ಬೇಕರಿಗೆ ಅಡ್ಡವಿದ್ದ ರಿಕ್ಷಾ ಸರಿಸಲು ಹೇಳಿದ ಮಾಲೀಕ: ಕೋಪಗೊಂಡ ರಿಕ್ಷಾ ಚಾಲಕನಿಂದ ಹಲ್ಲೆಗೆ ಯತ್ನ
ರಿಕ್ಷಾ ಚಾಲಕನು ತನ್ನ ಸಂಗಡಿಗರೊಂದಿಗೆ ಬೇಕರಿ ಮಾಲೀಕನಿಗೆ ಹಲ್ಲೆಗೆ ಯತ್ನಿಸಿದ ಘಟನೆ ಮಂಗಳೂರಿನ ಸಮೀಪದ ತೊಕ್ಕೊಟ್ಟಿನಲ್ಲಿ ನಡೆಸಿದೆ.

ಮಂಗಳೂರು: ಬೇಕರಿ ಮುಂಭಾಗದಲ್ಲಿ ನಿಲ್ಲಿಸಲಾಗಿದ್ದ ಟೆಂಪೋ ರಿಕ್ಷಾವನ್ನು ಬದಿಗೆ ಸರಿಸಲು ಹೇಳಿದ್ದಕ್ಕೆ ಕುಪಿತಗೊಂಡ ಚಾಲಕ ತನ್ನ ಸಹಚರ ರಿಕ್ಷಾ ಚಾಲಕನೊಂದಿಗೆ ಬೇಕರಿಗೆ ನುಗ್ಗಿ ಮಾಲಕ ಮತ್ತು ಅವರ ತಾಯಿಗೆ ಹಲ್ಲೆಗೆ ಯತ್ನಿಸಿದ್ದು, ರಿಕ್ಷಾ ಚಾಲಕರ ಪುಂಡಾಟಿಕೆಯ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.
ಮಂಗಳೂರು ಸಮೀಪದ ತೊಕ್ಕೊಟ್ಟು ಜಂಕ್ಷನ್‌ನಲ್ಲಿ ಈ ಘಟನೆ ನಡೆದಿದೆ. ಮಾರುತಿ ಸ್ವೀಟ್ಸ್ ಮಾಲೀಕರಾದ ಅಶ್ವಿನ್ ಕುಮಾರ್ ಅವರು ತಮ್ಮ ಬೇಕರಿ ಮುಂದುಗಡೆಯೇ ಅಡ್ಡಲಾಗಿ ನಿಲ್ಲಿಸಿದ್ದ ಟೆಂಪೋ ರಿಕ್ಷಾ ಸ್ವಲ್ಪ ಬದಿಗೆ ಸರಿಸುವಂತೆ ಚಾಲಕ ಬಶೀರ್‌ನಲ್ಲಿ ಕೇಳಿಕೊಂಡಿದ್ದಾರೆ. ಅಷ್ಟಕ್ಕೇ ಕುಪಿತಗೊಂಡ ಚಾಲಕ ಬಶೀರ್ ತನ್ನ ಸಹಚರ ರಿಕ್ಷಾ ಚಾಲಕನಾದ ಇಶಾನ್‌ನೊಂದಿಗೆ ಬೇಕರಿಗೆ ನುಗ್ಗಿ ಮಾಲಕ ಅಶ್ವಿನ್ ಅವರಿಗೆ ಹಲ್ಲೆ ನಡೆಸಲು ಮುಂದಾಗಿದ್ದಾನೆ. ಬಶೀರ್ ಮತ್ತು ಇಷಾನ್ ಜೊತೆ ಮತ್ತೆ ಕೆಲವು ರಿಕ್ಷಾ ಚಾಲಕರು ಕೂಡ ಸ್ಥಳದಲ್ಲಿ ಜಮಾಯಿಸಿ ದಾಂಧಲೆಗೆ ಸಹಕಾರ ನೀಡಿದ್ದಾರೆ ಎನ್ನಲಾಗಿದೆ.
ಆ ಸಂದರ್ಭದಲ್ಲಿ ಬೇಕರಿಯೊಳಗಿದ್ದ ಅಶ್ವಿನ್ ಅವರ ತಾಯಿ ಮತ್ತು ಸಿಬ್ಬಂದಿ ಯುವತಿ, ರಿಕ್ಷಾ ಚಾಲಕರನ್ನು ತಡೆದಿದ್ದಾರೆ. ಅವರನ್ನು ತಳ್ಳಿ ರಿಕ್ಷಾ ಚಾಲಕ ಹಲ್ಲೆಗೆ ಮುಂದಾಗುತ್ತಿದ್ದ ವೇಳೆ ಪಕ್ಕದ ಶಿವಸಾಗರ್ ಹೊಟೇಲಿನ ಮಾಲಕ ಸುಚಿವೃತ ಶೆಟ್ಟಿ ಅವರು ಮಧ್ಯ ಪ್ರವೇಶಿಸಿ ಬೇಕರಿ ಮಾಲೀಕನ ಮೇಲೆ ಹಲ್ಲೆಗೆ ಮುಂದಾಗಿದ್ದ ಪುಂಡ ರಿಕ್ಷಾ ಚಾಲಕರನ್ನ ಅಂಗಡಿಯಿಂದ ಹೊರ ತಳ್ಳಿದ್ದಾರೆ. ಘಟನೆಯ ದೃಶ್ಯವು ಬೇಕರಿಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಬೇಕರಿ ಮಾಲಕ ಅಶ್ವಿನ್ ಅವರು ತನ್ನ ಮತ್ತು ತಾಯಿ ಮೇಲೆ ಹಲ್ಲೆಗೆ ಯತ್ನಿಸಿ ಜೀವ ಬೆದರಿಕೆ ನೀಡಿರುವ ರಿಕ್ಷಾ ಚಾಲಕರಾದ ಬಶೀರ್ ಮತ್ತು ಇಷಾನ್ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.