ಎಚ್‌.ನರಸಿಂಹಯ್ಯರ ಶಿಷ್ಯರಾಗಿದ್ದ ಕನ್ನಡಿಗ ಖಗೋಳಶಾಸ್ತ್ರಜ್ಞ, ಲೇಖಕ ಪ್ರೊ.ಎಸ್.ಬಾಲಚಂದ್ರರಾವ್‌ ನಿಧನ
ಕನ್ನಡ ಸುದ್ದಿ  /  ಕರ್ನಾಟಕ  /  ಎಚ್‌.ನರಸಿಂಹಯ್ಯರ ಶಿಷ್ಯರಾಗಿದ್ದ ಕನ್ನಡಿಗ ಖಗೋಳಶಾಸ್ತ್ರಜ್ಞ, ಲೇಖಕ ಪ್ರೊ.ಎಸ್.ಬಾಲಚಂದ್ರರಾವ್‌ ನಿಧನ

ಎಚ್‌.ನರಸಿಂಹಯ್ಯರ ಶಿಷ್ಯರಾಗಿದ್ದ ಕನ್ನಡಿಗ ಖಗೋಳಶಾಸ್ತ್ರಜ್ಞ, ಲೇಖಕ ಪ್ರೊ.ಎಸ್.ಬಾಲಚಂದ್ರರಾವ್‌ ನಿಧನ

ಕಂಪ್ಯೂಟರ್‌ ಬಳಕೆಯ ಆರಂಭದಲ್ಲಿ ಅದನ್ನು ಸಮರ್ಪಕವಾಗಿ ಬಳಸಿ ಖಗೋಳ ವಿಷಯದಲ್ಲಿ ನಿಖರವಾಗಿ ಮಾತನಾಡಬಲ್ಲವರಾಗಿದ್ದ ಕನ್ನಡಿಗ ಪ್ರೊ.ಎಸ್‌.ಬಾಲಚಂದ್ರರಾವ್‌ ಬೆಂಗಳೂರಿನಲ್ಲಿ ನಿಧನರಾದರು.

ಬೆಂಗಳೂರಿನಲ್ಲಿ ನಿಧನರಾದ ಬಾಲಚಂದ್ರರಾವ್‌.
ಬೆಂಗಳೂರಿನಲ್ಲಿ ನಿಧನರಾದ ಬಾಲಚಂದ್ರರಾವ್‌.

ಬೆಂಗಳೂರು: ಕರ್ನಾಟಕದಲ್ಲಿ ಎಪ್ಪತ್ತು ಎಂಬತ್ತರ ದಶಕದಲ್ಲಿಯೇ ಖಗೋಳ ವಿಜ್ಞಾನದ ಕುರಿತು ನಿಖರವಾಗಿ ಅಧ್ಯಯನ ಮಾಡಿ ಆ ವಿಚಾರವನ್ನು ಕನ್ನಡದಲ್ಲಿ ಜನರಿಗೆ ಅರ್ಥವಾಗುವ ಹಾಗೆ ತಿಳಿಸಿಕೊಡುತ್ತಿದ್ದ ಗಣಿತ ಶಾಸ್ತ್ರ ಹಾಗೂ ಖಗೋಳಶಾಸ್ತ್ರದ ಜತೆಗೆ ಜ್ಯೋತಿಷ್ಯ ಶಾಸ್ತ್ರವನ್ನು ಅಧ್ಯಯನ ಮಾಡಿದ್ದ ವಿಜ್ಞಾನಿ ಪ್ರೊ.ಎಸ್‌.ಬಾಲಚಂದ್ರರಾವ್‌ ಅವರು ಬೆಂಗಳೂರಿನಲ್ಲಿ ನಿಧನರಾದರು. ಆ ಕಾಲದಲ್ಲಿ ವಿಜ್ಞಾನದಲ್ಲಿ ದೊಡ್ಡ ಹೆಸರು ಮಾಡಿದ್ದ ಬೆಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಯೂ ಆಗಿದ್ದ ಪ್ರೊ.ಎಚ್‌.ನರಸಿಂಹಯ್ಯ ಅವರ ಶಿಷ್ಯರಾಗಿ ಗುರುತಿಸಿಕೊಂಡು ಬಾಲಚಂದ್ರರಾವ್‌ ಅವರು ಖಗೋಳಶಾಸ್ತ್ರ ಹೇಗೆ ನಮ್ಮ ಬದುಕಿನೊಂದಿಗೆ ಸಂಬಂಧ ಹೊಂದಿದೆ ಎನ್ನುವುದನ್ನು ಜನತೆಗೆ ತಿಳಿಸಿಕೊಟ್ಟವರು. ಅದಕ್ಕೆ ಪೂರಕವಾಗಿ ಹಲವು ಕೃತಿಗಳನ್ನು ಕನ್ನಡದಲ್ಲಿ ಗಣಿತ ಮತ್ತು ಖಗೋಳ ವಿಜ್ಞಾನದ ವಿಚಾರದಲ್ಲಿ ಪ್ರಕಟಿಸಿದವರು.

