Aero India 2025: ಬೆಂಗಳೂರಿನಲ್ಲಿ ಏರೋ ಇಂಡಿಯಾಕ್ಕೆ ದಿನಗಣನೆ, ಫೆಬ್ರವರಿ 10 ರಿಂದ ಐದು ದಿನ ತೆರೆದುಕೊಳ್ಳಲಿದೆ ಲೋಹದ ಹಕ್ಕಿಗಳ ಲೋಕ
ಕನ್ನಡ ಸುದ್ದಿ  /  ಕರ್ನಾಟಕ  /  Aero India 2025: ಬೆಂಗಳೂರಿನಲ್ಲಿ ಏರೋ ಇಂಡಿಯಾಕ್ಕೆ ದಿನಗಣನೆ, ಫೆಬ್ರವರಿ 10 ರಿಂದ ಐದು ದಿನ ತೆರೆದುಕೊಳ್ಳಲಿದೆ ಲೋಹದ ಹಕ್ಕಿಗಳ ಲೋಕ

Aero India 2025: ಬೆಂಗಳೂರಿನಲ್ಲಿ ಏರೋ ಇಂಡಿಯಾಕ್ಕೆ ದಿನಗಣನೆ, ಫೆಬ್ರವರಿ 10 ರಿಂದ ಐದು ದಿನ ತೆರೆದುಕೊಳ್ಳಲಿದೆ ಲೋಹದ ಹಕ್ಕಿಗಳ ಲೋಕ

Aero India 2025: ಬೆಂಗಳೂರಿನಲ್ಲಿ ಫೆಬ್ರವರಿ 10 ರಿಂದ 14 ರವರೆಗೆ ಏರೋ ಇಂಡಿಯಾ 2025 ವೈಮಾನಿಕ ಪ್ರದರ್ಶನ ದಿ ರನ್‌ವೇ ಟು ಎ ಬಿಲಿಯನ್ ಆಪರ್ಚುನಿಟೀಸ್ ಎನ್ನುವ ಪರಿಕಲ್ಪನೆ ಮೇಲೆ ನಡೆಯಲಿದೆ. ಜನರಿಗೆ ರಕ್ಷಣಾ ವಲಯದ ವಿಮಾನ ಹಾಗೂ ಇತರೆ ಉತ್ಪನ್ನಗಳ ವೀಕ್ಷಣೆಗೆ ಅವಕಾಶ, ರಕ್ಷಣಾ ಇಲಾಖೆಗೆ ವಹಿವಾಟು ಹಾಗೂ ಶಕ್ತಿ ಪ್ರದರ್ಶನಕ್ಕೆ ಇದು ವೇದಿಕೆಯಾಗಲಿದೆ.

ಬೆಂಗಳೂರು ಏರೋ ಇಂಡಿಯಾ ಪ್ರದರ್ಶನಕ್ಕೆ ದಿನ ಗಣನೆ ಶುರುವಾಗಿದೆ.
ಬೆಂಗಳೂರು ಏರೋ ಇಂಡಿಯಾ ಪ್ರದರ್ಶನಕ್ಕೆ ದಿನ ಗಣನೆ ಶುರುವಾಗಿದೆ.

