Agriculture News: ಇದು ಕರ್ನಾಟಕದ ಕೃಷಿಕರ ವೇದಿಕೆ, ವೈಯಕ್ತಿಕ ಚರ್ಚೆಯಿಲ್ಲ, ರೈತಾಪಿ ಅನುಭವವೇ ಇದರ ಶಕ್ತಿ, ಸದಸ್ಯರ ಸಂಖ್ಯೆ ಎಷ್ಟಿರಬಹುದು?
Dakshina Kannada Model ಕೃಷಿಕರೂ ಸಾಮಾಜಿಕ ಮಾಧ್ಯಮಗಳ ಉಪಯೋಗವನ್ನು ಪಡೆದು ವಿಚಾರ ಮಂಥನಕ್ಕೆ ವೇದಿಕೆಯಾಗಿದೆ ಈ ಕೃಷಿ ವೇದಿಕೆ.ಏನಿದರ ವಿಶೇಷ. ಇಲ್ಲಿದೆ ವಿವರ..
ದಕ್ಷಿಣ ಕನ್ನಡದವರು ಏನನ್ನು ಮಾಡಿದರೂ ಅಚ್ಚುಕಟ್ಟಾಗಿಯೇ ಮಾಡುತ್ತಾರೆ. ಅರ್ಥಪೂರ್ಣವಾಗಿಯೇ ಮಾಡಿ ತೋರಿಸುತ್ತಾರೆ. ಇತರರೂ ಇದನ್ನು ಆರಂಭಿಸಬೇಕು ಎನ್ನುವಷ್ಟರ ಮಟ್ಟಿಗೆ ಕರಾವಳಿ ಭಾಗದ ಜನರ ಶಿಸ್ತು. ಇದಕ್ಕೆ ಹಲವು ಕ್ಷೇತ್ರಗಳ ಉದಾಹರಣೆಯಿದೆ. ಇದಕ್ಕೆ ಸೇರ್ಪಡೆಯಾಗಿರುವುದು ದಕ್ಷಿಣ ಕನ್ನಡದವರು ಸೇರಿ ಆರಂಭಿಸಿರುವ ಕೃಷಿಕರ ವೇದಿಕೆ. ಅದರಲ್ಲೂ ಫೇಸ್‌ಬುಕ್‌ನಲ್ಲಿ ಆರಂಭಿಸಿರುವ ಈ ವಿಶೇಷ ವೇದಿಕೆ ಹಾಗೂ ಪುಟವು ಕೃಷಿಗೆ ಸಂಬಂಧಿಸಿದ ಎಲ್ಲಾ ಆಯಾಮಗಳಲ್ಲೂ ಚರ್ಚಿಸಲಿದೆ. ಆರಂಭಗೊಂಡ ಕೆಲವೇ ವರ್ಷಗಳಲ್ಲಿ ಬಹು ಜನಪ್ರಿಯವೂ ಆಗಿದೆ. ಅಷ್ಟೇ ಅಲ್ಲ. ಅದೆಷ್ಟೂ ಜನರಿಗೆ ಉಪಯುಕ್ತವೂ ಆಗಿದೆ. ಈಗಲೂ ಕೃಷಿಕರ ವೇದಿಕೆಗೆ ಸದಸ್ಯರಾಗ ಬಯಸುವವರ ಸಂಖ್ಯೆ ಅಧಿಕವಾಗಿದೆ. ಹಾಗೆಂದು ಏಕಾಏಕಿ ಸದಸ್ಯತ್ವ ನಿಮಗೆ ಸಿಗುವುದಿಲ್ಲ. ವೇದಿಕೆ ನಿಗದಿಪಡಿಸಿಕೊಂಡಿರುವ ನಿಯಮಗಳಿಗೆ ಒಪ್ಪಿಕೊಂಡರೆ ಸೇರಿಕೊಳ್ಳಲು ಅನುಮತಿ
ಮಂಗಳೂರು ಭಾಗದಲ್ಲಿ ಪತ್ರಕರ್ತರಾಗಿ, ಕೃಷಿಕರಾಗಿ, ಪ್ರಗತಿಪರ ಚಿಂತಕರಾಗಿ ಗಮನ ಸೆಳೆದಿರುವವರು ಮಹೇಶ್ ಪುಚ್ಚಪ್ಪಾಡಿ. ಅವರು ಈಗ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷರೂ ಹೌದು. ಪುತ್ತೂರು ಭಾಗದಲ್ಲಿ ಇದ್ದುಕೊಂಡೇ ಒಂದಿಲ್ಲೊಂದು ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುತ್ತಾರೆ. ಅದು ಸಮಾಜಮುಖಿ ಚಟುವಟಿಕೆಯೇ. ಅವರ ಈ ಎಲ್ಲಾ ಚಟುವಟಿಕೆಗೆ ಸಾಮಾಜಿಕ ಮಾಧ್ಯಮಗಳೂ ಒತ್ತಾಸೆಯಾಗಿಯೇ ನಿಂತಿವೆ. ಏಕೆಂದರೆ ಎಲ್ಲವನ್ನೂ ಎಲ್ಲ ಕಾಲಕ್ಕೂ ಭೌತಿಕವಾಗಿಯೇ ಮಾಡಲು ಆಗೋಲ್ಲ. ಬದಲಾದ ಕಾಲಘಟ್ಟದಲ್ಲಿ ತಂತ್ರಜ್ಞಾನದ ಉಪಯೋಗವನ್ನು ಕೃಷಿ ವಲಯಕ್ಕೂ ತಲುಪಿಸಬೇಕು. ಅವರೊಂದಿಗೆ ಒಡನಾಟ ಇಟ್ಟುಕೊಳ್ಳಬೇಕು ಎನ್ನುವ ಆಶಯದೊಂದಿಗೆ ಮಹೇಶ್ ಮತ್ತಿತರರು ಆರಂಭಿಸಿದ್ದೇ ಕೃಷಿ ವೇದಿಕೆ. ಅಗ್ರಿ ಕಲ್ಚರಿಸ್ಟ್( Agriculturist) ಎನ್ನುವುದು ಈ ವೇದಿಕೆಯ ಹೆಸರು. ಕೃಷಿಕರ ವೇದಿಕೆ ಎನ್ನುವುದು ಟ್ಯಾಗ್ ಲೈನ್. ಇದು ಸಂಪೂರ್ಣ ಖಾಸಗಿ ವೇದಿಕೆ.
ಈಗ ಬದಲಾವಣೆಯ ಕಾಲ. ಬೆರಳ ತುದಿಯಲ್ಲಿ ಮಾಹಿತಿ ಪಡೆಯುವ ಈ ಸಮಯದಲ್ಲಿ ಸಾಮಾಜಿಕ ತಾಣಗಳ ಮೂಲಕವೂ ಕೃಷಿಕರು ಮಾಹಿತಿ , ಸಂವಹನ ಮಾಡಬೇಕು ಎಂಬ ಉದ್ಡೇಶದಿಂದ ಈ ಗುಂಪು ಆರಂಭವಾಗಿದೆ. ಹಾಗಂತ ಇಲ್ಲಿ ರೈತರೇ ಬೇಕೆಂದೇನಿಲ್ಲ , ಕೃಷಿ ಆಸಕ್ತ ಯಾರಾದರೂ ಗುಂಪಿನ ಸದಸ್ಯರಾಗಬಹುದು. ಅನುಭವಗಳು , ಮಾಹಿತಿ ಎಲ್ಲರಿಗೂ ಬೇಕಲ್ಲ. ಈ ಕಾರಣದಿಂದಲೇ ವೇದಿಕೆ ಆರಂಭಿಸಲಾಗಿದೆ ಎನ್ನುವುದು ನೀಡಿರುವ ವಿವರಣೆ.
ಕೃಷಿಕರು ಹೊಲದ ನಡುವೆ, ಜಮೀನಿನ ನಡುವೆ ಪಡೆದ ಅನುಭವಗಳನ್ನು, ಸಮಸ್ಯೆಗಳನ್ನು ಇಲ್ಲಿ ಹಂಚಿಕೊಂಡರೆ ಅನುಭವಗಳು ಇತರರಿಗೆ ನೆರವಾಗಬಹುದು, ಸಮಸ್ಯೆಗಳಿಗೆ ನಮ್ಮವರೇ ಉತ್ತರ ಕೊಡಬಹುದು. ಹೊಲದ ಅನುಭವವನ್ನು ಸ್ವೀಕರಿಸಬಹುದು. ಸುಮ್ಮನೆ ಕೂತು ಈ ಗುಂಪನ್ನು ನೋಡಿದರೂ ಸಾಕು. ರೈತರ ಕಷ್ಟ , ಸುಖಗಳು ಗೊತ್ತಾಗ ಬಹುದಲ್ಲಾ. ಅದು ಸಾಕು. ಇಂದಲ್ಲ ನಾಳೆಯಾದರೂ ಕೃಷಿ ಹಸಿರಾದೀತು. ಹೊಲದಲ್ಲಿ ಚಿನ್ನ ಬೆಳೆದೀತು ಎಂದು ಆಶಾವಾದಿಯಾಗಿರೋಣ. ಅಷ್ಟು ಸಾಕು. ದಯವಿಟ್ಟು ಕೇವಲ ಮಾರ್ಕೆಟಿಂಗ್ ಉದ್ದೇಶಕ್ಕಾಗಿಯೇ ಈ ಗುಂಪನ್ನು ಬಳಕೆ ಮಾಡಬೇಡಿ. ರೈತನಿಗೆ ಉಪಯುಕ್ತವಾಗುವ ಮಾಹಿತಿ ಕೊಡಿ ಎನ್ನುವ ವಿನಂತಿಯನ್ನು ಮಾಡಿಕೊಳ್ಳಲಾಗಿದೆ.
