ಅರಣ್ಯ ಸಚಿವರೇ ಇತ್ತ ನೋಡಿ: ಹಲ್ಲಿಲ್ಲದ ಹಾವಾದ ಹುಲಿ ಯೋಜನೆ, ವಿಶೇಷ ಕಾರ್ಯಪಡೆ ಆಟಕ್ಕುಂಟು ಲೆಕ್ಕಕ್ಕಿಲ್ಲ, ಕಾಡ ಸಿಬ್ಬಂದಿ ನಾಡಿಗೆ ಸ್ಥಳಾಂತರ!
ಕನ್ನಡ ಸುದ್ದಿ  /  ಕರ್ನಾಟಕ  /  ಅರಣ್ಯ ಸಚಿವರೇ ಇತ್ತ ನೋಡಿ: ಹಲ್ಲಿಲ್ಲದ ಹಾವಾದ ಹುಲಿ ಯೋಜನೆ, ವಿಶೇಷ ಕಾರ್ಯಪಡೆ ಆಟಕ್ಕುಂಟು ಲೆಕ್ಕಕ್ಕಿಲ್ಲ, ಕಾಡ ಸಿಬ್ಬಂದಿ ನಾಡಿಗೆ ಸ್ಥಳಾಂತರ!

ಅರಣ್ಯ ಸಚಿವರೇ ಇತ್ತ ನೋಡಿ: ಹಲ್ಲಿಲ್ಲದ ಹಾವಾದ ಹುಲಿ ಯೋಜನೆ, ವಿಶೇಷ ಕಾರ್ಯಪಡೆ ಆಟಕ್ಕುಂಟು ಲೆಕ್ಕಕ್ಕಿಲ್ಲ, ಕಾಡ ಸಿಬ್ಬಂದಿ ನಾಡಿಗೆ ಸ್ಥಳಾಂತರ!

ಕರ್ನಾಟಕದಲ್ಲಿ ಹುಲಿ ನಿರ್ವಹಣೆಗೆ ನಿರ್ದೇಶಕರಿದ್ದರೂ ಅವರ ಹುದ್ದೆ ಹಲ್ಲಿಲ್ಲದ ಹಾವಾಗಿದ್ದರೆ, ವನ್ಯಜೀವಿ ರಕ್ಷಣೆಗೆಂದೇ ವಿಶೇಷ ಕಾರ್ಯಪಡೆ ರಚಿಸಿದ್ದರೂ ಅದನ್ನು ಮುಚ್ಚುವ ಹಂತಕ್ಕೆ ತರಲಾಗಿದೆ.

ಕರ್ನಾಟಕದಲ್ಲಿ ಹುಲಿ ಯೋಜನೆ ಸ್ಥಿತಿಗತಿ ಜತೆಗೆ ಹಿರಿಯ ಅಧಿಕಾರಿಗಳಾದ ಎ.ಸಿ.ಲಕ್ಷ್ಮಣ, ಬಿಕೆ. ಸಿಂಗ್‌ ಅಂಥವರ ಸೇವೆ ಸ್ಮರಣೀಯ.
ಕರ್ನಾಟಕದಲ್ಲಿ ಹುಲಿ ಯೋಜನೆ ಸ್ಥಿತಿಗತಿ ಜತೆಗೆ ಹಿರಿಯ ಅಧಿಕಾರಿಗಳಾದ ಎ.ಸಿ.ಲಕ್ಷ್ಮಣ, ಬಿಕೆ. ಸಿಂಗ್‌ ಅಂಥವರ ಸೇವೆ ಸ್ಮರಣೀಯ. (Rohith)

