ಬೆಂಗಳೂರಿನಲ್ಲಿಯೂ ಆಷಾಡ ಸಂಭ್ರಮ; ತುಳುನಾಡಿನ ವಿಶೇಷ ಆಟಿದ ಐತಾರಕ್ಕೆ ರಾಜಧಾನಿ ಸಜ್ಜು-ashadha celebration in karnataka capital bengaluru tulunadu aati amavasya tulu people in bangalore mangaluru jra ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರಿನಲ್ಲಿಯೂ ಆಷಾಡ ಸಂಭ್ರಮ; ತುಳುನಾಡಿನ ವಿಶೇಷ ಆಟಿದ ಐತಾರಕ್ಕೆ ರಾಜಧಾನಿ ಸಜ್ಜು

ಬೆಂಗಳೂರಿನಲ್ಲಿಯೂ ಆಷಾಡ ಸಂಭ್ರಮ; ತುಳುನಾಡಿನ ವಿಶೇಷ ಆಟಿದ ಐತಾರಕ್ಕೆ ರಾಜಧಾನಿ ಸಜ್ಜು

ಸಾಮಾನ್ಯವಾಗಿ ಕರ್ನಾಟಕ ಕರಾವಳಿ ಭಾಗದಲ್ಲಿ ಆಷಾಡ ಮಾಸದಲ್ಲಿ ವಿಶೇಷ ಖಾದ್ಯಗಳು, ಆಟೋಟಗಳು ನಡೆಯುತ್ತವೆ. ಆಟಿ ತಿಂಗಳಲ್ಲಿ ಕರಾವಳಿಯ ಮನೆಗಳಲ್ಲಿ ಬಗೆಬಗೆಯ ಆಹಾರದ ಘಮ ಬಂದರೆ, ಕೆಸರು ಗದ್ದೆಗಳಲ್ಲಿ ಆಟಗಳದ್ದೇ ಹಬ್ಬ. ಇದೀಗ ಈ ಆಟಿ ಸಂಭ್ರಮ ಉದ್ಯಾನ ನಗರಿ ಬೆಂಗಳೂರಿನಲ್ಲಿಯೂ ನಡೆಯುತ್ತಿದೆ.

ಬೆಂಗಳೂರಿನಲ್ಲಿಯೂ ಆಷಾಡ ಸಂಭ್ರಮ; ತುಳುನಾಡಿನ ವಿಶೇಷ ಆಟಿದ ಐತಾರಕ್ಕೆ ರಾಜಧಾನಿ ಸಜ್ಜು
ಬೆಂಗಳೂರಿನಲ್ಲಿಯೂ ಆಷಾಡ ಸಂಭ್ರಮ; ತುಳುನಾಡಿನ ವಿಶೇಷ ಆಟಿದ ಐತಾರಕ್ಕೆ ರಾಜಧಾನಿ ಸಜ್ಜು

ಬೆಂಗಳೂರು : ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಬೆಂಗಳೂರು ಘಟಕದ ಆಶ್ರಯದಲ್ಲಿ 'ಆಟಿದ ಐತಾರ' (ಆಷಾಡ ಭಾನುವಾರ) ಎಂಬ ವಿಶೇಷ ಕಾರ್ಯಕ್ರಮ ನಡೆಸಲಾಗುತ್ತಿದೆ. ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಮನರಂಜನೆಯ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಕರ್ನಾಟಕದ ಕರಾವಳಿ ಭಾಗದ ತುಳುನಾಡಿನಲ್ಲಿ ಆಷಾಡವನ್ನು 'ಆಟಿ' ಎಂದು ಕರೆಯಲಾಗುತ್ತದೆ. ಕರಾವಳಿ ಭಾಗದಲ್ಲಿ ಆಷಾಡದಲ್ಲಿ ವಿವಿಧ ಸ್ಪರ್ಧೆಗಳು, ಆಟಿ ಆಟೋಟಗಳು ಸೇರಿದಂತೆ ವಿವಿಧ ಮನರಂಜನಾ ಕಾರ್ಯಕ್ರಮಗಳು ಸಾಮಾನ್ಯ. ಈ ಬಾರಿ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಇಂತಹದೇ ಕಾರ್ಯಕ್ರಮ ನಡೆಯುತ್ತಿದೆ.

