ಚಿಕಿತ್ಸೆಗೆಂದು ಬಂದಿದ್ದ ಮಹಿಳೆ ಮೇಲೆ ಆಸ್ಪ್ರತ್ರೆ ಆವರಣದಲ್ಲೇ ಅತ್ಯಾಚಾರ; ಚಿಕ್ಕಬಳ್ಳಾಪುರದಲ್ಲಿ ಘಟನೆ
Woman Raped On Government Hospital Premises: ಕೋಲ್ಕತ್ತಾ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣ ಮಾಸುವ ಮುನ್ನವೇ ಕರ್ನಾಟಕದಲ್ಲಿ ಮತ್ತೊಂದು ರೇಸ್ ದಾಖಲಾಗಿದೆ. ಚಿಕ್ಕಬಳ್ಳಾಪುರದ ಸರ್ಕಾರಿ ಆಸ್ಪತ್ರೆಯ ಆವರಣದಲ್ಲೇ ಈ ದುರಂತ ನಡೆದಿದೆ.
ಬೆಂಗಳೂರು: ಕೋಲ್ಕತ್ತಾ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿ ದೇಶಾದ್ಯಂತ ಭುಗಿಲೆದ್ದಿರುವ ಆಕ್ರೋಶದ ನಡುವೆ ಮತ್ತು ಘಟನೆ ಮಾಸುವ ಮುನ್ನವೇ ಕರ್ನಾಟಕದಲ್ಲಿ ಮತ್ತೊಂದು ರೇಸ್ ಕೇಸ್ ದಾಖಲಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ 65 ವರ್ಷದ ಮಹಿಳೆ ಮೇಲೆ ಅತ್ಯಾಚಾರ ಎಸಗಿರುವ ಘಟನೆ ನಡೆದಿದ್ದು, ರಾಜ್ಯದ ಜನತೆಯನ್ನು ಬೆಚ್ಚಿಬೀಳಿಸಿದೆ. ಈ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.
ಆಗಸ್ಟ್ 21ರ ಬುಧವಾರ ನಸುಕಿನ ಜಾವ 2 ಗಂಟೆಗೆ ಈ ದುರಂತ ನಡೆದಿದೆ. ಮಹಿಳೆ ಚಿಕಿತ್ಸೆಗಾಗಿ ಚಿಂತಾಮಣಿ ಹೊರವಲಯದ ಗ್ರಾಮದಿಂದ ಆಸ್ಪತ್ರೆಗೆ ಬಂದಿದ್ದರು. ತಡವಾಗಿದ್ದರಿಂದ ರಾತ್ರಿ ಅಲ್ಲೇ ಇರಲು ನಿರ್ಧರಿಸಿದ್ದರು.
25 ವರ್ಷದ ಬಂಧಿತ ಆರೋಪಿ ಚಿಂತಾಮಣಿ ಮೂಲದ ಇರ್ಫಾನ್ ಎಂದು ಗುರುತಿಸಲಾಗಿದೆ. ದಿನಗೂಲಿ ಕೆಲಸ ಮಾಡುತ್ತಿದ್ದ ಈತ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ಬಂದಿದ್ದ. ಆಸ್ಪತ್ರೆಯಲ್ಲಿ ಮಹಿಳೆ ಒಂಟಿಯಾಗಿದ್ದನ್ನು ಕಂಡು ಇರ್ಫಾನ್ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳೆ ಆಸ್ಪತ್ರೆ ಆವರಣದಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಆದರೆ, ಆಕೆಯ ಕಿರುಚಾಟ ಕೇಳಿ ಆಸ್ಪತ್ರೆಯಲ್ಲಿದ್ದ ಕೆಲವರು ಆಕೆಯನ್ನು ರಕ್ಷಿಸಿದ್ದಾರೆ. ಅಲ್ಲದೆ ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
'ಮಹಿಳೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದಿದ್ದರು. ಆಕೆ ಆಸ್ಪತ್ರೆ ಆವರಣದಲ್ಲಿದ್ದರು. ಈ ವೇಳೆ ಇರ್ಫಾನ್ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಆರೋಪಿಯನ್ನು ಬಂಧಿಸಿ ಕಸ್ಟಡಿಗೆ ಕಳುಹಿಸಲಾಗಿದೆ' ಎಂದು ಚಿಕ್ಕಬಳ್ಳಾಪುರ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ಘಟನೆಯನ್ನು ಖಚಿತಪಡಿಸಿದ್ದಾರೆ.