Aero India 2025: ಎರಡು ವರ್ಷಕ್ಕೊಮ್ಮೆ ನಡೆಯುವ ಏರೋ ಇಂಡಿಯಾ ಶೋಗೆ ಬೆಂಗಳೂರು ನಗರ ಸಿದ್ದವಾಗಿದೆ. ಮುಂದಿನ ವಾರ ಆರಂಭವಾಗಲಿರುವ ಐದು ದಿನಗಳ ಏರೋ ಇಂಡಿಯಾ 2025ರ ಪ್ರದರ್ಶನಕ್ಕೆ ದಿನಗಣನೆ ಶುರುವಾಗಿದ್ದು, ಈ ಬಾರಿ ಬಗೆಬಗೆಯ ರಕ್ಷಣಾ ವಿಮಾನಗಳು ಆಗಸದಲ್ಲಿ ಮೋಡಿ ಮಾಡಲಿವೆ. ಇದಲ್ಲದೇ ರಕ್ಷಣಾ ವಲಯದಲ್ಲಿನ ಪ್ರಗತಿಗೆ ಸಂಬಂಧಿಸಿ ಬೆಂಗಳೂರಿನ ಯಲಹಂಕದಲ್ಲಿರುವ ವೈಮಾನಿಕ ಸಂಸ್ಥೆಯ ಆವರಣದಲ್ಲಿ ಬೃಹತ್‌ ವಸ್ತು ಪ್ರದರ್ಶನಗಳೂ ನಡೆಯಲಿವೆ. ಇದೇ ವೇಳೆ ರಕ್ಷಣಾ ವೈಮಾನಿಕ ಕ್ಷೇತ್ರದಲ್ಲಿ ಯುದ್ದ ವಿಮಾನಗಳು, ಉಪಕರಣಗಳು ಸೇರಿ ಉತ್ಪನ್ನಗಳ ಖರೀದಿಗೂ ಹಲವು ದೇಶಗಳೊಂದಿಗೆ ಒಪ್ಪಂದಗಳಾಗುವ ನಿರೀಕ್ಷೆಯನ್ನು ಹೊಂದಲಾಗಿದೆ. ಏರೋ ಇಂಡಿಯಾ ಪ್ರಮುಖ ವಹಿವಾಟಿಗೂ ದಾರಿ ಮಾಡಿಕೊಡಲಿದೆ.

ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನದ 15ನೇ ಆವೃತ್ತಿಯ ಏರೋ ಇಂಡಿಯಾ 2025- 2025ರ ಫೆಬ್ರವರಿ 10 ರಿಂದ 14 ರವರೆಗೆ ಕರ್ನಾಟಕದ ಬೆಂಗಳೂರಿನ ಯಲಹಂಕದ ವಾಯುನಲೆಯ ಕೇಂದ್ರದಲ್ಲಿ ನಡೆಯಲಿದೆ.

ಕಾರ್ಯಕ್ರಮದ ಮೊದಲ ಮೂರು ದಿನಗಳು (ಫೆಬ್ರವರಿ10,11ಮತ್ತು12) ವ್ಯವಹಾರದ ದಿನಗಳಾಗಿರುತ್ತವೆ. ಆದರೆ 13 ಮತ್ತು 14ರಂದು ಸಾರ್ವಜನಿಕ ವೀಕ್ಷಣೆಗೆ ಅವಕಾಶ ನೀಡಲಾಗಿದೆ. ಈ ಕಾರ್ಯಕ್ರಮ ಏರೋಸ್ಪೇಸ್ ವಲಯದಿಂದ ದೊಡ್ಡ ಶ್ರೇಣಿಯ ಮಿಲಿಟರಿ ವೇದಿಕೆಗಳ ವಾಯು ಪ್ರದರ್ಶನ ಮತ್ತು ವಸ್ತು ಪ್ರದರ್ಶನಗಳನ್ನು ಒಳಗೊಂಡಿದೆ.

ಇದರಲ್ಲಿ ಪೂರ್ವಭಾವಿ ಕಾರ್ಯಕ್ರಮ (ಕರ್ಟನ್ ರೈಸರ್ ಈವೆಂಟ್), ಉದ್ಘಾಟನಾ ಕಾರ್ಯಕ್ರಮ, ರಕ್ಷಣಾ ಸಚಿವರುಗಳ ಸಮಾವೇಶ, ಸಿಇಒಗಳ ದುಂಡು ಮೇಜಿನ ಸಭೆ, ಮಂಥನ್ ಸ್ಟಾರ್ಟ್-ಅಪ್ ಕಾರ್ಯಕ್ರಮ, ಉಸಿರು ಬಿಗಿಹಿಡಿದು ವೀಕ್ಷಿಸವ ಹಾಗೂ ಜನರ ಮೈನವಿರೇಳಿಸುವ ಏರ್ ಶೋಗಳು ಸೇರಿವೆ. ಜತೆಗೆ ಇಂಡಿಯಾ ಪೆವಿಲಿಯನ್ ಅನ್ನು ಒಳಗೊಂಡಿರುವ ದೊಡ್ಡ ಪ್ರದರ್ಶನ ಪ್ರದೇಶ ಮತ್ತು ಏರೋಸ್ಪೇಸ್ ಕಂಪನಿಗಳ ವ್ಯಾಪಾರ ಮೇಳವೂ ಪ್ರಮುಖ ಚಟುವಟಿಕೆ.

