Almatti Reservoir: ಆಲಮಟ್ಟಿ ಜಲಾಶಯ ನೀರಿನ ಮಟ್ಟ ಭಾರೀ ಕುಸಿತ, 20 ದಿನದಲ್ಲಿ 32 ಟಿಎಂಸಿ ನೀರು ಖಾಲಿ, ಬೇಸಿಗೆ ವೇಳೆ ಸಮಸ್ಯೆ ಆತಂಕ
Almatti Reservoir: ವಿಜಯಪುರ ಜಿಲ್ಲೆಯ ಆಲಮಟ್ಟಿ ಜಲಾಶಯದಿಂದ ಎರಡು ವಾರದ ಅಂತರದಲ್ಲೇ ಭಾರೀ ಪ್ರಮಾಣದಲ್ಲಿ ನೀರು ಹರಿದು ಹೋಗಿ ಹಿಂದಿನ ವರ್ಷಕ್ಕಿಂತ ನೀರಿನ ಮಟ್ಟ ಕುಸಿತ ಕಂಡಿದೆ.

Almatti Reservoir: ಉತ್ತರ ಕರ್ನಾಟಕದ ಅತೀ ದೊಡ್ಡ ಜಲಾಶಯಗಳಲ್ಲಿ ಒಂದಾದ ವಿಜಯಪುರ ಜಿಲ್ಲೆಯ ಆಲಮಟ್ಟಿ ಲಾಲ್ ಬಹದ್ದೂರು ಶಾಸ್ತ್ರೀ ಜಲಾಶಯದಲ್ಲಿ ನೀರಿನ ಪ್ರಮಾಣ ಭಾರೀ ಪ್ರಮಾಣದಲ್ಲಿ ಕುಸಿದಿದೆ. ಉತ್ತರ ಕರ್ನಾಟಕದ ಬೆಳಗಾರರ ಹೆಸರಿನಲ್ಲಿ ಆಂಧ್ರಪ್ರದೇಶ ಹಾಗೂ ತೆಲಂಗಾಣಕ್ಕೆ ಸತತ 20 ದಿನ ಸುಮಾರು 32 ಟಿಎಂಸಿ ನೀರು ಹರಿಸಿದ ಪರಿಣಾಮವಾಗಿ ಆಲಮಟ್ಟಿ ಜಲಾಶಯದ ನೀರಿನ ಮಟ್ಟವು ಹಿಂದಿನ ವರ್ಷಕ್ಕಿಂತ ಕಡಿಮೆಯಾಗಿದೆ. ಇದರಿಂದ ಇನ್ನೂ ಬೇಸಿಗೆ ಎರಡೂವರೆ ತಿಂಗಳು ಇರುವಾಗಲೇ ಹೆಚ್ಚಿನ ಪ್ರಮಾಣದಲ್ಲಿ ಕಡಿಮೆಯಾಗಿರುವುದರಿಂದ ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ನೀರಿನ ಸಮಸ್ಯೆ ಎದುರಾಗಬಹುದಾ ಎನ್ನುವ ಚರ್ಚೆಗಳು ನಡೆದಿವೆ. ಆದರೆ ಅಧಿಕಾರಿಗಳು ಮಾತ್ರ ನಿರ್ವಹಣೆ ಕಾರಣದಿಂದ ನೀರಿನ ಸಮಸ್ಯೆ ಆಗೋದಿಲ್ಲ ಎನ್ನುವ ಉತ್ತರ ನೀಡುತ್ತಾರೆ. ಆದರೂ ಬೇಸಿಗೆ ವೇಳೆ ಹೆಚ್ಚಿನ ನೀರನ್ನು ಹರಿಸಿರುವುದು ರೈತರ ಆಕ್ರೋಶಕ್ಕೂ ಕಾರಣ ಮಾಡಿಕೊಟ್ಟಿದೆ.
