ಮಹಾ ಕುಂಭ ಮೇಳದಲ್ಲಿ ಪ್ರಕಾಶ್ ರಾಜ್ ಪುಣ್ಯ ಸ್ನಾನ, AI ಫೋಟೋ ವೈರಲ್‌; ಪಿಸ್ತೂಲ್​ಗಾಗಿ ಹೈಕೋರ್ಟ್ ಮೆಟ್ಟಿಲೇರಿದ ದರ್ಶನ್
ಕನ್ನಡ ಸುದ್ದಿ  /  ಕರ್ನಾಟಕ  /  ಮಹಾ ಕುಂಭ ಮೇಳದಲ್ಲಿ ಪ್ರಕಾಶ್ ರಾಜ್ ಪುಣ್ಯ ಸ್ನಾನ, Ai ಫೋಟೋ ವೈರಲ್‌; ಪಿಸ್ತೂಲ್​ಗಾಗಿ ಹೈಕೋರ್ಟ್ ಮೆಟ್ಟಿಲೇರಿದ ದರ್ಶನ್

ಮಹಾ ಕುಂಭ ಮೇಳದಲ್ಲಿ ಪ್ರಕಾಶ್ ರಾಜ್ ಪುಣ್ಯ ಸ್ನಾನ, AI ಫೋಟೋ ವೈರಲ್‌; ಪಿಸ್ತೂಲ್​ಗಾಗಿ ಹೈಕೋರ್ಟ್ ಮೆಟ್ಟಿಲೇರಿದ ದರ್ಶನ್

ನಟ ಪ್ರಕಾಶ್‌ ರಾಜ್‌ ಕುಂಭಮೇಳದಲ್ಲಿ ಮಿಂದೆದ್ದರೇ? ವೈರಲ್‌ ಆಗುತ್ತಿರುವ ಫೋಟೋ ಸತ್ಯವೇ? ಅವರು ದೂರು ದಾಖಲಿಸಿದ್ದು ಏಕೆ? ಸತ್ಯಾಂಶ ಇಲ್ಲಿದೆ. ಪಿಸ್ತೂಲ್‌ ಹಿಂತಿರುಗಿಸುವಂತೆ ಕೋರಿ ನಟ ದರ್ಶನ್‌ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ. (ವರದಿ-ಎಚ್.‌ ಮಾರುತಿ)

ಮಹಾ ಕುಂಭ ಮೇಳದಲ್ಲಿ ಪ್ರಕಾಶ್ ರಾಜ್ ಪುಣ್ಯ ಸ್ನಾನ, AI ಫೋಟೋ ವೈರಲ್‌; ಪಿಸ್ತೂಲ್​ಗಾಗಿ ಹೈಕೋರ್ಟ್ ಮೆಟ್ಟಿಲೇರಿದ ದರ್ಶನ್
ಮಹಾ ಕುಂಭ ಮೇಳದಲ್ಲಿ ಪ್ರಕಾಶ್ ರಾಜ್ ಪುಣ್ಯ ಸ್ನಾನ, AI ಫೋಟೋ ವೈರಲ್‌; ಪಿಸ್ತೂಲ್​ಗಾಗಿ ಹೈಕೋರ್ಟ್ ಮೆಟ್ಟಿಲೇರಿದ ದರ್ಶನ್

ಬೆಂಗಳೂರು: ಉತ್ತರ ಪ್ರದೇಶದ ಪ್ರಯಾಗ್‌ ರಾಜ್​​ನಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳದಲ್ಲಿ (Maha Kumbh Mela) ಖ್ಯಾತ ನಟ ಪ್ರಕಾಶ್ ರಾಜ್ ರೈ (Actor Prakash Raj) ಅವರು ತ್ರಿವೇಣಿ ಸಂಗಮದಲ್ಲಿ ಮಿಂದೆದ್ದರು ಎನ್ನಲಾದ ಫೋಟೋ ವೈರಲ್‌ ಆಗುತ್ತಿದೆ. ‌ಸಾಮಾಜಿಕ ಕಾರ್ಯಕರ್ತ ಹಾಗೂ ಕನ್ನಡದ ನಟ ಪ್ರಶಾಂತ್ ಸಂಬರಗಿ (Prashanth Sambargi) ಅವರು ಪ್ರಕಾಶ್‌ ರೈ ನದಿಯಲ್ಲಿ ಮುಳುಗಿ ಕೈ ಮುಗಿಯುತ್ತಿರುವ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಅವರೊಬ್ಬರೇ ಅಲ್ಲದೆ ಅನೇಕರು ಈ ಫೋಟೋವನ್ನು ಶೇರ್ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ. ಆದರೆ, ಇದು ಎಐ (AI) ನಿರ್ಮಿತ ಫೋಟೋ ಎಂದು ಹೇಳಲಾಗುತ್ತಿದೆ.