'ರನ್‌ವೇ ಟು ಎ ಬಿಲಿಯನ್ ಆಪರ್ಚುನಿಟೀಸ್'- ಬಿಲಿಯನ್ ಅವಕಾಶಗಳಿಗೆ ರನ್ ವೇ ಎಂಬ ವಿಶಾಲ ಧೇಯದೊಂದಿಗೆ ನಡೆಯಲಿರುವ ಈ ಕಾರ್ಯಕ್ರಮ ವಿದೇಶಿ ಮತ್ತು ಭಾರತೀಯ ಸಂಸ್ಥೆಗಳ ನಡುವಿನ ಪಾಲುದಾರಿಕೆಯನ್ನು ರೂಪಿಸಲು ಮತ್ತು ಜಾಗತಿಕ ಮೌಲ್ಯ ಸರಣಿಯಲ್ಲಿ ದೇಶೀಕರಣ ಪ್ರಕ್ರಿಯೆಯನ್ನು ಮತ್ತಷ್ಟು ವೇಗಗೊಳಿಸಲು ಹೊಸ ಮಾರ್ಗಗಳ ಅನ್ವೇಷಣೆಗೆ ವೇದಿಕೆಯನ್ನು ಒದಗಿಸುತ್ತದೆ. ರಕ್ಷಣಾ ಸಚಿವರ ಸಮಾವೇಶ, ಸಿಇಒಗಳ ದುಂಡುಮೇಜಿನ ಸಭೆ, ಮಂಥನ್ ಸ್ಟಾರ್ಟ್-ಅಪ್ ಕಾರ್ಯಕ್ರಮ, ಮೈ ನವಿರೇಳಿಸುವ ವೈಮಾನಿಕ ಪ್ರದರ್ಶನ ಮತ್ತು ದೇಶೀಯ ಉತ್ಪಾದನಾ ಸಾಮರ್ಥ್ಯಗಳ ಪ್ರದರ್ಶನ ಆಯೋಜನೆ ಈ ಬಾರಿಯ ಏರೋ ಇಂಡಿಯಾದ ಪ್ರಮುಖ ಕಾರ್ಯಕ್ರಮಗಳು.

ಏನೇನಿರಲಿದೆ

ಏರ್ ಶೋ ನೇಪಥ್ಯದಲ್ಲಿ ರಕ್ಷಣಾ ಸಚಿವರು, ರಕ್ಷಣಾ ಖಾತೆ ರಾಜ್ಯ ಸಚಿವರು, ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಮತ್ತು ಕಾರ್ಯದರ್ಶಿಗಳ ಮಟ್ಟದಲ್ಲಿ ಹಲವಾರು ದ್ವಿಪಕ್ಷೀಯ ಸಭೆಗಳನ್ನು ಆಯೋಜಿಸಲಾಗಿದೆ. ಪಾಲುದಾರಿಕೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಹೊಸ ಮಾರ್ಗಗಳನ್ನು ಅನ್ವೇಷಿಸುವ ಮೂಲಕ ಸ್ನೇಹಪರ ದೇಶಗಳೊಂದಿಗೆ ರಕ್ಷಣಾ ಮತ್ತು ವೈಮಾನಿಕ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವತ್ತ ಗಮನಹರಿಸಲಾಗುವುದು. ಈ ನಿಟ್ಟಿನಲ್ಲಿ ಹಲವು ಒಪ್ಪಂದ, ವಹಿವಾಟಿಗೂ ಏರೋ ಇಂಡಿಯಾ ವೇದಿಕೆಯಾಗಲಿದೆ.

