ಮುಳ್ಳು, ಪೊದೆಗಳ ಬಂಜರು ಭೂಮಿಯನ್ನು ಹಸಿರು ತೋಟವನ್ನಾಗಿಸಿದ ಭಗೀರಥ ಪದ್ಯಾಣ ಲಕ್ಷ್ಮೀನಾರಾಯಣ ಭಟ್
ಕನ್ನಡ ಸುದ್ದಿ  /  ಕರ್ನಾಟಕ  /  ಮುಳ್ಳು, ಪೊದೆಗಳ ಬಂಜರು ಭೂಮಿಯನ್ನು ಹಸಿರು ತೋಟವನ್ನಾಗಿಸಿದ ಭಗೀರಥ ಪದ್ಯಾಣ ಲಕ್ಷ್ಮೀನಾರಾಯಣ ಭಟ್

ಮುಳ್ಳು, ಪೊದೆಗಳ ಬಂಜರು ಭೂಮಿಯನ್ನು ಹಸಿರು ತೋಟವನ್ನಾಗಿಸಿದ ಭಗೀರಥ ಪದ್ಯಾಣ ಲಕ್ಷ್ಮೀನಾರಾಯಣ ಭಟ್

Success Story: ನರಿಕೊಂಬು ಗ್ರಾಮದ ಮುಳ್ಳುಕಂಟಿಗಳಿಂದ ತುಂಬಿದ್ದ ಒಂದೂವರೆ ಎಕರೆ ಪಾಳುಭೂಮಿಯನ್ನು ಖರೀದಿಸಿ, ಹಸಿರು ತೋಟವನ್ನಾಗಿಸಿದ ತೆರೆಮರೆಯ ಸಾಧಕ ಇವರು. ಸಜೀಪಮೂಡದಲ್ಲೂ ಮುಳ್ಳು, ಪೊದೆಗಳ ಬಂಜರು ಭೂಮಿಯನ್ನು ಹಸಿರು ತೋಟವನ್ನಾಗಿಸಿದ ಭಗೀರಥ ಪದ್ಯಾಣ ಲಕ್ಷ್ಮೀನಾರಾಯಣ ಭಟ್. ಅವರ ಯಶೋಗಾಥೆ ಇಲ್ಲಿದೆ. (ವಿಶೇಷ ವರದಿ: ಹರೀಶ ಮಾಂಬಾಡಿ, ಮಂಗಳೂರು)

ಬಂಜರು ಭೂಮಿಯನ್ನು ಹಸಿರು ತೋಟವನ್ನಾಗಿಸಿದ ಭಗೀರಥ ಪದ್ಯಾಣ ಲಕ್ಷ್ಮೀನಾರಾಯಣ ಭಟ್
ಬಂಜರು ಭೂಮಿಯನ್ನು ಹಸಿರು ತೋಟವನ್ನಾಗಿಸಿದ ಭಗೀರಥ ಪದ್ಯಾಣ ಲಕ್ಷ್ಮೀನಾರಾಯಣ ಭಟ್

Success Story: ಮುಳ್ಳು, ಪೊದೆಗಳಿಂದ ಕೂಡಿದ ನಡೆದಾಡಲೂ ಸಾಧ್ಯವೇ ಇಲ್ಲದ ಖಾಲಿ ಭೂಮಿಯನ್ನು ಅಕ್ಷರಶಃ ಹಸಿರು ತೋಟವನ್ನಾಗಿಸಿ, ಸ್ವತಃ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡು, ಇದೀಗ ಇಳಿವಯಸ್ಸಿನಲ್ಲಿ ಸಂತೃಪ್ತಿ ಜೀವನ ನಡೆಸುತ್ತಿರುವ ಬಂಟ್ವಾಳ ತಾಲೂಕಿನ ಸಜೀಪಮೂಡ ನಿವಾಸಿ ಪದ್ಯಾಣ ಲಕ್ಷ್ಮೀನಾರಾಯಣ ಭಟ್ ಅವರದ್ದು ಭಗೀರಥ ಸಾಧನೆ. ಅವರಿಗೀಗ 78ರ ಹರೆಯ.

