Obituary: ಕರ್ನಾಟಕದ ಜಲಭಗೀರಥ ಡಾ.ಮಲ್ಲಣ್ಣ ನಾಗರಾಳ ನಗು ಮುಖ, ಕೃಷಿ ಜ್ಞಾನದ ನೆನಪು; ಅವರು ಅಡಿಪಾಯ ಹಾಕಿದ ಜಮೀನು,ಕೆರೆಗಳು ನಳನಳಿಸುತ್ತಿವೆ
ಡಾ.ಮಲ್ಲಣ್ಣ ನಾಗರಾಳ ಎನ್ನುವ ಹೆಸರು ಕೃಷಿ, ಮಣ್ಣು, ನೀರಲ್ಲಿ ಸೇರಿ ಹೋಗಿದೆ. ಅಷ್ಟರ ಮಟ್ಟಿಗೆ ಅವರು ಇವುಗಳನ್ನು ಪ್ರೀತಿಸಿ ಅದನ್ನು ಕೃಷಿ ಬದುಕು ಇಷ್ಟಪಡುವವರಿಗೆ ಹಂಚುತ್ತಿದ್ದರು. ಬಾಗಲಕೋಟೆ ಜಿಲ್ಲೆ ಹುನಗುಂದದಲ್ಲಿ ಶನಿವಾರ ನಿಧನರಾದ ಡಾ.ಮಲ್ಲಣ್ಣ ಅವರ ಹೆಸರು ಅಜರಾಮರ.
ಅವರ ಹೆಸರು ಮಲ್ಲಣ್ಣ ನಾಗರಾಳ. ತಮ್ಮ ಕೃಷಿಯ ಸಾಂಪ್ರದಾಯಿಕ ಜ್ಞಾನ, ಜಲ ನಿರ್ವಹಣೆಯ ವಿಚಾರದಲ್ಲಿ ಅವರು ನೂರಾರು ಮಂದಿಗೆ ಹಾಕಿಕೊಟ್ಟ ಹಾಕಿಕೊಟ್ಟ ಮಾರ್ಗದ ಕೌಶಲ್ಯಗಳಿಂದ ಅವರು ಡಾ.ಮಲ್ಲಣ್ಣ ನಾಗರಾಳ ಆಗಿದ್ದರು.ಕೃಷಿ ಬಗ್ಗೆ, ಬೆಳೆ ಬೆಳಯುವ ಮಾರ್ಗೋಪಾಯಗಳ ಕುರಿತು, ಒಡ್ಡುಗಳ ನಿರ್ಮಾಣ, ನೀರಿನ ಬಳಕೆ.. ಏನೇ ಕೇಳಿದರೂ ಅರಳು ಹುರಿದ ಹಾಗೆ ಹೇಳಿಬಿಡುತ್ತಿದ್ದರು. ಅವರ ನಿಖರತೆ ಎಷ್ಟಿತ್ತೆಂದರೆ ಕೃಷಿ, ತೋಟಗಾರಿಕೆ ಇಲಾಖೆ. ವಿಶ್ವವಿದ್ಯಾನಿಲಯದ ಅಧಿಕಾರಿಗಳು, ವಿಜ್ಞಾನಿಗಳ ಅವರ ಬಳಿಯೇ ಸಲಹೆ ಕೇಳಿಕೊಂಡು ಬರೋರು. ಮಲ್ಲಣ್ಣ ಹೇಳಿದ್ದಾರೆ ಎಂದರೆ ಅದೇ ಅಂತಿಮ ಎನ್ನುವಷ್ಟರ ಮಟ್ಟಿಗೆ ಮಲ್ಲಣ್ಣರ ಮೇಲೇ ವಿಶ್ವಾಸ. ನಗುವೇ ಅವರ ಎಲ್ಲಾ ಕಾಯಕದ ಮೂಲಮಂತ್ರ. ನಗುಮುಖದಲ್ಲಿಯೇ ಕೊಡುತ್ತಿದ್ದ ಉತ್ತರ ಎಂತವರ ಜಮೀನಿನಲ್ಲಿ ನೀರು ಮಾತ್ರ ಉಕ್ಕಿಸುತ್ತಿರಲಿಲ್ಲ. ಮುಖ ಸಂತೋಷ, ಮನಸದಲ್ಲಿ ಖುಷಿಯ ಕ್ಷಣಗಳನ್ನು ಸೃಷ್ಟಿಸುತ್ತಿತ್ತು. ಕೃಷಿ, ನೀರಿನ ವಿಚಾರವಾಗಿ ಅವರು ಹೇಳುತ್ತಿದ್ದ ಲಾವಣಿ, ಕಿರು ಗೀತೆಗಳು ಅರ್ಥಪೂರ್ಣ.
