರಿಸಿಕೊಟ್ಟವರು ಸೋನ್ಸ್.‌ ಇದನ್ನು ಅವರು ಮೂಡುಬಿದಿರೆ ಬನ್ನಡ್ಕದ ಮಣ್ಣಿನಲ್ಲಿ ಬೆಳೆಸಿ, ಅದರಿಂದ ಫಸಲು ಹಾಗೂ ಲಾಭ ಗಳಿಸಿ ಕೃಷಿ ಕ್ಷೇತ್ರದಲ್ಲಿ ಅಸಾಮಾನ್ಯ ಸಾಧನೆ ಮಾಡಿದವರು.

ಕೃಷಿ ಮ್ಯೂಸಿಯಂ ಒಂದನ್ನು ಸ್ಥಾಪಿಸಿ, ಅದರಲ್ಲಿ ಅವರು ತಮ್ಮ ತಂದೆಯ ಕಾಲದಿಂದ ಬಳಕೆಯಲ್ಲಿದ್ದ ಕೃಷಿ ಉಪಕರಣಗಳನ್ನು ಸಂಗ್ರಹಿಸಿಟ್ಟಿದ್ದಾರೆ. ಅನೇಕರು ಅಲ್ಲಿಗೆ ಮೀನು ಹಿಡಿಯುವ ಉಪಕರಣ ಸೇರಿ ವಿವಿಧ ಕೃಷಿ ಉಪಕರಣ, ಸಾಮಗ್ರಿಗಳನ್ನು ನೀಡಿದ್ದರು. ಆದಾಗ್ಯೂ, ಈ ಮ್ಯೂಸಿಯಂ ಅನ್ನು ಅವರು ಸಾರ್ವಜನಿಕರಿಗೆ ತೆರೆದಿರಲಿಲ್ಲ. ಇನ್ನಷ್ಟು ವ್ಯವಸ್ಥಿತವಾಗಿ ಅದನ್ನು ರೂಪಿಸಿದ ಬಳಿಕ ಸಾರ್ವಜನಿಕರಿಗೆ ತೆರೆಯಬೇಕೆಂಬ ಇರಾದೆ ಅವರದಾಗಿತ್ತು ಎನ್ನುತ್ತಾರೆ ಆಪ್ತರು.

ಜಲಸಂಪನ್ಮೂಲ ರಕ್ಷಣೆ ವಿಚಾರದಲ್ಲಿ ಭಗೀರಥ

ಕೃಷಿ ಮತ್ತು ಜಲಸಂಪನ್ಮೂಲ ಒಂದನ್ನೊಂದು ಬಿಟ್ಟಿರಲಾರದು. ಕೃಷಿ ಋಷಿ ಎಂದೇ ಜನಪ್ರಿಯರಾಗಿದ್ದ ಕೃಷಿ ವಿಜ್ಞಾನಿ ಡಾ.ಎಲ್‌.ಸಿ ಸೋನ್ಸ್‌ ಜಲ ಸಂಪನ್ಮೂಲ ರಕ್ಷಣೆ ಬಗ್ಗೆ ಅಪಾರ ಕಾಳಜಿ ಹೊಂದಿದವರಾಗಿದ್ದರು. ಅವರು, ಮೂಡುಬಿದಿರೆ ಸಮೀಪ ಮದಕದ ಕಡಲಕೆರೆ ಜೀರ್ಣೋದ್ಧಾರಕ್ಕೆ ಸಾಮಾಜಿಕ ಬಲ ಒದಗಿಸಿದವರು. ಆ ಮೂಲಕ ಆ ಊರ ಜನರಲ್ಲಿ ನೀರಿನ ಬಗ್ಗೆ ಪ್ರೀತಿ ಹುಟ್ಟುವ ಹಾಗೆ ಮಾಡಿದವರು. ಇಸ್ರೆಲ್‍ನಲ್ಲಿ ನಡೆದ ವಿಶ್ವ ನೀರಾವರಿ ಸಮ್ಮೇಳನದಲ್ಲಿ ಭಾಗವಹಿಸಿ ಬಂದ ಅವರು, ಅವುಗಳ ಮಾದರಿಯನ್ನು ತನ್ನೂರಿನಲ್ಲಿ ಪ್ರಯೋಗಿಸಿದ್ದು ವಿಶೇಷ.

ಅವರು ನೀರಿಗಾಗಿ ಬಹಳ ಕಷ್ಟಪಟ್ಟವರು. ಭೂಗರ್ಭಶಾಸ್ತಜ್ಞರನ್ನು ಕರೆಯಿಸಿ ವಾಟರ್‌ ಡಿವೈನಿಂಗ್‌ ಮಾಡಿಸಿದವರು. ಆದರೆ ಫಲ ಸಿಗದೇ ಇದ್ದಾಗ, ವಾಟರ್‌ ಡಿವೈನಿಂಗ್‌ ಅನ್ನು ಸ್ವತಃ ಕಲಿತು ಪರಿಣತಿ ಸಾಧಿಸಿದರು. ಬಳಿಕ ತಂತಿ ಹಿಡಿದು ತಾವೇ ಮೂಡಬಿದರೆ ಆಸುಪಾಸಿನ ಜನರಿಗೆ ನೀರ ಸಲೆ ಗುರುತಿಸಲು ನೆರವಾದರು ಎಂಬುದನ್ನು ಹಿರಿಯ ಅಭಿವೃದ್ಧಿ ಪತ್ರಕರ್ತ ಶ್ರೀಪಡ್ರೆ ನೆನಪಿಸಿಕೊಂಡಿರುವುದಾಗಿ ಪ್ರಜಾವಾಣಿ ವರದಿ ಹೇಳಿದೆ.