ಹುಲಿಗಳ ಸಂರಕ್ಷಣೆಗೆಂದು ಪ್ರತೀ ರಾಜ್ಯಕ್ಕೆ ಪ್ರತ್ಯೇಕ ಹುಲಿ ಯೋಜನೆ, ಅದಕ್ಕೊಬ್ಬರು ಹಿರಿಯ ಐಎಫ್‌ಎಸ್‌ ಅಧಿಕಾರಿ. ನಿರ್ದೇಶಕರ ಹೆಸರಿನಲ್ಲಿ( ಎಫ್‌ಡಿಪಿಟಿ) ಅವರಿಗೊಂದು ಕಚೇರಿ, ವಾಹನ, ಇದಕ್ಕಾಗಿ ಸಿಬ್ಬಂದಿ, ಸೇವಕರು. ಮತ್ತೊಂದು ಕಡೆ ಹುಲಿ ಸಹಿತ ವನ್ಯಜೀವಿಗಳ ಬೇಟೆ, ಸಂಘರ್ಷ ತಡೆಗೆ ವಿಶೇಷ ಕಾರ್ಯಪಡೆ(ಎಸ್‌ಟಿಪಿಎಫ್‌). ಈ ಸೇವೆಗೆ ಅಧಿಕಾರಿಗಳು, ಸಿಬ್ಬಂದಿಗಳ ನೇಮಕ, ವಾಹನಗಳ ನಿಯೋಜನೆ, ಕಚೇರಿ ಸ್ಥಾಪನೆ ಸಹಿತ ಕೋಟಿಗಟ್ಟಲೇ ಖರ್ಚು. ಕರ್ನಾಟಕ ಸರ್ಕಾರದ ಅರಣ್ಯ ಇಲಾಖೆಯಡಿ ನಿರ್ವಹಣೆ ಮಾಡಿ ಹಣ ವೆಚ್ಚ ಮಾಡಿದರೂ ಅದರ ಸ್ಥಿತಿಯನ್ನು ಕೇಳಬೇಡಿ. ಕರ್ನಾಟಕದ ಹುಲಿ ಯೋಜನೆ ನಿರ್ದೇಶಕರ ಹುದ್ದೆ ಹಲ್ಲಿಲ್ಲದ ಹಾವಾಗಿ, ಬರೀ ಉತ್ಸವ ಮೂರ್ತಿಯಂತಾಗಿ ವರ್ಷಗಳೇ ಕಳೆಯಿತು. ವಿಶೇಷ ಕಾರ್ಯಪಡೆ ಅಧಿಕಾರಿಗಳು, ಸಿಬ್ಬಂದಿಗಳು ಕೆಲಸವೇ ಇಲ್ಲದ ಹುದ್ದೆಗೆ ಪ್ರತಿಷ್ಠಾಪನೆಗೊಂಡು ವರ್ಷಗಳಾಗುತ್ತ ಬಂದು. ಇದನ್ನು ಮಾಡಿದ ಉದ್ದೇಶವಾದರೂ ಏನು ಎನ್ನುವ ಪ್ರಶ್ನೆಗೆ ಉತ್ತರ ಮಾತ್ರ ಇಲ್ಲ.

