ತೆಲಂಗಾಣದ ಒಬ್ಬ ಕಾಂಗ್ರೆಸ್ ಎಂಎಲ್‌ಎ ಕೂಡ ಪಕ್ಷಾಂತರ ಮಾಡಲ್ಲ: ಡಿಕೆ ಶಿವಕುಮಾರ್ ವಿಶ್ವಾಸ
ತೆಲಂಗಾಣದಲ್ಲಿ ಒಬ್ಬನೇ ಒಬ್ಬ ಕಾಂಗ್ರೆಸ್ ಶಾಸಕ ಕೂಡ ಪಕ್ಷಾಂತರ ಮಾಡಲ್ಲ ಎಂದು ಕರ್ನಾಟಕ ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರು: ತೆಲಂಗಾಣ ವಿಧಾನಸಭೆ ಚುನಾವಣೆಯ ಮತ ಎಣಿಕೆಯಲ್ಲಿ (Election Results 2023) ಕಾಂಗ್ರೆಸ್ 67 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಳ್ಳುವ ಮೂಲಕ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರುವಂತೆ ಕಾಣುತ್ತಿದೆ. ಮಧ್ಯಾಹ್ನದ ವೇಳೆಗೆ ಸ್ಪಷ್ಟ ಚಿತ್ರಣ ಸಿಗಲಿದೆ.
ನೆರೆಯ ತೆಲಂಗಾಣದಲ್ಲಿ 119 ವಿಧಾನಸಭಾ ಕ್ಷೇತ್ರಗಳಿದ್ದು, ಸ್ಪಷ್ಟ ಬಹುಮತಕ್ಕೆ 60 ಸ್ಥಾನಗಳನ್ನು ಪಡೆಯಬೇಕಿದೆ. ಆದರೆ ಕಾಂಗ್ರೆಸ್ 67 ರಲ್ಲೂ ಮುನ್ನಡೆ ಪಡೆದಿರುವುದು ಆ ಪಕ್ಷದ ಕಾರ್ಯಕರ್ತರ ಖುಷಿಗೆ ಕಾಣವಾಗಿದೆ. ಬಿಆರ್‌ಎಸ್ 42, ಬಿಜೆಪಿ 7, ಎಐಎಂಐಎಂ 3 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿವೆ.
ಕಾಂಗ್ರೆಸ್ ಗೆಲುವಿನತ್ತ ಮುಖ ಮಾಡಿರುವ ಹಿನ್ನೆಲೆಯಲ್ಲಿ ಹೈದರಾಬಾದ್‌ನಲ್ಲಿರುವ ಕಾಂಗ್ರೆಸ್ ಕಚೇರಿ ಎದುರಿ ಜಮಾಯಿಸಿರುವ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಕಲಾ ತಂಡಗಳಿಂದ ಡೋಲು ಬಾರಿಸಲಾಗುತ್ತಿದ್ದು, ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದಾರೆ. ಇದೇ ವೇಳೆ ಜೈ ತೆಲಂಗಾಣ, ಜೈ ರೇವಂತ್ ರೆಡ್ಡಿ ಎಂಬ ಘೋಷಣೆಗಳನ್ನು ಕೂಗಿದ್ದಾರೆ.
ಹೈದರಾದಾಬ್‌ಗೆ ತೆರಳುವ ಮುನ್ನ ಬೆಂಗಳೂರಿನಲ್ಲಿ ಮಾತನಾಡಿರುವ ಡಿಸಿಎಂ ಡಿಕೆ ಶಿವಕುಮಾರ್, ನಾನು ಸ್ಪಷ್ಟ ಜನಾದೇಶವನ್ನು ಪಡೆಯುವ ವಿಶ್ವಾಸ ಇತ್ತು ಎಂದು ಹೇಳಿದ್ದರು. ಇದೇ ವೇಳೆ ಡಿಕೆಶಿ ಶಾಸಕರ ಪಕ್ಷಾಂತರದ ಪ್ರಶ್ನೆಗೆ ಪ್ರತಿಕ್ರಿಯಿಸಿ, ನಮ್ಮ ಒಬ್ಬನೇ ಒಬ್ಬ ಶಾಸಕನೂ ಕೂಡ ಪಕ್ಷಾಂತರ ಮಾಡಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಅಭ್ಯರ್ಥಿಗಳು ತಮ್ಮ ಮತ ಕ್ಷೇತ್ರಗಳಲ್ಲಿನ ಮತ ಎಣಿಕೆ ಕೇಂದ್ರಗಳಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಂಡ ಬಳಿಕ ಭಾನುವಾರ (ಡಿಸೆಂಬರ್ 3) ಹೈದರಾಬಾದ್‌ಗೆ ಆಗಮಿಸುವಂತೆ ಕಾಂಗ್ರೆಸ್‌ನ ಎಲ್ಲ ಅಭ್ಯರ್ಥಿಗಳಿಗೆ ಸೂಚನೆ ನೀಡಿದ್ದರು. ನವೆಂಬರ್ 30 ರಂದು ಒಂದೇ ಹಂತದಲ್ಲಿ ತೆಲಂಗಾಣದ 119 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು. ಹೊಸದಾಗಿ ರಾಜ್ಯವಾದ ಬಳಿಕ ತೆಲಂಗಾಣದಲ್ಲಿ ಬಿಆರ್‌ಎಸ್ (ಹಿಂದೆ ಟಿಆರ್‌ಎಸ್) ಸತತ ಎರಡು ಬಾರಿ ಅಧಿಕಾರಕ್ಕೆ ಬಂದಿತ್ತು.