ಅನ್ನಭಾಗ್ಯ ಯೋಜನೆ: ಅಕ್ಕಿ ಕೊಡಲು ಸಿದ್ಧವೆಂದ ಕೇಂದ್ರ, ಖರೀದಿಗೆ ಕರ್ನಾಟಕ ಸರ್ಕಾರ ಹಿಂದೇಟು? ನೀವು ತಿಳಿಯಬೇಕಾದ 10 ಅಂಶಗಳಿವು
Anna Bhagya scheme: ಅನ್ನಭಾಗ್ಯಕ್ಕೆ ಅಕ್ಕಿ ಕೊಡುವ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವೆ ಮತ್ತೆ ಜಟಾಪಟಿ ಆರಂಭವಾಗುವ ಸೂಚನೆಗಳು ಕಾಣಿಸುತ್ತಿವೆ. ಇತ್ತೀಚೆಗೆ ಕೇಂದ್ರ ಸರ್ಕಾರವು ರಾಜ್ಯಕ್ಕೆ ಅಕ್ಕಿ ಕೊಡಲು ಸಹಮತ ವ್ಯಕ್ತಪಡಿಸಿದೆ. (ವರದಿ: ಮಾರುತಿ ಎಚ್.)
ಬೆಂಗಳೂರು: ಕೇಂದ್ರ ಮತ್ತು ಕರ್ನಾಟಕ ರಾಜ್ಯ ಸರ್ಕಾರಗಳ ನಡುವೆ ಜಟಾಪಟಿಗೆ ಕಾರಣವಾಗಿದ್ದ ಅನ್ಯಭಾಗ್ಯ ಯೋಜನೆಗೆ ಅಕ್ಕಿ ಒದಗಿಸುವ ವಿಷಯ ಇದೀಗ ಒಂದು ಹಂತಕ್ಕೆ ತಲುಪಿದೆ. ರಾಜ್ಯ ಸರ್ಕಾರವು ಮನವಿ ಸಲ್ಲಿಸಿದರೆ ಅಗತ್ಯ ಇರುವಷ್ಟು ಅಕ್ಕಿ ಒದಗಿಸಲು ಅಗತ್ಯ ಕ್ರಮ ತೆಗೆದುಕೊಳ್ಳಲು ಸಿದ್ಧವಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರ, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ ಜೋಶಿ ತಿಳಿಸಿದ್ದಾರೆ. ಈ ಪ್ರಸ್ತಾವವನ್ನು ಕರ್ನಾಟಕ ಸರ್ಕಾರ ಒಪ್ಪುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ. ಈ ಮಹತ್ವದ ಬೆಳವಣಿಗೆ ಕುರಿತು ನೀವು ತಿಳಿಯಬೇಕಾದ 10 ಪ್ರಮುಖ ಅಂಶಗಳು ಇಲ್ಲಿವೆ.
1) ಏನಿದು ಅನ್ನಭಾಗ್ಯ ಯೋಜನೆ: ಬಡತನ ರೇಖೆಗಿಂತಲೂ ಕೆಳಗಿರುವವರಿಗೆ (Below Poverty Line - BPL) ಪಡಿತರ ಚೀಟಿ ಹೊಂದಿರುವ ಬಡವರಿಗೆ ಉಚಿತವಾಗಿ ಅಕ್ಕಿ ನೀಡುವ ಯೋಜನೆ ಇದು. ಕರ್ನಾಟಕ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರವು ನೀಡಿದ್ದ 5 ಗ್ಯಾರೆಂಟಿಗಳಲ್ಲಿ ಅನ್ನಭಾಗ್ಯದ ಭರವಸೆಯೂ ಸೇರಿತ್ತು. ಇದೇ ಮೊದಲನೆಯದ್ದೂ ಆಗಿತ್ತು. ಬಡ ಕುಟುಂಬದ ಪ್ರತಿ ಸದಸ್ಯರಿಗೆ ಈ ಯೋಜನೆಯಡಿ ತಲಾ 5 ಕೆಜಿ ಅಕ್ಕಿ ನೀಡಲಾಗುತ್ತದೆ.
