ಆಲಮಟ್ಟಿ ಜಲಾಶಯಕ್ಕೆ ಭಾರೀ ಪ್ರಮಾಣದಲ್ಲಿ ನೀರು; ಕೃಷ್ಣಾ ನದಿ ಮೂಲಕ ನೀರು ಹೊರ ಹರಿಸಲು ನಿರ್ಧಾರ, ಮುನ್ನೆಚ್ಚರಿಕೆಗೆ ಸೂಚನೆ
ಮಹಾರಾಷ್ಟ್ರದ ಕೃಷ್ಣಾ ನದಿ ಪಾತ್ರದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ವಿಜಯಪುರ ಜಿಲ್ಲೆಯ ಆಲಮಟ್ಟಿ ಜಲಾಶಯಕ್ಕೆ ಭಾರೀ ನೀರು ಹರಿದುಬರುತ್ತಿದ್ದು, ಮೇ ತಿಂಗಳಲ್ಲೇ ಹೊರ ಹರಿವು ಕೂಡ ಶುರುವಾಗುತ್ತಿದೆ.

ವಿಜಯಪುರ: ಮಹಾರಾಷ್ಟ್ರದಲ್ಲಿ ಸತತ ಒಂದು ವಾರದಿಂದ ಭಾರೀ ಮಳೆಯಾಗುತ್ತಿರುವ ಪರಿಣಾಮವಾಗಿ ಉತ್ತರ ಕರ್ನಾಟಕದ ಪ್ರಮುಖ ಜಲಾಶಯದ ಆಲಮಟ್ಟಿಯ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಬರುತ್ತಿದೆ. ನೀರಿನ ಒಳಹರಿವು ಹೆಚ್ಚುವ ಮುನ್ಸೂಚನೆ ಇರುವ ಕಾರಣದಿಂದಾಗಿ ಕೃಷ್ಣಾ ನದಿ ಮೂಲಕ ಹೊರಹರಿವನ್ನು ಆರಂಭಿಸಲು ನಿರ್ಧರಿಸಲಾಗಿದೆ. ಮೊದಲು ಹತ್ತು ಸಾವಿರ ಕ್ಯೂಸೆಕ್ ನೀರನ್ನು ಹೊರಕ್ಕೆ ಹರಿಸಿ ನಂತರ ಅದನ್ನು ಹೆಚ್ಚಿಸುವ ತೀರ್ಮಾನವನ್ನು ಕೈಗೊಳ್ಳಲಾಗಿದೆ. ಗುರುವಾರ ಸಂಜೆಯಿಂದಲೇ ಹೊರ ಹರಿವು ಆರಂಭವಾಗಲಿದ್ದು, ರಾತ್ರಿ ಹೊತ್ತಿಗೆ ಇದು ಅಧಿಕಗೊಳ್ಳಲಿದೆ. ಇದರಿಂದ ವಿಜಯಪುರ, ಯಾದಗಿರಿ, ರಾಯಚೂರು ಜಿಲ್ಲೆಯ ಕೃಷ್ಣಾ ನದಿ ಪಾತ್ರದ ಜನತೆಗೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಜಲಸಂಪನ್ಮೂಲ ಇಲಾಖೆಯಿಂದ ಕಟ್ಟು ನಿಟ್ಟಿನ ಸೂಚನೆ ನೀಡಲಾಗಿದೆ.
ಮಹಾರಾಷ್ಟ್ರದ ಸಹ್ಯಾದ್ರಿ ಕಣಿವೆಯಲ್ಲಿ ಉತ್ತಮ ಮಳೆಯಾದರೆ ಅದರ ಪರಿಣಾಮ ಕರ್ನಾಟಕದ ಮೇಲೆ ಆಗಲಿದೆ. ಅದರಲ್ಲೂ ಚಿಕ್ಕೋಡಿ ಭಾಗದಿಂದ ಕರ್ನಾಟಕ ಪ್ರವೇಶಿಸಿ ಬೆಳಗಾವಿ, ಬಾಗಲಕೋಟೆ ಜಿಲ್ಲೆ ಮುಖಾಂತರ ಕೃಷ್ಣಾ ನದಿಯಿಂದ ನೀರು ಆಲಮಟ್ಟಿಗೆ ಹರಿದು ಬರುತ್ತದೆ. ಈ ಬಾರಿ ಮೇ ತಿಂಗಳಿನಲ್ಲೇ ಭಾರೀ ಪ್ರಮಾಣದಲ್ಲಿ ಕೃಷ್ಣಾ ನದಿಗೆ ನೀರು ಹರಿದು ಬರುತ್ತಿದೆ.