ಹುಲಿ ಯೋಜನೆಗೊಬ್ಬ ನಿರ್ದೇಶಕ

ಭಾರತದಲ್ಲೇ ಅತಿ ಹೆಚ್ಚು ಹುಲಿಗಳ ಟಾಪ್‌ 3 ರಾಜ್ಯಗಳ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳನ್ನು ಉಳಿಸಿಕೊಂಡು ಬಂದಿರುವ, ಶ್ರೀಗಂಧದ ನಾಡು ಎಂದು ಕರೆಯಿಸಿಕೊಳ್ಳುವ, ಅತ್ಯುತ್ತಮ ಅರಣ್ಯ ನಿರ್ವಹಣೆಯಿಂದ ಗಮನ ಸೆಳೆದಿದ್ದ ಕರ್ನಾಟಕ ಅರಣ್ಯ ಇಲಾಖೆ ಗೌರವವೇ ಮಣ್ಣು ಪಾಲಾಗುವಂತಹ ಸನ್ನಿವೇಶ ಸೃಷ್ಟಿಯಾಗುತ್ತಿದೆ. ಅದರಲ್ಲೂ ಇತ್ತೀಚಿನ ಮಾನವ ವನ್ಯಜೀವಿ ಸಂಘರ್ಷದ ಪ್ರಕರಣಗಳು ಹೆಚ್ಚಿವೆ. ಹುಲಿಯಂತಹ ದೊಡ್ಡ ಪ್ರಾಣಿಗೆ ವಿಷವಿಕ್ಕುವುದು ಮರುಕಳಿಸುತ್ತಲೇ ಇದೆ. ಚಾಮರಾಜನಗರ ಜಿಲ್ಲೆಯ ಮಲೈಮಹದೇಶ್ವರ ವನ್ಯಜೀವಿ ಧಾಮ ವ್ಯಾಪ್ತಿಯಲ್ಲಿ ನಾಲ್ಕು ಮರಿಗಳು ಸೇರಿ ಐದು ಹುಲಿಗಳು ಏಕಕಾಲಕ್ಕೆ ಜೀವ ಕಳೆದುಕೊಂಡಿರುವ ಬರೀ ಕರ್ನಾಟಕ ಮಾತ್ರವಲ್ಲ. ಭಾರತದ ಹುಲಿ ಸಂರಕ್ಷಣಾ ಇತಿಹಾಸದಲ್ಲೇ ಮೊದಲು. ಪರಿಸ್ಥಿತಿ ಹೀಗಿರುವಾಗ ಹುಲಿ ಸಂರಕ್ಷಣೆಗೆಂದೇ ಕರ್ನಾಟಕ ಸರ್ಕಾರ ಕೋಟ್ಯಂತರ ಖರ್ಚು ಮಾಡಿ ಅಧಿಕಾರಿಗಳು, ಸಿಬ್ಬಂದಿ ನಿಯೋಜಿಸಿ ಸೇವೆ ನೀಡುವಾಗ ಅದು ಬರೀ ಲೆಕ್ಕಕ್ಕೆ ಸೀಮಿತ ಎನ್ನುವಂತಾದರೆ ರೂಪಿಸಿದ ಆಶಯವಾದರೂ ಎನ್ನುವ ಪ್ರಶ್ನೆ ಎದುರಾಗಲಿದೆ. ಜನರ ತೆರಿಗೆ ಹಣ ಈ ರೀತಿ ಪೋಲಾಗುವುದು ಕೂಡ ಚರ್ಚೆಯನ್ನು ಹುಟ್ಟು ಹಾಕಿದೆ.