ಆಟಿ ಎಂದರೆ ಆಷಾಡ ಮಾಸ. ತುಳುವಿನಲ್ಲಿ ಐತಾರ ಎಂದರೆ ಭಾನುವಾರ. 'ಆಟಿದ ಐತಾರ' ಕಾರ್ಯಕ್ರಮದ ಜೊತೆಗೆ 'ನನ್ನಲ್ಲಿರುವ ನಾಯಕ' ಎಂಬ ಪದಾಧಿಕಾರಿಗಳ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದೆ. ಆಗಸ್ಟ್ 11ರ ಭಾನುವಾರ ಕಾರ್ಯಕ್ರಮ ನಡೆಯುತ್ತಿದ್ದು, ಬೆಂಗಳೂರು ರಾಜಾಜಿನಗರ ಕೈಗಾರಿಕಾ ಪ್ರದೇಶದಲ್ಲಿರುವ ಸಿಟಿ ಫ್ರೆಂಡ್ಸ್ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಇನ್ಸ್ಟಿಟ್ಯೂಟ್‌ನಲ್ಲಿ ಅದ್ಧೂರಿ ಕಾರ್ಯಕ್ರಮ ಆಯೋಜಿಸಲಾಗಿದೆ.

ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಆಷಾಡ ಮಾಸಕ್ಕೆ ಸರಿಹೊಂದುವ ಆಕರ್ಷಕ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಸ್ಪರ್ಧೆಗಳ ವಿವರ ಹೀಗಿದೆ.

1. ಆಟಿದ ತೆನಸ್

2. ಅಟಿಲ್ ಕಮ್ಮೆನ

3. ತುಳು ಸಬಿ ಸವಾಲ್

4. ತುಳು ಸಂಸ್ಕೃತಿ ಪ್ರಹಸನ

5. ತುಳು ನೆಂಪು ಶಕ್ತಿದ ಪಂಥ

6. ಆಟಿದ ಅಜಕೆ

7. ತುಳುನಾಡ ತುತ್ತೈತ

ತುಳು ಸಂಸ್ಕೃತಿಯ ಅರಿವು ಮೂಡಿಸುವ ಕಾರ್ಯಕ್ರಮದ ಜೊತೆಗೆ ಸ್ಪರ್ಧೆಗಳ ಮೂಲಕ ಮನರಂಜನೆಯ ಉದ್ದೇಶವೂ ಕಾರ್ಯಕ್ರಮದ ಆಯೋಜಕರದ್ದು. ಕಾರ್ಯಕ್ರಮದ ಯಶಸ್ಸಿಗಾಗಿ ಘಟಕದ ಎಲ್ಲಾ ಸದಸ್ಯರು ಸಿದ್ಧತೆ ನಡೆಸುತ್ತಿದ್ದಾರೆ. ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮವೂ ನಡೆಯಲಿದೆ.

ಈ ಕಾರ್ಯಕ್ರಮದ ಸಮಗ್ರ ನಿರ್ವಹಣೆ ಹಾಗೂ ಪದಾಧಿಕಾರಿಗಳಿಗೆ ತರಬೇತಿಯನ್ನು ನೀಡಲು ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷ ನರೇಶ್ ಕುಮಾರ್ ಸಸಿಹಿತ್ಲು ಪಾಲ್ಗೊಳ್ಳುತ್ತಿದ್ದಾರೆ. ನಾಯಕತ್ವದ ತರಬೇತಿಯನ್ನು ನೀಡಲು ಸಂಪನ್ಮೂಲ ವ್ಯಕ್ತಿಯಾಗಿ ರಾಷ್ಟ್ರೀಯ ತರಬೇತುದಾರರಾದ ಅಭಿಜಿತ್ ಕರ್ಕೇರ ಭಾಗವಹಿಸುತ್ತಿದ್ದಾರೆ.

