Exclusive: ಅಡಿಕೆ ಕ್ಯಾನ್ಸರ್‌ಕಾರಕ ಎಂದ ವಿಶ್ವಸಂಸ್ಥೆ ವರದಿ; ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಮಹೇಶ್ ಪುಚ್ಚಪ್ಪಾಡಿ ಸಂದರ್ಶನ
Mahesh Puchchappady Interview: ಅಡಿಕೆ ಕ್ಯಾನ್ಸರ್‌ಕಾರಕ ಎನ್ನುವ ವಿಶ್ವ ಆರೋಗ್ಯ ಸಂಸ್ಥೆಯ ವರದಿಯನ್ನು ಎದುರಿಸುವುದು ಹೇಗೆ? ಅಡಿಕೆ ಬೆಳೆಗಾರರನ್ನು ಕಾಡುತ್ತಿರುವ ಇಂಥ ಹಲವು ಪ್ರಶ್ನೆಗಳ ಬಗ್ಗೆ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಮಹೇಶ್ ಪುಚ್ಚಪ್ಪಾಡಿ ‘ಎಚ್‌ಟಿ ಕನ್ನಡ’ಕ್ಕೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಪ್ರತಿಕ್ರಿಯಿಸಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆಯ ಅಂಗ ಸಂಸ್ಥೆಯಾಗಿರುವ ಇಂಟರ್ ನ್ಯಾಷನಲ್ ಏಜೆನ್ಸಿ ಫಾರ್ ರಿಸರ್ಚ್ ಆನ್ ಕ್ಯಾನ್ಸರ್ (IARC) ಅಧ್ಯಯನ ವರದಿಯು ಅಡಿಕೆ (Adike) ಕ್ಯಾನ್ಸರ್‌ಕಾರಕ ಎಂದು ಹೇಳಿರುವುದು ಸದ್ಯ ಚರ್ಚೆಯಲ್ಲಿದೆ. ಈ ವಿದ್ಯಮಾನವು ಅಡಿಕೆ ಬೆಳೆಗಾರರಲ್ಲಿ ಆತಂಕ ಮೂಡಿಸಿದ್ದು, ಗೊಂದಲದಲ್ಲಿದ್ದಾರೆ. ತುಮ್ಕೋಸ್, ಮಾಮ್ಕೋಸ್, ಕ್ಯಾಂಪ್ಕೋ ಮುಂತಾದ ಸಂಸ್ಥೆಗಳು ತಮ್ಮದೇ ನೆಲೆಯಲ್ಲಿ ಅಡಿಕೆ ಕ್ಯಾನ್ಸರ್ ಕಾರಕ ಅಲ್ಲ ಎಂಬುದನ್ನು ನಿರೂಪಿಸುವ ಪ್ರಯತ್ನಗಳನ್ನು ನಡೆಸಿವೆ. ಈ ನಡುವೆ, ಸಾಂಪ್ರದಾಯಿಕವಾಗಿ ಅಡಿಕೆ ಬೆಳೆಯುವ ಪ್ರದೇಶ ಪುತ್ತೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘವೂ ತನ್ನದೇ ಆದ ರೀತಿಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ವರದಿಯನ್ನು ಎದುರಿಸುವ ಪ್ರಯತ್ನ ಮಾಡಿದೆ. ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಮಹೇಶ್ ಪುಚ್ಚಪ್ಪಾಡಿ ಅವರು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ದ ಜತೆಗೆ ಈ ವಿವರಗಳನ್ನು ಹಂಚಿಕೊಂಡರು. ಇಲ್ಲಿಂದಾಚೆಗೆ ಇರುವುದು ಅವರದೇ ಮಾತು.