ಎಷ್ಟಿದೆ ನೀರು
ವಿಜಯಪುರ ಜಿಲ್ಲೆಯ ಆಲಮಟ್ಟಿ ಜಲಾಶಯದಲ್ಲಿ ಗರಿಷ್ಠ 123.08 ಟಿಎಂಸಿ ನೀರು ಸಂಗ್ರಹಿಸಲು ಅವಕಾಶವಿದ್ದು. ಸದ್ಯ 25.70 ಟಿಎಂಸಿ ನೀರು ಸಂಗ್ರಹವಿದೆ. ಶೇ.21 ರಷ್ಟು ನೀರು ಲಭ್ಯತೆಯಿದೆ. ಕಳೆದ ವರ್ಷ ಇದೇ ದಿನ 44.69 ಟಿಎಂಸಿ ನೀರು ಇತ್ತು. ಜಲಾಶಯದಲ್ಲಿ 512.35 ಅಡಿ ನೀರು ಸಂಗ್ರಹವಾಗಿದೆ. ಒಳ ಹರಿವಿನ ಪ್ರಮಾಣ ಕ್ಯೂಸೆಕ್ 0 ಇದ್ದು. ಹೊರ ಹರಿವಿನ ಪ್ರಮಾಣ 1893 ಕ್ಯೂಸೆಕ್ ಇದೆ.
ಆಲಮಟ್ಟಿ ಜಲಾಶಯದಿಂದ ಫೆಬ್ರವರಿ 21ರಿಂದ ಮಾರ್ಚ್ 10 ರವರೆಗೆ ಭಾರೀ ಪ್ರಮಾಣದಲ್ಲಿಯೇ ನೀರು ಹರಿದಿದೆ. ಸುಮಾರು 10 ಸಾವಿರ ಕ್ಯೂಸೆಕ್‌ಕೂ ಅಧಿಕ ಪ್ರಮಾಣದ ನೀರು ಸುಮಾರು ಎರಡು ವಾರ ನದಿ ಮೂಲಕ ಹರಿದು ಹೋಗಿದೆ. ಆಂಧ್ರಪ್ರದೇಶ ಹಾಗೂ ತೆಲಂಗಾಣಕ್ಕೆ ನೀರು ಹರಿದಿದೆ ಎನ್ನುವುದು ಬಹಿರಂಗ ಸತ್ಯ. ಸ್ವತಃ ನೀರಾವರಿ ಸಚಿವರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಇದನ್ನು ಖಚಿತಪಡಿಸಿದ್ದರು. ಎರಡು ವಾರಗಳಲ್ಲಿ ಹರಿದಿರುವ ನೀರಿನ ಪ್ರಮಾಣ, ಜಲಾಶಯದಲ್ಲಿ ತಗ್ಗಿರುವ ನೀರಿನ ಅಂಕಿ ಸಂಖ್ಯೆಗಳನ್ನು ಗಮನಿಸಿದರೆ ವೇದ್ಯವಾಗುತ್ತದೆ.
ಕುಡಿಯುವ ನೀರಿಗೆ ಒತ್ತು
ಆಲಮಟ್ಟಿ ಜಲಾಶಯದಿಂದ ವಿಜಯಪುರ ನಗರ ಸಹಿತ ಹಲವು ಭಾಗಗಳಿಗೆ ನೀರು ಒದಗಿಸಲಾಗುತ್ತದೆ. ಇದಲ್ಲದೇ ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆ, ಯಾದಗಿರಿ ಜಿಲ್ಲೆಯ ಭಾಗಗಳಿಗೂ ಕುಡಿಯುವ ನೀರಿಗೆ ಇಲ್ಲಿಂದಲೇ ನೀರು ಹೋಗಬೇಕು. ಕಳೆದ ವರ್ಷ ಮಳೆ ಕಡಿಮೆಯಾಗಿ ಜಲಾಶಯ ಭರ್ತಿಯಾಗದೇ ತೊಂದರೆಯೂ ಆಗಿತ್ತು. ಇದರಿಂದ ಬೇಸಿಗೆ ಬೆಳೆಗೆ ನೀರು ಹರಿಸಿರಲಿಲ್ಲ. ಈ ಬಾರಿ ಜಲಾಶಯ ಬೇಗನೇ ತುಂಬಿ ನೀರಿನ ಪ್ರಮಾಣವೂ ಚೆನ್ನಾಗಿದ್ದುದರಿಂದ ಬೇಸಿಗೆ ಬೆಳೆಗೂ ನೀರನ್ನು ಒದಗಿಸಲಾಗಿದೆ. ನಾಲ್ಕೈದು ಜಿಲ್ಲೆಗಳ ಕೃಷಿಗೆ ಆಲಮಟ್ಟಿ ಜಲಾಶಯ ಜೀವನಾಡಿಯಂತಿದೆ.
