ಉತ್ತರ ಭಾರತ, ದಕ್ಷಿಣ ಭಾರತ ಎಂಬ ಭೇದ ಬೇಡ; ಮೊಹನ್ ದಾಸ್ ಪೈಗೆ ಝೊಹೊ ಸಿಇಒ ಪಾಠ, ಎಕ್ಸ್ನಲ್ಲಿ ಕುತೂಹಲಕಾರಿ ಚರ್ಚೆ
Bengaluru ignored post: ಉತ್ತರ ಭಾರತ, ದಕ್ಷಿಣ ಭಾರತ ಎಂಬ ಭೇದ ಮಾಡಬೇಡಿ ಎಂದು ಝೊಹೊ ಸಿಇಒ ಶ್ರೀಧರ್ ವೆಂಬು ಅವರು ಮಾಹಿತಿ ತಂತ್ರಜ್ಞಾನ ಉದ್ಯಮಿ ಮೊಹನ್ ದಾಸ್ ಪೈ ಅವರಿಗೆ ಪಾಠ ಮಾಡಿದ್ದಾರೆ. (ವರದಿ- ಎಚ್.ಮಾರುತಿ)

ಬೆಂಗಳೂರು: ಇತ್ತ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಧಾರಕಾರ ಮಳೆ ಸುರಿಯುತ್ತಿದ್ದರೆ, ಅತ್ತ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಆರೋಗ್ಯ, ಕೃಷಿ ಮತ್ತು ಸುಸ್ಥಿರ ನಗರಗಳನ್ನು ಸುಧಾರಿಸಲು 3 ಕೃತಕ ಬುದ್ದಿಮತ್ತೆ ನಾವಿನ್ಯತಾ ಕೇಂದ್ರಗಳನ್ನು ಸ್ಥಾಪಿಸುವುದಾಗಿ ಘೋಷಣೆ ಮಾಡಲಾಗಿದೆ. ಈ ಕೃತಕ ಬುದ್ದಿ ಮತ್ತೆ ಕೇಂದ್ರಗಳನ್ನು ಏಐಐಎಂಎಸ್ ಮತ್ತು ದೆಹಲಿ, ರೋಪರ್ ಮತ್ತು ಕಾನ್ಪುರ ಐಐಟಿಗಳಲ್ಲಿ ಸ್ಥಾಪಿಸುವುದಾಗಿ ತಿಳಿಸಿದ್ದರು. ಕೂಡಲೇ ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಮಾಹಿತಿ ತಂತ್ರಜ್ಞಾನ ಉದ್ಯಮಿ ಮೋಹನ್ ದಾಸ್ ಪೈ ಅವರು ಎಕ್ಸ್ ಮೂಲಕ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಧರ್ಮೇಂದ್ರ ಪ್ರದಾನ್ ಮತ್ತು ಕೇಂದ್ರ ಸಚಿವ ಅಶ್ವಿನ್ ವೈಷ್ಣವ್ ಅವರನ್ನು ಟ್ಯಾಗ್ ಮಾಡಿರುವ ಅವರು ದೇಶದ ಐಟಿ ರಾಜಧಾನಿ ಬೆಂಗಳೂರಿಗೆ ಏನೂ ಇಲ್ಲವೇ ಎಂದು ಪ್ರಶ್ನಿಸಿದ್ದರು. ಪ್ರದಾನ್ ಅವರೇ ನೀವು ಮತ್ತು ವೈಷ್ಣವ್ ಅವರು ದಕ್ಷಿಣ ಭಾರತದ ಐಟಿ ಉದ್ಯಮವನ್ನು ಕಡೆಗಣಿಸುತ್ತಿದ್ದೀರಿ, ಬೆಂಗಳೂರನ್ನು ಏಕೆ ಉದಾಸೀನ ಮಾಡುತ್ತೀದ್ದೀರಿ ಎಂದು ಪ್ರಶ್ನಿಸಿದ್ದರು. ಬೆಂಗಳೂರು ಎನ್ಡಿಎಗೆ ಮತ ಹಾಕಿದೆ. ಆದರೆ ನೀವು ಬೆಂಗಳೂರಿಗೆ ಮಲತಾಯಿ ಧೋರಣೆಯನ್ನು ತೋರಿಸುತ್ತಿದ್ದೀರಿ. ನೀವು ಪದೇ ಪದೇ ಉದಾಸೀನ ಮಾಡುತ್ತಿರುವುದರಿಂದ ಇಲ್ಲಿನ ನಾಗರಿಕರು ಕೋಪಗೊಂಡಿದ್ದಾರೆ ಮತ್ತು ನಿರಾಸೆ ಹೊಂದಿದ್ದಾರೆ. ನಾವು ದೇವರು ಕಡೆಗಣಿಸಿದ ಮಕ್ಕಳೇ ಎಂದು ಪ್ರಶ್ನಿಸಿದ್ದರು.
