ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣ; ಪತ್ನಿ ನಿಖಿತಾ ಸಿಂಘಾನಿಯಾಗೆ ಬಿಗ್ ರಿಲೀಫ್; ಅತ್ತೆ, ಬಾಮೈದನಿಗೂ ಸಿಕ್ತು ಜಾಮೀನು
Atul Subhash case: ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಬಂಧನಕ್ಕೆ ಒಳಗಾಗಿದ್ದ ಪತ್ನಿ ನಿಖಿತಾ ಸಿಂಘಾನಿಯಾ ಸೇರಿ ಮೂವಗರು ಆರೋಪಿಗಳಿಗೆ ಬೆಂಗಳೂರಿನ ಸಿವಿಲ್ ಕೋರ್ಟ್ ಜಾಮೀನು ನೀಡಿದೆ.
ಬೆಂಗಳೂರು: ಪತ್ನಿಯ ಕಿರುಕುಳಕ್ಕೆ ಬೇಸತ್ತು ಬೆಂಗಳೂರಿನ ಎಐ ಇಂಜಿನಿಯರ್ ಅತುಲ್ ಸುಭಾಷ್ ಅವರು 24 ಪುಟಗಳ ಡೆತ್‌ನೋಟ್ ಬರೆದಿದ್ದು ಡಿಸೆಂಬರ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ದೇಶಾದ್ಯಂತ ಸಂಚಲನ ಮೂಡಿಸಿದ್ದ ಈ ಪ್ರಕರಣಕ್ಕೆ ಸಂಬಂಧಿಸಿ ಬಂಧನಕ್ಕೆ ಒಳಗಾಗಿದ್ದ ನಿಖಿತಾ ಸಿಂಘಾನಿಯಾ ಸೇರಿ ಮೂವರು ಆರೋಪಿಗಳಿಗೆ ನಗರದ 29ನೇ ಸಿಸಿಹೆಚ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಅತುಲ್ ಸುಭಾಷ್ ಅವರ ಪತ್ನಿ ನಿಖಿತಾ, ಅತ್ತೆ ನಿಶಾ ಸಿಂಘಾನಿಯಾ, ಬಾಮೈದ ಅನುರಾಗ್ ಸಿಂಘಾನಿಗೆ ಬೇಲ್ ಸಿಕ್ಕಿದೆ.
ಆತ್ಮಹತ್ಯೆಗೂ ಮುನ್ನ ವಿಡಿಯೋ ರೆಕಾರ್ಡ್ ಮಾಡಿಟ್ಟಿದ್ದ ಅತುಲ್ ಸುಭಾಷ್ 24 ಪುಟಗಳ ಡೆತ್‌ನೋಟ್ ಬರೆದಿಟ್ಟಿದ್ದರು. ಈ ಎರಡರಲ್ಲೂ ತಮ್ಮ ವಿಚ್ಛೇದಿತ ಪತ್ನಿ ಮತ್ತು ಪತ್ನಿಯ ಕುಟುಂಬಸ್ಥರು ಹಣಕ್ಕಾಗಿ ಕಿರುಕುಳ ನೀಡಿದ್ದಾರೆ. ನನ್ನ ವಿರುದ್ಧ 9 ಸುಳ್ಳು ಕೇಸ್ ದಾಖಲಿಸಿ ಮಾನಸಿಕ ಹಿಂಸೆ ನೀಡುತ್ತಿದ್ದರು. ಪ್ರಕರಣ ಇತ್ಯರ್ಥಕ್ಕೆ 3 ಕೋಟಿ ಬೇಡಿಕೆ ಇಟ್ಟಿದ್ದರು. ನನ್ನ ಮಗನ ಭೇಟಿಗೆ 30 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಈ ಕೇಸ್ಗಳಿಗೆ ಸಂಬಂಧಿಸಿ ಉತ್ತರ ಪ್ರದೇಶ ಕೋರ್ಟ್ಗೆ ಹೈರಾಣಾಗಿದ್ದೆ ಎಂದು ಆರೋಪಿಸಿ ಸೂಸೈಡ್ ಮಾಡಿಕೊಂಡಿದ್ದರು.
ಸ್ವಿಚ್ ಆಫ್ ಸ್ಥಳ ಬದಲಿಸುತ್ತಿದ್ದ ಆರೋಪಿಗಳು
ಸಹೋದರ ವಿಕಾಸ್ ಅವರು ಅತುಲ್ ಪತ್ನಿ ನಿಖಿತಾ ಸೇರಿ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಪ್ರಕರಣ ದಾಖಲಾದ ಬೆನ್ನಲ್ಲೇ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದರು. ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದ ಮಾರತ್ತಹಳ್ಳಿ ಪೊಲೀಸರು, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ನಿಖಿತಾಳನ್ನು ಹರಿಯಾಣದ ಗುರುಗ್ರಾಮದಲ್ಲಿ, ನಿಶಾ, ಅನುರಾಗ್ನನ್ನು ಉತ್ತರ ಪ್ರದೇಶದಲ್ಲಿ ಬಂಧನಕ್ಕೆ ಒಳಗಾಗಿದ್ದರು. ಮೂವರು ಸಹ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ದಿನೆದಿನೇ ನೆಲೆಸುತ್ತಿದ್ದ ಸ್ಥಳಗಳನ್ನು ಬದಲಿಸುತ್ತಿದ್ದರು.
