ಬಂಧನ ಭೀತಿಗೆ ಹೆದರಿ ಅತುಲ್ ಸುಭಾಷ್ ಪತ್ನಿ ಪರಾರಿ, ಅತ್ತೆ, ಬಾಮೈದ ಅರೆಸ್ಟ್; ಹೆಚ್ಚಾಯ್ತು ಟೆಕಿ ಪರ ಬೆಂಬಲ
Atul Subhash Suicide Case: ಬಂಧನ ಭೀತಿಗೆ ಹೆದರಿ ಆತ್ಮಹತ್ಯೆಗೆ ಶರಣಾದ ಟೆಕ್ಕಿ ಅತುಲ್ ಸುಭಾಷ್ ಪತ್ನಿ ನಿಖಿತಾ ಸಿಂಘಾನಿಯಾ ಪರಾರಿಯಾಗಿದ್ದಾರೆ. ಆದರೆ ಅತುಲ್ ಅವರ ಅತ್ತೆ ಮತ್ತು ಬಾಮೈದನನ್ನು ಬಂಧಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ #BengaluruSuicideCase ಎಂದು ಟ್ರೆಂಡ್ ಆಗುತ್ತಿದ್ದು, ಅತುಲ್ ಪರ ಹೆಚ್ಚಿದ ಬೆಂಬಲ ಹೆಚ್ಚಾಗಿದೆ. (ವರದಿ-ಎಚ್.ಮಾರುತಿ)
ಬೆಂಗಳೂರು: ಸಾಫ್ಟ್ ವೇರ್ ಇಂಜಿನಿಯರ್ ಅತುಲ್ ಸುಭಾಷ್ (Atul Subhash Suicide Case) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶಕ್ಕೆ ತೆರಳಿರುವ ಮಲ್ಲತ್ತಹಳ್ಳಿ ಪೊಲೀಸ್ ಠಾಣೆ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ಅತುಲ್ ಸುಭಾಷ್ ಸಹೋದರ ಬಿಕಾಸ್ ಕುಮಾರ್ ನೀಡಿದ ದೂರಿನ ಅನ್ವಯ ಮಾರತ್ ಹಳ್ಳಿ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಕಾಯ್ದೆ 108, ಆತ್ಮಹತ್ಯೆಗೆ ಪ್ರಚೋದನೆ ಆರೋಪದಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಪ್ರಕರಣದ ತನಿಖಾಧಿಕಾರಿಯಾಗಿರುವ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಜ್ಞಾನದೇವ್ ನೇತೃತ್ವದ ತಂಡ ಈಗಾಗಲೇ ಜೈನಾಪುರ ತಲುಪಿದೆ. ಆದರೆ, ಆರೋಪಿಗಳಾದ ಅತುಲ್ ಸುಭಾಷ್ ಪತ್ನಿ ನಿಖಿತಾ ಸಿಂಘಾನಿಯಾ, ತಾಯಿ ನಿಶಾ ಸಿಂಘಾನಿಯಾ, ಸಹೋದರ ಅನುರಾಗ್ ಸಿಂಘಾನಿಯಾ ಹಾಗೂ ಸಂಬಂಧಿ ಸುಶೀಲ್ ಸಿಂಘಾನಿಯಾ ಅವರು ತಮ್ಮ ಮನೆಗೆ ಬೀಗ ಹಾಕಿ ಪರಾರಿಯಾಗಿದ್ದರು. ನಿಶಾ ಮತ್ತು ಅನುರಾಗ್ ಇಬ್ಬರೂ ಬೈಕ್‌ನಲ್ಲಿ ತೆರಳಿದರು ಎಂದು ಸ್ಥಳೀಯರು ತಿಳಿಸಿದ್ದಾರೆ. ಪ್ರಸ್ತುತ ಅತುಲ್ ಅತ್ತೆ, ಬಾಮೈದನನ್ನು ಬಂಧಿಸಲಾಗಿದೆ. ಆದರೆ ಪತ್ನಿಗಾಗಿ ಶೋಧ ನಡೆಯುತ್ತಿದೆ.
ಕಾನೂನು ಪ್ರಕಾರ ಮೊದಲು ನೋಟಿಸ್ ಜಾರಿಗೊಳಿಸಿ ಮೃತ ಅತುಲ್ ಪತ್ನಿಯ ವಿಚಾರಣೆ ನಡೆಸಲಾಗುವುದು. ವಿಚಾರಣೆಗೆ ಸಹಕರಿಸದಿದ್ದರೆ ಹುಡುಕಿ ಬಂದಿಸಲಾಗುತ್ತದೆ. ನಂತರ ಬಿಹಾರಕ್ಕೆ ತೆರಳಿ ಅತುಲ್ ಅವರ ಪೋಷಕರು ಮತ್ತು ಸಹೋದರನಿಂದ ಹೇಳಿಕೆ ಪಡೆಯಲಾಗುವುದು ಎಂದು ಹಿರಿಯ ಪೊಲಿಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅತುಲ್ ವಿರುದ್ಧ ನಿಖಿತಾ 9 ಪ್ರಕರಣಗಳನ್ನು ದಾಖಲಿಸಿದ್ದು, ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗಲು ಬೆಂಗಳೂರಿನಿಂದ ಜೈನಾಪುರಕ್ಕೆ 40 ಬಾರಿ ಹೋಗಿದ್ದರು. ಆಕೆಯ ಮನೆಯವರಿಂದ ತುಂಬಾ ಕಷ್ಟಪಟ್ಟಿದ್ದ ಎಂದು ಅತುಲ್ ಪೋಷಕರು ಆರೋಪಿಸಿದ್ದಾರೆ.