ಪ್ರಶಸ್ತಿ ಪುರಸ್ಕಾರಗಳ ಕಡೆಗೊಂದು ನೋಟ

  • ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಿಂದ ಉತ್ತಮ ತೋಟಗಾರಿಕಾ ಸಾಧಕ ಪ್ರಶಸ್ತಿ
  • ಅಮೆರಿಕ ಮೊಟಾನಾ ವಿ.ವಿಯಿಂದ ವಿಶೇಷ ಹಳೆ ವಿದ್ಯಾರ್ಥಿ ಪ್ರಶಸ್ತಿ (ಅಮೆರಿಕದ ಹಳೆ ವಿದ್ಯಾರ್ಥಿಗಳನ್ನು ಹೊರತು ಪಡಿಸಿ, ಅನ್ಯ ದೇಶದಿಂದ ಪ್ರಶಸ್ತಿ ಪಡೆದ ಮೊದಲ ವ್ಯಕ್ತಿ ಡಾ. ಎಲ್.ಸಿ . ಸೋನ್ಸ್)
  • 2006 ಸಾಧಕ ಪ್ರಶಸ್ತಿ
  • 2004 ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ
  • ಹಿರಿಯಡ್ಕದ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದಿಂದ ಬೆಸ್ಟ್ ಫಾರ್ಮರ್ ಪ್ರಶಸ್ತಿ
  • 2010-ಬಾಗಲಕೋಟೆ ತೋಟಗಾರಿಕಾ ವಿ.ವಿ.ಯಿಂದ ರಾಷ್ಟ್ರಮಟ್ಟದ ಪ್ರಶಸ್ತಿ
  • ವಿಶ್ವ ತುಳು ಸಮ್ಮೇಳನ ಸನ್ಮಾನ ಸಹಿತ ದೇಶ ವಿದೇಶಗಳ ಹಲವಾರು ಸಂಘ ಸಂಸ್ಥೆಗಳಿಂದ ಗೌರವ

ಸೋನ್ಸ್‌ ಅವರದ್ದು ಸಮಾಜಮುಖಿ ಬದುಕು

ಕೃಷಿಯ ಜತೆಗೆ ಸಾಮಾಜಿಕವಾಗಿಯೂ ತೊಡಗಿಸಿಕೊಂಡಿದ್ದ ಡಾ.ಎಲ್‌.ಸಿ.ಸೋನ್ಸ್‌ ಅವರು ಹಲವಾರು ಸಂಘಸಂಸ್ಥೆಗಳ ಸಕ್ರಿಯ ಪದಾಧಿಕಾರಿ ಆಗಿದ್ದರು. ಅಮೆರಿಕನ್ ಸೊಸೈಟಿ ಆಫ್ ಡೌಸರ್ ಸದಸ್ಯ, ಬ್ರಿಟಿಸ್ ಸೊಸೈಟಿ ಆಫ್ ಡೌಸರ್ ಅಜೀವ ಸದಸ್ಯರೂ ಆಗಿದ್ದವರು.

ಮೂಡಬಿದರೆ ಆಸುಪಾಸುಗಳಲ್ಲಿ ಸಮಾಜಮುಖಿ ಕೆಲಸಗಳಲ್ಲಿ ಮುಂಚೂಣಿಯಲ್ಲಿದ್ದು ಭಾಗವಹಿಸುತ್ತಿದ್ದ ಡಾ.ಸೋನ್ಸ್‌, ಕಡಲಕೆರೆ ನಿಸರ್ಗಧಾಮದ ಸಲಹೆಗಾರರಾಗಿದ್ದರು. ಸಮಾಜಮಂದಿರ ಸಭಾದ ಮಾಜಿ ಅಧ್ಯಕ್ಷರು. ಕೃಷಿ ವಿಚಾರ ವಿನಿಮಯ ಕೇಂದ್ರದಲ್ಲೂ ಪದಾಧಿಕಾರಿ ಆಗಿದ್ದರು.ಕೃಷಿ ಮತ್ತು ಆರೋಗ್ಯದ ಕುರಿತು ಜಾಗೃತಿ ಮೂಡಿಸಲು ಆಲ್ಫ್ರೆಡ್ ಸೋನ್ಸ್ ಫೌಂಡೇಶನ್ ಸ್ಥಾಪಿಸಿದ್ದರು. ಡಾ ಸೋನ್ಸ್ ಅವರ ತಂದೆ, ಡಾ ಆಲ್ಫ್ರೆಡ್ ಜಿ. ಸೋನ್ಸ್ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪ್ರವರ್ತಕ ತೋಟಗಾರಿಕಾ ತಜ್ಞರು.

ಶಿಕ್ಷಣ ಕ್ಷೇತ್ರದ ಕಡೆಗೆ ನೋಡಿದರೆ ಅವರು, ಶ್ರೀಮಹಾವೀರ ವಿಧ್ಯಾವರ್ಧಕ ಸಂಘ, ಶ್ರೀಮಹಾವೀರ ಕಾಲೇಜು ಆಡಳಿತ ಮಂಡಳಿ ಸದಸ್ಯರಾಗಿ, ರೋಟರಿ ಎಜ್ಯುಕೇಶನ್ ಸೊಸೈಟಿಯ ಉಪಾಧ್ಯಕ್ಷರಾಗಿ ಶಿಕ್ಷಣ ಕ್ಷೇತ್ರದಲ್ಲೂ ಸೇವೆ ಸಲ್ಲಿಸಿದ್ದರು.

IPL_Entry_Point