ಕನ್ನಡ ಸುದ್ದಿ  /  Karnataka  /  Anti Conversion Law Gets Approval From Karnataka Vidhana Parishad Bjp Welcomes The Move

Anti Conversion Law: ಪರಿಷತ್‌ನಲ್ಲಿ ಮತಾಂತರ ನಿಷೇಧ ಕಾಯ್ದೆ ಅಂಗೀಕಾರ: ಬಿಜೆಪಿ ಹ್ಯಾಪಿ ಹ್ಯಾಪಿ..!

ಪ್ರತಿಪಕ್ಷಗಳ ತೀವ್ರ ಗದ್ದಲದ ನಡುವೆಯೂ ಕರ್ನಾಟಕ ಧಾರ್ಮಿಕ ಹಕ್ಕು ಸಂರಕ್ಷಣಾ ವಿಧೇಯಕ-2021ಕ್ಕೆ ವಿಧಾನ ಪರಿಷತ್‌ನಲ್ಲಿ ಅಂಗೀಕಾರ ದೊರೆತಿದೆ. ಈ ಬೆಳವಣಿಗೆಯನ್ನು ರಾಜ್ಯ ಬಿಜೆಪಿ ಘಟಕ ಸ್ವಾಗತಿಸಿದೆ. ಈ ಕುರಿತು ಸರಣಿ ಟ್ವೀಟ್‌ ಮಾಡಿರುವ ರಾಜ್ಯ ಬಿಜೆಪಿ ಘಟಕ, ಮತಾಂತರ ಪಿಡುಗು ತೊಲಗಿಸುವ ನಮ್ಮ ವಾಗ್ದಾನ ಈಡೇರಿದೆ ಎಂದು ಸಂತಸ ವ್ಯಕ್ತಪಡಿಸಿದೆ.

ಪರಿಷತ್‌ನಲ್ಲಿ ಮಾತನಾಡಿದ ಬೊಮ್ಮಾಯಿ
ಪರಿಷತ್‌ನಲ್ಲಿ ಮಾತನಾಡಿದ ಬೊಮ್ಮಾಯಿ (Verified Twitter)

ಬೆಂಗಳೂರು: ಪ್ರತಿಪಕ್ಷಗಳ ತೀವ್ರ ಗದ್ದಲದ ನಡುವೆಯೂ ಕರ್ನಾಟಕ ಧಾರ್ಮಿಕ ಹಕ್ಕು ಸಂರಕ್ಷಣಾ ವಿಧೇಯಕ-2021ಕ್ಕೆ ವಿಧಾನ ಪರಿಷತ್‌ನಲ್ಲಿ ಅಂಗೀಕಾರ ದೊರೆತಿದೆ. ಈ ಬೆಳವಣಿಗೆಯನ್ನು ರಾಜ್ಯ ಬಿಜೆಪಿ ಘಟಕ ಸ್ವಾಗತಿಸಿದೆ.

ಈ ಕುರಿತು ಸರಣಿ ಟ್ವೀಟ್‌ ಮಾಡಿರುವ ರಾಜ್ಯ ಬಿಜೆಪಿ ಘಟಕ, ಮತಾಂತರ ಪಿಡುಗು ತೊಲಗಿಸುವ ನಮ್ಮ ವಾಗ್ದಾನ ಈಡೇರಿದೆ ಎಂದು ಸಂತಸ ವ್ಯಕ್ತಪಡಿಸಿದೆ.

ರಾಜ್ಯದಲ್ಲಿ ಹೆಚ್ಚುತ್ತಿರುವ ಮತಾಂತರ ಪಿಡುಗಿಗೆ ಕಡಿವಾಣ ಹಾಕುವುದಾಗಿ ಬಿಜೆಪಿ ಜನರಿಗೆ ಆಶ್ವಾಸನೆ ನೀಡಿತ್ತು. ಇದೀಗ ವಿಧಾನಸಭೆ ಮತ್ತು ವಿಧಾನ ಪರಿಷತ್‌ ಎರಡರಲ್ಲಿಯೂ, ವಿಧೇಯಕಕ್ಕೆ ಅನುಮೋದನೆ ಪಡೆಯಲಾಗಿದೆ. ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಯಾಗಿದ್ದು, ಈ ಮೂಲಕ ಕೊಟ್ಟ ಮಾತನ್ನು ನಾವು ಉಳಿಸಿಕೊಂಡಿದ್ದೇವೆ ಎಂದು ಬಿಜೆಪಿ ಹೇಳಿದೆ.

ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಯಾಗುವಿಕೆ ಸಹಕಾರಿಯಾಗಲಿದೆ. ಈ ಮೂಲಕ ಧರ್ಮ-ಧರ್ಮಗಳ ನಡುವಿನ ದ್ವೇಷ, ಅಸೂಯೆಗಳು ಕಡಿಮೆ ಆಗಲಿದ್ದು, ಸ್ವಸ್ಥ ಸಮಾಜ ನಿರ್ಮಾಣ ಮಾಡುವತ್ತ ನಾವು ದಾಪುಗಾಲಿಟ್ಟಿದ್ದೇವೆ ಎಂದು ಬಿಜೆಪಿ ಟ್ವೀಟ್‌ ಮಾಡಿದೆ.

ಮತಾಂತರ ನಿಷೇಧ ಕಾಯ್ದೆ ಜಾರಿಯಾಗುವುದರಿಂದ ಅಮಾಯಕ ಕುಟುಂಬಗಳ ಬಲಿಯಾಗುವಿಕೆಗೆ ತಿಲಾಂಜಲಿ ಬೀಳಲಿದೆ. ಅಮಾಯಕ ಹೆಣ್ಣು‌ಮಕ್ಕಳ ಬದುಕಿನಲ್ಲಿ ಚೆಲ್ಲಾಟ ಆಡುವಿಕೆಗೆ ಮುಕ್ತಿ ದೊರಕಲಿದ್ದು ಈ ನಿಮಿತ್ತದ ಕೌಟುಂಬಿಕ ಕಲಹಗಳು ಅಂತ್ಯ ಕಾಣಲಿವೆ. ರಾಜ್ಯದಲ್ಲಿ ನೆಮ್ಮದಿಯ ಜನಜೀವನಕ್ಕೆ ನಮ್ಮ ಸರ್ಕಾರ ಮುನ್ನುಡಿ ಬರೆದಿದೆ ಎಂದು ರಾಜ್ಯ ಬಿಜೆಪಿ ಘಟಕ ಹೇಳಿದೆ.

ವಿಧೇಯಕದ ಕುರಿತು ನಿನ್ನೆ(ಸೆ.15-ಗುರುವಾರ) ವಿಧಾನ ಪರಿಷತ್‌ನಲ್ಲಿ ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷಗಳಾದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಡುವೆ ತೀವ್ರ ವಾಕ್ಸಮರವೇ ನಡೆಯಿತು. ವಿಧೇಯಕವನ್ನು ತೀವ್ರವಾಗಿ ವಿರೋಧಿಸಿದ ಪರಿಷತ್‌ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್‌, ನಿಮ್ಮ ಬಳಿ ಬಹುಮತ ಇರುವುದರಿಂದ ವಿಧೇಯಕ ಪಾಸ್‌ ಮಾಡಿದರೂ ಸುಪ್ರೀಂಕೋರ್ಟ್‌ ಇದನ್ನು ಒಪ್ಪಿಕೊಳ್ಳುವುದಿಲ್ಲ ಎಂದರು.

ಸಂವಿಧಾನ ಆಶಯಗಳಿಗೆ ತಿದ್ದುಪಡಿ ತರಲು ಅವಕಾಶವಿಲ್ಲವೆಂದು ಪ್ರತಿಪಾದಿಸಿದ ಬಿ.ಕೆ. ಹರಿಪ್ರಸಾದ್‌, ರಾಜಕೀಯ ಲಾಭಕ್ಕಾಗಿ ಸಮಾಜದ ಸ್ವಾಸ್ಥ್ಯ ಕದಡುವುದು ಸರಿಯಲ್ಲ ಎಂದು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಈ ವಿಧೇಯಕ ಸಂವಿಧಾನದ ಆಶಯಕ್ಕೆ ಧಕ್ಕೆ ತರುವಂತಹ ಅಂಶಗಳಿಂದ ಕೂಡಿಲ್ಲ ಎಂದು ಸ್ಪಷ್ಟಪಡಿಸಿದರು.

