ಅಂಗನವಾಡಿ ಕಾರ್ಯಕರ್ತೆಯರ ಮುಷ್ಕರ; ಟೆಂಟ್‌ ಕಿತ್ತುಹಾಕಲು ಬಂದ ಪೊಲೀಸರ ವಿರುದ್ಧ ಮಹಿಳೆಯರ ಆಕ್ರೋಶ
ಕನ್ನಡ ಸುದ್ದಿ  /  ಕರ್ನಾಟಕ  /  ಅಂಗನವಾಡಿ ಕಾರ್ಯಕರ್ತೆಯರ ಮುಷ್ಕರ; ಟೆಂಟ್‌ ಕಿತ್ತುಹಾಕಲು ಬಂದ ಪೊಲೀಸರ ವಿರುದ್ಧ ಮಹಿಳೆಯರ ಆಕ್ರೋಶ

ಅಂಗನವಾಡಿ ಕಾರ್ಯಕರ್ತೆಯರ ಮುಷ್ಕರ; ಟೆಂಟ್‌ ಕಿತ್ತುಹಾಕಲು ಬಂದ ಪೊಲೀಸರ ವಿರುದ್ಧ ಮಹಿಳೆಯರ ಆಕ್ರೋಶ

ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರು ಕಳೆದ ನಾಲ್ಕು ದಿನಗಳಿಂದ ಧರಣಿ ನಡೆಸುತ್ತಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ಧಾವಿಸಿದ ಪೊಲೀಸ್‌ ಸಿಬ್ಬಂದಿ, ತೆರವು ಮಾಡುವಂತೆ ಸೂಚಿಸಿದ್ದಾರೆ. ಆದರೆ ಅಂಗನವಾಡಿ ಕಾರ್ಯಕರ್ತೆಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. (ವರದಿ: ಎಚ್.ಮಾರುತಿ, ಬೆಂಗಳೂರು)

ಅಂಗನವಾಡಿ ಕಾರ್ಯಕರ್ತೆಯರ ಮುಷ್ಕರ; ಟೆಂಟ್‌ ಕಿತ್ತುಹಾಕಲು ಬಂದ ಪೊಲೀಸರ ವಿರುದ್ಧ ಆಕ್ರೋಶ
ಅಂಗನವಾಡಿ ಕಾರ್ಯಕರ್ತೆಯರ ಮುಷ್ಕರ; ಟೆಂಟ್‌ ಕಿತ್ತುಹಾಕಲು ಬಂದ ಪೊಲೀಸರ ವಿರುದ್ಧ ಆಕ್ರೋಶ

ಬೆಂಗಳೂರು: ಕನಿಷ್ಠ ವೇತನ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರನ್ನು ತೆರವುಗೊಳಿಸಲು ಮುಂದಾದ ಘಟನೆ ನಡೆದಿದೆ. ಇದಕ್ಕೆ ಪ್ರತಿಭಟನಾ ನಿರತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರಿಂದ ಪೊಲೀಸರು ಹಾಗೂ ಶಾಮಿಯಾನ ಸಿಬ್ಬಂದಿ ಬರಿಗೈಲಿ ಹಿಂತಿರುಗಬೇಕಾಯಿತು.

ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘದ ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಕಳೆದ ನಾಲ್ಕು ದಿನಗಳಿಂದ ಚಳಿ, ಬಿಸಿಲು ಲೆಕ್ಕಿಸದೆ ಧರಣಿ ನಡೆಸುತ್ತಿದ್ದಾರೆ. ಏಕಾಏಕಿ ಸ್ಥಳಕ್ಕೆ ಧಾವಿಸಿದ ಪೊಲೀಸ್‌ ಸಿಬ್ಬಂದಿ, ತೆರವು ಮಾಡುವಂತೆ ಸೂಚಿಸಿದರು. ಇದರಿಂದ ಅಂಗನವಾಡಿ ಕಾರ್ಯಕರ್ತೆಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಯಾವುದೇ ಕಾರಣಕ್ಕೂ ಸ್ಥಳ ಬಿಟ್ಟು ಕದಲುವುದಿಲ್ಲ ಎಂದು ಕಾರ್ಯಕರ್ತೆಯರು ಪಟ್ಟುಹಿಡಿದರು. ನಮ್ಮ ಟೆಂಟ್‌ ಕಿತ್ತರೆ ನಿಮ್ಮ ಸೀಟ್‌ ಕೀಳುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಗುಡುಗಿದರು. ಅಂಗನವಾಡಿ ಕಾರ್ಯಕರ್ತೆಯರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗುವುದನ್ನು ಮುಂದುವರೆಸಿದರು. ಆದರೂ ಶಾಮಿಯಾನಾ ಸಿಬ್ಬಂದಿ ಟೆಂಟ್‌ ತೆರವು ಮಾಡುತ್ತಲೇ ಇದ್ದರು. ಕೊನೆಗೆ ಹೋರಾಟಗಾರರ ಆಕ್ರೋಶಕ್ಕೆ ಮಣಿದ ಪೊಲೀಸರು ಮತ್ತು ಟೆಂಟ್‌ ಸಿಬ್ಬಂದಿ ವಾಪಸ್ಸಾದರು. ಅಂಗನವಾಡಿ ಕಾರ್ಯಕರ್ತೆಯರು ಅದೇ ಸ್ಥಳದಲ್ಲಿ ಪ್ರತಿಭಟನೆ ಮುಂದುವರಿಸಿದ್ದಾರೆ.