ಕುಂಭಮೇಳದಲ್ಲಿ ಭಾಗವಹಿಸಿ ಪ್ರಕಾಶ್ ರಾಜ್ ಪುಣ್ಯ ಸ್ನಾನ ಮಾಡಿದ್ದಾರೆ. ಅವರ ಪಾಪಗಳು ತೊಳೆದು ಹೋಗಲಿ ಎಂದು ಆಶಾಭಾವನೆ ವ್ಯಕ್ತಪಡಿಸೋಣ ಎಂದು ‌ಸಂಬರಗಿ ತಾನು ಹಂಚಿಕೊಂಡ ಫೋಟೋಗೆ ಕ್ಯಾಪ್ಶನ್ ಬರೆದಿದ್ದಾರೆ. ಆದರೆ, ಈ ಪೋಸ್ಟ್​​ಗೆ ಆಕ್ಷೇಪ ವ್ಯಕ್ತಪಡಿಸಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಪ್ರಕಾಶ್ ರಾಜ್, ‘ಇದು ಸುಳ್ಳು ಸುದ್ದಿ ಎಂದು ಸ್ಪಷ್ಟಪಡಿಸಿದ್ದಾರೆ. ಸುಳ್ಳ ರಾಜನ ಹೇಡಿಗಳ ಸೈನ್ಯಕ್ಕೆ .. ಅವರ ಪವಿತ್ರ ಪೂಜೆಯಲ್ಲೂ ಸುಳ್ಳು ಸುದ್ದಿ ಹಬ್ಬಿಸಿ ಹೊಲಸು ಮಾಡುವುದೇ ಕೆಲಸ. ಪೊಲೀಸ್ ದೂರು ದಾಖಲಾಗಿದೆ. ಕೋರ್ಟಿನ ಕಟಕಟೆಯಲ್ಲಿ ಏನು ಮಾಡುತ್ತಾರೋ ನೋಡೋಣ’ ಎಂದು ತಮ್ಮ ಅಭಿಪ್ರಾಯವನ್ನು ಪೋಸ್ಟ್ ಮಾಡಿದ್ದಾರೆ.

ಇದು ಸುಳ್ಳು ಸುದ್ದಿಯಾಗಿದ್ದು, ನಿಮ್ಮಂತಹವರೇ ಹಂಚಿಕೊಂಡರೇ ಹೇಗೆ ಎಂದು ಪ್ರಶ್ನಿಸಿದ್ದಾರೆ. ಇನ್ನೂ ಕೆಲವರು ಸಿಕ್ಕ ಅವಕಾಶ ಬಿಡಬಾರದು. ಎಡಪಂಥವನ್ನು ಪ್ರಚಾರ ಮಾಡುವ ಪ್ರಕಾಶ್​ಗೆ ಅಲ್ಲಿ ಏನು ಕೆಲಸ ಎಂದು ಪ್ರಕಾಶ್‌ ರೈ ಅವರನ್ನು ನಿಂದಿಸಿದ್ದಾರೆ. ಇನ್ನೂ ಕೆಲವರು ಇದು ಕೃತಕ ಬುದ್ದಿಮತ್ತೆ ಫೋಟೋ ಎಂದಿದ್ದರೆ, ಇನ್ನೂ ಕೆಲವರು ಇದು ಯಾವುದೋ ಸಿನಿಮಾ ದೃಶ್ಯದ ಭಾವಚಿತ್ರ ಇರಬೇಕು. ಪ್ರಕಾಶ್‌ ಅಲ್ಲಿಗೆ ಹೋಗುವ ಚಾನ್ಸ್‌ ಇಲ್ಲವೇ ಇಲ್ಲ. ಅಲ್ಲಿಗೆ ಹೋಗಿಯೇ ಇಲ್ಲ ಎಂದೂ ಕೆಲವರು ಖಡಾಖಂಡಿತವಾಗಿ ಹೇಳಿದ್ದಾರೆ. ಫ್ಯಾಕ್ಟ್‌ ಚೆಕ್‌ ಮಾಡಿದಾಗ ಇದು ಎಐ ಬಳಸಿ ನಿರ್ಮಿಸಿರುವ ಚಿತ್ರ ಎಂದು ತಿಳಿದು ಬಂದಿದೆ. ಸಂಬರಗಿ ಅವರ ಮೇಲೆ ದೂರು ದಾಖಲಾಗಿದೆ.