ಆಟಿ ಎಂದರೆ ಆಷಾಡ

ಆಷಾಡ ಮಾಸವೇ ತುಳುವರ ಆಟಿ ತಿಂಗಳು. ಹಿರಿಯರ ಕಾಲದಿಂದಲೂ ತುಳುನಾಡಿನಲ್ಲಿ ಆಟಿ ತಿಂಗಳನ್ನು 'ಅನಿಷ್ಟದ ತಿಂಗಳು' ಎಂದೇ ಹೇಳಲಾಗುತ್ತದೆ. ಇದಕ್ಕೆ ಕಾರಣಗಳೂ ಇವೆ. ಹಿಂದೆ ತುಳುನಾಡು ಭಾಗದಲ್ಲಿ ಕೃಷಿ ಚಟುವಟಿಕೆಗಳೇ ಹೆಚ್ಚಿದ್ದವು. ಈ ತಿಂಗಳಲ್ಲಿ ಹೆಚ್ಚು ಮಳೆಯಾಗುವುದರಿಂದ ಕೃಷಿ ಚಟುವಟಿಕೆಗಳು ಸಕ್ರಿಯವಾಗಿ ನಡೆಯುತ್ತಿರಲಿಲ್ಲ. ಹಿಂದಿನ ಕಾಲದಲ್ಲಿ ಕೃಷಿ ಕಾರ್ಯ ಬಿಟ್ಟರೆ ಬೇರೆ ಕೆಲಸ ಕಾರ್ಯಗಳು ನಮ್ಮ ಹಿರಿಯರಿಗೆ ತಿಳಿದಿರಲಿಲ್ಲ. ಹೀಗಾಗಿ ಹೊಟ್ಟೆ ತುಂಬಾ ತಿನ್ನಲು ಆಹಾರದ ಕೊರತೆಯಾಗುತ್ತಿತ್ತು.‌ ಹಾಂಗಂತಾ ನಮ್ಮ ಹಿರಿಯರು ಕೈಕಟ್ಟಿ ಕುಳಿತುಕೊಳ್ಳುತ್ತಿರಲಿಲ್ಲ. ಪ್ರಕೃತಿಯನ್ನೇ ಪ್ರಶ್ನಿಸುವ ಅಥವಾ ಅದರ ವಿರುದ್ಧವೂ ಹೋಗುತ್ತಿರಲಿಲ್ಲ. ಆಗ ಪ್ರಕೃತಿ ಕೊಡುವ ಆಹಾರವನ್ನೇ ಮೃಷ್ಟಾನ್ನ ಭೋಜನವೆಂದು ಸೆರಗೊಡ್ಡಿ ಸ್ವೀಕರಿಸುತ್ತಿದ್ದರು.

ಆಹಾರವಾಗಿ ಕೆಸುವಿನ ಎಲೆಯ ಪತ್ರೊಡೆ, ಚೇಟ್ಲ, ಹಲಸಿನ ಬೀಜ, ತಗತೆ ಸೊಪ್ಪಿನ ಪಲ್ಯ, ಮೆಂತ್ಯೆ ಗಂಜಿ ಹೀಗೆ ಸುಲಭವಾಗಿ ಪ್ರಕೃತಿಯಲ್ಲಿ ಸಿಗುವ ಆಹಾರ ತಿನ್ನುತ್ತಿದ್ದರು. ಕೆಲಸವಿಲ್ಲದ ಸಂದರ್ಭದಲ್ಲಿ ಸಮಯ ಕಳೆಯಲು ಗದ್ದೆಗಳಲ್ಲಿ ಆಟಗಳು, ಮನೆಯೊಳಗೆ ಚೆನ್ನಮಣೆ (ಅಳಗುಳಿಮಣೆ) ಯಂಥಾ ಆಟಗಳನ್ನು ಆಡುತ್ತಿದ್ದರು. ಈಗ ಆಧುನಿಕ ಯಗದಲ್ಲಿ ಜನರು ಮನರಂಜನೆಯ ಭಾಗವಾಗಿ ಇಂಥಾ ಆಟಗಳನ್ನು ಆಯೋಜಿಸುತ್ತಿದ್ದಾರೆ.