2) ಅಕ್ಕಿ ಒದಗಿಸಲು ಕೇಂದ್ರದ ಸಬೂಬು: ಈ ಯೋಜನೆಯಡಿ ಕರ್ನಾಟಕಕ್ಕೆ ರಿಯಾಯ್ತಿ ದರದಲ್ಲಿ ಅಕ್ಕಿ ಒದಗಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರವು ನಿರಾಕರಿಸಿತ್ತು. ನಂತರದ ದಿನಗಳಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನಡುವೆ ಆರೋಪ-ಪ್ರತ್ಯಾರೋಪ, ಹಲವು ಸ್ಪಷ್ಟನೆಗಳಿಗೂ ಈ ಬೆಳವಣಿಗೆ ಕಾರಣವಾಗಿತ್ತು.
3) ಇದೀಗ ಕೇಂದ್ರದ ಸಮ್ಮತಿ: ಕರ್ನಾಟಕ ಸರ್ಕಾರಕ್ಕೆ ರಿಯಾಯಿತಿ ದರದಲ್ಲಿ ಅಕ್ಕಿ ಒದಗಿಸಲು ಕೇಂದ್ರ ಸರ್ಕಾರ ಇದೀಗ ಸಮ್ಮತಿಸಿದೆ. ಆದರೆ ಇದು ಮುಕ್ತ ಮಾರಾಟ ಯೋಜನೆಯ ಅಡಿಯಲ್ಲಿ ಎಂದೂ ಸಹ ಕೇಂದ್ರ ಸರ್ಕಾರವು ತಿಳಿಸಿದೆ. ಕಳೆದ ವಾರ ದೆಹಲಿಯಲ್ಲಿ ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಅವರು ಅಧಿಕಾರಿಗಳೊಂದಿಗೆ ಚರ್ಚಿಸಿದ ನಂತರ ಈ ಸಮಸ್ಯೆಗೆ ಪರಿಹಾರ ಸಿಕ್ಕಿದೆ.
4) ಕರ್ನಾಟಕಕ್ಕೆ ಬೇಕು 2.36 ಲಕ್ಷ ಟನ್ ಅಕ್ಕಿ: ರಿಯಾಯ್ತಿ ದರದಲ್ಲಿ ಅಕ್ಕಿ ನೀಡಲು ಕರ್ನಾಟಕ ಸರ್ಕಾರಕ್ಕೆ 2.36 ಲಕ್ಷ ಟನ್ ಅಕ್ಕಿ ಅಗತ್ಯವಿದೆ. ಕೇಂದ್ರದ ಬಳಿ ಅಗತ್ಯ ಪ್ರಮಾಣದ ಅಕ್ಕಿ ಸಂಗ್ರಹವಿದೆ. ಇದನ್ನು ರಾಜ್ಯ ಸರ್ಕಾರಕ್ಕೆ ಒದಗಿಸಲು ಸಿದ್ಧ ಎಂದು ಕೇಂದ್ರ ಇದೀಗ ಹೇಳಿದೆ.
5) ಕೇಂದ್ರದಿಂದ ಅಕ್ಕಿ ದರ ಇಳಿಕೆ: ಮೊದಲು ಕರ್ನಾಟಕಕ್ಕೆ ಅಕ್ಕಿ ಪೂರೈಕೆ ವಿಚಾರದಲ್ಲಿ ಕೇಂದ್ರ-ಕರ್ನಾಟಕ ಸರ್ಕಾರಗಳ ನಡುವೆ ಸಹಮತ, ಸಹಯೋಗ ಇರಲಿಲ್ಲ. ಆದರೆ ಇದೀಗ ಅಕ್ಕಿ ಸಂಗ್ರಹ ಸಾಕಷ್ಟು ಪ್ರಮಾಣ ಇರುವುದರಿಂದ ಕರ್ನಾಟಕಕ್ಕೆ ಅಗತ್ಯ ಪ್ರಮಾಣದ ಅಕ್ಕಿ ಒದಗಿಸಲು ಸಿದ್ಧ ಎಂದು ಭಾರತ ಸರ್ಕಾರ ಹೇಳಿದೆ. ಇತರ ರಾಜ್ಯಗಳ ಹಲವು ಯೋಜನೆಗಳಿಗೆ ನಾವು ಈಗ ಅಕ್ಕಿ ಪೂರೈಸುತ್ತಿದ್ದೇವೆ. ಅಕ್ಕಿ ಬೆಲೆಯನ್ನು ರೂ 29 ರಿಂದ ರೂ 28 ಕ್ಕೆ ಇಳಿಸಲಾಗಿದೆ ಎಂದು ಕೇಂದ್ರ ಆಹಾರ ಸಚಿವ ಪ್ರಹ್ಲಾದ ಜೋಶಿ ತಿಳಿಸಿದ್ದಾರೆ.