ಪಿಸ್ತೂಲ್‌ ಜಪ್ತಿ ಪ್ರಶ್ನಿಸಿ ಹೈಕೋರ್ಟ್‌ ಮೊರೆ ಹೋದ ನಟ ದರ್ಶನ್

ತಮಗೆ ಪಿಸ್ತೂಲ್‌ ಬಳಸಲು ನೀಡಿದ್ದ ಅನುಮತಿಯನ್ನು ಅಮಾನತುಗೊಳಿಸಿ ಪಿಸ್ತೂಲ್‌ ವಶಪಡಿಸಿಕೊಂಡಿರುವ ಪೊಲೀಸರ ಕ್ರಮವನ್ನು ಪ್ರಶ್ನಿಸಿ ನಟ ದರ್ಶನ್‌ ಹೈಕೋರ್ಟ್‌ (High Court) ಮೆಟ್ಟಿಲೇರಿದ್ದಾರೆ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್‌ ತೂಗುದೀಪ (Actor Darshan Thoogudeepa) ಮಂಗಳವಾರ (ಜನವರಿ 29) ರಿಟ್‌ ಅರ್ಜಿ ಸಲ್ಲಿಸಿದ್ದಾರೆ. ಇದು ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ. ಬೆಂಗಳೂರು ನಗರ ಪೊಲೀಸ್‌ ಆಯುಕ್ತರು ಹಾಗೂ ಆಡಳಿತ ವಿಭಾಗದ ಉಪ ಪೊಲೀಸ್‌ ಆಯುಕ್ತರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ. ದರ್ಶನ್ ಗಂಭೀರವಾದ ಕೊಲೆ ಪ್ರಕರಣದಲ್ಲಿ 2ನೇ ಆರೋಪಿಯಾಗಿದ್ದಾರೆ.

ಇವರು ಕೊಲೆಯಾದ ರೇಣುಕಸ್ವಾಮಿ ಅವರ ಕುಟುಂಬದ ಸದಸ್ಯರು ಹಾಗೂ ತಮ್ಮ ವಿರುದ್ಧದ ಸಾಕ್ಷಿದಾರರಿಗೆ ಪಿಸ್ತೂಲ್ ಮುಂದಿಟ್ಟುಕೊಂಡು ಹೆದರಿಸುವ ಅಥವಾ ಅವರ ಪ್ರಾಣಕ್ಕೆ ಅಪಾಯ ತರುವ ಸಾಧ್ಯತೆಗಳಿವೆ. ಆದ್ದರಿಂದ ಇವರ ಶಸ್ತ್ರಾಸ್ತ್ರ ಪರವಾನಗಿ ರದ್ದುಗೊಳಿಸಲು ಬೆಂಗಳೂರು ಪೊಲೀಸರು ವರದಿ ಸಲ್ಲಿಸಿದ್ದರು. ಈ ವರದಿಯನ್ನು ಪುರಸ್ಕರಿಸಿದ ಸಕ್ಷಮ ಪ್ರಾಧಿಕಾರ ಇವರ ಶಸ್ತ್ರಾಸ್ತ್ರ ಪರವಾನಗಿ ರದ್ದುಗೊಳಿಸಲು ತೀರ್ಮಾನಿಸಿರುತ್ತದೆ ಎಂದು ಉಪ ಪೊಲೀಸ್ ಆಯುಕ್ತರು ತಿಳಿಸಿದ್ದರು. ನನ್ನ ಪಿಸ್ತೂಲ್ ಪರವಾನಗಿ ಅಮಾನತುಪಡಿಸಿ ಉಪ ಪೊಲೀಸ್ ಆಯುಕ್ತರು ಇದೇ ತಿಂಗಳ 16ರಂದು ಆದೇಶಿಸಿದ್ದಾರೆ. 20ರಂದು ನನ್ನ ಪಿಸ್ತೂಲ್ ಅನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ.

ಅವರ ಆದೇಶ ಸಂಪೂರ್ಣ ಏಕಪಕ್ಷೀಯ ಮತ್ತು ಕಾನೂನುಬಾಹಿರವಾಗಿರುತ್ತದೆ. ನನಗೆ ಕಿರುಕುಳ ನೀಡುವ ಉದ್ದೇಶದಿಂದಲೇ ಈ ಆದೇಶ ಹೊರಡಿಸಲಾಗಿದೆ. ಎಲ್ಲಾ ಕಾನೂನು ಪ್ರಕ್ರಿಯೆ ಪಾಲಿಸಿದ ನಂತರವೇ ನನಗೆ ಶಸ್ತ್ರಾಸ್ತ್ರ ಪರವಾನಗಿ ನೀಡಲಾಗಿತ್ತು ಎಂಬುದನ್ನು ಇಲ್ಲಿ ನೆನಪಿಸಲು ಬಯಸುತ್ತೇನೆ. ಆದ್ದರಿಂದ, ಉಪ ಪೊಲೀಸ್ ಆಯುಕ್ತರ ಆದೇಶ ರದ್ದುಪಡಿಸಬೇಕು ಮತ್ತು ನನ್ನ ಪಿಸ್ತೂಲ್‌ ಅನ್ನು ಮರಳಿಸಬೇಕು ಎಂದು ದರ್ಶನ್ ಅರ್ಜಿಯಲ್ಲಿ ಕೋರಿದ್ದಾರೆ.

Whats_app_banner