ಗೊಂದಲಗಳಿಂದ ಕೂಡಿದೆ ಐಎಆರ್‌ಸಿ ಅಧ್ಯಯನ ವರದಿ
ಇಂಟರ್ ನ್ಯಾಶನಲ್ ಏಜೆನ್ಸಿ ಫಾರ್ ರಿಸರ್ಚ್ ಆನ್ ಕ್ಯಾನ್ಸರ್ (ಐಎಆರ್‌ಸಿ) ಬಾಯಿ ಕ್ಯಾನ್ಸರ್ ಕುರಿತು ಪ್ರಕಟಿಸಿದ ಅಧ್ಯಯನ ವರದಿಯಲ್ಲಿ ಸ್ಪಷ್ಟತೆ ಇಲ್ಲ. ಅಕ್ಟೋಬರ್ ತಿಂಗಳಲ್ಲಿ ಮೂರು ಪುಟಗಳ ಪತ್ರಿಕಾ ಹೇಳಿಕೆಯನ್ನು ಅದು ‘ದ ಲ್ಯಾನ್ಸೆಟ್ ಆಂಕಾಲಜಿ ಜರ್ನಲ್’ನಲ್ಲಿ ಪ್ರಕಟವಾದ ಅಧ್ಯಯನ ವರದಿಯನ್ನು ಆಧಾರವಾಗಿಟ್ಟುಕೊಂಡು ಪ್ರಕಟಿಸಿದೆ. 83,400 ಮಾದರಿಗಳನ್ನು ಪರಿಶೀಲಿಸಿದ್ದು, ಅದರಲ್ಲಿ ಶೇ 30 ಅಡಿಕೆಯಿಂದ ಬಂದ ಕ್ಯಾನ್ಸರ್ ಎಂದು ಉಲ್ಲೇಖಿಸಲಾಗಿದೆ. ಆದರೆ, ಅವರು ಅಧ್ಯಯನಕ್ಕೆ ಬಳಸಿದ ಮಾದರಿಗಳನ್ನು ಯಾವ ಪ್ರದೇಶದಿಂದ ಆಯ್ಕೆ ಮಾಡಿಕೊಂಡರು, ಯಾವ ರೀತಿ ಅಡಿಕೆ ಸೇವಿಸಿದರೆ ಕ್ಯಾನ್ಸರ್ ಬರುತ್ತದೆ ಎಂಬುದನ್ನು ಸ್ಪಷ್ಟಪಡಿಸಿಲ್ಲ. ವೀಳ್ಯದ ಎಲೆ ಅಡಿಕೆ ಸುಣ್ಣ ಸೇರಿಸಿ ತಿಂದರೆ ಸಮಸ್ಯೆ ಇಲ್ಲ ಎಂಬುದನ್ನು ಅಧ್ಯಯನ ವರದಿಗಳು ಈಗಾಗಲೇ ಸ್ಪಷ್ಟಪಡಿಸಿವೆ. ಈಗ ಏಕಾಏಕಿ ಅಡಿಕೆ ತಿಂದರೆ ಬಾಯಿ ಕ್ಯಾನ್ಸರ್ ಉಂಟಾಗುತ್ತದೆ ಎಂಬ ವಿಚಾರಕ್ಕೆ ಪ್ರಚಾರ ನೀಡಲಾಗುತ್ತಿದೆ. ಅಡಿಕೆಯು ವಾಣಿಜ್ಯ ಬೆಳೆಯಾಗಿದ್ದು, ದಶಕಗಳಿಂದ ಸಾಂಪ್ರದಾಯಿಕವಾಗಿ ಬೆಳೆಯುತ್ತ ಬಂದಿರುವ ಪ್ರದೇಶ ಬಿಟ್ಟು, ಅನ್ಯ ಪ್ರದೇಶಗಳ ಮಾದರಿಗಳನ್ನು ಸಂಗ್ರಹಿಸಿ, ಅದನ್ನೇ ಸಾರ್ವತ್ರಿಕವಾಗಿ ಅನ್ವಯಿಸುವುದು ಸರಿಯಾದ ಅಧ್ಯಯನ ಕ್ರಮವಲ್ಲ. ಭಾರತದಲ್ಲಿ ಸಾಂಪ್ರದಾಯಿಕವಾಗಿ ಅಡಿಕೆ ಬೆಳೆಯುವ ಪ್ರದೇಶಗಳ ಮಾದರಿಗಳನ್ನು ಐಎಆರ್‌ಸಿ ಅಧ್ಯಯನಕ್ಕೆ ಪರಿಗಣಿಸಬೇಕು.