ಇಂಡಿಯಾ ಪೆವಿಲಿಯನ್ ತನ್ನ ಮೇಕ್-ಇನ್-ಇಂಡಿಯಾ ಉಪಕ್ರಮಕ್ಕೆ ಸ್ಥಳೀಯ ರಕ್ಷಣಾ ಉತ್ಪಾದನಾ ಸಾಮರ್ಥ್ಯಗಳ ವೃದ್ಧಿ ಮತ್ತು ಭವಿಷ್ಯದ ಸಂಭನೀಯಗಳು ಸೇರಿದಂತೆ ಜಾಗತಿಕ ಹಂತಕ್ಕೆ ಸಿದ್ಧವಾಗಿರುವ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಪ್ರದರ್ಶಿಸುವ ಮೂಲಕ ಭಾರತ ತನ್ನ ಶಕ್ತಿ ಪ್ರದರ್ಶನ ಮಾಡಲಿದೆ. ಭಾರತೀಯ ನವೋದ್ಯಮಗಳ ಪ್ರಚಾರಕ್ಕಾಗಿ ಏರೋ ಇಂಡಿಯಾ 2025ರಲ್ಲಿ ಪೋಕಸ್ ಏರಿಯಾ (ಕೇಂದ್ರೀಕೃತ ಪ್ರದೇಶ)ವನ್ನು ಹೊಂದಿರಲಿದೆ ಮತ್ತು ನವೋದ್ಯಮಗಳಿಉ ಅಭಿವೃದ್ಧಿಪಡಿಸಿರುವ ಅತ್ಯಾಧುನಿಕ ತಂತ್ರಜ್ಞಾನಗಳು/ಉತ್ಪನ್ನಗಳ ವ್ಯಾಪಕ ಶ್ರೇಣಿಯನ್ನು ವಿಶೇಷ ಐಡೆಕ್ಸ್‌ (iDEX) ಪೆವಿಲಿಯನ್‌ನಲ್ಲಿ ಪ್ರದರ್ಶಿಸಲಾಗುತ್ತದೆ

ಇದಲ್ಲದೆ, ಡೈನಾಮಿಕ್ ಏರೋಬ್ಯಾಟಿಕ್ ಪ್ರದರ್ಶನಗಳು ಮತ್ತು ಲೈವ್ ತಂತ್ರಜ್ಞಾನ ಪ್ರದರ್ಶನಗಳು ವಿಶಿಷ್ಟ ಅನುಭವವನ್ನು ಒದಗಿಸುತ್ತವೆ, ಆಧುನಿಕ ಏರೋಸ್ಪೇಸ್ ಪ್ಲಾಟ್‌ಫಾರ್ಮ್‌ಗಳು ಮತ್ತು ತಂತ್ರಜ್ಞಾನಗಳ ಸಾಮರ್ಥ್ಯವನ್ನು ಪ್ರದರ್ಶಿಸುತ್ತವೆ. ಕಾರ್ಯಕ್ರಮದ ಭಾಗವಾಗಿ ವಿವಿಧ ಪ್ರಮುಖ ವಿಷಯಗಳ ಕುರಿತು ಹಲವು ವಿಚಾರಸಂಕಿರಣಗಳನ್ನೂ ಸಹ ಆಯೋಜಿಸಲಾಗಿದೆ.