ನಾವು ಪ್ರತಿಭಟನೆ ನಡೆಸುತ್ತಿದ್ದ ಸ್ಥಳದಲ್ಲಿ ಕನ್ನಡ ಸಂಘಟನೆಯೊಂದಕ್ಕೆ ಪ್ರತಿಭಟನೆ ನಡೆಸಲು ಶನಿವಾರಕ್ಕೆ ಅನುಮತಿ ನೀಡಲಾಗಿದೆ. ಆದ್ದರಿಂದ ನಮ್ಮನ್ನು ತೆರವುಗೊಳಿಸಲು ಪೊಲೀಸರು ಆಗಮಿಸಿದ್ದಾರೆ ಎಂದು ಕಾರ್ಯಕರ್ತೆಯರು ದೂರಿದರು. ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘದ ರಾಜ್ಯ ಅಧ್ಯಕ್ಷೆ ಬಿ.ಪ್ರೇಮಾ, ಸರ್ಕಾರ ಬೇಡಿಕೆ ಈಡೇರಿಸುವವರೆಗೂ ಹೋರಾಟದ ಸ್ಥಳ ಬಿಟ್ಟು ಕದಲುವುದಿಲ್ಲ ಎಂದು ಎಚ್ಚರಿಸಿದರು.

ಬಿಜೆಪಿ ಮತ್ತು ಜೆಡಿಎಸ್‌ ಆಕ್ರೋಶ

ಪ್ರತಿಭಟನೆ ನಡೆಸುತ್ತಿರುವವರು ಮಹಿಳೆಯರು. ರಾಜ್ಯದ ವಿವಿಧ ಜಿಲ್ಲೆ ಮತ್ತು ತಾಲೂಕುಗಳಿಂದ ಆಗಮಿಸಿದ್ದು ಅವರಿಗೆ ಕನಿಷ್ಠ ಸೌಲಭ್ಯಗಳೂ ಇಲ್ಲವಾಗಿವೆ. ಕೆಲವು ಮಹಿಳೆಯರು ತಮ್ಮ ಪುಟ್ಟ ಪುಟ್ಟ ಕಂದಮ್ಮಗಳೊಂದಿಗೆ ಆಗಮಿಸಿದ್ದು , ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯ ಸರ್ಕಾರ ಪೊಲೀಸರ ಮೂಲಕ ಟೆಂಟ್ ಕಿತ್ತು ಹಾಕಿಸಿ ಬಲವಂತವಾಗಿ ಪ್ರತಿಭಟನೆ ಸ್ಥಗಿತಗೊಳಿಸಲು ಸಂಚು ರೂಪಿಸಿದೆ. ಚುನಾವಣೆ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಕೊಟ್ಟ ಆಶ್ವಾಸನೆಯನ್ನು ಈಗ ಮರೆತಿದ್ದಾರೆ. ಕೊರೆಯುವ ಚಳಿಯನ್ನೂ ಲೆಕ್ಕಿಸದೆ ನಾಲ್ಕು ದಿನಗಳಿಂದ ಅಹೋರಾತ್ರಿ ಪ್ರತಿಭಟನೆ ಮಾಡುತ್ತಿದ್ದಾರೆ. ಇವರ ಸಮಸ್ಯೆಗಳನ್ನು ಕೇಳುವ ಸೌಜನ್ಯವನ್ನೂ ಸರ್ಕಾರ ಮರೆತಿದೆ ಎಂದು ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್‌ ಕಿಡಿ ಕಾರಿವೆ.

ಅಪಘಾತ; ಇಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

ಬೆಂಗಳೂರು ಕನಕಪುರ ರಸ್ತೆಯ ತಲಘಟ್ಟಪುರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಅಂಜನಾಪುರದ ಸಮೀಪ ಸಂಭವಿಸಿದ ಅಪಘಾತದಲ್ಲಿ ಎಂಜಿನಿಯರ್ ವಿದ್ಯಾರ್ಥಿ ರಾಹುಲ್‌ ಗೌತಮ್‌ ಎಂಬುವರು

ಮೃತಪಟ್ಟಿದ್ದಾರೆ. ಕೋಲಾರದ 20 ವರ್ಷದ ರಾಹುಲ್‌, ನಗರದ ಕಾಲೇಜೊಂದರಲ್ಲಿ ಎಂಜಿನಿಯರಿಂಗ್‌ ಓದುತ್ತಿದ್ದರು. ಇವರು ತನ್ನ ಸ್ನೇಹಿತ ಚಿರಾಗ್‌ ಜತೆಗೆ ರಾತ್ರಿ ದ್ವಿಚಕ್ರ ವಾಹನದಲ್ಲಿ ಅಂಜನಾಪುರದ 80 ಅಡಿ ರಸ್ತೆಯಲ್ಲಿ ತೆರಳುತ್ತಿದ್ದರು. ವೇಗವಾಗಿ ತೆರಳುತ್ತಿದ್ದರಿಂದ ವಾಹನ ನಿಯಂತ್ರಣ ತಪ್ಪಿ ಉರುಳಿಬಿದ್ದಿದೆ. ಬೈಕ್‌ ಹಿಂದೆ ಕುಳಿತಿದ್ದ ರಾಹುಲ್‌ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಚಿರಾಗ್‌ ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಸಂಚಾರ ಪೊಲೀಸರು ಹೇಳಿದ್ದಾರೆ. ತಲಘಟ್ಟಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Whats_app_banner