6) ಕೇಂದ್ರದ ಪ್ರಸ್ತಾವಕ್ಕೆ ಕರ್ನಾಟಕ ಒಪ್ಪುವ ಸಾಧ್ಯತೆ ಕಡಿಮೆ: ಕೇಂದ್ರದ ಈ ಹೊಸ ಆಹ್ವಾನವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಒಪ್ಪಿಕೊಳ್ಳುವ ಸಾಧ್ಯತೆಗಳು ಕಡಿಮೆ ಎನ್ನಲಾಗುತ್ತಿದೆ. ಭಾರತೀಯ ಆಹಾರ ನಿಗಮದಲ್ಲಿರುವ ಅಕ್ಕಿಯನ್ನು ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ ಅಡಿಯಲ್ಲಿ ಖರೀದಿಸಲು ಕೇಂದ್ರ ಸರ್ಕಾರ ಈಗ ಅವಕಾಶ ನೀಡಿದೆ. ಆದರೆ ಬಫರ್ ಸ್ಟಾಕ್ (ಹೆಚ್ಚುವರಿ ದಾಸ್ತಾನು) ಇರುವವರೆಗೆ ಮಾತ್ರ ಅಕ್ಕಿ ಸರಬರಾಜು ಆಗಲಿದೆ. ದಾಸ್ತಾನು ಮುಗಿದ ನಂತರ ರಾಜ್ಯ ಸರ್ಕಾರ ಏನು ಮಾಡಬೇಕು ಎಂದು ಪ್ರಶ್ನಿಸಿರುವ ಸಚಿವ ಮುನಿಯಪ್ಪ, ಈ ಆಹ್ವಾನವನ್ನು ರಾಜ್ಯ ಸರಕಾರ ಒಪ್ಪಿಕೊಳ್ಳುವ ಸಾಧ್ಯತೆಗಳು ಕಡಿಮೆ ಎಂದು ಹೇಳಿದ್ದಾರೆ.
7) ಬೇಡಿಕೆ ಸಲ್ಲಿಸದ ಕರ್ನಾಟಕ ಸರ್ಕಾರ: ಕರ್ನಾಟಕಕ್ಕೆ 2.36 ಲಕ್ಷ ಟನ್ ಅಕ್ಕಿ ಕೊಡಲು ಸಿದ್ಧ ಎಂದು ಆಗಸ್ಟ್ 2ರಂದು ಕರ್ನಾಟಕ ಸರ್ಕಾರಕ್ಕೆ ತಿಳಿಸಲಾಗಿದೆ. ಆದರೆ ಅಕ್ಕಿ ನೀಡುವ ತೀರ್ಮಾನವನ್ನು ಕೇಂದ್ರ ಕೈಗೊಂಡ ನಂತರ ರಾಜ್ಯ ಸರ್ಕಾರವು ಅಕ್ಕಿಗೆ ಬೇಡಿಕೆ ಇಟ್ಟಿಲ್ಲ ಎಂದು ಉಗ್ರಾಣ ನಿಗಮದ ಬೆಂಗಳೂರು ಪ್ರಾದೇಶಿಕ ಕಚೇರಿಯ ಜನರಲ್ ಮ್ಯಾನೇಜರ್ ಮಹೇಶ್ವರಪ್ಪ ತಿಳಿಸಿದ್ದಾರೆ.
8) ಫಲಾನುಭವಿಗಳ ಸಂಖ್ಯೆಯಲ್ಲಿ ಗೊಂದಲ: ಅನ್ನಭಾಗ್ಯ ಯೋಜನೆಗೆ ಕರ್ನಾಟಕ ಸರ್ಕಾರ 1.19 ಕೋಟಿ ಬಿಪಿಎಲ್ ಕಾರ್ಡ್‌ದಾರರನ್ನು ಗುರುತಿಸಿದೆ. ಆದರೆ ಕೇಂದ್ರ ಸರ್ಕಾರ 96.19 ಲಕ್ಷ ಬಿಪಿಎಲ್ ಕಾರ್ಡ್‌ದಾರರು ಮಾತ್ರ ಇದ್ದಾರೆ ಎಂದು ಹೇಳುತ್ತಿದೆ. ಈ ಲೆಕ್ಕದಲ್ಲಿ 10.36 ಲಕ್ಷ ಬಿಪಿಎಲ್ ಕಾರ್ಡ್‌ದಾರರ ಬಗ್ಗೆ ಕೇಂದ್ರ-ರಾಜ್ಯ ಸರ್ಕಾರಗಳ ನಡುವೆ ಗೊಂದಲ ಮುಂದುವರಿದಿದೆ. ಕರ್ನಾಟಕ ಸರ್ಕಾರವು ಅನ್ನಭಾಗ್ಯ ಯೋಜನೆಗೆ 4.42 ಕೋಟಿ ವೈಯಕ್ತಿಕ ಫಲಾನುಭವಿಗಳನ್ನು ಗುರುತಿಸಿದೆ. ಇದು ಕೇಂದ್ರ ಗುರುತಿಸಿರುವ ಫಲಾನುಭವಿಗಳ ಸಂಖ್ಯೆಗಿಂತಲೂ 39 ಲಕ್ಷದಷ್ಟು ಹೆಚ್ಚು.
