Anna Bhagya:ಛತ್ತೀಸ್ಗಢದಲ್ಲಿ ಒಂದೂವರೆ ಲಕ್ಷ ಮೆಟ್ರಿಕ್ ಟನ್ ಅಕ್ಕಿ ಲಭ್ಯ ಎಂದ ಸಿಎಂ ಸಿದ್ದರಾಮಯ್ಯ; ಜುಲೈ 1ರಿಂದ ಸಿಗಲಿದೆಯಾ ಅನ್ನಭಾಗ್ಯ?
Karnataka Anna Bhagya Scheme:
ಬೆಂಗಳೂರು: ಕೇಂದ್ರ ಸರ್ಕಾರ ಅಕ್ಕಿ ಸರಬರಾಜು ಒಪ್ಪಂದ ರದ್ದುಗೊಳಿಸಿದ ಹಿನ್ನೆಲೆ ಭಾರತೀಯ ಆಹಾರ ನಿಗಮ (ಎಫ್‌ಸಿಐ) ಅಕ್ಕಿ ಪೂರೈಕೆ ಮಾಡುತ್ತಿಲ್ಲ ಎಂಬ ಆರೋಪ ಕೇಳಿಬಂದಿತ್ತು. ಇದರಿಂದ ಕರ್ನಾಟಕದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅನ್ನಭಾಗ್ಯ ಯೋಜನೆಗೆ (Anna Bhagya Scheme) ಕತ್ತರಿ ಬಿದ್ದಂತಾಗಿತ್ತು. ಇದೀಗ ಛತ್ತೀಸ್ಗಢದಲ್ಲಿ 1.50 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಲಭ್ಯವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಹೇಳಿದ್ದಾರೆ.
ಜನರಿಗೆ ಹೆಚ್ಚುವರಿ ಅಕ್ಕಿಯನ್ನು ನೀಡುವ ಅನ್ನಭಾಗ್ಯ ಯೋಜನೆಯನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರ ಸಂಚು ರೂಪಿಸುತ್ತದೆ ಎಂದು ಆರೋಪಿಸಿದ್ದ ಸಿಎಂ ಸಿದ್ದರಾಮಯ್ಯ, ನಮ್ಮ ಸರ್ಕಾರವು ಇತರ ಮೂಲಗಳಿಂದ ಮತ್ತು ಅಕ್ಕಿ ಉತ್ಪಾದಿಸುವ ರಾಜ್ಯಗಳಿಂದ ಅಕ್ಕಿಯನ್ನು ಪಡೆಯಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ಭತ್ತ ಬೆಳೆಯುವ ರಾಜ್ಯಗಳಾದ ಛತ್ತೀಸ್‌ಗಢ, ತೆಲಂಗಾಣ ರಾಜ್ಯಗಳನ್ನು ಸಂಪರ್ಕಿಸಿದ್ದೇನೆ ಎಂದು ತಿಳಿಸಿದ್ದರು.
ಇಂದು ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ್ದ ಸಿದ್ದರಾಮಯ್ಯ, ಅನ್ನಭಾಗ್ಯ ಯೋಜನೆಗೆ ಛತ್ತೀಸ್‌ಗಢ ರಾಜ್ಯದಲ್ಲಿ 1.50 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಲಭ್ಯವಿದೆ. ಆದರೆ ಸಾರಿಗೆ ವೆಚ್ಚ ಹೆಚ್ಚಾಗಲಿದೆ. ಇಂದು ಸಂಜೆ ಈ ಬಗ್ಗೆ ಮತ್ತೊಂದು ಸಭೆ ಕರೆದಿದ್ದು, ಚರ್ಚಿಸಲಾಗುವುದು ಎಂದು ತಿಳಿಸಿದರು.
ತೆಲಂಗಾಣದ ಮುಖ್ಯಮಂತ್ರಿಗಳೊಂದಿಗೆ ಖುದ್ದಾಗಿ ಮಾತನಾಡಿದ್ದು, ಅಲ್ಲಿ ಅಕ್ಕಿ ಲಭ್ಯವಿಲ್ಲ ಎಂದು ತಿಳಿಸಿದ್ದಾರೆ. ಆಂಧ್ರಪ್ರದೇಶದವರೊಂದಿಗೆ ನಮ್ಮ ಮುಖ್ಯ ಕಾರ್ಯದರ್ಶಿಗಳು ಮಾತನಾಡುತ್ತಿದ್ದಾರೆ ಎಂದರು.
ರಾಜ್ಯದಲ್ಲಿಯೇ ಅಕ್ಕಿ ಲಭ್ಯವಿದೆ. ಕಮಿಷನ್ ಆಮಿಷಕ್ಕೆ ಹೊರರಾಜ್ಯಗಳಿಂದ ಅಕ್ಕಿ ಖರೀದಿಸಲಾಗುತ್ತಿದೆ ಎಂದು ಬಿಜೆಪಿ ಶಾಸಕ ಬಿ.ವೈ.ವಿಜಯೇಂದ್ರ ಅವರು ಮಾಡಿರುವ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು ರಾಜ್ಯದಲ್ಲಿಯೇ ದೊರೆಯುವುದಾದರೆ ಕೊಡಿಸಲಿ ಎಂದು ಸವಾಲೆಸೆದರು.