ದಲಿತರು ಮತ್ತಷ್ಟು ಗೌರವದಿಂದ ಬದಕು ನಡೆಸಲು ಈ ಕಾಯ್ದೆ ಸಹಕಾರಿಯಾಗಿದೆ. ಅಂಬೇಡ್ಕರ್‌ ಹೇಳಿದಂತೆ ಅಸಮಾನತೆ, ಮೂಢನಂಬಿಕೆ, ಅನಿಷ್ಠ ತೆಗೆದು ಹಾಕಬೇಕಿದ್ದರೆ, ಈ ಕಾಯ್ದೆಯನ್ನು ಜಾರಿ ಮಾಡುವುದು ಅನಿವಾರ್ಯವಾಗಿದೆ ಎಂದು ಸಿಎಂ ಬೊಮ್ಮಾಯಿ ಅಭಿಪ್ರಾಯಪಟ್ಟರು. ನಾನು ಲೋಹಿಯಾವಾದ ಮತ್ತು ಅಂಬೇಡ್ಕರ್‌ ವಾದವನ್ನು ನಂಬುತ್ತೇನೆ ಎಂದು ಸಿಎಂ ಹೇಳಿದರು.

ಕೊನೆಯಲ್ಲಿ ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೂ ಕರ್ನಾಟಕ ಧಾರ್ಮಿಕ ಹಕ್ಕು ಸಂರಕ್ಷಣಾ ವಿಧೇಯಕ-2021ಕ್ಕೆ, ವಿಧಾನ ಪರಿಷತ್‌ನಲ್ಲಿ ಅಂಗೀಕಾರ ಪಡೆಯಲು ರಾಜ್ಯ ಬಿಜೆಪಿ ಸರ್ಕಾರ ಸಫಲವಾಯಿತು.

ಬೆಳಗಾವಿ ಅಧಿವೇಶನದ ವೇಳೆ ರಾಜ್ಯ ಬಿಜೆಪಿ ಸರ್ಕಾರ ಕರ್ನಾಟಕ ಧಾರ್ಮಿಕ ಹಕ್ಕು ಸಂರಕ್ಷಣಾ ವಿಧೇಯಕ-2021ನ್ನು ವಿಧಾನಸಭೆಯಲ್ಲಿ ಮಂಡಿಸಿ ಅಂಗೀಕಾರ ಪಡೆದುಕೊಂಡಿತ್ತು. ಆಗ ವಿಧಾನ ಪರಿಷತ್‌ನಲ್ಲಿ ಬಿಜೆಪಿಗೆ ಬಹುಮತ ಇರದ ಕಾರಣಕ್ಕೆ, ವಿಧೇಯಕವನ್ನು ಪರಿಷತ್‌ನಲ್ಲಿ ಮಂಡಿಸಿರಲಿಲ್ಲ.

ಈಗ ಪರಿಷತ್‌ನಲ್ಲೂ ಬಿಜೆಪಿಗೆ ಅಗತ್ಯ ಬಹುಮತ ಇರುವ ಕಾರಣ ಕರ್ನಾಟಕ ಧಾರ್ಮಿಕ ಹಕ್ಕು ಸಂರಕ್ಷಣಾ ವಿಧೇಯಕ-2021ನ್ನು ಪರಿಷತ್‌ನಲ್ಲಿ ಮಂಡಿಸಿ ಅಂಗೀಕಾರ ಪಡೆದುಕೊಂಡಿದೆ. ಬೆಳಗಾವಿ ಅಧಿವೇಶನದಲ್ಲೇ ಮತಾಂತರ ನಿಷೇಧ ವಿಧೇಯಕಕ್ಕೆ ವಿಧಾನಸಭೆ ಅಂಗೀಕಾರ ನೀಡಿದ್ದರೂ, ನಿಯಮದ ಪ್ರಕಾರ ಮತ್ತೊಮ್ಮೆ ಈ ವಿಧೇಯಕವನ್ನು ಅಂಗೀಕಾರಕ್ಕಾಗಿ ವಿಧಾನಸಭೆಗೆ ತರಬೇಕಿದೆ ಎಂಬುದು ಗಮನಾರ್ಹ.

ಹೆಚ್ಚಿನ ಸುದ್ದಿಗಳಿಗೆ ನಮ್ಮನ್ನು ಫೇಸ್‌ಬುಕ್‌ ಮತ್ತು ಟ್ವಿಟರ್‌ ನಲ್ಲಿ ಫಾಲೋಮಾಡಿ.