ಅಡಿಕೆ ತಿಂದರೆ ಕ್ಯಾನ್ಸರ್ ಬರಲ್ಲ ಎಂದಿವೆ ಹಳೆಯ ಅಧ್ಯಯನ ವರದಿಗಳು
ಹಿರಿಯ ವಿಜ್ಞಾನಿ ಹಾಗೂ ಕ್ಯಾಂಪ್ಕೊದ ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನದ ಸಂಯೋಜಕ ಡಾ ಸರ್ಪಂಗಳ ಕೇಶವ ಭಟ್ ಅವರು ಹಲವು ವೈಜ್ಞಾನಿಕ ಸಂಶೋಧನೆಗಳನ್ನು ಉಲ್ಲೇಖಿಸಿ ತಾಂಬೂಲ ಜಗಿಯುವುದಷ್ಟೇ ಅಲ್ಲ ಅಡಿಕೆಯೂ ಹಾನಿಕಾರಕವಲ್ಲ ಎಂದು ಹೇಳಿದ್ದ ವರದಿ ಹಿಂದೂಸ್ತಾನ್ ಟೈಮ್ಸ್ ಕನ್ನಡದಲ್ಲೇ ಪ್ರಕಟವಾಗಿದೆ. ಅಡಿಕೆ ತಿಂದರೆ ಕ್ಯಾನ್ಸರ್ ಬರಲ್ಲ ಎಂಬುದನ್ನು ಈ ಹಿಂದಿನ ಹಲವು ವೈಜ್ಞಾನಿಕ ವರದಿಗಳು ದೃಢೀಕರಿಸಿವೆ. ಅಡಿಕೆ ಕ್ಯಾನ್ಸರ್‌ಕಾರಕ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದ ಕ್ರಮವನ್ನು ಗಮನಿಸಿ. ಕಳೆದ ಕೆಲವು ವರ್ಷಗಳ ಹಿಂದೆ, ಕ್ಯಾನ್ಸರ್ ಬರುವುದಕ್ಕೆ ಅಡಿಕೆ ತಿನ್ನುವುದೂ ಒಂದು ಕಾರಣವಾಗಿರಬಹುದು ಎಂದು ಮೊದಲ ವರದಿಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಹೇಳಿತ್ತು. ಅದಾಗಿ, ಬಂದ ವರದಿಯಲ್ಲಿ ಅಡಿಕೆ ತಿನ್ನುವುದರಿಂದ ಕ್ಯಾನ್ಸರ್ ಸಾಧ್ಯತೆ ಎಂದು ಪ್ರತಿಪಾದಿಸಿತು. ನಂತರ ಅಡಿಕೆ ತಿನ್ನುವುದು ಕೂಡ ಕ್ಯಾನ್ಸರ್‌ಗೆ ಒಂದು ಕಾರಣ ಎಂದು ಹೇಳಿತು. ಈಗ ಅಡಿಕೆ ತಿಂದರೆ ಕ್ಯಾನ್ಸರ್ ಬರುತ್ತದೆ ಎಂದು ನೇರವಾಗಿ ಹೇಳಿದೆ. ಒಂದು ವಿಷಯವನ್ನು ಜನರ ಮನಸ್ಸಿನಲ್ಲಿ ಕೂರಿಸುವ ಪ್ರಯತ್ನ ಹಲವು ಹಂತಗಳಲ್ಲಿ ನಡೆದಿರುವುದನ್ನು ನಾವು ಗಮನಿಸಬಹುದು.
