Anna Bhagya: ಅಕ್ಕಿ ಬದಲು ಹಣಕ್ಕೆ ಬಿಜೆಪಿ ಕೆಂಡಾಮಂಡಲ; ಸಿದ್ದರಾಮಯ್ಯ ಸರ್ಕಾರ ಫೇಲ್ ಆಗಿದೆ ಎಂದ ನಾಯಕರು
Anna Bhagya: ಕರ್ನಾಟಕದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅನ್ನಭಾಗ್ಯ ಯೋಜನೆಯಂತೆ ಅಕ್ಕಿಯ ಬದಲು ಹಣ ಕೊಡುವ ತೀರ್ಮಾನವನ್ನು ಇಂದು (ಜೂ.28) ತೆಗೆದುಕೊಂಡಿದೆ. ಇದು ವಿಪಕ್ಷೀಯರಿಂದ ವ್ಯಾಪಕ ಟೀಕೆಗೆ ಒಳಗಾಗಿದೆ. ಬಿಜೆಪಿ ನಾಯಕರ ಟೀಕೆ ಏನು - ಇಲ್ಲಿದೆ ವಿವರ.
ಬೆಂಗಳೂರು: ಚುನಾವಣೆಗೆ ಮೊದಲು ಕಾಂಗ್ರೆಸ್ ಘೋಷಿಸಿದ ಗ್ಯಾರೆಂಟಿಗಳೆಲ್ಲವೂ ಅಧಿಕಾರಕ್ಕೆ ಬಂದ ಬಳಿಕ, “ಷರತ್ತುಗಳು” ಅನ್ವಯಕ್ಕೆ ತಲುಪಿದ್ದು, ಸ್ವರೂಪವೂ ಬದಲಾಗುತ್ತಿದೆ ಎಂದು ಬಿಜೆಪಿ ನಾಯಕರು ಟೀಕಿಸಿದ್ದಾರೆ. ಯಾರು ಏನು ಟೀಕೆ ಮಾಡಿದರು? ಇಲ್ಲಿದೆ ವಿವರ.
ಚುನಾವಣೆಗೆ ಮೊದಲು 10 ಕೆಜಿ ಕೊಡ್ತೀವಿ ಅಂತ ಹೇಳಿದ್ರು. ಅಂದ್ರೆ ಅವರು 15 ಕೆಜಿ ಕೊಡಬೇಕಿತ್ತು. ಆದರೆ ಈಗ ಅವರು ತಾವು 5 ಕೊಟ್ಟು, ಉಳಿದದ್ದು ಕೇಂದ್ರದ ಅಕ್ಕಿಯನ್ನು ತಮ್ಮದು ಎಂದು ಹೇಳುತ್ತಿದ್ದಾರೆ. ನಾವು ಹಣ ಕೊಡಿ ಎಂದರೆ ಹಣ ತಿನ್ನಲು ಆಗುತ್ತಾ ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದರು. ಈಗ ಉಲ್ಟಾ ಹೊಡೆದಿದ್ದಾರೆ.
- ನಳಿನ್ ಕುಮಾರ್ ಕಟೀಲ್
ಸಿದ್ದರಾಮಯ್ಯ ಅವರು ರಾಜ್ಯದ ಬಡವರಿಗೆ ಮೋಸ ಮಾಡುತ್ತಿದ್ದಾರೆ. ತಲಾ 10 ಕೆಜಿ ಅಕ್ಕಿ ಕೊಡುವುದಾಗಿ ಹೇಳಿದ್ದರು. ಕೇಂದ್ರ ಸರ್ಕಾರದ 5 ಕೆಜಿ ಅಕ್ಕಿ ಸತತವಾಗಿ ಬರುತ್ತಲೇ ಇದೆ. ರಾಜ್ಯ ಸರ್ಕಾರ ಕೊಡಬೇಕಿದ್ದ ಅಕ್ಕಿ ಕೊಡಲು ಆಗುತ್ತಿಲ್ಲ. ಸಿದ್ದರಾಮಯ್ಯ ಮಾತಿಗೆ ತಪ್ಪುತ್ತಿದ್ದಾರೆ. ಇದು ವಚನಭ್ರಷ್ಟ ಸರ್ಕಾರ. ಅಧಿಕಾರಕ್ಕೆ ಬಂದ ಒಂದೇ ತಿಂಗಳಲ್ಲಿ ಸರ್ಕಾರ ಫೇಲ್ ಆಯಿತು. ಬಸ್ ಕಡಿಮೆ ಮಾಡಿದ್ದಾರೆ. ಜನರಿಗೆ, ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಡಿಗ್ರಿ ವಿದ್ಯಾರ್ಥಿಗಳಿಗೆ ನಿರುದ್ಯೋಗಿ ಪದವೀಧರರಿಗೆ ನಿರುದ್ಯೋಗಿ ಭತ್ಯೆ ಕೊಡುವುದಾಗಿ ಹೇಳಿದ್ದಿರಿ. ಅದಕ್ಕೂ ಷರತ್ತು ತಂದಿದ್ದೀರಿ. ಗೃಹಲಕ್ಷ್ಮಿ ಮೂಲಕ ಹಣ ಕೊಡುವುದಾಗಿ ಭರವಸೆ ಕೊಟ್ಟಿದ್ದೀರಿ. ಅದೂ ಜಾರಿಗೆ ಬಂದಿಲ್ಲ. ಒಟ್ಟಿನಲ್ಲಿ ಇದು ಫೇಲ್ ಸರ್ಕಾರ.
- ರವಿಕುಮಾರ್, ವಿಧಾನ ಪರಿಷತ್ ಸದಸ್ಯ, ಬಿಜೆಪಿ
ಈ ಸರ್ಕಾರದವರು ಟೋಪಿ ಹಾಕುತ್ತಿದ್ದಾರೆ. ಜನರಿಗೆ ಅಕ್ಕಿ ಬದಲು ಹಣ ಕೊಡುವುದು ಏಕೆ? ಕೊಟ್ಟ ಮಾತು ತಪ್ಪಿದ್ದಾರೆ.