ಕನ್ನಡ ಸುದ್ದಿ  /  Karnataka  /  Amit Shah Dakshina Kannada Visit Tomorrow, 10 Points

Amit Shah Mangaluru Visit: ನಾಳೆ ದಕ್ಷಿಣ ಕನ್ನಡಕ್ಕೆ ಅಮಿತ್‌ ಶಾ, ಈಶ್ವರಮಂಗಲ, ಪುತ್ತೂರು, ಮಂಗಳೂರಿಗೆ ಭೇಟಿ | 10 ಅಂಶಗಳು

ಕೇಂದ್ರ ಸಚಿವರಾದ ಬಳಿಕ ಇದೇ ಮೊದಲ ಬಾರಿಗೆ ದಕ್ಷಿಣ ಕನ್ನಡ ಜಿಲ್ಲೆಗೆ ಅಮಿತ್‌ ಶಾ ಭೇಟಿ ನೀಡುತ್ತಿದ್ದಾರೆ. ನಾಳೆ ಅಮಿತ್‌ ಶಾ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ.

Amit Shah Mangaluru Visit: ನಾಳೆ ದಕ್ಷಿಣ ಕನ್ನಡಕ್ಕೆ ಅಮಿತ್‌ ಶಾ, ಈಶ್ವರ ಮಂಗಲ, ಪುತ್ತೂರು, ಮಂಗಳೂರಿಗೆ ಭೇಟಿ | 10 ಅಂಶಗಳು (ANI Photo)
Amit Shah Mangaluru Visit: ನಾಳೆ ದಕ್ಷಿಣ ಕನ್ನಡಕ್ಕೆ ಅಮಿತ್‌ ಶಾ, ಈಶ್ವರ ಮಂಗಲ, ಪುತ್ತೂರು, ಮಂಗಳೂರಿಗೆ ಭೇಟಿ | 10 ಅಂಶಗಳು (ANI Photo) (Sushanta Das)

ಮಂಗಳೂರು: ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜ್ಯದಲ್ಲಿ ಕೇಂದ್ರ ನಾಯಕರುಗಳ ಭೇಟಿ ಹೆಚ್ಚುತ್ತಿದೆ. ಈ ವರ್ಷದಲ್ಲಿ ಹಲವು ಬಾರಿ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕಕ್ಕೆ ಭೇಟಿ ನೀಡಿದ್ದು, ಅಮಿತ್‌ ಶಾ ಕೂಡ ಕೆಲವು ಬಾರಿ ರಾಜ್ಯಕ್ಕೆ ಭೇಟಿ ನೀಡಿದ್ದಾರೆ. ಡಿಸೆಂಬರ್‌ ಅಂತ್ಯದಲ್ಲಿ ಮತ್ತು ಕಳೆದ ತಿಂಗಳು ಅಮಿತ್‌ ಶಾ ರಾಜ್ಯಕ್ಕೆ ಭೇಟಿ ನೀಡಿದ್ದರು. ಇದೀಗ ಕೇಂದ್ರ ಸಚಿವರಾದ ಬಳಿಕ ಇದೇ ಮೊದಲ ಬಾರಿಗೆ ದಕ್ಷಿಣ ಕನ್ನಡ ಜಿಲ್ಲೆಗೆ ಭೇಟಿ ನೀಡುತ್ತಿದ್ದಾರೆ. ನಾಳೆ ಅಮಿತ್‌ ಶಾ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ.