ಅಡಿಕೆಗೆ ಬಣ್ಣಕ್ಕೆ ರೆಡ್ ಆಕ್ಸೈಡ್ ಬಳಕೆ; ಮಧ್ಯವರ್ತಿಗಳಿಂದ ದಾರಿ ತಪ್ಪಿಸುವ ಕೆಲಸ
ಅಡಿಕೆಗೆ ಬಣ್ಣ ಬರಬೇಕು ಎಂದು ಕೆಲವೆಡೆ ರೆಡ್ ಆಕ್ಸೈಡ್ ರಾಸಾಯನಿಕ ಬಳಕೆ ಮಾಡುತ್ತಿರುವ ದೂರುಗಳು ಕೇಳಿಬರುತ್ತಿವೆ. ಕೆಂಪಡಿಕೆ ಮಾಡುವ ಸಂಪ್ರದಾಯ ಹೆಚ್ಚು ಇರುವ ಪ್ರದೇಶಗಳಲ್ಲಿ ಈ ಹಿಂದೆ ಸಾಂಪ್ರದಾಯಿಕ ವಿಧಾನವನ್ನು ಅನುಸರಿಸಲಾಗುತ್ತಿತ್ತು. ಈ ನಡುವೆ ಬಣ್ಣ ಹೆಚ್ಚು ಬರಬೇಕು ಎಂಬ ಕಾರಣಕ್ಕೆ ಕೆಲವು ಮಧ್ಯವರ್ತಿಗಳು ರೆಡ್ ಆಕ್ಸೈಡ್ ಬೆರೆಸುವಂತೆ ಬೆಳೆಗಾರರಿಗೆ ತಪ್ಪು ಮಾಹಿತಿ ನೀಡಿದರು. ಅದರಂತೆ, ಸಾಂಪ್ರದಾಯಿಕವಾಗಿ ಅಡಿಕೆ ಬೆಳೆಯುತ್ತಿರುವ ಪ್ರದೇಶ ಬಿಟ್ಟು ಅನ್ಯ ಪ್ರದೇಶದಲ್ಲಿ ಅಡಿಕೆ ಬೆಳೆಗಾರರು ಮಧ್ಯವರ್ತಿಗಳ ಮಾತು ನಂಬಿ ಆ ಕೆಲಸ ಮಾಡಿದರು. ಅವರು ಕಳುಹಿಸಿದ್ದ ಶೇ 90 ಅಡಿಕೆ ಮಾರುಕಟ್ಟೆಯಲ್ಲಿ ತಿರಸ್ಕೃತವಾಯಿತು. ಇದಾದ ನಂತರದಲ್ಲಿ ತುಮ್ಕೋಸ್, ಮಾಮ್ಕೋಸ್ ಮುಂತಾದವು ಅಡಿಕೆ ಬೆಳೆಗಾರರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದವು. ಅಡಿಕೆಗೆ ಬಣ್ಣ ಬರಲು ರೆಡ್ ಆಕ್ಸೈಡ್ ಬಳಸಬೇಡಿ ಎಂದು ಜಾಗೃತಿ ಮೂಡಿಸಿದ ಬಳಿಕ ಇಂತಹ ಪ್ರಯತ್ನ ಕಡಿಮೆಯಾಗಿವೆ.
ಇದು ಬಿಟ್ಟರೆ ಅಡಿಕೆ ಕೆಡದಂತೆ ಇಡಲು ಬೆಳೆಗಾರರು ಇಂದಿಗೂ ಸಾಂಪ್ರದಾಯಿಕ ವಿಧಾನಗಳನ್ನೇ ಅನುಸರಿಸುತ್ತಿದ್ದಾರೆ. ಗಾಳಿ ಹೋಗದ ಚೀಲದಲ್ಲಿ ಅಡಿಕೆಯನ್ನು ಭದ್ರವಾಗಿ ಕಟ್ಟಿ ಬೆಚ್ಚಗೆ ಇರಿಸಲು ಪ್ರಯತ್ನಿಸುತ್ತಾರೆ. ಸಂಘ ಸಂಸ್ಥೆಗಳು ದಾಸ್ತಾನು ಇಡುವಾಗ ಅಲ್ಯೂಮಿನಿಯಂ ಫೋಸ್ಪೇಟ್‌ನಂತಹ ರಾಸಾಯನಿಕವನ್ನು ಬಳಸುತ್ತಿವೆ. ಇನ್ನು ಕೆಲವು ಕಡೆ ನೈಟ್ರೋಜನ್ ಅನಿಲವನ್ನು ಬಳಸುತ್ತಾರೆ. ಅಲ್ಯೂಮಿನಿಯಂ ಫೋಸ್ಪೇಟ್ ಅನ್ನು ಅಕ್ಕಿ ಕೆಡದಂತೆ ಇರಿಸುವುದಕ್ಕೂ ಬಳಸುತ್ತಾರೆ. ಬಳಕೆದಾರರ ಆರೋಗ್ಯ ಕಡೆಗಣಿಸಿದರೆ ಅದರ ಅಂತಿಮ ಪರಿಣಾಮ ತಮ್ಮ ಮೇಲೂ ಆಗುತ್ತದೆ ಎಂಬ ಅರಿವು ಅಡಿಕೆ ಬೆಳೆಗಾರರಿಗೆ ಇದೆ.