ಈ ವೇದಿಕೆ ಹಲವು ಕಟ್ಟು ಪಾಡುಗಳನ್ನು ಹಾಕಿಕೊಂಡಿದೆ. ಇದನ್ನು ಸದಸ್ಯರೂ ಪಾಲಿಸುವಂತೆ ಮನವಿ ಮಾಡುತ್ತದೆ.
ಕೃಷಿ ಮತ್ತು ಕೃಷಿಕ ಸಂಬಂಧಿಸಿದ ವಿಷಯ ಮಾತ್ರ.
ಕನ್ನಡ ,ಇಂಗ್ಲೀಷ್ ಮತ್ತು ಕಂಗ್ಲೀಷ್ ಭಾಷೆಯ ಉಪಯೋಗಕ್ಕೆ ಮಾತ್ರ ಅನುಮತಿ ಇದೆ.
ಸೆಲ್ಫೀ ಫೊಟೋಗೆ ಅವಕಾಶ ಇಲ್ಲ
ಇದು ವಿಧ ವಿಧದ ಫೊಟೋ ಪ್ರಕಟಿಸುವ ಗುಂಪು ಅಲ್ಲ
ಯಾವುದೇ ಪಕ್ಷದ ಪರ ಹಾಗೂ ವಿರೋಧದ ಚರ್ಚೆ ಇಲ್ಲಿ ಬೇಡ. ಅಂತಹ ಪೋಸ್ಟ್ ಬಂದರೆ ನಿರ್ದಾಕ್ಷಿಣ್ಯವಾಗಿ ಸದಸ್ಯರನ್ನು ತೆಗೆದುಹಾಕಲಾಗುತ್ತದೆ.
ಯಾವುದೇ ಯಾರನ್ನೂ ಅವಮಾನಿಸಬೇಡಿ
ಫೋಟೋ ಜತೆ ಮಾಹಿತಿಯನ್ನೂ ಹಾಕಿ
ವಿಚಾರಗಳಿಗೂ ಅವರೇ ಹೊಣೆಯಾಗುತ್ತಾರೆ.
ನಿಮ್ಮ ಪೋಸ್ಟ್‌ಗೆ ನೀವೇ ಹೊಣೆ
ಎನ್ನುವ ಸೂಚನೆಗಳು ಗಮನ ಸೆಳಯುತ್ತವೆ.
ಈವರೆಗೂ ಹತ್ತಾರು ವಿಷಯಗಳ ಕುರಿತು ಇಲ್ಲಿ ಚರ್ಚೆ ನಡೆದು ಪರಿಹಾರವನ್ನು ತೋರಿಸಲಾಗಿದೆ. ಮಾರ್ಗದರ್ಶನ ಹಲವರ ಬದುಕನ್ನು ಬದಲಿಸಿದೆ. ಚಿಂತನೆಗಳು ಹರಳು ಗಟ್ಟುವಂತೆ ಮಾಡಿ ಅದನ್ನು ಕೃಷಿ ಬದುಕಿನಲ್ಲಿ ಅಳವಡಿಸಿಕೊಂಡವರ ಸಂಖ್ಯೆಯೂ ಇದೆ. ಇದು ಕೃಷಿ ವೇದಿಕೆಯ ಯಶಸ್ಸು.
ಹಾಗಾದರೇ ನೀವೂ ಈ ವೇದಿಕೆ ಸದಸ್ಯರಾಗಬೇಕೇ. ಹಾಗಾದರೆ https://www.facebook.com/groups/Agriculturist ಕ್ಲಿಕ್ ಮಾಡಿ. ಸದಸ್ಯತ್ವ ಪಡೆಯಿರಿ. ಕೃಷಿ ಹಾಗೂ ನಿತ್ಯದ ಬದುಕು ಹಸರು ಮಾಡಿಕೊಳ್ಳಿ. ಅಂದಹಾಗೆ ಈ ವೇದಿಕೆ ಸದಸ್ಯರ ಸಂಖ್ಯೆ 4.50 ಲಕ್ಷ !