ಕನ್ನಡ ಸುದ್ದಿ  /  Karnataka  /  Baby Elephant Injured In Nagarahole Rahul Gandhi Letter To Cm Bommai Asking For Treatment

Rahul gandhi letter to cm bommai: ನಾಗರಹೊಳೆಯಲ್ಲಿ ಮರಿ ಆನೆಗೆ ಗಾಯ; ಚಿಕಿತ್ಸೆ ಕೊಡಿಸುವಂತೆ ಸಿಎಂಗೆ ರಾಹುಲ್ ಗಾಂಧಿ ಪತ್ರ

ನಾಗರಹೊಳೆ ಮೀಸಲು ಪ್ರದೇಶದಲ್ಲಿ ಗಾಯಗೊಂಡಿದ್ದ ಮರಿ ಆನೆಗೆ ಚಿಕಿತ್ಸೆ ಕೊಡಿಸುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ.

ಭಾರತ್ ಜೋಡೋ ಯಾತ್ರೆಯ ವೇಳೆ ಸಂವಾದವೊಂದರಲ್ಲಿ ರಾಹುಲ್ ಗಾಂಧಿ ಮಾತನಾಡಿದರು.
ಭಾರತ್ ಜೋಡೋ ಯಾತ್ರೆಯ ವೇಳೆ ಸಂವಾದವೊಂದರಲ್ಲಿ ರಾಹುಲ್ ಗಾಂಧಿ ಮಾತನಾಡಿದರು.

ಬೆಂಗಳೂರು: ಭಾರತ್​ ಜೋಡೋ ಯಾತ್ರೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್​ ಗಾಂಧಿ ಅವರು ತಮ್ಮ ತಾಯಿ ಮತ್ತು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೊಂದಿಗೆ ನಿನ್ನೆ ವಿಶ್ರಾಂತಿಯಲ್ಲಿದ್ದರು.

ಇದೇ ವೇಳೆ ಅವರು ನಾಗರಹೊಳೆ ಮೀಸಲು ಪ್ರದೇಶದಲ್ಲಿ ಸಫಾರಿಗೆ ತೆರಳಿದ್ದರು. ಈ ಸಂದರ್ಭದಲ್ಲಿ ಅವರು ಗಾಯಗೊಂಡ ಆನೆ ಮರಿಯೊಂದು ತನ್ನ ತಾಯಿ ಆನೆ ಜೊತೆ ಇರುವುದನ್ನು ನೋಡಿದ್ದಾರೆ.

ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ತೀವ್ರವಾಗಿ ಗಾಯಗೊಂಡಿರುವ ಆನೆ ಮರಿಗೆ ಸೂಕ್ತ ಚಿಕಿತ್ಸೆ ಕೊಡಿಸುವಂತೆ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.

ಗಾಂಧಿ ಅವರು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬುಧವಾರ ಪತ್ರ ಬರೆದಿದ್ದಾರೆ.

<p>ಸಿಎಂ ಬೊಮ್ಮಾಯಿ ಅವರಿಗೆ ರಾಹುಲ್ ಗಾಂಧಿ ಬರೆದಿರುವ ಪತ್ರ</p>
ಸಿಎಂ ಬೊಮ್ಮಾಯಿ ಅವರಿಗೆ ರಾಹುಲ್ ಗಾಂಧಿ ಬರೆದಿರುವ ಪತ್ರ

'ನಾನು ಮತ್ತು ಕಾಂಗ್ರೆಸ್ ಅಧ್ಯಕ್ಷರು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಕ್ಕೆ ಕೆಲಕಾಲ ಭೇಟಿ ನೀಡಿದ್ದೆವು. ಅಲ್ಲಿ ಗಾಯಗೊಂಡಿರುವ ಆನೆ ಮರಿಯೊಂದು ತನ್ನ ತಾಯಿಯೊಂದಿಗೆ ಇರುವ ಕರುಣಾಜನಕ ದೃಶ್ಯ ಕಂಡಿದ್ದೇವೆ. ಪುಟ್ಟ ಮರಿಯ ಬಾಲ ಮತ್ತು ಸೊಂಡಿಲು ಭಾಗದಲ್ಲಿ ತೀವ್ರತರದ ಗಾಯಗಳಾಗಿದ್ದು, ಜೀವನ್ಮರಣ ಹೋರಾಟ ನಡೆಸುತ್ತಿದೆ' ಎಂದು ರಾಹುಲ್ ತಿಳಿಸಿದ್ದಾರೆ.

ಆನೆ ಮರಿಗೆ ತುರ್ತು ವೈದ್ಯಕೀಯ ಆರೈಕೆಯ ಅಗತ್ಯವಿದೆ. ಆದ್ದರಿಂದ, ನಾನು ರಾಜಕೀಯ ಗಡಿಗಳನ್ನು ಮೀರಿ ಮಧ್ಯಸ್ಥಿಕೆ ವಹಿಸಿ ಪುಟ್ಟ ಮರಿ ಉಳಿಸಲು ಮನವಿ ಮಾಡುತ್ತಿದ್ದೇನೆ.

ಸರಿಯಾದ ಚಿಕಿತ್ಸೆ ನೀಡಿದರೆ ಮರಿ ಬದುಕುಳಿಯುತ್ತದೆ ಎಂಬ ವಿಶ್ವಾಸವಿದೆ. ಅದಕ್ಕಾಗಿ ನೀವು ಸಮಯೋಚಿತ ಸಹಾಯ ನೀಡುತ್ತೀರಿ ಎಂದು ಭಾವಿಸಿದ್ದೇನೆ ಎಂದು ಅವರು ಪತ್ರದಲ್ಲಿ ಮನವಿ ಮಾಡಿದ್ದಾರೆ.ಅಲ್ಲದೆ, ಆನೆ ಮರಿಯು ತನ್ನ ತಾಯಿಯೊಂದಿಗೆ ಇರುವ ಫೋಟೋವನ್ನು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

'ತಾಯಿಯ ಪ್ರೀತಿ. ಬದುಕಿಗಾಗಿ ಹೋರಾಡುತ್ತಿರುವ ಚಿಕ್ಕ ಮರಿಯೊಂದಿಗೆ ತಾಯಿ ಆನೆಯನ್ನು ಕಂಡು ತುಂಬಾ ದುಃಖವಾಯಿತು' ಎಂದಿದ್ದಾರೆ.

ರಾಹುಲ್ ಗಾಂಧಿ ನಡೆಸುತ್ತಿರುವ ಕಾಂಗ್ರೆಸ್ ಐಕ್ಯತಾ ಯಾತ್ರೆಯ 7 ದಿನವಾದ ಇಂದು ಪಾಂಡವಪುರದಿಂದ ಬೆಳಗ್ಗೆ 6.30ಕ್ಕೆ ಆರಂಭವಾಗಿದೆ.

ಹೆಚ್ಚಿನ ಸುದ್ದಿಗಳಿಗೆ ನಮ್ಮನ್ನು ಫೇಸ್‌ಬುಕ್‌ ಮತ್ತು ಟ್ವಿಟರ್‌ ನಲ್ಲಿ ಫಾಲೋಮಾಡಿ.