ಗುರುವಾರ ಬೆಳಿಗ್ಗೆ ಹೊತ್ತಿಗೆ ಆಲಮಟ್ಟಿ ಜಲಾಶಯಕ್ಕೆ 60,379 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಜಲಾಶಯದ ನೀರಿನ ಮಟ್ಟವು 512.78 ಮೀಟರ್‌ಗೆ ತಲುಪಿದೆ. ಜಲಾಶಯದ ನೀರಿನ ಸಂಗ್ರಹ ಪ್ರಮಾಣವು 45.957 ಟಿಎಂಸಿಗೆ ತಲುಪಿದೆ. ಅಂದರೆ ನಾಲ್ಕೈದು ದಿನದಲ್ಲಿಯೇ ಜಲಾಶಯಕ್ಕೆ ಸುಮಾರು 22 ಟಿಎಂಸಿ ನೀರು ಜಲಾಶಯಕ್ಕೆ ಬಂದಿರುವುದು ವಿಶೇಷ.
ಆಲಮಟ್ಟಿ ಜಲಾಶಯದಲ್ಲಿ 519.60 ಮೀಟರ್ ನೀರನ್ನು ಸಂಗ್ರಹಿಸಲು ಅವಕಾಶವಿದೆ. ಜಲಾಶಯದ ಗರಿಷ್ಠ ಸಂಗ್ರಹ ಸಾಮರ್ಥ್ಯವು 123.081 ಟಿಎಂಸಿ. ಕಳೆದ ವರ್ಷ ಇದೇ ದಿನದಂದು ಬರೀ ಒಂಬೈನೂರು ಕ್ಯೂಸೆಕ್ ನೀರು ಮಾತ್ರ ಹರಿದು ಬರುತ್ತಿತ್ತು.ಜಲಾಶಯದ ನೀರಿನ ಮಟ್ಟ 508.03 ಮೀಟರ್ ಸಂಗ್ರಹವಾಗಿತ್ತು. ಜಲಾಶಯದಲ್ಲಿ ಇದ್ದ ಟಿಎಂಸಿ ಪ್ರಮಾಣವು 21.63 ಟಿಎಂಸಿ.
ಆಲಮಟ್ಟಿ ಜಲಾಶಯಕ್ಕೆ ಮೇ ತಿಂಗಳಿನಲ್ಲಿಯೇ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ನೀರಿನ ಮಟ್ಟವೂ ಏರುತ್ತಿದೆ. ಜಲಾಶಯದ ಸುರಕ್ಷತೆ ದೃಷ್ಟಿಯಿಂದ ಗುರುವಾರ ಸಂಜೆಯಿಂದಲೇ ಹೊರ ಹರಿವು ಆರಂಭಿಸಲಾಗುತ್ತದೆ. ಕ್ರಸ್ಟ್ ಗೇಟ್‌ಗಳನ್ನು ಎತ್ತಿ ಕೃಷ್ಣಾ ನದಿಗಳ ಮೂಲಕ ನೀರು ಹರಿಸಲಾಗುತ್ತದೆ. ಗುರುವಾರ ರಾತ್ರಿ ಹೊತ್ತಿಗೆ ಹೊರ ಹರಿವು ಮತ್ತಷ್ಟು ಹೆಚ್ಚಲಿದೆ. ಒಳ ಹರಿವಿನ ಆಧಾರದಲ್ಲಿ ಹೊರ ಹರಿವು ಆರಂಭಿಸಲಾಗುತ್ತದೆ ಎನ್ನುವುದು ಅಧಿಕಾರಿಗಳ ವಿವರಣೆ.