ಪೈಗೆ ಶ್ರೀಧರ್ ವೆಂಬು ಪಾಠ
ಇಷ್ಟಕ್ಕೇ ಬಿಡದ ಪೈ ಅವರು, ತಮ್ಮ ಹೇಳಿಕೆಗೆ ಪ್ರಧಾನಿ ಮೋದಿ, ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ, ಕೇಂದ್ರ ಸಚಿವರಾದ ಎಚ್ಡಿ ಕುಮಾರಸ್ವಾಮಿ, ನಿರ್ಮಲಾ ಸೀತಾರಾಮನ್ ಅವರನ್ನೂ ಟ್ಯಾಗ್ ಮಾಡಿದ್ದರು. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರವೂ ಬೆಂಗಳೂರನ್ನು ಕಡೆಗಣಿಸುತ್ತಿದೆ ಎಂದೂ ಆಪಾದಿಸಿದ್ದರು. ಪೈ ಅವರು ಟ್ವೀಟ್ ಮಾಡಿದ ಮರುದಿನ ಝೊಹಾ ಕಂಪನಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶ್ರೀಧರ್ ವೆಂಬು ಅವರು ನಾನೂ ಸಹ ಆಯ್ಕೆ ಸಮಿತಿಯ ಸದಸ್ಯನಾಗಿದ್ಧೇನೆ. ಸಮಿತಿ ಈ ಕೃತಕ ಬುದ್ದಿಮತ್ತೆ ನಾವಿನ್ಯತಾ ಕೇಂದ್ರಗಳನ್ನು ಎಲ್ಲೆಲ್ಲಿ ಸ್ತಾಪಿಸಬೇಕು ಎಂದು ಚರ್ಚೆ ನಡೆಸಿಯೇ ನಿರ್ಧಾರ ಕೈಗೊಂಡಿದ್ಧೇವೆ ಎಂದು ಸ್ಪಷ್ಟಪಡಿಸಿದ್ದರು.
ಈ ಸಮಿತಿಯಲ್ಲಿ ದಕ್ಷಿಣ ಭಾರತದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಬಹುತೇಕ ನಾವೆಲ್ಲರೂ ಖಾಸಗಿ ವಲಯದಿಂದಲೇ ಬಂದಿರುವವರಾಗಿದ್ದೆವು. ಸರ್ಕಾರವೂ ನಮಗೆ ಯಾವುದೇ ಆಯ್ಕೆಯನ್ನು ಸೂಚಿಸಿರಲಿಲ್ಲ. ಕೂಲಂಕಷವಾಗಿ ಪರಿಶೀಲನೆ ನಡೆಸಿದ ನಂತರವಷ್ಟೇ ಈ ನಗರಗಳನ್ನು ಆಯ್ಕೆ ಮಾಡಿದ್ಧೇವೆ ಎಂದು ಪ್ರತಿಕ್ರಿಯಿಸಿದ್ದಾರೆ. ಎಲ್ಲೆಲ್ಲಿ ಕೃತಕ ಬುದ್ದಿಮತ್ತೆ ಕೇಂದ್ರಗಳ ಸ್ಥಾಪನೆ ಕುರಿತು ಸಮಿತಿಯೇ ತೀರ್ಮಾನಿಸಿದೆ. ದಯಮಾಡಿ ದಕ್ಷಿಣ ಉತ್ತರ ಎಂಬ ಭಾವನೆಯನ್ನು ನಾಗರಿಕರಲಿ ಮೂಡಿಸಬೇಡಿ ಎಂದೂ ಶ್ರೀಧರ್ ಮನವಿ ಮಾಡಿದ್ದಾರೆ. ಸಭೆಯಲ್ಲಿ ಬೆಂಗಳೂರು ಐಐಟಿ, ಕ್ಯಾಲಿಕಟ್ನ ಎನ್ಐಟಿ, ಹೈದರಾಬಾದ್ನ ಐಐಟಿ, ಮುಂಬೈ ಐಐಟಿಗಳೂ ಚರ್ಚೆಗೆ ಬಂದಿದ್ದವು. ಆದರೆ ಅಂತಿಮವಾಗಿ ಮೇಲಿನ ಮೂರು ನಗರಗಳನ್ನು ಆಯ್ಕೆ ಮಾಡಲಾಯಿತು ಎಂದಿದ್ದಾರೆ.
ಈ ಮೂರು ಎಐಗಳು ಮಾತ್ರ ಏಕೆ? ಇನ್ನೂ ಹೆಚ್ಚಿನ ಎಐಗಳನ್ನು ಸ್ಥಾಪಿಸಬಹುದಾಗಿತ್ತಲ್ಲವೇ ಎಂದೂ ಪೈ ಪ್ರಶ್ನಿಸಿದ್ದಾರೆ. ಸಮಿತಿಯ ಆಯ್ಕೆ ಕುರಿತು ಪೈ ಅವರು ಸಮಾಧಾನಗೊಂಡಂತಿಲ್ಲ. ಆಯ್ಕೆಯ ಮಾನದಂಡಗಳನ್ನು ಸಾರ್ವಜನಿಕವಾಗಿ ಪ್ರಕಟಿಸಿ ಎಂದು ಕೇಳಿದ್ದಾರೆ. ದೇಶಕ್ಕೆ ಏನು ಅನುಕೂಲವೋ ಅದನ್ನು ಮಾಡಿದ್ಧೇವೆ ಎಂದು ಶ್ರೀಧರ್ ಚರ್ಚೆಗೆ ತೆರೆ ಎಳೆದಿದ್ದಾರೆ.