ಅಡಿಕೆ ಬೆಳೆಯುವ ಪ್ರದೇಶಗಳ ಮಾದರಿ ಸಂಗ್ರಹಿಸಿ ಬಾಯಿ ಕ್ಯಾನ್ಸರ್ ಬಗ್ಗೆ ಅಧ್ಯಯನ ನಡೆಸಿ
ಅಡಿಕೆ ಕ್ಯಾನ್ಸರ್ ಕಾರಕವಲ್ಲ. ಅಡಿಕೆ ಗಿಡವು ವಿವಿಧ ಜೈವಿಕ ಚಟುವಟಿಕೆಗಳಿರುವ ಔಷಧೀಯ ಗುಣದ ಸಸ್ಯವಾಗಿದೆ. ಅಡಿಕೆಯ ಸಾರದಲ್ಲಿ ಕ್ಯಾನ್ಸರ್ ತಡೆಯುವ ಗುಣವೂ ಇದೆ ಎಂದು ಹೇಳಲಾಗುತ್ತಿದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ ಎಂದು 2016ರಲ್ಲಿ ಜರ್ನಲ್ ಆಫ್ ರೀಸರ್ಚ್ ಇನ್ ಮೆಡಿಕಲ್ ಆಂಡ್ ಡೆಂಟಲ್ ಸೈನ್ಸ್ ನಲ್ಲಿ ಪ್ರಕಟವಾದ ಅಧ್ಯಯನ ವರದಿಯಲ್ಲಿ ಉಲ್ಲೇಖವಿದೆ. ಈ ಬಗ್ಗೆ ಅಧ್ಯಯನ ನಡೆಯಬೇಕು. ಈಗ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘವು ತನ್ನ ಮಾರುಕಟ್ಟೆ ಪ್ರತಿನಿಧಿಯಾಗಿರುವ ಕ್ಯಾಂಪ್ಕೋ ಮೂಲಕ ವಿಶ್ವ ಆರೋಗ್ಯ ಸಂಸ್ಥೆಯ ವರದಿವನ್ನು ಖಂಡಿಸುವುದಕ್ಕೆ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದೆ. ಈಗಾಗಲೇ, ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಕಡೆಯಿಂದ ಕ್ಯಾಂಪ್ಕೋಗೆ ಮಾಹಿತಿ ಒದಗಿಸಲಾಗಿದೆ. ಅದರಲ್ಲಿ ನಾವು, ಸಾಂಪ್ರದಾಯಿಕವಾಗಿ ಅಡಿಕೆ ಬೆಳೆಯುವ ಪ್ರದೇಶಗಳಾದ ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಉತ್ತರ ಕನ್ನಡ, ಕಾಸರಗೋಡು ಭಾಗದ 10,000 ಜನರ (ವೀಳ್ಯದೆಲೆ ಸುಣ್ಣ ಅಡಿಕೆ ತಾಂಬೂಲ ತಿನ್ನುವಂಥವರು) ಮಾದರಿ ಸಂಗ್ರಹಿಸಿ ಬಾಯಿ ಕ್ಯಾನ್ಸರ್ ಕುರಿತಾದ ಅಧ್ಯಯನ ನಡೆಸುವುದಕ್ಕೆ ಆಗ್ರಹಿಸಿದ್ದೇವೆ.