ಮಲೆನಾಡಿನ ಸಾಗರ ತಾಲ್ಲೂಕು ತ್ಯಾಗರ್ತಿಯವರಾದ ಬಾಲಚಂದ್ರರಾವ್‌ ಅವರು 1944ರ ಡಿಸೆಂಬರ್ 30ರಂದು ಜನಿಸಿದರು. ಅವರಿಗೆ ಬಾಲ್ಯದಲ್ಲಿಯೇ ಖಗೋಳ ಶಾಸ್ತ್ರದ ಬಗ್ಗೆ ಆಸಕ್ತಿ ಮೂಡಿಸಿದವರು ಅವರ ತಾಯಿ ರಾಧಾ ಬಾಯಿ. ಅವರು ತಾರೆಗಳನ್ನು ತೋರಿಸುತ್ತಲೇ ಅವುಗಳ ಬಗ್ಗೆ ಆಸಕ್ತಿದಾಯಕವಾಗಿ ಕಥೆ ಹೇಳುತ್ತಿದ್ದರು. ಅದು ಬಾಲಕ ಬಾಲಚಂದ್ರ ಅವರಲ್ಲಿ ಪ್ರಭಾವ ಬೀರಿತ್ತು. ಮುಂದೆ ವಿಜ್ಞಾನದಲ್ಲಿಯೇ ಆಸಕ್ತಿ ಬೆಳೆದು ಅದೇ ವಿಷಯದಲ್ಲಿ ಪದವಿಗೂ ಮುಂದಾದರು. ಬೆಂಗಳೂರಿನ ಶೇಷಾದ್ರಿಪುರಂ ಹೈಸ್ಕೂಲಿನಲ್ಲಿ ಓದಿದ ನಂತರ ನ್ಯಾಷನಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿ, ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಸ್ನಾತಕೋತ್ತರ ಪದವಿ ಪಡೆದುದೇ ಅಲ್ಲದೆ, ಸೆಂಟ್ರಲ್ ಕಾಲೇಜಿನಿಂದ ಫ್ಲುಯಿಡ್ ಮೆಕಾನಿಕ್ಸ್ ಅಧ್ಯಯನಗಳನ್ನು ಮುಗಿಸಿ ಉನ್ನತ ಶಿಕ್ಷಣ ಪಡೆದವರು.ಬಾಲಚಂದ್ರರಾವ್ ಅವರು ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಅಧ್ಯಾಪನ ಆರಂಭಿಸಿ ಗಣಿತಶಾಸ್ತ್ರದ ಪ್ರಾಧ್ಯಾಪಕರಾಗಿ ಹಲವು ವರ್ಷ ಕೆಲಸ ಮಾಡಿ ನಂತರ ಪ್ರಾಂಶುಪಾಲರಾಗಿಯೂ ಸೇವೆ ಸಲ್ಲಿಸಿ 2002ರಲ್ಲಿ ನಿವೃತ್ತರಾದರು.

ನಿವೃತ್ತಿ ನಂತರವೂ ಬೆಂಗಳೂರಿನ ಭಾರತೀಯ ವಿದ್ಯಾಭವನದ ಭವನ್ಸ್ ಗಾಂಧೀ ವಿಜ್ಞಾನ ಮತ್ತು ಮಾನವೀಯ ಮೌಲ್ಯಗಳ ಅಧ್ಯಯನ ವಿಭಾಗದ ನಿರ್ದೇಶಕರಾಗಿ ಒಂದೂವರೆ ದಶಕ ಕಾಲ ಸಕ್ರಿಯರಾಗಿ ಕೆಲಸ ಮಾಡಿದರು.

ಇದರ ಜತೆಯಲ್ಲಿಯೇ ದೆಹಲಿಯಲ್ಲಿರುವ 'ಇಂಡಿಯನ್ ನ್ಯಾಷನಲ್ ಸೈನ್ಸ್ ಅಕಾಡಮಿ' (INSA) ಆಶ್ರಯದಲ್ಲಿ ಭಾರತೀಯ ಗಣಿತ ಮತ್ತು ಖಗೋಳಶಾಸ್ತ್ರಕ್ಕೆ ಸಂಬಂಧಿಸಿದಂತೆ ಸಂಶೋಧನಾ ಯೋಜನೆಗಳನ್ನು ಬಾಲಚಂದ್ರರಾವ್ ಅವರು ಕೈಗೊಂಡರು. ಆ‍ ಸಂಸ್ಥೆಯ ಭಾಗವಾದ ರಾಷ್ಟ್ರೀಯ ಇತಿಹಾಸ ಆಯೋಗದ ಸದಸ್ಯರೂ ಆಗಿದ್ದರು. 2019ರಲ್ಲಿ ರಾವ್ ಅವರಿಗೆ ಇಂಟರ್‌ನ್ಯಾಷನಲ್‌ ಆಸ್ಟ್ರನಾಮಿಕಲ್‌ ಸೊಸೈಟಿಯ ಸದಸ್ಯತ್ವ ಗೌರವವೂ ದೊರೆತಿತ್ತು.