1996ರಿಂದ ಬೆಂಗಳೂರಿನಲ್ಲಿ ಪ್ರತಿ ಎರಡು ವರ್ಷಗಳಿಗೊಮ್ಮೆ ಆಯೋಜಿಸಲಾಗುತ್ತಿರುವ ಏರೋ ಇಂಡಿಯಾ 14 ಯಶಸ್ವಿ ಆವೃತ್ತಿಗಳೊಂದಿಗೆ ಈಗಾಗಲೇ ಜಾಗತಿಕವಾಗಿ ಒಂದು ಪ್ರಮುಖ ವೈಮಾನಿಕ ಪ್ರದರ್ಶನವಾಗಿ ತನ್ನದೇ ಆದ ಸ್ಥಾನ ಗಳಿಸಿದೆ. ಕಳೆದ ಆವೃತ್ತಿಯು ಹಲವು ಗಮನಾರ್ಹ ಮೈಲಿಗಲ್ಲುಗಳನ್ನು ಸಾಧಿಸಿತ್ತು, ಏಕೆಂದರೆ ಇದು ಏಳು ಲಕ್ಷಕ್ಕೂ ಅಧಿಕ ವೀಕ್ಷಕಕರು, 98 ದೇಶಗಳ ಗಣ್ಯರು ಮತ್ತು ಉದ್ಯಮಿಗಳು, ಹೂಡಿಕೆದಾರರು, ಸ್ಟಾರ್ಟ್-ಅಪ್‌ಗಳು ಮತ್ತು ಎಂಎಸ್ ಎಂಇಗಳು ಸೇರಿ 809ಕ್ಕೂ ಅಧಿಕ ಪ್ರದರ್ಶಕರನ್ನು ಆಕರ್ಷಿಸಿತು. 201 ಒಡಂಬಡಿಕೆಗಳಿಗೆ ಸಹಿ, ಪ್ರಮುಖ ಘೋಷಣೆಗಳು, ಉತ್ಪನ್ನ ಬಿಡುಗಡೆಗಳು ಮತ್ತು 75,000 ಕೋಟಿ ರೂ.ಗೂ ಅಧಿಕ ಮೌಲ್ಯದ ತಂತ್ರಜ್ಞಾನ ವರ್ಗಾವಣೆ ಸೇರಿದಂತೆ 250 ಪಾಲುದಾರಿಕೆಗಳಿಗೆ ಸಾಕ್ಷಿಯಾಯಿತು. 2025ರ ಆವೃತ್ತಿಯು ಈ ಸಾಧನೆಗಳನ್ನು ಮೀರಿ ಹೊಸ ಮೈಲಿಗಲ್ಲು ಸ್ಥಾಪಿಸುವ ಗುರಿ ಹೊಂದಿದೆ ಮತ್ತು ವೈಮಾನಿಕ ಪ್ರದರ್ಶನದ ವ್ಯಾಪ್ತಿ ಮತ್ತು ವೈಭವ ಮತ್ತಷ್ಟು ಹೆಚ್ಚಾಗಲಿದೆ ಎಂಬ ಭರವಸೆಯಿದೆ ಎನ್ನುತ್ತಾರೆ ಆಯೋಜಕರು.

ಈಗಾಗಲೇ ನೋಂದಣಿ ಮಾಡಿಸಿಕೊಂಡವರಿಗೆ ಏರ್‌ ಶೋ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗುತ್ತದೆ. ನೋಂದಣಿ ಇಲ್ಲದೇ ಬಂದವರೂ ಹೊರಗಿನಿಂದಲೇ ನಿಂತುಕೊಂಡು ವೈಮಾನಿಕ ಪ್ರದರ್ಶನ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ.ಏರ್‌ಶೋ ಹಿನ್ನೆಲೆಯಲ್ಲಿ ಯಲಹಂಕ ಭಾಗದಲ್ಲಿ ಮಾಂಸ ಮಾರಾಟ ನಿಷೇಧಿಸಲಾಗಿದೆ. ಅಲ್ಲದೇ ಬೆಂಗಳೂರು ವಿಮಾನ ನಿಲ್ದಾಣದಿಂದಲೂ ಕೆಲವು ವಿಮಾನಗಳ ಸಂಚಾರದಲ್ಲಿ ಬದಲಾವಣೆಯನ್ನೂ ಮಾಡಲಾಗಿದೆ.

Whats_app_banner