ಆ ವರದಿಯನ್ನು ಸರ್ಕಾರದ ಮೂಲಕ ವಿಶ್ವ ಆರೋಗ್ಯ ಸಂಸ್ಥೆಗೆ ತಲುಪಿಸಲು ಸಂಬಂಧಪಟ್ಟವರ ಜೊತೆಗೆ ಮಾತುಕತೆ ನಡೆಸಿದ್ದೇವೆ. ಅಡಿಕೆ ತಿನ್ನುವುದಕ್ಕೂ ಒಂದು ಕ್ರಮವಿದೆ. ಎಳೆ ಅಡಿಕೆಯಲ್ಲಿ ಅರೆಸೋಲಿನ್ ಎಂಬ ಅಂಶವಿದೆ. ಅದು ಆರೋಗ್ಯ ಏರುಪೇರು ಮಾಡಬಲ್ಲದು. ಇದರ ಅರಿವು ಇರುವ ಕಾರಣವೇ, ತಾಂಬೂಲ ತಿನ್ನುವವರು ಎಳೆ ಅಡಿಕೆ ಬಳಸುವುದಿಲ್ಲ. ಒಣ ಅಡಿಕೆ ಬಳಸುತ್ತಾರೆ. ಹಸಿ ಅಡಿಕೆ ಬಳಸಿದರೂ, ಅಡಿಕೆಯ ಮಧ್ಯದ ತಿರುಳು ಬಳಸುವುದಿಲ್ಲ. ಅದನ್ನು ಬಿಟ್ಟು ಗುಟ್ಖಾ ಮತ್ತು ಇತರೆ ತಂಬಾಕು ಉತ್ಪನ್ನಗಳನ್ನು ಸೇರಿಸಿ ತಿಂದರೆ ಅನಾರೋಗ್ಯ ಕಾಡುತ್ತದೆ ಎಂಬುದು ಈಗಾಗಲೇ ಸಾಬೀತಾಗಿರುವ ವಿಚಾರ. ಹಾಗಂತ ಅಡಿಕೆ ತಿಂದರೆ ಕ್ಯಾನ್ಸರ್ ಬರುತ್ತದೆ ಎಂದು ಪ್ರತಿಪಾದಿಸುವುದು ಸರಿಯಲ್ಲ.
ಬೇಡಿಕೆಗಿಂತ ಪೂರೈಕೆ ಹೆಚ್ಚಾದರೆ ಅಡಿಕೆ ಬೆಳೆಗಾರರಿಗೇ ಸಂಕಷ್ಟ
ಅಡಿಕೆ ವಾಣಿಜ್ಯ ಬೆಳೆಯಾಗಿದ್ದು, ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು, ಶಿವಮೊಗ್ಗ, ಉತ್ತರ ಕನ್ನಡ ಭಾಗದಲ್ಲಿ ಸಾಂಪ್ರದಾಯಿಕವಾಗಿ ಬೆಳೆಯಲಾಗುತ್ತಿದೆ. ಎರಡು ವರ್ಷಗಳ ಹಿಂದೆ ಬೇಡಿಕೆಗಿಂತ ಪೂರೈಕೆ ಕಡಿಮೆ ಇತ್ತು. ಇತ್ತೀಚಿನ ಒಂದೂವರೆ ಎರಡು ದಶಕಗಳ ಅವಧಿಯಲ್ಲಿ ಬಯಲುಸೀಮೆ ಮತ್ತು ಇತರೆ ಭಾಗಗಳಲ್ಲೂ ಅಡಿಕೆ ಬೆಳೆಯಲಾರಂಭಿಸಿದ್ದಾರೆ. ಇದಲ್ಲದೆ, ಈಶಾನ್ಯ ರಾಜ್ಯಗಳಲ್ಲಿ ರಬ್ಬರ್ ಬೆಳೆ ಹೆಚ್ಚಾಗಿದ್ದು, ಅದೇ ಹವಾಮಾನದಲ್ಲಿ ಅಡಿಕೆಯೂ ಬೆಳೆಯುವ ಕಾರಣ ದಕ್ಷಿಣ ಕನ್ನಡ, ಕಾಸರಗೋಡು ಭಾಗದಿಂದ ಅಲ್ಲಿಗೆ ಅಡಿಕೆ ಗಿಡಗಳನ್ನೂ ಕೊಂಡೊಯ್ಯುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಅಡಿಕೆಗೆ ಇರುವ ಬೇಡಿಕೆಗಿಂತ ಪೂರೈಕೆ ಹೆಚ್ಚಾದರೆ ಅಡಿಕೆ ಧಾರಣೆ ಕುಸಿತ ಕಾಣಬಹುದು. ಆ ರೀತಿ ಆದರೆ ಅದರ ಕೆಟ್ಟ ಪರಿಣಾಮ ಮತ್ತೆ ಅಡಿಕೆ ಬೆಳೆಗಾರರ ಮೇಲೆಯೇ ಆಗುತ್ತದೆ ಎಂಬುದನ್ನು ಗಮನಿಸಬೇಕು. ಮಾರುಕಟ್ಟೆಯ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಬೆಳೆ ಪ್ರದೇಶ ವಿಸ್ತರಣೆಗೆ ಅನುಮತಿ ನೀಡಬೇಕು. ಈ ಬಗ್ಗೆ ಸರ್ಕಾರ ಗಮನಹರಿಸಬೇಕು. ವರ್ಷಕ್ಕೆ ಇಷ್ಟು ಅಡಿಕೆ ಬೆಳೆಯಬೇಕು ಎಂಬ ಮಿತಿ ಕೂಡ ಬೇಕು.
