Aquifer Mapping Workshop: ಜಲಧರಗಳ ನಕಾಶಿಕೆ ಮತ್ತು ನಿರ್ವಹಣೆ ಕಾರ್ಯಾಗಾರ; ಪ್ರಾತ್ಯಕ್ಷಿಕೆ, ಅಂತರ್ಜಲ ಸಮಸ್ಯೆ ಕುರಿತು ಚರ್ಚೆ
ನಗರದಲ್ಲಿಂದು ನಡೆದ ಕಾರ್ಯಾಗಾರದಲ್ಲಿ 'ಜಲಧರಗಳ ನಕಾಶಿಕೆ ಮತ್ತು ನಿರ್ವಹಣೆ'ಯ ವಿವಿಧ ಅಧ್ಯಯನಗಳು, ಸಂಶೋಧನೆಗಳು, ಅಂತರ್ಜಲಕ್ಕೆ ಸಂಬಂಧಿಸಿದ ಸಮಸ್ಯೆಗಳು ಹಾಗೂ ಸಮುದಾಯಗಳ ಭಾಗವಹಿಸುವಿಕೆಯ ಇತರ ವಿಷಯಗಳ ಕುರಿತು ಚರ್ಚಿಸಲಾಯಿತು.
ಬೆಂಗಳೂರು: ಜಲಧರಗಳ ನಕಾಶಿಕೆ ಮತ್ತು ನಿರ್ವಹಣೆ (National Aquifer Mapping and Management - NAQUIM) ಕುರಿತು ಒಂದು ದಿನದ ಪ್ರಾದೇಶಿಕ ಕಾರ್ಯಾಗಾರ ನಗರದ ಖಾಸಗಿ ಹೋಟೆಲ್ ನಲ್ಲಿಂದು ನಡೆಯಿತು.
ಕೇಂದ್ರೀಯ ಅಂತರ್ಜಲ ಮಂಡಳಿ, ನೈರುತ್ಯ ಪ್ರದೇಶ ಬೆಂಗಳೂರು, ನದಿ ಅಭಿವೃದ್ಧಿ ಮತ್ತು ಗಂಗಾ ಪುನಶ್ಚೇತನ ಇಲಾಖೆ, ಕೇಂದ್ರದ ಜಲಶಕ್ತಿ ಮಂತ್ರಾಲಯದ ಸಹಯೋಗದಲ್ಲಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.
ದಕ್ಷಿಣ ರಾಜ್ಯಗಳಲ್ಲಿ ನೆಲಗೊಂಡಿರುವ ಕೇಂದ್ರೀಯ ಅಂತರ್ಜಲ ಮಂಡಳಿಯ ಪ್ರಾದೇಶಿಕ ಕಚೇರಿಗಳು ಸಿದ್ದಪಡಿಸಿದ 'ಜಲಧರಗಳ ನಕಾಶಿಕೆ ಮತ್ತು ನಿರ್ವಹಣೆ'ಯ ವಿವಿಧ ಅಧ್ಯಯನಗಳು, ಸಂಶೋಧನೆಗಳು, ಅಂತರ್ಜಲಕ್ಕೆ ಸಂಬಂಧಿಸಿದ ಸಮಸ್ಯೆಗಳು ಹಾಗೂ ಸಮುದಾಯಗಳ ಭಾಗವಹಿಸುವಿಕೆಯ ಇತರ ವಿಷಯಗಳ ಕುರಿತು ಚರ್ಚಿಸಲಾಯಿತು.
ಇತರೆ ರಾಜ್ಯಗಳಾದ ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ, ಗೋವಾ, ತಮಿಳುನಾಡು, ಕೇರಳ ಹಾಗೂ ಕೇಂದ್ರಾಡಳಿತ ಪ್ರದೇಶಗಳಾದ ಲಕ್ಷದ್ವೀಪ ಮತ್ತು ಪುದುಚೇರಿಯ ಪ್ರತಿನಿಧಿಗಳು ಭಾಗವಹಿಸಿ ತಮ್ಮ ರಾಜ್ಯಗಳಲ್ಲಿನ ಅಂತರ್ಜಲ ನಿರ್ವಹಣೆ, ಸಂರಕ್ಷಣೆ ಹಾಗೂ ಬಳಕೆಯ ಕುರಿತಂತೆ ಪ್ರಾತ್ಯಕ್ಷತೆ ಹಾಗೂ ಉಪನ್ಯಾಸ ನೀಡಿದರು.