ಹುದ್ದೆಗಿಲ್ಲ ಅಧಿಕಾರ

ಕರ್ನಾಟಕದಲ್ಲಿ ಮೂರು ದಶಕದ ಹಿಂದೆಯೇ ಹುಲಿ ಯೋಜನೆಗೆ ಪ್ರತ್ಯೇಕ ಹುದ್ದೆಯನ್ನು ಸೃಜಿಸಲಾಗಿದೆ. ಹುಲಿ ಯೋಜನೆ ಕ್ಷೇತ್ರ ನಿರ್ದೇಶಕರ ಹುದ್ದೆಗೆ ಹಿರಿಯ ಐಎಫ್‌ಎಸ್‌ ಅಧಿಕಾರಿಯನ್ನು ನೇಮಿಸಿಕೊಂಡು ಬರಲಾಗುತ್ತಿದೆ. ಈ ಕಚೇರಿ ಮೈಸೂರಿನಲ್ಲಿಯೇ ಇದೆ. ಮೈಸೂರು ಭಾಗದಲ್ಲಿಯೇ ಹೆಚ್ಚು ಹುಲಿಗಳು ಇರುವುದರಿಂದ ಈ ಕಚೇರಿ ಇಲ್ಲೇ ಇರಲಿ ಎನ್ನುವ ಉದ್ದೇಶ ಹೊಂದಲಾಗಿತ್ತು. ಕೆಲವು ವರ್ಷಗಳ ಕಾಲ ಬಂಡೀಪುರ,ನಾಗರಹೊಳೆ ಸಹಿತಿ ಎಲ್ಲಾ ಹುಲಿ ಯೋಜನೆ ನಿರ್ದೇಶಕರು ಹುಲಿ ಯೋಜನೆ ನಿರ್ದೇಶಕರಿಗೆ ವರದಿ ಮಾಡಿಕೊಳ್ಳುವ ಪರಿಪಾಠವಿತ್ತು. ಕೆಲ ವರ್ಷ ಮೈಸೂರು ಹಾಗೂ ಶಿವಮೊಗ್ಗ ಭಾಗಕ್ಕೆ ಇಬ್ಬರು ಹುಲಿ ಯೋಜನೆ ನಿರ್ದೇಶಕರನ್ನೂ ನಿಯೋಜಿಸಿ ವಿಂಗಡಿಸಲಾಯಿತು. ಪ್ರತಿ ಮಾಹಿತಿಯೂ ಹುಲಿ ಯೋಜನೆ ನಿರ್ದೇಶಕರ ಸುಪರ್ದಿಯಲ್ಲಿತ್ತು. ಇವರೇ ವೇತನ ಪ್ರಾಧಿಕಾರವೂ ಆಗಿದ್ದರಿಂದ ಆಡಳಿತ ಬಿಗಿಯಾಗಿಯೇ ಇತ್ತು. ಕೆಲ ವರ್ಷಗಳ ಹಿಂದೆ ಈ ಹುದ್ದೆಯ ಅಧಿಕಾರವನ್ನು ಆಯಾ ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ವ್ಯಾಪ್ತಿಗೆ ನೀಡಲಾಯಿತು. ಇದರಿಂದ ಹುಲಿ ಯೋಜನೆ ನಿರ್ದೇಶಕರ ಹುದ್ದೆ ಡಮ್ಮಿಯಾಗಿ ಹೋಯಿತು. ಒಬ್ಬ ಹಿರಿಯ ಐಎಫ್ಎಸ್‌ ಅಧಿಕಾರಿಯಂತೂ ಹುಲಿ ಯೋಜನೆ ನಿರ್ದೇಶರಾಗಿ ತಮ್ಮ ಕಚೇರಿಯನ್ನು ಸಿಗರೇಟ್‌ ಸೇದುವ ಕೇಂದ್ರ ಮಾಡಿಕೊಂಡಿದ್ದರು. ಹುಲಿ ಕುರಿತು ಮಾಹಿತಿ ಕೇಳಿದರೆ ನನ್ನನ್ನು ಕೇಳಬೇಡಿ. ನನ್ನ ಅಧಿಕಾರ ಕಿತ್ತುಕೊಂಡಿದ್ಧಾರೆ ಎಂದು ನಗುತ್ತಲೇ ಅಸಹಾಯಕತೆ ತೋಡಿಕೊಳ್ಳೋರು. ಇನ್ನೊಬ್ಬ ಅಧಿಕಾರಿ ಇಲ್ಲಿಗೆ ಬಂದರು ಅಧಿಕಾರವಿಲ್ಲದ ಸನ್ನಿವೇಶ ನೋಡಿ ಮೂರೇ ತಿಂಗಳಿಗೆ ಮತ್ತೊಂದು ಹುದ್ದೆಗೆ ಹೋದರು. ಅಪರ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಯನ್ನು ಈಗ ಅರಣ್ಯ ಸಂರಕ್ಷಣಾಧಿಕಾರಿ ದರ್ಜೆಗೆ ಇಳಿಸಿ ಮಹತ್ವವನ್ನು ಕಡಿಮೆ ಮಾಡಲಾಗಿದೆ. ಈಗ ನಿರ್ದೇಶಕರಾಗಿರುವವರಿಗೆ ಹಿಂದಿನ ಅಧಿಕಾರ ನೀಡುವ ಭರವಸೆ ನೀಡಿ ಪೋಸ್ಟಿಂಗ್‌ ಮಾಡಿದರೂ ಮೇಲಿನವರ ಲಾಬಿಯಿಂದ ಹಿಂದಿನ ರೀತಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವ ಸನ್ನಿವೇಶವೇ ನಿರ್ಮಾಣವಾಗಿದೆ.