ಅಮಿತ್‌ ಶಾ ಅವರ ದಕ್ಷಿಣ ಕನ್ನಡ ಭೇಟಿ ಕುರಿತು 10 ಅಂಶಗಳು

  1. ಅಮಿತ್‌ ಶಾ ಅವರು ಪುತ್ತೂರು ತಾಲೂಕಿನ ಕೇರಳ ಗಡಿಗೆ ಹತ್ತಿರದಲ್ಲಿರುವ ಈಶ್ವರಮಂಗಲಕ್ಕೆ ನಾಳೆ ಮೊದಲು ಭೇಟಿ ನೀಡಲಿದ್ದಾರೆ. ಕಣ್ಣೂರಿಗೆ ವಿಮಾನ ಮೂಲಕ ಆಗಮಿಸಿ ಅಲ್ಲಿಂದ ಹೆಲಿಕಾಪ್ಟರ್‌ ಮೂಲಕ ಈಶ್ವರಮಂಗಲಕ್ಕೆ ಭೇಟಿ ನೀಡಲಿದ್ದಾರೆ. ಈಶ್ವರಮಂಗಲದ ಹನುಮಗಿರಿಯಲ್ಲಿ ಭಾರತ ಮಾತಾ ಮಂದಿರ ಲೋಕಾರ್ಪಣೆ ಮಾಡಲಿದ್ದಾರೆ.
  2. ಈಶ್ವರಮಂಗಲದ ಕಾರ್ಯಕ್ರಮ ಮುಗಿಸಿದ ಬಳಿಕ ಪುತ್ತೂರಿನ ಕ್ಯಾಂಪ್ಕೊ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಸಹಕಾರಿ, ಅಡಿಕೆ ಕೃಷಿಕರನ್ನು ಉದ್ದೇಶಿಸಿ ಅಮಿತ್‌ ಶಾ ಮಾತನಾಡಲಿದ್ದಾರೆ.
  3. ಈಶ್ವರ ಮಂಗಲ ಮತ್ತು ಪುತ್ತೂರಿನ ಈ ಎರಡು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಬಳಿಕ ಅಮಿತ್‌ ಶಾ ಅವರು ಮಂಗಳೂರಿಗೆ ತೆರಳಲಿದ್ದಾರೆ. ಅಲ್ಲಿ ಪಕ್ಷದ ಪ್ರಮುಖರ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಮುಂದಿನ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪಕ್ಷದ ಮುಖಂಡರಿಗೆ ಸೂಚನೆಗಳನ್ನು ನೀಡುವ ನಿರೀಕ್ಷೆಯಿದೆ.
  4. ಅಮಿತ್‌ ಶಾ ಭೇಟಿ ನೀಡುವ ಈಶ್ವರ ಮಂಗಲವು ಕೇರಳ ಗಡಿ ಪ್ರದೇಶದಲ್ಲಿರುವ ಪ್ರದೇಶ. ಇಲ್ಲಿ ಆಗಾಗ ಕೋಮು ಗಲಭೆಗಳು ನಡೆಯುತ್ತಿವೆ. ವಿಶೇಷವಾಗಿ, ಕೇರಳದಿಂದ ಯುವಕರು ಆಗಮಿಸಿ ಇಲ್ಲಿ ಗಲಾಟೆ ಮಾಡುತ್ತಾರೆ ಎನ್ನುವ ಆರೋಪವೂ ಇದೆ. ಈಶ್ವರಮಂಗಲಕ್ಕೆ ಅಮಿತ್‌ ಶಾ ಭೇಟಿ ಹಿನ್ನಲೆಯಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಕೇರಳ ಗಡಿ ಸಮೇತ ವಿವಿಧೆಡೆ ಪೊಲೀಸರನ್ನು ನಿಯೋಜಿಸಲಾಗಿದೆ.
  5. ಕ್ಯಾಂಪ್ಕೊ ಸಂಸ್ಥೆಯು ದರ್ಬೆ ಬೆದ್ರಾಳ ರಸ್ತೆಯಲ್ಲಿದ್ದರೂ ಅಪಾರ ಜನ ಸೇರುವ ನಿರೀಕ್ಷೆಯಿಂದ ಸಹಕಾರಿ ಸಮಾವೇಶವನ್ನು ತೆಂಕಿಲದ ವಿವೇಕಾನಂದ ಶಿಕ್ಷಣ ಸಂಸ್ಥೆಯ ಮೈದಾನದಲ್ಲಿ ಆಯೋಜಿಸಲಾಗಿದೆ. ನಾಳೆ ಸಂಜೆ ಪುತ್ತೂರಿನ ತೆಂಕಿಲದಲ್ಲಿ ಬೃಹತ್‌ ಕಾರ್ಯಕ್ರಮ ನಡೆಯಲಿದೆ.
