B. S. Yediyurappa: ವಯಸ್ಸು 80 ಆಗ್ತಿದೆ; ಚುನಾವಣೆಗೆ ಸ್ಪರ್ಧಿಸಲ್ಲ ಎಂದ ಮಾಜಿ ಸಿಎಂ ಬಿಎಸ್‌ವೈ
B. S. Yediyurappa: ರಾಜ್ಯ ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿದೆ. ಬಿಜೆಪಿಯ ಪ್ರಭಾವಿ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತೊಮ್ಮೆ ಚುನಾವಣಾ ರಾಜಕೀಯ ನಿವೃತ್ತಿ ವಿಚಾರ ಪ್ರಸ್ತಾಪಿಸಿ ಗಮನಸೆಳೆದಿದ್ದಾರೆ. ಬೆಳಗಾವಿಯಲ್ಲಿ ಅವರು ಹೇಳಿದ್ದೇನು?
ಬೆಂಗಳೂರು: ವಿಧಾನ ಸಭಾ ಚುನಾವಣೆ ಹೊಸ್ತಿಲಲ್ಲಿ ಬಿಜೆಪಿಯ ಪ್ರಭಾವಿ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಚುನಾವಣಾ ರಾಜಕೀಯ ನಿವೃತ್ತಿ ನೆನಪಿಸಿ ರಾಜ್ಯದ ಗಮನಸೆಳೆದಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಮಾಜಿ ಸಿಎಂ ಬಿ.ಎಸ್.ವೈ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ. ಈಗಾಗಲೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ನನಗೆ ವಯಸ್ಸು 80 ಆಗ್ತಿದೆ. ಹೀಗಾಗಿ ಚುನಾವಣಾ ಸ್ಪರ್ಧೆಯಲ್ಲಿ ಭಾಗಿಯಾಗುವುದಿಲ್ಲ ಎಂದು ಹೇಳಿದರು.
ಚುನಾವಣಾ ರಾಜಕೀಯದಿಂದ ದೂರ ಉಳಿದರೂ ಪಕ್ಷ ಸಂಘಟನೆ ಮಾಡುವುದರಲ್ಲಿ ತೊಡಗಿಸಿಕೊಳ್ಳುತ್ತೇನೆ. ಪಕ್ಷ ಕಟ್ಟುವ ಕೆಲಸವನ್ನು ಮಾಡುತ್ತೇನೆ. ಇದಕ್ಕಾಗಿ ರಾಜ್ಯದ ಉದ್ದಗಲ ಪ್ರವಾಸ ಮಾಡುತ್ತೇನೆ. ಚುನಾವಣಾ ರಾಜಕೀಯದಲ್ಲಿ ಪುತ್ರ ಬಿ.ವೈ.ರಾಘವೇಂದ್ರ ಇದ್ದಾರೆ. ಅವರು ಶಿವಮೊಗ್ಗ ಸಂಸದರೂ ಇದ್ದು, ಆ ಕೆಲಸ ಅವರು ನೋಡಿಕೊಳ್ಳುತ್ತಾರೆ ಎಂದು ಹೇಳಿದರು.
ಬಿ.ವೈ.ವಿಜಯೇಂದ್ರ ಕೂಡ ನನ್ನ ಜತೆಗೆ ರಾಜ್ಯ ಪ್ರವಾಸ ಮಾಡುತ್ತಿದ್ದಾರೆ. ಪುತ್ರ ವಿಜಯೇಂದ್ರ ಪ್ರತಿಯೊಂದನ್ನೂ ಸರಿದೂಗಿಸಿಕೊಂಡು ಹೋಗುತ್ತಾರೆ. ವಿಜಯೇಂದ್ರ ಜತೆ ನಾನು ಓಡಾಡುತ್ತಿದ್ದೇನೆ. ನಾನೇನು ರಾಜಕೀಯ ನಿವೃತ್ತಿ ಪಡೆದಿಲ್ಲ. ದೇವರು ಶಕ್ತಿ ಕೊಟ್ಟರೆ ಮುಂದಿನ ಚುನಾವಣೆಗೂ ಓಡಾಡುವೆ ಎಂದು ಭರವಸೆಯೊಂದಿಗೆ ಹೇಳಿದರು.