ಬಂಟ್ವಾಳ ತಾಲೂಕು ಕರೋಪಾಡಿ ಗ್ರಾಮದ ಕೇರಳ ಗಡಿಭಾಗದಲ್ಲಿರುವ ಪದ್ಯಾಣ ಎಂಬಲ್ಲಿ ಕೃಷಿಕ ಕುಟುಂಬದಲ್ಲಿ ಜನಿಸಿದ ಪದ್ಯಾಣ ಲಕ್ಷ್ಮೀನಾರಾಯಣ ಭಟ್ ಅವರು ಆರಂಭದಲ್ಲಿ ತಮ್ಮ ಕೃಷಿ ಚಟುವಟಿಕೆಗಳಿಗೆ ಆಯ್ಕೆ ಮಾಡಿದ್ದು, ನರಿಕೊಂಬು ಗ್ರಾಮ ಹಾಗೂ ವಿಸ್ತರಣೆ ನಡೆಸಿದ್ದು ಸಜೀಪಮೂಡ ಗ್ರಾಮದ ಕೃಷಿಯೇ ಇಲ್ಲದ ಭೂಮಿ.

ಬಂಜರು ಭೂಮಿಯನ್ನು ಹಸಿರು ತೋಟವನ್ನಾಗಿಸಿದ ಭಗೀರಥ

ಪಶುಪಾಲನೆ, ಅಡಕೆ, ತೆಂಗು, ಬಾಳೆ ಕೃಷಿಯನ್ನು ಬಾಲ್ಯದಲ್ಲೇ ಮಾಡಿ, ನೋಡಿ ತಿಳಿದಿದ್ದ ಅವರಿಗೆ ಸಹಜವಾಗಿಯೇ ಕೃಷಿಯತ್ತ ಆಸಕ್ತಿ ಇತ್ತು. ಪದವಿ ಗಳಿಸಿ ವಿದ್ಯಾಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ವಿದ್ಯಾಭಾರತಿ ಎಂಬ ಸ್ವಯಂಸೇವಾ ಸಂಸ್ಥೆಯಲ್ಲಿ 12 ವರ್ಷಗಳ ಸಮಯ ಪೂರ್ಣಾವಧಿ ಕಾರ್ಯಕರ್ತರಾಗಿ ವೇತನ ಪಡೆಯದೆ ಕಾರ್ಯನಿರ್ವಹಿಸಿದ್ದರು. ಅಲ್ಲಿಂದ ಬಿಡುಗಡೆಯಾದ ಮೇಲೆ ಸಂಸಾರಿಯಾಗಿ ಅದೇ ಸಂಸ್ಥೆಗೆ ಸೇರಿದ ವಿದ್ಯಾಕೇಂದ್ರಗಳಲ್ಲಿ ನೌಕರರಾಗಿ ಕೆಲಸ ಮಾಡಿದ್ದರು. ಅವರಿಗೆ ಸ್ವಂತ ಭೂಮಿ ಖರೀದಿಸಿ ಮಾದರಿ ಕೃಷಿಕನಾಗುವ ತುಡಿತವಿತ್ತು. ತನ್ನ ಉಳಿತಾಯದ 20 ಸಾವಿರ ರೂಪಾಯಿಗೆ ಉತ್ತಮ ಕೃಷಿಭೂಮಿ ದೊರಕುವುದು ಸಾಧ್ಯವಿರಲಿಲ್ಲ.