ಆದರೆ ತಮಗೆ ಅಗತ್ಯ ಇದ್ದಾಗಲೆಲ್ಲಾ ಮೊಬೈಲ್ ಸ್ವಿಚ್ ಆನ್ ಮಾಡಿ ತಮ್ಮ ಆಪ್ತರೊಂದಿಗೆ ಮಾತನಾಡುತ್ತಿದ್ದರು. ಆಗ ಮೊಬೈಲ್ ಟವರ್ ಲೊಕೇಷನ್ ಆಧರಿಸಿ ಆರೋಪಿಗಳನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾದರು. ಬಳಿಕ ನಿಶಾ, ನಿಖಿತಾ, ಅನರಾಗ್ನನ್ನು ಬೆಂಗಳೂರಿಗೆ ಕರೆ ತಂದು ನ್ಯಾಯಾಲಯದ ಮುಂದೆ ಹಾಜರು ಮಾಡಲಾಗಿತ್ತು. ನ್ಯಾಯಾಂಗ ಬಂಧನಕ್ಕೆ ಒಳಪಡಿಸಿ ಮೂವರನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿತ್ತು. ಇದೀಗ ಮೂವರನ್ನು ಬೇಲ್ ಮೇಲೆ ಬಿಡುಗಡೆ ಮಾಡಲಾಗಿದೆ. ಡಿ 9 ರಂದು ಬೆಂಗಳೂರಿನ ಮಾರತ್ತಹಳ್ಳಿಯ ಅಪಾರ್ಟ್ಮೆಂಟ್ವೊಂದರಲ್ಲಿ ಟೆಕ್ಕಿ ಶವವಾಗಿ ಪತ್ತೆಯಾಗಿದ್ದರು.
ಟೆಕ್ಕಿ ಪರ ವಾದಿಸಿದ ವಕೀಲರು ಹೇಳಿದ್ದೇನು?
ಮೃತ ಟೆಕ್ಕಿ ಪರ ವಕೀಲ ವಿನಯ್ ಸಿಂಗ್ ವಾದ ಮಂಡಿಸಿದರು. ಡೆತ್ ನೋಟ್ ಅನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಆದರೆ ಅದನ್ನಿನ್ನೂ ಪರಿಗಣಿಸಿಲ್ಲ. ಅವರ ವಿಡಿಯೋವನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಜೊತೆಗೆ ಅವರ ಕೈಬರಹವನ್ನೂ ಪರಿಶೀಲಿಸಲಾಗುತ್ತಿದೆ. ಇಡೀ ಕುಟುಂಬಕ್ಕೆ ನ್ಯಾಯ ಒದಗಿಸಲು ಸರ್ವಪ್ರಯತ್ನ ಮಾಡುತ್ತೇನೆ. ಜಾಮೀನು ಆದೇಶವನ್ನು ರದ್ದುಗೊಳಿಸಲು ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ವಿನಯ್ ANIಗೆ ತಿಳಿಸಿದ್ದಾರೆ.
ಟೆಕ್ಕಿಯ ಆತ್ಮಹತ್ಯೆ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿಯಾದ ವಿಚ್ಛೇದಿತ ಪತ್ನಿಯ ಚಿಕ್ಕಪ್ಪನಿಗೆ ಅಲಹಾಬಾದ್ ಹೈಕೋರ್ಟ್ ಡಿಸೆಂಬರ್ ಮಧ್ಯದಲ್ಲಿ ನಿರೀಕ್ಷಣಾ ಜಾಮೀನು ನೀಡಿತ್ತು. ಚಿಕ್ಕಪ್ಪ 'ವಾಸ್ತವವಾಗಿ ಅಸಮರ್ಥರಾಗಿದ್ದಾರೆ' ಎಂದು ವಕೀಲರು ವಾದಿಸಿದ್ದರು. ಅವರು ಆತ್ಮಹತ್ಯೆಗೆ ಪ್ರಚೋದನೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದರು. ಮೂಲತಃ ಉತ್ತರ ಪ್ರದೇಶದವರಾದ ಟೆಕ್ಕಿ 2019 ರಲ್ಲಿ ವೈವಾಹಿಕ ವೆಬ್ಸೈಟ್ನಲ್ಲಿ ಭೇಟಿಯಾಗಿ ನಂತರ ವಿವಾಹವಾಗಿದ್ದರು. ದಂಪತಿಗೆ 2020 ರಲ್ಲಿ ಗಂಡು ಮಗು ಜನಿಸಿತ್ತು.