2019ರಲ್ಲಿ ವಿವಾಹವಾಗಿದ್ದ ಅತುಲ್-ನಿಶಾ
ಅತುಲ್ ಸುಭಾಷ್, ನಿಖಿತಾ ಸಿಂಘಾನಿಯಾಗೆ 2019ರಲ್ಲಿ ವಿವಾಹವಾಗಿದ್ದು, 4 ವರ್ಷದ ಗಂಡು ಮಗು ಇದೆ. ಆದರೆ ತನ್ನ ತಾಯಿ ಹಾಗೂ ಸಹೋದರನ ಕುಮ್ಮಕ್ಕಿನಿಂದ ಅತುಲ್ ವಿರುದ್ಧ ನಿಕಿತಾ ಸುಳ್ಳು ದೂರು ದಾಖಲಿಸಿದ್ದಳು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಆರೋಪಿಗಳು ಅತುಲ್ ಸುಭಾಷ್‌ಗೆ ಮಗನನ್ನು ನೋಡಲೂ ಅವಕಾಶ ನೀಡಿರಲಿಲ್ಲ. ಪುತ್ರನ ಭೇಟಿಗೆ ರೂ.30 ಲಕ್ಷಕ್ಕೆ ಬೇಡಿಕೆಯಿಟ್ಟಿದ್ದರು. ನ್ಯಾಯಾಲಯದ ಕಲಾಪಗಳಿಗೆ ಹಾಜರಾದಾಗ ರೂ. 3 ಕೋಟಿ ಕೊಡಲಾಗದಿದ್ದರೆ ಬದುಕಿರಬೇಡ ಎಂದು ಹಿಯಾಳಿಸುತ್ತಿದ್ದರು. ಇದರಿಂದ ಮಾನಸಿಕವಾಗಿ ಹಾಗೂ ದೈಹಿಕವಾಗಿ ನೊಂದ ಅತುಲ್ ಸುಭಾಷ್ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಬಿಕಾಸ್ ಕುಮಾರ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ಟ್ರೆಂಡ್ ಆದ #BengaluruSuicideCase
ದೇಶದ ಐಟಿಬಿಟಿ ರಾಜಧಾನಿ ಬೆಂಗಳೂರಿನಲ್ಲಿ ಟೆಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣ ದೇಶ ವಿದೇಶಗಳಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಚರ್ಚೆಯಾಗುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ #JusticeForAtulSubhash ಮತ್ತು #BengaluruSuicideCase ಟ್ರೆಂಡ್ ಪ್ರಸಿದ್ದಿ ಪಡೆದಿವೆ. ಪರ ವಿರೋಧ ಚರ್ಚೆ ಬಿರುಸಾಗಿದೆ. ಸಾಮಾಜಿಕ ಮಾಧ್ಯಮ 'ಎಕ್ಸ್'ನಲ್ಲೂ ಅತುಲ್ ಪರವಾಗಿಯೇ ಸಂದೇಶಗಳು ಹರಿದಾಡುತ್ತಿವೆ. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ.
ಭಾರತದಲ್ಲಿ ನ್ಯಾಯ ವ್ಯವಸ್ಥೆ ಹದಗೆಟ್ಟಿದ್ದು, ನ್ಯಾಯಾಂಗ ವ್ಯವಸ್ಥೆ ಸಂಪೂರ್ಣವಾಗಿ ಬದಲಾಗಬೇಕಿದೆ ಎಂದು ಒಬ್ಬರು ಅಭಿಪ್ರಾಯಪಟ್ಟಿದ್ದರೆ ಇನ್ನೂ ಕೆಲವರು ಲಿಂಗ ಸಮಾನತೆಗಾಗಿ ಬೇಡಿಕೆ ಇರಿಸಿದ್ದಾರೆ. ಅತುಲ್ ಪತ್ನಿಯನ್ನು ಕೆಲಸದಿಂದ ತೆಗೆದು ಹಾಕುವಂತೆಯೂ ಬೇಡಿಕೆ ಹೆಚ್ಚುತ್ತಿದೆ. ಆತ್ಮಹತ್ಯೆಗೂ ಮುನ್ನ ಅತುಲ್ ಸುಭಾಷ್ ಮಾಡಿದ್ದ 90 ನಿಮಿಷಗಳ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಭಾರತದಲ್ಲಿ ನರಮೇಧ ನಡೆಯುತ್ತಿದೆ. ಜನರನ್ನು ರಕ್ಷಿಸಿ ವಾಕ್ ಸ್ವಾತಂತ್ರ್ಯ ಮರುಸ್ಥಾಪಿಸಿ ಎಂದು ಅತುಲ್ ಮನವಿ ಮಾಡಿಕೊಂಡಿದ್ದರು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಟೆಸ್ಲಾ ಕಂಪನಿ ಸಿಇಒ ಇಲಾನ್ ಮಸ್ಟ್ ಅವರ ನೆರವನ್ನೂ ಯಾಚಿಸಿದ್ದರು.