ಮುಳ್ಳುಕಂಟಿಗಳಿಂದ ಕೂಡಿದ ಭೂಮಿ ಖರೀದಿ

ನರಿಕೊಂಬು ಗ್ರಾಮದ ಮುಳ್ಳುಕಂಟಿಗಳಿಂದ ತುಂಬಿದ್ದ ಒಂದೂವರೆ ಎಕರೆ ಪಾಳುಭೂಮಿಯನ್ನು ಖರೀದಿಸಿ, ತಮ್ಮ 45ನೇ ವಯಸ್ಸಿನಲ್ಲಿ ಕೃಷಿ ಕಾರ್ಯವನ್ನು ಲಕ್ಷ್ಮೀನಾರಾಯಣ ಭಟ್ಟರು ಪ್ರಾರಂಭಿಸಿದರು. ಅವರ ಪತ್ನಿ ಸರಸ್ವತಿ ಜತೆಯಾದರು. ಆದರೆ ಇದಕ್ಕೆ ಬೇಕಾದ ಆರ್ಥಿಕ ಬಂಡವಾಳ ಅವರಲ್ಲಿ ಇರಲಿಲ್ಲ. ಭೂ ಅಭಿವೃದ್ಧಿ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್ ನಿಂದ ಸಾಲ ಪಡೆದು, ತೋಟಗಾರಿಕಾ ಇಲಾಖೆ ಸಹಾಯಧನ ಪಡೆದ ಅವರು, ಸ್ವತಃ ಒಂದೂವರೆ ಎಕರೆಯಲ್ಲಿ ಫಸಲು ತೆಗೆದರು. ಕ್ಲಪ್ತ ಸಮಯದಲ್ಲಿ ಸಾಲ ಮರುಪಾವತಿ ಮಾಡಿದ್ದಕ್ಕೆ ಅವರನ್ನು ಆಗಿನ ಸಚಿವ ರಮಾನಾಥ ರೈ ವತಿಯಿಂದ ಭೂ ಅಭಿವೃದ್ಧಿ ಬ್ಯಾಂಕ್ ನಲ್ಲಿ ಸನ್ಮಾನಿಸಲಾಗಿತ್ತು. ಎರಡು ದನಗಳೊಂದಿಗೆ ಹೈನೋದ್ಯಮ ಆರಂಭಿಸಿದರು. ಪ್ರತಿ ಅಡಿಕೆ ಗಿಡದ ಬುಡದಲ್ಲಿ ಬೆಂಡೆ, ಅಲಸಂಡೆ, ಬಸಳೆ ಇತ್ಯಾದಿ ತರಕಾರಿ ಬೆಳೆದು, ಅದರಿಂದಲೂ ಸಾಕಷ್ಟು ಆದಾಯ ಪಡೆದುಕೊಳ್ಳುತ್ತಿದ್ದರು. ಅಡಿಕೆ ಗಿಡಗಳ ಪಕ್ಕದಲ್ಲಿ 1000 ನೇಂದ್ರ ಬಾಳೆ ನಾಟಿ ಮಾಡಿ, ಅದರಿಂದಲೂ ಆದಾಯ ಬಂತು. ಇದರೊಂದಿಗೆ ಸುಮಾರು 10 ಜೇನು ಕುಟುಂಬಗಳನ್ನು ತಂದು, ಜೇನು ವ್ಯವಸಾಯ ಪ್ರಾರಂಭಿಸಿದರು.

ಕರ್ನಾಟಕದಲ್ಲಿ ವೆನಿಲ್ಲಾ ಬೆಳೆಯನ್ನು ಪರಿಚಯಿಸಿದವರಲ್ಲಿ ತೀರ್ಥಹಳ್ಳಿ ಪುರುಷೋತ್ತಮರಾಯರು ಪ್ರಮುಖರು. ಪದ್ಯಾಣರು ತೀರ್ಥಹಳ್ಳಿಗೆ ತೆರಳಿ, ಅವರಿಂದ ವೆನಿಲ್ಲಾ ಬಳ್ಳಿ ಬಗ್ಗೆ ಮಾಹಿತಿ ಪಡೆದು, ಗಿಡಗಳನ್ನು ತಂದು, ವೆನಿಲ್ಲಾ ಬೆಳೆ ಪ್ರಾರಂಭಿಸಿ ಎರಡು ವರ್ಷಗಳಲ್ಲಿ 4 ಕ್ವಿಂಟಲ್ ಗಳಷ್ಟು ವೆನಿಲ್ಲಾ ಬೆಳೆದರು. ದಕ್ಷಿಣ ಕನ್ನಡದಲ್ಲಿ ಕೋಳಿಹಿಕ್ಕೆ, ಸಕ್ಕರೆ ಕಾರ್ಖಾನೆಯ ಪೈಸೆಮಡೆ, ತೆಂಗಿನಕಾಯಿ ಸಿಪ್ಪೆಯನ್ನು ಗೊಬ್ಬರವಾಗಿ ಬಳಸಿದವರ ಪೈಕಿ ಲಕ್ಷ್ಮೀನಾರಾಯಣ ಭಟ್ಟರು ಮುಂಚೂಣಿಯಲ್ಲಿದ್ದರು. ಕಾಫಿ ಸಿಪ್ಪೆಯನ್ನೂ ಗೊಬ್ಬರವಾಗಿಸಬಹುದು ಎಂದು ಊರಿನವರಿಗೆ ಪರಿಚಯಿಸಿದರು. ಮುಂದೆ ಕೃಷಿ ವಿಸ್ತರಣೆಗೆ ನರಿಕೊಂಬಿನ ಜಾಗ ಸಾಲದಾದಾಗ ಹಾಗೂ ಪುತ್ರ ಅರವಿಂದ ಪದ್ಯಾಣನಿಗೆ ಕೃಷಿಯತ್ತ ಆಸಕ್ತಿ ಇದ್ದ ಕಾರಣ ಸಜೀಪಮೂಡದಲ್ಲಿ 12 ಎಕರೆ ಜಾಗ ಖರೀದಿಸಿದರು.

