ಟಿಟಿಡಿ ಉದ್ಯೋಗಿಗಳಿಗೆ ಸಿಹಿಸುದ್ದಿ; ವೇತನ ಹೆಚ್ಚಳ, ವೈದ್ಯಕೀಯ ಸೌಲಭ್ಯ ಸೇರಿ ಹಲವು ಅನುಕೂಲ; 5,259 ಕೋಟಿ ಬಜೆಟ್ ಮೀಸಲು
TTD Salary Hike: ತಿರುಪತಿ ದೇವಸ್ಥಾನ ಹಾಗೂ ಟಿಟಿಡಿ ಆಡಳಿತಕ್ಕೆ ಒಳಪಟ್ಟ ವಿವಿಧ ಸಂಸ್ಥೆ ಹಾಗೂ ವಿಭಾಗಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಸಿಹಿಸುದ್ದಿ ನೀಡಿದೆ ಆಡಳಿತ ಮಂಡಳಿ. ವೇತನ ಹೆಚ್ಚಳ ಸೇರಿದಂತೆ ಹಲವು ಅನುಕೂಲಗಳನ್ನು ಒದಗಿಸುವ ಸಲುವಾಗಿ 2025–26ರ ಬಜೆಟ್‌ನಲ್ಲಿ 5,259 ಕೋಟಿ ಮೀಸಲಿಡಲು ಅನುಮೋದನೆ ನೀಡಿದೆ.

TTD Salary Hike: ತಿರುಪತಿ ತಿರುಮಲ ದೇವಸ್ಥಾನ (ಟಟಿಡಿ) ದ ಆಡಳಿತ ಮಂಡಳಿಯು ಉದ್ಯೋಗಿಗಳ ವಿಚಾರದಲ್ಲಿ ಕೆಲವೊಂದು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದೆ. ಟಿಟಿಡಿ ಆಡಳಿತ ಮಂಡಳಿಯ ನಿರ್ಧಾರಗಳು ಅಲ್ಲಿನ ಉದ್ಯೋಗಿಗಳಿಗೆ ಅನುಕೂಲ ಮಾಡಿಕೊಡುವಂತಿದೆ. ಟಿಟಿಡಿ ಅಧ್ಯಕ್ಷ ಬಿ.ಆರ್. ನಾಯ್ಡು ಖಾಯಂ ಉದ್ಯೋಗಿಗಳಿಗೆ ಪ್ರತಿ ಮೂರು ತಿಂಗಳಿಗೊಮ್ಮೆ ಸುಪಥ ದರ್ಶನ ನೀಡಲಾಗುವುದು ಎಂದು ಹೇಳಿದ್ದಾರೆ. ಅವರಿಗೆ ಟಿಕೆಟ್ ನೀಡಿ ಶ್ರೀವಾರಿ ದರ್ಶನ ಒದಗಿಸುವುದಾಗಿ ಕೂಡ ಹೇಳಿದ್ದಾರೆ. ಟಿಟಿಡಿಯಲ್ಲಿ ಕೆಲಸ ಮಾಡುತ್ತಿರುವ ಹಿಂದೂಯೇತರ ನೌಕರರನ್ನು ವಜಾಗೊಳಿಸುವ ಬಗೆಗಿನ ನಿರ್ಣಯವನ್ನು ಕೂಡ ಆಡಳಿತ ಮಂಡಳಿಯ ಸಭೆಯಲ್ಲಿ ಅಂಗೀಕರಿಸಲಾಯಿತು. ಇದಲ್ಲದೆ, ತಾತ್ಕಾಲಿಕ ಉದ್ಯೋಗಿಗಳು ಮತ್ತು ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳ ಬಗ್ಗೆಯೂ ಪ್ರಮುಖ ನಿರ್ಧಾರ ತೆಗೆದುಕೊಳ್ಳಲಾಯಿತು.
2025-26ನೇ ಹಣಕಾಸು ವರ್ಷದಲ್ಲಿ 5,258.68 ಕೋಟಿ ರೂ ಮೊತ್ತವನ್ನು ಅನಾರೋಗ್ಯ ಪೀಡಿತ ಕಾರ್ಮಿಕರಿಗೆ ಉತ್ತಮ ವೈದ್ಯಕೀಯ ಚಿಕಿತ್ಸೆ ನೀಡಲು ಹಾಗೂ ವೇತನ ಹೆಚ್ಚಳದ ಬಗ್ಗೆ ಪರಿಗಣಿಸಿ ಕ್ರಮ ಕೈಗೊಳ್ಳುವಂತೆ ಈ ಸಭೆಯಲ್ಲಿ ಇಒಗೆ ಸೂಚಿಸಲಾಯಿತು.
ತಿರುಮಲ ಅನ್ನಮಯ್ಯ ಭವನದಲ್ಲಿ ನಡೆದ ಟಿಟಿಡಿ ಆಡಳಿತ ಮಂಡಳಿ ಸಭೆಯಲ್ಲಿ, ಕಾರ್ಮಿಕರ ವೇತನ ಹೆಚ್ಚಳ ಮತ್ತು ಟಿಟಿಡಿ ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಗುತ್ತಿಗೆ ಉಪನ್ಯಾಸಕರ ಸಮಸ್ಯೆಗಳನ್ನು ಪರಿಹರಿಸುವ ಬಗ್ಗೆ ಚರ್ಚೆ ನಡೆಸಲಾಯ್ತು.
ಈ ವಿಚಾರವಾಗಿ ಸಮಿತಿಯನ್ನು ರಚಿಸಿದ್ದಕ್ಕಾಗಿ ಕಾರ್ಮಿಕರು ಮತ್ತು ಗುತ್ತಿಗೆ ಉಪನ್ಯಾಸಕರು ಟಿಟಿಡಿ ಅಧ್ಯಕ್ಷ ಬಿ.ಆರ್. ನಾಯ್ಡು ಅವರಿಗೆ ಧನ್ಯವಾದ ಅರ್ಪಿಸಿದರು ಹಾಗೂ ಟಿಟಿಡಿ ಮಂಡಳಿ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರದ ಬಗ್ಗೆ ಅವರು ಸಂತೋಷ ವ್ಯಕ್ತಪಡಿಸಿದರು.
ಟಿಟಿಡಿ ಅಧ್ಯಕ್ಷ ಬಿ.ಆರ್. ನಾಯ್ಡು ಹಲವು ವರ್ಷಗಳಿಂದ ಬಾಕಿ ಇರುವ ಸಮಸ್ಯೆಗಳನ್ನು ಪರಿಹರಿಸುವ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ಕಾರ್ಮಿಕರು ಮತ್ತು ಗುತ್ತಿಗೆ ಉಪನ್ಯಾಸಕರು ಸಂತೋಷ ವ್ಯಕ್ತಪಡಿಸಿದರು. ತಿರುಮಲದಲ್ಲಿರುವ ಟಿಟಿಡಿ ಅಧ್ಯಕ್ಷರ ಕಚೇರಿಯಲ್ಲಿ, ಟಿಟಿಡಿ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿರುವ ಉಪನ್ಯಾಸಕರು ಮತ್ತು ಸಾವಿರಾರು ಮಂದಿ ಕಾರ್ಮಿಕರು ಅಧ್ಯಕ್ಷರಿಗೆ ಕೃತಜ್ಞತೆ ಸಲ್ಲಿಸಿದರು.
