ಕನ್ನಡ ಸುದ್ದಿ  /  ಕರ್ನಾಟಕ  /  Sn Panjaje: ರಾಜ್ಯಮಟ್ಟದ ಯಕ್ಷಗಾನ ಸಮ್ಮೇಳನ ಸಂಘಟಿಸಿದ್ದ ಕಲಾವಿದ, ಸಂಘಟಕ ಎಸ್ಎನ್ ಪಂಜಾಜೆ ವಿಧಿವಶ

SN Panjaje: ರಾಜ್ಯಮಟ್ಟದ ಯಕ್ಷಗಾನ ಸಮ್ಮೇಳನ ಸಂಘಟಿಸಿದ್ದ ಕಲಾವಿದ, ಸಂಘಟಕ ಎಸ್ಎನ್ ಪಂಜಾಜೆ ವಿಧಿವಶ

ಕಲಾವಿದ, ಸಂಘಟಕ, ಯಕ್ಷಗಾನ ಪ್ರೇಮಿ ರಾಜ್ಯಮಟ್ಟದ ಹಲವು ಯಕ್ಷಗಾನ ಸಮ್ಮೇಳನಗಳನ್ನು ಆಯೋಜಿಸಿದ್ದ ಎಸ್ ಎನ್ ಪಂಜಾಜೆ (71) ನಿಧನರಾಗಿದ್ದಾರೆ.

ಯಕ್ಷಗಾನ ಕಲಾವಿದ ಎಸ್ಎನ್ ಪಂಜಾಜೆ ನಿಧನರಾಗಿದ್ದಾರೆ.
ಯಕ್ಷಗಾನ ಕಲಾವಿದ ಎಸ್ಎನ್ ಪಂಜಾಜೆ ನಿಧನರಾಗಿದ್ದಾರೆ.

ಮಂಗಳೂರು: ಯಾರ ನೆರವಿಲ್ಲದೆ ಸತತ 13 ಬಾರಿ ರಾಜ್ಯಮಟ್ಟದ ಯಕ್ಷಗಾನ ಸಮ್ಮೇಳನ ನಡೆಸುವುದರ ಮೂಲಕ ಯಕ್ಷಗಾನ ವಲಯದಲ್ಲಿ ಗುರುತಿಸಿಕೊಂಡಿದ್ದ ಸಂಘಟಕ ಸೂರ್ಯನಾರಾಯಣ ಭಟ್ ಪಂಜಾಜೆ (SN Panjaje) ಇಂದು ವಿಧಿವಶರಾಗಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಬೆಂಗಳೂರಿನಲ್ಲಿ (Bangalore) ಇಂದು (ಮೇ 22, ಸೋಮವಾರ) 71 ವರ್ಷದ ಪಂಜಾಜೆ ಅವರ ನಿಧನರಾಗಿದ್ದಾರೆ. ನಿಧನ ಹೊಂದಿದರು. ಎಸ್ಎನ್ ಪಂಜಾಜೆ ಎಂದೇ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಅವರು, ಯಕ್ಷಗಾನ ಸಂಘಟಕರಲ್ಲದೆ, ಸ್ವತಃ ಯಕ್ಷಗಾನ, ಸಿನಿಮಾ ಕಲಾವಿದರೂ ಆಗಿದ್ದರು. ಇವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಕನ್ಯಾನ ಸಮೀಪದ ಪಂಜಾಜೆಯವರು.

ಪಂಜಾಜೆಯವರು ಪತ್ನಿ ಮನೋರಮಾ, ಪುತ್ರ ಕೈಲಾಸ್ ಭಟ್ ಮತ್ತು ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಅಗಲಿದ್ದಾರೆ. ಬಂಟ್ವಾಳದ ಕನ್ಯಾನದಿಂದ ಬೆಂಗಳೂರಿಗೆ ಉದ್ಯೋಗಾರ್ಥಿಯಾಗಿ ಬಂದ ಪಂಜಾಜೆಯವರು ಹಲವು ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರು.

ಕರ್ನಾಟಕ ಸಾಂಸ್ಕೃತಿಕ ಕಲಾ ಪ್ರತಿಷ್ಠಾನ ಹೆಸರಲ್ಲಿ ಯಕ್ಷಗಾನ ಸೇವೆಯಲ್ಲಿ ತೊಡಗಿದ್ದ ಅವರು ಸ್ವತಃ ಕಲಾವಿದರೂ ಆಗಿದ್ದರು. ಭೀಮ, ದುಷ್ಟಬುದ್ಧಿ, ಜಮದಗ್ನಿ ಹೀಗೆ ಹಲವು ಪಾತ್ರಗಳಿಗೆ ಜೀವ ತುಂಬಿದ್ದರು.

ದೇಶ, ವಿದೇಶಗಳಿಗೆ ಯಕ್ಷಗಾನ ತಂಡವನ್ನು ಕರೆದೊಯ್ದು ಪ್ರದರ್ಶನ ನೀಡಿದ ಹೆಗ್ಗಳಿಕೆ ಇವರದ್ದು. ರಾಜ್ಯದ ವಿವಿಧೆಡೆ ಅಖಿಲ ಭಾರತ ಯಕ್ಷಗಾನ ಬಯಲಾಟ ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸುವ ಮೂಲಕ ಹಿರಿಯ ಕಲಾವಿದರಿಗೆ ಗೌರವಾರ್ಪಣೆ ಮಾಡಿದ್ದಾರೆ. ಬೆಂಗಳೂರಿನಲ್ಲಿ ತೆಂಕುತಿಟ್ಟಿನ ಯಕ್ಷಗಾನದ ಮಹಾಪೋಷಕರಲ್ಲಿ ಪಂಜಾಜೆಯವರೂ ಒಬ್ಬರು.