  6. ಅಮಿತ್‌ ಶಾ ಅವರ ಭದ್ರತೆಗೆ ಎಸ್‌ಪಿಜಿ ಇರಲಿದೆ. ಜತೆಗೆ, ರಾಜ್ಯದ ನಾನಾ ಭಾಗದ 1,600 ಪೊಲೀಸ್‌ರನ್ನು ಈಗಾಗಲೇ ದಕ್ಷಿಣ ಕನ್ನಡ ಡ್ಯೂಟಿಗೆ ಹಾಕಲಾಗಿದೆ. 7 ಮಂದಿ ಎಸ್‌ಪಿ, 22 ಮಂದಿ ಡಿವೈಎಸ್‌ಪಿ, 38 ಮಂದಿ ಇನ್‌ಸ್ಪೆಕ್ಟರ್‌, 80ಕ್ಕೂ ಅಧಿಕ ಪಿಎಸ್‌ಐಗಳನ್ನು ನಿಯೋಜಿಸಲಾಗಿದೆ. ಹನುಮಗಿರಿ, ಮೊಟ್ಟೆತ್ತಡ್ಕ ಹೆಲಿಪ್ಯಾಡ್‌, ತೆಂಕಿಲ ಸಮಾವೇಶ ಸ್ಥಳದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
  7. ತೆಂಕಿಲದಲ್ಲಿ ಸಮಾವೇಶ ಮುಗಿದ ಬಳಿಕ ರಸ್ತೆ ಮಾರ್ಗದ ಮೂಲಕ ಕ್ಯಾಂಪ್ಕೊ ಫ್ಯಾಕ್ಟರಿಗೆ ಭೇಟಿ ನೀಡುವರು. ಅಂದಹಾಗೆ, ಈಶ್ವರಮಂಗಲದಿಂದ ಪುತ್ತೂರಿಗೆ ಹೆಲಿಕಾಪ್ಟರ್‌ ಮೂಲಕ ಆಗಮಿಸಲಿದ್ದಾರೆ. ಕ್ಯಾಂಪ್ಕೊ ಫ್ಯಾಕ್ಟರಿಯಿಂದ ಮಂಗಳೂರಿಗೆ ತೆರಳುವರು.
  8. ಪುತ್ತೂರು ಕಾರ್ಯಕ್ರಮ ಮುಗಿದ ಬಳಿಕ ಮಂಗಳೂರಿನಲ್ಲಿ ರೋಡ್‌ ಶೋದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇತ್ತು. ಆದರೆ, ಕೊನೆಕ್ಷಣದಲ್ಲಿ ಈ ರೋಡ್‌ ಶೋ ರದ್ದುಗೊಳಿಸಲಾಗಿದೆ. ರೋಡ್ ಶೋ ನಡೆಯುವ ಮಾರ್ಗಮಧ್ಯೆ ಪದವಿನಂಗಡಿ ಬಳಿ ಕೊರಗಜ್ಜನ ಕೋಲ ನಡೆಯುತ್ತಿದೆ. ಈ ಕಾರಣಕ್ಕೆ ಅಮಿತ್ ಶಾ ರೋಡ್ ಶೋ ಕಾರ್ಯಕ್ರಮ ರದ್ದು ಮಾಡಲಾಗಿದೆ.
  9. ನಾಳೆ ಸಂಜೆ ಆರೂವರೆಯಿಂದ ರಾತ್ರಿ ಎಂಟು ಗಂಟೆಯವರೆಗೆ ಬಿಜೆಪಿ ಮುಖಂಡರ ಜತೆ ಮಂಗಳೂರಿನಲ್ಲಿ ಅಮಿತ್‌ ಶಾ ಚರ್ಚೆ ನಡೆಸಲಿದ್ದಾರೆ. ಬಳಿಕ ಮಂಗಳೂರು ವಿಮಾನನಿಲ್ದಾಣದ ಮೂಲಕ ದೆಹಲಿಗೆ ವಾಪಸ್ಸಾಗಲಿದ್ದಾರೆ.
  10. ಏಪ್ರಿಲ್‌ ಮೇ ತಿಂಗಳಿನಲ್ಲಿ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯುವ ಸಾಧ್ಯತೆ ಇರುವುದರಿಂದ ಕೇಂದ್ರ ನಾಯಕರು ಕರ್ನಾಟಕಕ್ಕೆ ನಿಯಮಿತವಾಗಿ ಭೇಟಿ ನೀಡುತ್ತಿದ್ದಾರೆ. ಮುಂದಿನ ದಿನಗಳಲ್ಲಿಯೂ ರಾಜ್ಯದ ಇತರೆ ಭಾಗಗಳತ್ತ ಅಮಿತ್‌ ಶಾ, ನರೇಂದ್ರ ಮೋದಿ ಸೇರಿದಂತೆ ಪ್ರಮುಖರು ಆಗಮಿಸುವ ನಿರೀಕ್ಷೆಯಿದೆ.

IPL_Entry_Point