ಬೇರೆ ರಾಜ್ಯಗಳಲ್ಲಿ ಹುಲಿ ಯೋಜನೆ ನಿರ್ದೇಶಕರ ಹುದ್ದೆಗೆ ಅದರದ್ದೇ ಕಾರ್ಯವ್ಯಾಪ್ತಿ, ಅಧಿಕಾರವಿದೆ. ಇಲ್ಲಿ ಪರಿಸ್ಥಿತಿ ವಿಭಿನ್ನ. ಹುಲಿ ಯೋಜನೆ ನಿರ್ದೇಶಕರನ್ನು ನೇಮಿಸಿ ಹೀಗೆ ಮಾಡಿದರೆ ಏನು ಹೇಳೋದು ಎಂದು ಹಿರಿಯ ಅಧಿಕಾರಿಯೊಬ್ಬರು ಬೇಸರದಿಂದಲೇ ಪ್ರಶ್ನಿಸುತ್ತಾರೆ.

ಕಾರ್ಯಪಡೆಯೂ ಕಾರ್ಯಹೀನ

ಹುಲಿ, ಆನೆಗಳು ಹೆಚ್ಚಿರುವ ಪ್ರದೇಶದಲ್ಲಿ ಸಂಘರ್ಷದ ಪ್ರಮಾಣ ಹೆಚ್ಚಿದ್ದರಿಂದ ಪರಿಸ್ಥಿತಿ ನಿಯಂತ್ರಣಕ್ಕೆಂದು ಮೈಸೂರು ಜಿಲ್ಲೆಯ ಎಚ್‌ಡಿಕೋಟೆಯಲ್ಲಿ ವಿಶೇಷ ಕಾರ್ಯಪಡೆ ರೂಪಿಸಲಾಯಿತು. ಬಂಡೀಪುರ, ನಾಗರಹೊಳೆ ಸಹಿತ ಈ ಭಾಗದಲ್ಲಿ ಏನೇ ಅರಣ್ಯ ಸಂಘರ್ಷದ ಚಟುವಟಿಕೆ, ಕಾನೂನು ಸುವ್ಯವಸ್ಥೆ ಸನ್ನಿವೇಶ ಇದ್ದರೆ ಕಾರ್ಯಪಡೆ ಅಧಿಕಾರಿ. ಸಿಬ್ಬಂದಿ ಸ್ಥಳಕ್ಕೆ ಧಾವಿಸುತ್ತಿದ್ದರು. ಒಂದು ದಶಕದಿಂದ ಎಸಿಎಫ್‌ ದರ್ಜೆ ಅಧಿಕಾರಿ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ಇಲಾಖೆ ಕೆಲ ಹಿರಿಯ ಅಧಿಕಾರಿಗಳಿಗೆ ಇದು ಬೇಡವಾಯಿತು. ಸಿಬ್ಬಂದಿಯನ್ನು ತಮ್ಮ ಕಚೇರಿಗಳಿಗೆ ನಿಯೋಜಿಸಿಕೊಂಡರು.ವಾಹನಗಳು ಕೆಲವು ಅಧಿಕಾರಿಗಳ ಸ್ವಂತಬಳಕೆಗೆ ನಿಯೋಜನೆಗೊಂಡಿವೆ. 136 ಮಂದಿ ಇದ್ದ ಹುದ್ದೆಗಳಲ್ಲಿ ಈಗ 30 ಮಂದಿಯೂ ಇಲ್ಲ.ಮುಖ್ಯವಾಗಿ ಹುಲಿ ದಾಳಿಯಂತಹ ಸನ್ನಿವೇಶ ನಿಯಂತ್ರಿಸಲು ರೂಪಿಸಿದ ಘಟಕ ನಿತ್ರಾಣಗೊಂಡಿದೆ.