ಚಿಕ್ಕಬಳ್ಳಾಪುರ ಪೊಲೀಸ್ ಅಧೀಕ್ಷಕರು ಮಾಹಿತಿ ನೀಡಿದ್ದು, ಘಟನೆ ನಡೆದಿರುವುದು ಆವರಣದಲ್ಲಿ ಆಸ್ಪತ್ರೆಯೊಳಗೆ ಅಲ್ಲ ಎಂದು ಪೊಲೀಸ್ ಅಧೀಕ್ಷಕರು ಮಾಹಿತಿ ನೀಡಿದ್ದಾರೆ. ಸದ್ಯ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಭಾರತೀಯ ನ್ಯಾಯ ಸಂಹಿತಾ (ಅತ್ಯಾಚಾರ) ಸೆಕ್ಷನ್ 64 ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಚೌಕ್ಸೆ ಹೇಳಿದ್ದಾರೆ.
ಬೆಂಗಳೂರಲ್ಲಿ ಯುವತಿ ಮೇಲೆ ಅತ್ಯಾಚಾರ ಯತ್ನ
ಇದಕ್ಕೂ ಮುನ್ನ ಬೆಂಗಳೂರಿನಲ್ಲಿ ಯುವತಿಯೊಬ್ಬಳ ಮೇಲೆ ಕಾಮುಕರು ಅಟ್ಟಹಾಸ ಮೆರೆದಿರುವ ಘಟನೆ ವರದಿಯಾಗಿತ್ತು. ಆಗಸ್ಟ್ 17ರ ತಡರಾತ್ರಿ ಹೆಚ್ಎಸ್ಆರ್ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಆನೇಕಲ್‌ನ ಖಾಸಗಿ ಕಾಲೇಜಿನಲ್ಲಿ ಅಂತಿಮ ವರ್ಷದ ಪದವಿ ಓದುತ್ತಿರುವ ಯುವತಿ, ಸ್ನೇಹಿತರೊಂದಿಗೆ ಕೋರಮಂಗಲದ ಪಬ್‍ವೊಂದಕ್ಕೆ ಬಂದಿದ್ದಳು. ವಾಪಸ್ ಸ್ನೇಹಿತನ ಕಾರಿನಲ್ಲಿ ಹೋಗುವಾಗ ಈ ಘಟನೆ ನಡೆದಿದೆ.
ಆದರೆ, ಕಾರಿನಲ್ಲಿ ಹೋಗುವಾಗ ಕಾರು, ಆಟೋಗೆ ಡಿಕ್ಕಿ ಹೊಡೆದಿದೆ. ಆ ವೇಳೆ ವಾಗ್ವಾದ ನಡೆಯಿತು. ನಂತರವೇ ಯುವತಿ ಪೊಲೀಸರಿಗೆ ಕರೆ ಮಾಡಿದ್ದಳು. ಅಲ್ಲಿಂದ ಸ್ವಲ್ಪ ಹೋಗಿದ್ದ ಯುವತಿ, ಬೈಕ್ ಸವಾರನೊಬ್ಬನ ಬಳಿ ಲಿಫ್ಟ್ ಕೇಳಿದ್ದಳು.
ಆದರೆ ಆತ ಆಕೆಯನ್ನ ಬೊಮ್ಮನಹಳ್ಳಿ ಸಮೀಪದ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ವೇಳೆ ಯುವತಿ ತನ್ನ ಮೊಬೈಲ್ನಲ್ಲಿ ಎಸ್ಓಎಸ್ ಬಟನ್ ಒತ್ತಿದ್ದರಿಂದ ತನ್ನ ತಂದೆ ಹಾಗೂ ಸ್ನೇಹಿತರಿಗೆ ಅಲರ್ಟ್ ಕಾಲ್ ತಲುಪಿತ್ತು. ಆದರೆ ಸ್ನೇಹಿತರು ಸ್ಥಳಕ್ಕೆ ಬರುವಷ್ಟರಲ್ಲಿ ಆರೋಪಿ ಪರಾರಿಯಾಗಿದ್ದನು.