ಮೊನ್ನೆಯಷ್ಟೇ ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ದಾಸ್ತಾನು ಸಂಗ್ರಹ ಇದ್ದರೂ ಕೂಡ ಅನ್ನ ಭಾಗ್ಯ ಯೋಜನೆ ಜಾರಿಗೆ ತರಲು ಅಗತ್ಯವಿರುವ ಅಕ್ಕಿ ಸಿಗದಂತೆ ಕೇಂದ್ರ ಸರ್ಕಾರ ಮಾಡುತ್ತಿದೆ. ಅನ್ನಭಾಗ್ಯ ಯೋಜನೆಗಾಗಿ ತಿಂಗಳಿಗೆ 840 ಕೋಟಿ ಹಾಗೂ ಪ್ರತಿ ವರ್ಷ 10,092 ಕೋಟಿ ರೂ. ವೆಚ್ಚ ಆಗಲಿದೆ. ಹೆಚ್ಚುವರಿ ಅಕ್ಕಿ ವಿತರಣೆ ಬಗ್ಗೆ ಎಫ್‌ಸಿಐ ಡೆಪ್ಯುಟಿ ಮ್ಯಾನೇಜರ್ ಜೊತೆ ಚರ್ಚೆ ಮಾಡಿದ್ದೆ. ಜೂನ್ 12 ರಂದು ಪತ್ರ ಬರೆದು ಅವರು ಹೆಚ್ಚುವರಿ ಅಕ್ಕಿ ಪೂರೈಕೆ ಮಾಡುವುದಾಗಿ ಹೇಳಿದ್ದರು. ಆದರೆ ಜೂನ್ 13 ರಂದು ಕೇಂದ್ರ ಸರ್ಕಾರದ ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯವು ದೇಶದ ಯಾವುದೇ ರಾಜ್ಯಗಳಿಗೆ ಓಪೆನ್ ಮಾರ್ಕೆಟ್ ಸೇಲ್ಸ್ ಸ್ಕೀಮ್ ಡೊಮೆಸ್ಟಿಕ್ (ಒಎಂಎಸ್‌ಎಸ್) ಅಡಿಯಲ್ಲಿ ಅಕ್ಕಿ ಮತ್ತು ಗೋಧಿಗಳನ್ನು ಸರಬರಾಜು ಮಾಡುವುದನ್ನು ಸ್ಥಗಿತಗೊಳಿಸಿದೆ ಎಂದಿದ್ದರು.
ಎಫ್‌ಸಿಐ ಅಧಿಕಾರಿಗಳು ತಮ್ಮ ಬಳಿ ಏಳು ಲಕ್ಷ ಟನ್ ಅಕ್ಕಿ ದಾಸ್ತಾನು ಇದೆ ಎಂದು ಹೇಳಿದ್ದರು, ಆದರೆ ಈಗ ಕೇಂದ್ರದ ಸೂಚನೆ ಮೇರೆಗೆ ಹಿಂದೆ ಸರಿದಿದ್ದಾರೆ. ಬಡವರಿಗೆ ಅನುಕೂಲವಾಗುವ ಯೋಜನೆ ಜಾರಿಗೊಳಿಸುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಒಳ್ಳೆಯ ಹೆಸರು ಬರುತ್ತದೆ ಎಂಬ ಭಯದಿಂದ ಕರ್ನಾಟಕ ಸರ್ಕಾರಕ್ಕೆ ಅಕ್ಕಿ ನೀಡದಿರಲು ಕೇಂದ್ರ ಸರ್ಕಾರ ರಾಜಕೀಯ ನಿರ್ಧಾರ ಕೈಗೊಂಡಿದೆ ಎಂದು ಆರೋಪಿಸಿದ್ದರು.
ಈಗಾಗಲೇ ಕೇಂದ್ರ ಸರ್ಕಾರ ಬಡವರಿಗೆ 5 ಕೆಜಿ ಅಕ್ಕಿ ನೀಡುತ್ತಿದೆ. ಇದಕ್ಕೆ ಮತ್ತೈದು ಕೆಜಿ ಅಕ್ಕಿ ಸೇರಿಸಿ, ವಿಧಾನಸಭೆ ಚುನಾವಣೆ ವೇಳೆ ಪ್ರತಿ ಮನೆಯ ಸದಸ್ಯರಿಗೆ ಪ್ರತಿ ತಿಂಗಳು 10 ಕೆಜಿ ಅಕ್ಕಿ ನೀಡುವುದಾಗಿ ಕಾಂಗ್ರೆಸ್ ಘೋಷಿಸಿತ್ತು. ಇದಕ್ಕೆ ಅನ್ನಭಾಗ್ಯ ಯೋಜನೆ ಎಂದು ಹೆಸರಿಟ್ಟಿದೆ. ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಜುಲೈ 1 ರಿಂದ ಅನ್ನಭಾಗ್ಯ ಯೋಜನೆ ಜಾರಿ ಮಾಡುವುದಾಗಿ ತಿಳಿಸಿತ್ತು. ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ ಹೊಂದಿದವರು ಅಕ್ಕಿ ಪಡೆಯಲು ಅರ್ಹರು ಎಂದು ತಿಳಿಸಿತ್ತು. ಇದಕ್ಕಾಗಿಯೇ ಭಾರತೀಯ ಆಹಾರ ನಿಗಮ(ಎಫ್‌ಸಿಐ) ಜೊತೆ ಒಪ್ಪಂದ ಕೂಡ ಮಾಡಿಕೊಂಡಿತ್ತು.