ಸಜೀಪಮೂಡದಲ್ಲಿ ಹಸಿರುಕ್ರಾಂತಿ

ನರಿಕೊಂಬು ಜಾಗವನ್ನು ಮಾರಾಟ ಮಾಡಿ, ಸಜೀಪಮೂಡದಲ್ಲಿ ಕಲ್ಲು, ಮುಳ್ಳು, ಪೊದೆಗಳಿಂದ ಕೂಡಿದ ತುಂಬೆ ಅಣೆಕಟ್ಟಿಗೆ ತಾಗಿಕೊಂಡು ಇರುವ 12 ಎಕರೆ ಭೂಮಿಯನ್ನು ಖರೀದಿಸಿ, ಅಲ್ಲಿ ಹೊಸತಾಗಿ ಕೃಷಿ ಪ್ರಾರಂಭಿಸಿದರು. ಅಡಿಕೆ, ತೆಂಗು, 7000 ಬಾಳೆ, ತೈವಾನ್ ರೆಡ್ ತಳಿಯ 500 ಪಪ್ಪಾಯಿ ಬೆಳೆದು, ಬಾಳೆ ಕೃಷಿಯಲ್ಲಿ ಬಂಟ್ವಾಳ ತಾಲೂಕಿನಲ್ಲೇ ದೊಡ್ಡ ಹೆಸರು ಗಳಿಸಿದರು.

ಪ್ರಸ್ತುತ ಅವರ ಬಳಿ 6000 ಅಡಿಕೆ ಮರ, 3000 ಕಾಳುಮೆಣಸು, 4000 ವಿವಿಧ ತಳಿಯ ಬಾಳೆ, 300 ಪಪ್ಪಾಯಿ, 25 ವಿವಿಧ ರೀತಿಯ ಹಲಸು, ಮಾವು ಅಲ್ಲದೆ, ರಾಂಬುಟಾನ್ ಇತ್ಯಾದಿ ಹಲವು ರೀತಿಯ ಹಣ್ಣು ಬೆಳೆಗಳು, ತರಕಾರಿ, ಪುಷ್ಪಗಿಡಗಳು ಇವೆ. ಮಿಶ್ರಬೆಳೆಯಲ್ಲಿ ದೊಡ್ಡ ಹೆಸರು ಅವರದ್ದು. ಕ್ಯಾವಂಡಿಷ್‌ ಬಾಳೆಯನ್ನು ಬೃಹತ್ ಪ್ರಮಾಣದಲ್ಲಿ ಬೆಳೆಯುವವರ ಪೈಕಿ ಇವರ ಹೆಸರು ಮುಂಚೂಣಿಯಲ್ಲಿದೆ.

ಸಾಧಕ ಕೃಷಿಕನ ಹೆಸರು: ಪದ್ಯಾಣ ಲಕ್ಷ್ಮೀನಾರಾಯಣ ಭಟ್, ವಿಳಾಸ: ಗೋಕುಲ ಫಾರ್ಮ್, ಆಲಾಡಿ, ಸಜೀಪಮುನ್ನೂರು, ಬಂಟ್ವಾಳ ತಾಲೂಕು 574231 ದೂರವಾಣಿ ಸಂಖ್ಯೆ: 9632449281

ವಿಶೇಷ ವರದಿ: ಹರೀಶ ಮಾಂಬಾಡಿ, ಮಂಗಳೂರು

Whats_app_banner