ಅರಣ್ಯ ಇಲಾಖೆಯಲ್ಲಿ ಗಾರ್ಡ್‌ ಸಹಿತ ಕೆಳ ಹಂತದ ಸಿಬ್ಬಂದಿಗಳಿಲ್ಲ ಎನ್ನುವ ಸಬೂಬನ್ನು ಅಧಿಕಾರಿಗಳು ನೀಡುತ್ತಾರೆ. ಆದರೆ ಬಹುತೇಕ ಸಿಬ್ಬಂದಿಗಳು ಈಗ ವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಸೇವಕರಂತೆ ಕೆಲಸ ಮಾಡುವ ಸನ್ನಿವೇಶ ನಿರ್ಮಾಣವಾಗಿದೆ. ಪ್ರಚಾರ ಹಾಗೂ ಮಾಹಿತಿ ತಂತ್ರಜ್ಞಾನ( ಐಸಿಟಿ) ವಿಭಾಗಕ್ಕೆ ನಿಯೋಜಿಸಲಾಗಿದೆ. ಅರಣ್ಯ ಇಲಾಖೆಯಲ್ಲಿ ವಿಶೇಷ ಸೇವೆ, ಸ್ಟ್ರೈಕ್‌ ಫೋರ್ಸ್‌ ಎನ್ನುವ ಹೆಸರು ನೀಡಿ ಅವರನ್ನು ನಗರಗಳಿಗೆ ನಿಯೋಜಿಸಿ ಕೆಳ ಹಂತದಲ್ಲಿ ಕೆಲಸ ಮಾಡುವ ಸಿಬ್ಬಂದಿ ಇಲ್ಲದಂತೆ ಮಾಡಲಾಗಿದೆ. ಇದರಿಂದ ಅರಣ್ಯ ಇಲಾಖೆಗೆ ಬಿಳಿಯಾನೆಗಳನ್ನು ಸೃಷ್ಟಿಸಿ ಕೆಳ ಹಂತದ ಕಾಲಾಳುಗಳೇ ಇಲ್ಲದಂತೆ ಮಾಡುವ ಪ್ರಯತ್ನಗಳು ಎಗ್ಗಿಲ್ಲದೇ ನಡೆದಿವೆ. ಇದನ್ನು ಕೇಳಬೇಕಾದ ಹಿರಿಯ ಅಧಿಕಾರಿಗಳು ವೈರಾಗ್ಯದ ಹಂತಕ್ಕೆ ಬಂದಿದ್ದಾರೆ ಎನ್ನುವ ಮಾತುಗಳು ಅರಣ್ಯ ಇಲಾಖೆಯಲ್ಲಿ ಕೇಳಿ ಬರುತ್ತಿವೆ.