ಇದರ ನಡುವೆಯೆ ತೆಲಂಗಾಣಕ್ಕೆ ಹೆಚ್ಚಿನ ನೀರನ್ನು ಹರಿಸಿದ್ದರಿಂದ ಜಲಾಶಯದ ಮಟ್ಟ ಕುಸಿದಿದೆ. ಫೆಬ್ರವರಿ 10 ರಂದು 62 ಟಿಎಂಸಿ ನೀರು ಆಲಮಟ್ಟಿಯಲ್ಲಿ ಸಂಗ್ರಹವಿತ್ತು. ಅದೇ ಮಾರ್ಚ್ 10ರಂದು ಈ ಪ್ರಮಾಣ 25.70 ಟಿಎಂಸಿಗೆ ಕುಸಿದಿದೆ. ಅದರಲ್ಲೂ ಮಾರ್ಚ್ 4ರಿಂದ 44.36 ಟಿಎಂಸಿಯಷ್ಟಿದ್ದ ಪ್ರಮಾಣ ಭಾರೀ ಕುಸಿದಿದೆ. ವಾರದೊಳಗೆ 20 ಟಿಎಂಸಿನಷ್ಟು ನೀರು ಖಾಲಿಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 44.69 ಟಿಎಂಸಿ ನೀರು ಸಂಗ್ರಹವಿತ್ತು.
ರೈತರ ಆಕ್ರೋಶ
ಈ ಬಾರಿ ನೀರಾವರಿಗೂ ನೀರು ಕೊಡಬೇಕು. ಕುಡಿಯಲು ನೀರು ಒದಗಿಸಬೇಕು. ಪರಿಸ್ಥಿತಿ ಹೀಗಿರುವಾಗ ತೆಲಂಗಾಣಕ್ಕೆ ಆಲಮಟ್ಟಿ ಜಲಾಶಯದಿಂದ ಯಥೇಚ್ಚ ನೀರು ಹರಿಸಿದ್ದು ಸರಿಯಲ್ಲ ಎನ್ನುವ ಆಕ್ರೋಶ ವ್ಯಕ್ತವಾದ ನಂತರ ನೀರಿನ ಪ್ರಮಾಣವನ್ನು ತಗ್ಗಿಸಲಾಗಿದೆ.
ಆಲಮಟ್ಟಿ ಜಲಾಶಯದಲ್ಲಿ ಇನ್ನೂ ಸಾಕಷ್ಟು ನೀರಿದೆ. ಆತಂಕ ಪಡುವ ಅಗತ್ಯವೇನೂ ಇಲ್ಲ. ಬೇಸಿಗೆ ಮುಗಿಯುವವರೆಗೂ ನೀರಿನ ನಿರ್ವಹಣೆ ಮಾಡಲಾಗುತ್ತದೆ. ಜನ ಆತಂಕ ಪಡುವ ಅಗತ್ಯವಿಲ್ಲ ಎಂದು ಕೃಷ್ಣ ಭಾಗ್ಯ ಜಲ ನಿಗಮದ ಅಧಿಕಾರಿಗಳು ಹೇಳುತ್ತಾರೆ.