ಟಿಕೆಟ್‌ಗೆ ಪೈಪೋಟಿ ಹೆಚ್ಚು, ಗೆಲ್ಲುವ ಅಭ್ಯರ್ಥಿಗೆ ಮಣೆ
ಗೆಲ್ಲುವ ಪಕ್ಷ ಮತ್ತು ಸರ್ಕಾರ ರಚಿಸುವ ಪಕ್ಷದಲ್ಲಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಸಹಜವಾಗಿಯೇ ಹೆಚ್ಚಾಗಿರುತ್ತದೆ. ಇದು ಈಗ ನಮ್ಮ ಪಕ್ಷದಲ್ಲೂ ಕಂಡುಬಂದಿದೆ. ನಾವೆಲ್ಲರೂ ಚರ್ಚಿಸಿ, ಯೋಗ್ಯ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತೇವೆ. ಪ್ರತಿಯೊಂದು ಕ್ಷೇತ್ರದ ಸಮೀಕ್ಷೆಯನ್ನು ನಡೆಸಿ ಗೆಲ್ಲುವ ಅಭ್ಯರ್ಥಿಗಳನ್ನೆ ಆಯ್ಕೆ ಮಾಡುತ್ತೇವೆ. ಇದಕ್ಕಾಗಿ ಒಂದಲ್ಲ ಎರಡು ಸಲ ಬೇಕಾದರೂ ಸಮೀಕ್ಷೆ ಮಾಡಿಸುತ್ತೇವೆ. ಟಿಕೆಟ್ ನೀಡುವ ವಿಚಾರದಲ್ಲಿ ಯಾವುದೇ ರೀತಿಯಲ್ಲೂ ಕಾಂಪ್ರಮೈಸ್ ಆಗುವುದಿಲ್ಲ. ಗೆಲ್ಲುವ ಅಭ್ಯರ್ಥಿಗೇ ಮಣೆ ಹಾಕುತ್ತೇವೆ ಎಂದು ಬಿ.ಎಸ್.ಯಡಿಯೂರಪ್ಪ ಬಹಳ ಸ್ಪಷ್ಟವಾಗಿ ಹೇಳಿದರು.
ರಾಷ್ಟ್ರ ರಾಜಕಾರಣ ನಮಗಲ್ಲ…
ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಮಂತ್ರಿ ಆಗಿದ್ದಾಗ ನನ್ನನ್ನು ಕೇಂದ್ರ ಸಂಪುಟಕ್ಕೆ ಆಹ್ವಾನಿಸಿದ್ದರು. ಆ ಸಂದರ್ಭದಲ್ಲೇ ಹೋಗಿಲ್ಲ. ರಾಷ್ಟ್ರ ರಾಜಕಾರಣ ನಮಗಲ್ಲ. ರಾಜ್ಯದಲ್ಲಿ ಪಕ್ಷವು ನನಗೆ ಎಲ್ಲ ಸ್ಥಾನಮಾನ, ಅಧಿಕಾರ, ಗೌರವ ನೀಡಿದೆ. ಆ ಋಣವನ್ನು ತೀರಿಸುವ ಹೊಣೆಗಾರಿಕೆ ನನ್ನದು. ಬಿಜೆಪಿಯನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರಲು ಪ್ರಯತ್ನಿಸುವೆ. ರಾಜ್ಯಾದ್ಯಂತ ಸಂಚರಿಸುತ್ತೇನೆ ಎಂದು ತಿಳಿಸಿದರು.
ಕೆಲವರು ಮುಂದಿನ ಸಿಎಂ ನಾನೇ ಆಗುತ್ತೇನೆ ಅಂತಾ ತಿರುಕನ ಕನಸು ಕಾಣುತ್ತಿದ್ದಾರೆ. ಒಂದು ಗಮನದಲ್ಲಿರಲಿ- ಕೇಂದ್ರ ಸಚಿವ ಅಮಿತ್ ಷಾ ನಮಗೆ ಮಾರ್ಗದರ್ಶನ ಮಾಡಿದ್ದಾರೆ. ಮುಂಬರುವ ಚುನಾವಣೆಯಲ್ಲಿ ನಿಶ್ಚಯಿಸಿದಂತೆ ನೂರಕ್ಕೆ ನೂರರಷ್ಟು ಅಂದರೆ 140 ಸ್ಥಾನಗಳಲ್ಲಿ ಗೆದ್ದೇ ಗೆಲ್ಲುತ್ತೇವೆ. ಸೂರ್ಯಚಂದ್ರ ಇರುವುದು ಎಷ್ಟು ಸತ್ಯವೋ, ಕರ್ನಾಟಕದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದು ಅಷ್ಟೇ ಸತ್ಯ ಎಂದು ವಿಶ್ವಾಸ ವ್ಯಕ್ತಪಡಿಸಿದರು.