ಆರ್ಯಭಟ, ಗಣಿತಶಾಸ್ತ್ರದ ಪ್ರವರ್ತಕರು ಮತ್ತು ಸ್ವಾರಸ್ಯಗಳು, ಭಾರತೀಯ ಖಗೋಳಶಾಸ್ತ್ರ, ಶ್ರೀನಿವಾಸ ರಾಮಾನುಜನ್, ವೇದಾಂಗ ಜ್ಯೋತಿಷ, ಭಾರತೀಯ ಖಗೋಳವಿಜ್ಞಾನದಲ್ಲಿ ಗ್ರಹಣಗಳು ಮುಂತಾದ ಕೃತಿಗಳು.

18 ನೇ ವಯಸ್ಸಿನಲ್ಲಿ ಬಾಲಚಂದ್ರ ತಮ್ಮ ಜೀವಮಾನದ ಗುರು ಡಾ. ಎಚ್. ನರಸಿಂಹಯ್ಯ ಅವರನ್ನು ಭೇಟಿಯಾದಾಗ ಈ ಆರಂಭಿಕ ಆಸಕ್ತಿ ನಿರ್ಣಾಯಕ ತಿರುವು ಪಡೆಯಿತು. ಅವರ ವೈಚಾರಿಕ ವಿಶ್ವ ದೃಷ್ಟಿಕೋನ ಮತ್ತು ಮಾರ್ಕ್ಸಿಯನ್-ಗಾಂಧಿ ತತ್ವಗಳು ಅವರ ಚಿಂತನೆಯನ್ನು ಮರುರೂಪಿಸಿದವು. ಮಾರ್ಕ್ಸ್‌ವಾದ, ಅದ್ವೈತ ಮತ್ತು ಬರ್ಟ್ರಾಂಡ್ ರಸೆಲ್ ಅವರ ಬರಹಗಳಿಂದ ಬಂದ ವೈವಿಧ್ಯಮಯ ತತ್ತ್ವಚಿಂತನೆಗಳಿಗೆ ಒಡ್ಡಿಕೊಳ್ಳುವುದರಿಂದ ಅವರು ಆರಂಭದಲ್ಲಿ ಆಸಕ್ತಿಯಿಂದ ಕಲಿಯುತ್ತಿದ್ದ ಜ್ಯೋತಿಷ್ಯ ಅನ್ವೇಷಣೆಗಳನ್ನು ಸಂಪೂರ್ಣವಾಗಿ ತ್ಯಜಿಸಬೇಕಾಯಿತು.

1980 ರ ದಶಕದ ಕಂಪ್ಯೂಟರ್‌ಗಳಲ್ಲಿ ಪ್ರಾಚೀನ ಕ್ರಮಾವಳಿಗಳನ್ನು ಪ್ರೋಗ್ರಾಮಿಂಗ್ ಮಾಡುವುದರಿಂದ ಹಿಡಿದು ಡಿಜಿಟಲ್ ಯುಗದಲ್ಲಿ ವೈಜ್ಞಾನಿಕ ಸಮಗ್ರತೆಯನ್ನು ರಕ್ಷಿಸುವವರೆಗೆ ಅವರು ಎಲ್ಲದರಲ್ಲೂ ನಿಖರ ಜ್ಞಾನ ಹೊಂದಿದ್ದರು.ಕಂಪ್ಯೂಟರ್‌ ಅನ್ನು ಆಗಲೇ ಬಳಸಿ ಸಿದ್ದಹಸ್ತರಾಗಿದ್ದರು. ಇಳಿವಯಸ್ಸಿನಲ್ಲೂ ಗಣಿತ, ಖಗೋಳ ವಿಜ್ಞಾನ ಸಹಿತ ವಿಜ್ಞಾನದ ಚಟುವಟಿಕೆಗಳಲ್ಲಿ ನಿರತರಾಗಿದ್ದ ಅವರ ನೆನಪು ಅಜರಾಮರ ಎಂದು ಆತ್ಮೀಯರು ನೆನಪಿಸಿಕೊಂಡಿದ್ದಾರೆ.

ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.