ಯಕ್ಷಗಾನದೊಂದಿಗೆ ಬೆಂಗಳೂರಿನಲ್ಲಿ ಅವರು ಯಕ್ಷಗಾನದ ವೇಷಭೂಷಣಗಳನ್ನು ಒದಗಿಸುತ್ತಿದ್ದರು. ನಾಟ್ಯ ತರಗತಿ ಏರ್ಪಡಿಸುತ್ತಿದ್ದರು. ದೂರದರ್ಶನ, ಆಕಾಶವಾಣಿಗಳಲ್ಲಿ ಕಾರ್ಯಕ್ರಮಗಳನ್ನು ಸಂಘಟಿಸುತ್ತಿದ್ದರು. ಟಿವಿ, ಧಾರಾವಾಹಿಗಳಲ್ಲೂ ಅವರು ನಟಿಸಿ, ಕಿರುತೆರೆ ನಟ ಎನಿಸಿಕೊಂಡಿದ್ದರು. ಏಕಪಾತ್ರಾಭಿನಯ, ಹರಿಕಥೆಗಳಲ್ಲೂ ಪಂಜಾಜೆ ಹಿಂದೆ ಉಳಿದಿರಲಿಲ್ಲ.

ಪಂಜಾಜೆ ಅವರನ್ನ ಹುಡುಕಿಕೊಂಡು ಬಂದಿದ್ದ ಪ್ರಶಸ್ತಿಗಳು

ಸಹಜವಾಗಿಯೇ ಅವರನ್ನು ಹುಡುಕಿಕೊಂಡು ಕೇರಳ ರಾಜ್ಯಮಟ್ಟದ ಪ್ರಶಸ್ತಿ, ತೆಂಕುತಿಟ್ಟು ಯಕ್ಷಗಾನ ಪ್ರತಿಷ್ಠಾನ ಪ್ರಶಸ್ತಿ, ಚಿಟ್ಟಾಣಿ ಪ್ರಶಸ್ತಿ, ಕೆರೆಮನೆ ಶಂಭು ಹೆಗಡೆ ನೃತ್ಯೋತ್ಸವ ಪ್ರಶಸ್ತಿ, ಬೆಂಗಳೂರಿನ ಕೆಂಪೇಗೌಡ ಪ್ರಶಸ್ತಿ, ಆರ್ಯಭಟ ಪ್ರಶಸ್ತಿಗಳು ಲಭಿಸಿವೆ.

ಇರಾ ಶ್ರೀ ಸೋಮನಾಥೇಶ್ವರ ಮೇಳದಲ್ಲಿ ವ್ಯವಸಾಯಿ ಕಲಾವಿದನಾಗಿ ಮೇಳ ತಿರುಗಾಟವೂ ಮಾಡಿದ್ದ ಅವರು ಯಕ್ಷಕಲಾ ರಂಗದಲ್ಲಿ ವೇಷಧಾರಿ, ಸಂಘಟಕ, ನಿರ್ದೇಶಕನಾಗಿ ನಾಲ್ಕು ದಶಕಕ್ಕೂ ಅಧಿಕ ದುಡಿದ ಜನಪ್ರಿಯರು, ಬಹುಮಾನ್ಯರು.

ನಾಟಕ ಕಂಪನಿಯಲ್ಲಿ ವೃತ್ತಿರಂಗಭೂಮಿಯ ಕಲಾವಿದನಾಗಿ ತಿರುಗಾಟ ನಡೆಸಿದವರು. ಹರಿದಾಸರಾಗಿಯೂ ಕಲಾಸೇವೆಗೈದವರು. ದೂರದರ್ಶನ, ಆಕಾಶವಾಣಿಗಳ ಯಕ್ಷಗಾನ ನಿರ್ದೇಶಕರು. ಇಂಥ ಪಂಜಾಜೆ ಕಳೆದೆರಡು ದಶಕದಲ್ಲಿ ಕರುನಾಡಿನ ಉದ್ದಗಲ 13 ಸಮ್ಮೇಳನಗಳನ್ನು ಯಕ್ಷಗಾನಕ್ಕಾಗಿ ನಡೆಸಿದ್ದಾರೆ.

ಯಕ್ಷಗಾನದ ಕುರಿತು ಕನಸುಕಂಡಿದ್ದಾರೆ. ಸರ್ಕಾರದ ಯಾವುದೇ ಅನುದಾನಗಳಿಲ್ಲದೇ ಆಯೋಜಿಸಿದ ಬೃಹತ್ ಸಮ್ಮೇಳನಗಳನ್ನು ಆಯೋಜಿಸಿರುವುದು ಇವರ ಹೆಗ್ಗಳಿಕೆ. ಕರ್ನಾಟಕ ಸಾಂಸ್ಕೃತಿಕ ವೇದಿಕೆ ಎಂಬ ಸಂಸ್ಥೆ ಕಟ್ಟಿಕೊಂಡು ಕರುನಾಡಿನ ಉದ್ದಗಲ ಒಂಟಿಯೋಧನಂತೆ ಸಾಂಸ್ಕೃತಿಕ ಪರಿಚಾರಕನಾಗಿ ಓಡಾಡಿದ ಇವರು ದಣಿವರಿಯದ ಸಾಹಸಿ. ಇಂದು ಇವರ ಇಹಲೋಕ ತ್ಯಜಿಸಿರುವುದು ಕರುನಾಡಿಗೆ ಹಾಗೂ ಕಲಾ ಕ್ಷೇತ್ರಕ್ಕೆ ನಷ್ಟವಾಗಿದೆ.

ಟಿ20 ವರ್ಲ್ಡ್‌ಕಪ್ 2024