ಇದನ್ನೂ ಓದಿ: ಅಡಿಕೆಯ ಔಷಧೀಯ ಗುಣಗಳು, ನಿಮಗೂ ಇದು ಗೊತ್ತಿರಲಿ
ಅಡಿಕೆ ವಾಣಿಜ್ಯ ಬೆಳೆಯಾಗಿರಬಹುದು, ಹಾಗೆಂದು ತೆರಿಗೆ ವಿಧಿಸುವುದು ಸರಿಯಲ್ಲ
ಅಡಿಕೆ ವಾಣಿಜ್ಯ ಬೆಳೆಯಾಗಿರಬಹುದು. ಅದೊಂದೇ ಕಾರಣಕ್ಕೆ ಅದಕ್ಕೆ ತೆರಿಗೆ ವಿಧಿಸುವುದು ಸರಿಯಲ್ಲ. ಅದು ಅಡಿಕೆ ಬೆಳೆಗಾರರಿಗೆ ಮಾರಕ ಹೊಡೆತವಾದೀತು. ಬ್ರಿಟಿಷರ ಆಳ್ವಿಕೆ ಕಾಲದಲ್ಲಿ ಅಡಿಕೆಗೆ ತೆರಿಗೆ ವಿಧಿಸಿದ್ದರು. ದಶಕಗಳ ಹಿಂದೆ ಕೇರಳ ಸರ್ಕಾರ ಅಡಿಕೆಗೆ ತೆರಿಗೆ ವಿಧಿಸಿತ್ತು. ಆ ಸಂದರ್ಭದಲ್ಲೇ ಅಡಿಕೆ ಬೆಳೆಗಾರರ ಸಂಘ ಹುಟ್ಟಿಕೊಂಡಿದ್ದು. ದಕ್ಷಿಣ ಕನ್ನಡ, ಕಾಸರಗೋಡು ಸೇರಿ ದೇಶದ ಬಹುಸಂಖ್ಯಾತ ಅಡಿಕೆ ಬೆಳೆಗಾರರ ಪ್ರತಿನಿಧಿಯಾಗಿ ಅಡಿಕೆ ಬೆಳೆಗಾರರ ಸಂಘದ ಪ್ರತಿನಿಧಿಗಳು ಕೇರಳ ಸರ್ಕಾರದ ಬಳಿಗೆ ನಿಯೋಗ ಹೋಗಿ ಲೆವಿ ವಿಧಿಸದಂತೆ ಆಗ್ರಹಿಸಿದ್ದರು. ಬೆಳೆಗಾರರ ಸಂಖ್ಯೆ ಮತ್ತು ಸಂಘದ ಪ್ರಾತಿನಿಧ್ಯದ ಮನವಿಗೆ ಸ್ಪಂದಿಸಿದ ಕೇರಳ ಸರ್ಕಾರ ತಾನು ವಿಧಿಸಿದ್ದ ಲೆವಿಯನ್ನು ಹಿಂಪಡೆದಿತ್ತು. ಅಡಿಕೆ ಧಾರಣೆ ಒಂದೇ ರೀತಿ ಇರಲ್ಲ. ಏರಿಳಿತವೂ ಇರುತ್ತದೆ. ಅಡಿಕೆ ಕೃಷಿಯೂ ಸುಲಭದ್ದಲ್ಲ. ಅದಕ್ಕೆ ಅದರದ್ದೇ ಆದ ಇತಿಮಿತಿಗಳು, ಕಷ್ಟಗಳು ಇವೆ. ಅಡಿಕೆ ಬೆಳೆಗಾರರಲ್ಲಿ ಸಣ್ಣ, ಮಧ್ಯಮ ಕೃಷಿಕರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಅಡಿಕೆ ಬೆಳೆಗಾರರ ಸಂಘವು ಅಡಿಕೆಗೆ ತೆರಿಗೆ ವಿಧಿಸುವುದಕ್ಕೆ ವಿರೋಧ ವ್ಯಕ್ತಪಡಿಸುತ್ತದೆ.