9) ತಿಂಗಳಿಗೆ 890 ಕೋಟಿ ವೆಚ್ಚ: ಈ ಯೋಜನೆಗೆ ಕರ್ನಾಟಕ ಸರ್ಕಾರವು ತಿಂಗಳಿಗೆ ರೂ 890 ಕೋಟಿಯಂತೆ ವರ್ಷಕ್ಕೆ ರೂ 10,092 ಕೋಟಿ ವೆಚ್ಚ ಮಾಡುತ್ತಿದೆ. ಇದೀಗ 5 ಕೆಜಿ ಅಕ್ಕಿಗೆ ಬದಲಾಗಿ ಸರ್ಕಾರ ಪ್ರತಿ ಫಲಾನುಭವಿಗೆ ಮಾಸಿಕ ರೂ 170 ರೂಪಾಯಿ ಹಣವನ್ನು ನೇರವಾಗಿ ವರ್ಗಾಯಿಸುತ್ತಿದೆ. ಫಲಾನುಭವಿಗಳ ಖಾತೆಗೆ ನೇರವಾಗಿ ಹಣವನ್ನು ವರ್ಗಾವಣೆ ಮಾಡುತ್ತಿರುವುದರಿಂದ ಭ್ರಷ್ಟಾಚಾರಕ್ಕೆ ಆಸ್ಪದವಿಲ್ಲ. ಕಾಳಸಂತೆಯಲ್ಲಿ ಅಕ್ಕಿ ಮಾರಾಟವಾಗುತ್ತಿಲ್ಲ. ಜೊತೆಗೆ ಪ್ರತಿ ಕೆಜಿಗೆ 2.30 ರೂ ಸಾಗಾಣಿಕೆ ವೆಚ್ಚ ಉಳಿತಾಯವಾಗುತ್ತದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಒಟ್ಟಾರೆ ರಾಜ್ಯ ಸರ್ಕಾರವು ಹೆಚ್ಚುವರಿಯಾಗಿ ಅಕ್ಕಿ ಖರೀದಿಸಿ ವಿತರಿಸುವುದಕ್ಕಿಂತಲೂ ಫಲಾನುಭವಿಗಳ ಖಾತೆಗೆ ಹಣ ವರ್ಗಾಯಿಸುವುದೇ ಒಳ್ಳೆಯದು ಎನ್ನುವ ನಿಲುವಿಗೆ ಬಂದಂತೆ ಇದೆ.
10) ಅಕ್ಕಿಯೇ ಬೇಕು ಎನ್ನುತ್ತಿರುವ ಫಲಾನುಭವಿಗಳು: ಬ್ಯಾಂಕ್ ಖಾತೆಗೆ ಹಣ ಹಾಕುವುದಕ್ಕಿಂತಲೂ ನಿಗದಿತ ಪ್ರಮಾಣದ ಅಕ್ಕಿ ಕೊಡುವುದೇ ನಮಗೆ ಒಳ್ಳೆಯದು ಎಂದು ಫಲಾನುಭವಿಗಳು ಅಭಿಪ್ರಾಯಪಡುತ್ತಿದ್ದಾರೆ. ಕೇಂದ್ರದಿಂದ ಅಕ್ಕಿ ಖರೀದಿಸುವ ಬಗ್ಗೆ ರಾಜ್ಯ ಸರ್ಕಾರ ಈವರೆಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಮುಂದಿನ ದಿನಗಳಲ್ಲಿ ಈ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಬಹುದು ಎನ್ನುವ ಮಾತುಗಳು ಕೇಳಿಬರುತ್ತಿದೆ.