ಹಿಂದೆ ಎ.ಸಿ.ಲಕ್ಷ್ಮಣ್‌, ಯಲ್ಲಪ್ಪರೆಡ್ಡಿ, ಬಿ.ಕೆ.ಸಿಂಗ್‌ ರಂತಹ ದಕ್ಷ ಅಧಿಕಾರಿಗಳಿದ್ದರು. ಖಾಕಿ ಡ್ರೆಸ್‌ ಹಾಕಿಕೊಂಡೇ ಕ್ಷೇತ್ರ ಕಾರ್ಯಕ್ಕೆ ಬರೋರು. ಕಾಡಲ್ಲಿ ನಡೆದುಕೊಂಡೇ ಹೋಗೋರು. ಹುಲಿ ಸತ್ತರೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಖುದ್ದು ಬರೋರು. ಇದರಿಂದ ಎಲ್ಲಾ ಹಂತದ ಅಧಿಕಾರಿಗಳು, ಸಿಬ್ಬಂದಿಗಳಲ್ಲಿ ಒಂದು ರೀತಿಯ ಭಯವಿತ್ತು. ಕೆಲಸವೂ ಆಗೋದು. ಈಗ ಎಲ್ಲವೂ ಅಯೋಮಯ. ಕರ್ನಾಟಕದಲ್ಲಿ ಐದು ಹುಲಿ ಸತ್ತರೂ ಹುಲಿ ಯೋಜನೆ ನಿರ್ದೇಶಕರಿಗೆ ಇದು ಬೇಕಿಲ್ಲ. ಅವರಿಗೆ ಸರ್ಕಾರ ರಜೆ ನೀಡಿದೆ. ವನ್ಯಜೀವಿ ಮುಖ್ಯ ಪರಿಪಾಲಕರಿಗೆ ಮೂರೂವರೆ ದಶಕ ಅರಣ್ಯ ಇಲಾಖೆಯಲ್ಲಿ ಉಂಡೆದ್ದ ಹಿರಿಯ ಅಧಿಕಾರಿಗೆ ಹುಲಿ ಮೃತಪಟ್ಟ ಸ್ಥಳಕ್ಕೆ ಬರಲು ಸಮಯವೇ ಇಲ್ಲ. ನಿವೃತ್ತಿ ಇರುವ ಕಾರಣದಿಂದ ಈಗ ಬೀಳ್ಕೊಡುಗೆ ಪಡೆಯುವ ಸಮಯ. ಇದು ಈಗಿನ ಸನ್ನಿವೇಶ.

ಕರ್ನಾಟಕದಲ್ಲಿ ಕೆಎಚ್‌ಪಾಟೀಲ್‌. ಕೆಎಚ್‌ರಂಗನಾಥ್‌, ಎಚ್‌.ವಿಶ್ವನಾಥ್‌, ಸಿ.ಎಚ್‌.ವಿಜಯಶಂಕರ್‌, ರಮಾನಾಥ ರೈ ಅವರಂತವರು ಅರಣ್ಯ ಸಚಿವರಾಗಿ ಇಲಾಖೆ ಮೇಲೆ ಹಿಡಿತ ಹೊಂದಿದ್ದವರು. ಕೆಲಸ ಕೂಡ ಮಾಡಿದವರು. ಪ್ರಾಮಾಣಿಕತೆ ಜತೆಗೆ ತುರ್ತಾಗಿ ಪ್ರತಿಕ್ರಿಯಿಸಿರುವ ಈಗಿನ ಅರಣ್ಯ ಸಚಿವ ಈಶ್ವರ ಖಂಡ್ರೆ ಸಕ್ರಿಯ ಸಚಿವ. ಅವರ ಇರುವಿಕೆ ಪರಿಣಾಮಕಾರಿಯಾಗಿದ್ದರೂ ಇಲಾಖೆಯಲ್ಲಿ ದಕ್ಷತೆ, ವೃತ್ತಿಪರತೆ, ಅಧಿಕಾರಿಗಳು ಹಾಗೂ ಸಿಬ್ಬಂದಿಯಲ್ಲಿ ಆಡಳಿತ ಭಯವನ್ನೂ ತರುವಲ್ಲಿ ಸಚಿವರ ಪ್ರಯತ್ನ ಪರಿಣಾಮಕಾರಿಯಾಗಿಲ್ಲ. ಹುಲಿ ನಿರ್ವಹಣೆ ಚಟುವಟಿಕೆಗಳು, ಕಾರ್ಯಪಡೆಗಳಿಗೆ ದಕ್ಷತೆ ತುಂಬಿ, ಕೆಳ ಹಂತದ ಸಿಬ್ಬಂದಿಗಳ ನಿಯೋಜನೆಯಲ್ಲಿ ಆಗುತ್ತಿರುವ ಅವ್ಯವಸ್ಥೆ ಸರಿಪಡಿಸಿದರೆ ಸಚಿವರಿಎ ಇನ್ನಷ್ಟು ಒಳ್ಳೆಯ ಹೆಸರು ಬರಬಹುದು ಎನ್ನುವ ಅಭಿಪ್ರಾಯ ಕೇಳಿ ಬರುತ್ತಿವೆ.

ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.