ಹೊರ ದೇಶಗಳಿಂದ ಅಡಿಕೆ ಆಮದು ತಡೆಯಬೇಕು
ಅಸ್ಸಾಂ ಸೇರಿ ಈಶಾನ್ಯ ರಾಜ್ಯಗಳ ಮೂಲಕ ಮ್ಯಾನ್ಮಾರ್ (ಬರ್ಮಾ) ಮತ್ತು ಇತರೆ ಭಾಗದ ಅಡಿಕೆ ಭಾರತಕ್ಕೆ ಕಳ್ಳಸಾಗಣೆ ದಾರಿಯಲ್ಲಿ ಆಮದಾಗುತ್ತಿವೆ. ಭಾರತದಲ್ಲಿ ಅಡಿಕೆ ಧಾರಣೆ ಚೆನ್ನಾಗಿರುವ ಸಂದರ್ಭದಲ್ಲಿ ಕಳ್ಳಸಾಗಣೆ ಮೂಲಕ ವಿದೇಶಿ ಅಡಿಕೆ ಭಾರತದ ಮಾರುಕಟ್ಟೆಗೆ ಬರುತ್ತದೆ. ಇದು ಕಳಪೆ ಗುಣಮಟ್ಟದ ಅಡಿಕೆಯಾಗಿದ್ದು, ಅದನ್ನು ಯಾವ ರೀತಿ ಸಂಸ್ಕರಿಸಿದ್ದಾರೆ ಎಂಬುದು ಗೊತ್ತಿರುವುದಿಲ್ಲ. ಅಂತಹ ಅಡಿಕೆಯನ್ನು ಸೇವಿಸಿದವರ ಮೇಲೆ ಪರಿಣಾಮ ಏನು ಎಂಬುದೂ ಗೊತ್ತಿಲ್ಲ. ಒಟ್ಟಿನಲ್ಲಿ ಇದು ಅಡಿಕೆ ಬೆಳೆಗಾರರ ಮಟ್ಟಿಗಷ್ಟೇ ಅಲ್ಲ, ದೇಶದ ಅರ್ಥ ವ್ಯವಸ್ಥೆಗೂ ಅಪಾಯಕಾರಿ ಬೆಳವಣಿಗೆ. ಭಾರತದ ಅಡಿಕೆ ಬೆಳೆಗಾರರಿಗೆ ಇದು ಹೊಡೆತ ನೀಡುತ್ತಿದೆ. ಕಳ್ಳಸಾಗಣೆ ಮೂಲಕ ಭಾರತದ ಮಾರುಕಟ್ಟೆ ಪ್ರವೇಶಿಸುವ ವಿದೇಶಿ ಅಡಿಕೆಯನ್ನು ತಡೆಯಬೇಕು. ಅದೇ ರೀತಿ ಅಡಿಕೆ ಆಮದು ಮೇಲೆ ಕೂಡ ನಿರ್ಬಂಧ ಹೇರಬೇಕಾದ್ದು ತುರ್ತು ಅಗತ್ಯ. ಸರ್ಕಾರ ಈ ನಿಟ್ಟಿನಲ್ಲಿ ಗಮನಹರಿಸಬೇಕು.
(ಗಮನಿಸಿ: ಈ ಬರಹದಲ್ಲಿರುವುದು ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಮಹೇಶ್ ಪುಚ್ಚಪ್ಪಾಡಿ ಅವರ ಅಭಿಪ್ರಾಯ. ಸಂದರ್ಶನ ಮತ್ತು ಬರಹ: ಉಮೇಶ್ ಕುಮಾರ್ ಶಿಮ್ಲಡ್ಕ, ಸುದ್ದಿ ಸಂಪಾದಕ, ಹಿಂದೂಸ್ತಾನ್ ಟೈಮ್ಸ್ ಕನ್ನಡ)
ವಿಭಾಗ