ಜನರಿಗೆ ಅರಿವು ಮೂಡಿಸಿ ಫಲಾನುಭವಿಗಳನ್ನಾಗಿಸುವ ಉದ್ದೇಶ
ಜಲಸಂಪನ್ಮೂಲ ಇಲಾಖೆಯೊಂದೇ ಅಲ್ಲದೆ ಕೃಷಿ, ಸಣ್ಣ ನೀರಾವರಿ, ತೋಟಗಾರಿಕೆ ಹೀಗೆ ಇತರ ಇಲಾಖೆಯ ಸಮನ್ವಯದೊಂದಿಗೆ ಜಲಮೂಲಗಳ ರಕ್ಷಣೆ ಕೆಲಸ ನಡೆಯಬೇಕಿದೆ. ಗ್ರಾಮಮಟ್ಟದಲ್ಲಿ ಅರಿವು ಕಾರ್ಯಕ್ರಮದ ಜೊತೆಗೆ ಸಮುದಾಯಗಳ ಭಾಗವಹಿಸುವಿಕೆ ಒತ್ತು ಕೊಡಬೇಕು. ಅಲ್ಲದೆ ಸರ್ಕಾರದ ಯೋಜನೆಗಳ ಬಗೆಗೆ ಜನರಿಗೆ ಅರಿವು ಮೂಡಿಸಿ ಅವರನ್ನು ಫಲಾನುಭವಿಗಳನ್ನಾಗಿ ಮಾಡುವುದು ಸಹ ಮುಖ್ಯ ಎಂದು ಈ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದವರು ಅಭಿಪ್ರಾಯಪಟ್ಟರು.
NAQUIM ಅಧ್ಯಯನಗಳ ಸಂಶೋಧನೆಗಳನ್ನು ಪ್ರಸಾರ ಮಾಡುವುದಕ್ಕೆ ಹಾಗೂ ಅಧ್ಯಯನಗಳ ಭವಿಷ್ಯ ಯೋಜನೆ ರೂಪಿಸುವವರ ಸಲುವಾಗಿ 'ಅಂತರ್ಜಲ ದೃಷ್ಟಿ- 2047'ಅನ್ನು ರೂಪಿಸುವುದು ಸಹ ಈ ಕಾರ್ಯಾಗಾರದ ಉದ್ದೇಶವಾಗಿತ್ತು.
ಕಾರ್ಯಾಗಾರವನ್ನು ಜಲಸಂಪನ್ಮೂಲ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಾದ ರಾಕೇಶ್ ಸಿಂಗ್ ಉದ್ಘಾಟಿಸಿದರು. ಕೇಂದ್ರ ಅಂತರ್ಜಲ ಮಂಡಳಿ, ಜಲಶಕ್ತಿ ಸಚಿವಾಲಯದ ಅಧ್ಯಕ್ಷರಾದ ಸುನಿಲ್ ಕುಮಾರ್, ಕೇಂದ್ರ ಜಲಶಕ್ತಿ ಸಚಿವಾಲಯದ ಜಂಟಿ ಕಾರ್ಯದರ್ಶಿಗಳಾದ ಸುಬೋದ್ ಯಾದವ್, ಸಣ್ಣ ನೀರಾವರಿ ಇಲಾಖೆಯ ಕಾರ್ಯದರ್ಶಿಗಳಾದ ಮೃತ್ಯುಂಜಯ ಸ್ವಾಮಿ ಹಾಗೂ ಪ್ರಾದೇಶಿಕ ನಿರ್ದೇಶಕರು ಹಾಗೂ ಸಂಘಟಕ ಕಾರ್ಯದರ್ಶಿ ಕೇಂದ್ರಿಯ ಅಂತರ್ಜಲ ಮಂಡಳಿ, ಜಲಶಕ್ತಿ ಮಂತ್ರಾಲಯ ನೈರುತ್ಯ ಕ್ಷೇತ್ರ ಜ್ಯೋತಿ ಕುಮಾರ್ ಸೇರಿದಂತೆ ಇತರರು ಕಾರ್ಯಾಗಾರದಲ್ಲಿ ಉಪಸ್ಥಿತರಿದ್ದರು.