ಮಲ್ಲಣ್ಣ ನಾಗರಾಳ ಅವರ ಊರು ಬಾಗಲಕೋಟೆಯ ಜಿಲ್ಲೆಯ ಹುನಗುಂದ. ರಾಷ್ಟ್ರೀಯ ಹೆದ್ದಾರಿಯ ಹುನಗುಂದ ನಗರ ಕತ್ರಿ ಬಳಿ ಅವರ ಪೆಟ್ರೋಲ್ ಪಂಪ್. ಹಿಂಭಾಗವೇ ಮನೆ, ಬಿಳಿಯ ಅಂಗಿ, ಧೋತ್ರ, ಹಳದಿ ಶೈಲಿ ರುಮಾಲು ಕಟ್ಟಿಕೊಂಡ ನಗು ಮುಖದ ಮಲ್ಲಣ್ಣರನ್ನು ಕಂಡರೆ ಅದೆಷ್ಟೋ ಜನಕ್ಕೆ ಖುಷಿ. ಅವ್ವಾ ನೋಡ ಇವರ ಬಂದಾರ ಉಣ್ಣಾಕ್ ಏನಾರ ಕೊಡು ಎಂದು ಪತ್ನಿಗೋ, ಸೊಸೆಗೂ ಕೂಗಿ ಹೇಳೋದು ಮಲ್ಲಣ್ಣರ ಆತಿಥ್ಯದ ಶೈಲಿ. ಊಟ ಇಲ್ಲವೇ ತಿಂಡಿ, ಚಾ ಆದ ಮೇಲೆ ಮುಂದಿನ ಮಾತು. ಮಲ್ಲಣ್ಣ ಅವರು ಕೃಷಿ ಬಗ್ಗೆ ಎಷ್ಟು ನಿಖರವಾಗಿ ಹೇಳೋರು ಎಂದರೆ ಅಪ್ಡೇಟ್ ಆಗಿ ಇರುತ್ತಿದ್ದರು. ಹೊಸದನ್ನು ತೆಗೆದುಕೊಂಡು ಹಳೆಯ ಬೇರನ್ನು ಗಟ್ಟಿಗೊಳಿಸುತ್ತಿದ್ದರು.
ಒಣಬೇಸಾಯಕ್ಕೆ ಬಲ ತಂದ ಮಲ್ಲಣ್ಣ
ಕಡಿಮೆ ಖರ್ಚು ಮಾಡಿ ಒಣಬೇಸಾಯಕ್ಕೆ ಬೇಕಾದ ರೀತಿ ನೀರು ಸಂಗ್ರಹಿಸಿಟ್ಟುಕೊಂಡು ತಮ್ಮ ಜಮೀನು ಮಾತ್ರವಲ್ಲದೇ ಸುತ್ತಲಿನ ನೂರಾರು ಎಕರೆ ಭೂಮಿಗೂ ನೀರುಣಿಸಬಹುದು ಎಂದು ದೇಸಿ ನೀರಿನ ನಿರ್ವಹಣೆಯನ್ನು ಹೇಳಿಕೊಡುತ್ತಿರುವವರು ಡಾ.ಮಲ್ಲಣ್ಣ ನಾಗರಾಳ.
ಹುನಗುಂದದ ನಾಗರಾಳ ಕುಟುಂಬದ ಸಂಗನಬಸಪ್ಪ(ಮಲ್ಲಣ್ಣ ಅವರ ಅಜ್ಜ) ಅವರು ನೀರಿಗೆ ಒಡ್ಡು ಕಟ್ಟಿ, ನೀರಿಂಗಿಸುವ ಕಾಯಕ ಕೈಗೊಂಡಿದ್ದರು. 1905ರಲ್ಲಿ ಅವರ ಜಲಕಾಯಕ ಗಮನಿಸಿ ಅಂದಿನ ಬ್ರಿಟಿಷ್ ಸರಕಾರ ಅವರನ್ನು ಗೌರವಿಸಿತ್ತು. ಮುಂದೆ ಪುಣೆ ವಿಶ್ವ ವಿದ್ಯಾಲಯವೊಂದಕ್ಕೆ ಕರೆಯಿಸಿ ಪ್ರಾತ್ಯಕ್ಷತೆ ಪಡೆಯುವ ಜತೆಗೆ ಗೌರವ ಸಲ್ಲಿಸಿತ್ತು. ಅಂದು ಸಂಗನಬಸಪ್ಪ ಅವರಿಗೆ ಪ್ರೇರಣೆಯಾಗಿದ್ದು ಹುನಗುಂದ ಭಾಗದವರೇ ಆಗಿದ್ದ ಶ್ರೀ ನಾಗಭೂಷಣ ಶಿವಯೋಗಿ ಸ್ವಾಮೀಜಿ ಅವರು ರಚಿಸಿದ್ದ 'ಕೃಷಿ ಜ್ಞಾನ ದೀಪಿಕೆ' ಎನ್ನುವ 320 ಪುಟಗಳ ಕೃಷಿ-ನೀರಿನ ಸಂಬಂಧ ಬೆಸೆಯುವ ಕೃತಿ. ಇದು ಜಲಾನಯನ ಯೋಜನೆಗಳ ಗ್ರಂಥದಂತೆ ಇತ್ತು. ಇದರಿಂದ ಪ್ರೇರೇಪಿತರಾದ ಸಂಗನಬಸಪ್ಪ ಅವರು ಹತ್ತೂರುಗಳಿಗೆ ಫಲಾಪೇಕ್ಷೆಯಿಲ್ಲದೇ ಹೋಗಿ ಒಡ್ಡುಗಳನ್ನು ಕಟ್ಟಿಸಿಕೊಟ್ಟು ಬಂದರು. ಅವರ ಕಾಯಕವನ್ನೇ ಹತ್ತಿರದಿಂದ ಕಂಡಿದ್ದ ಮಗ ಶಂಕ್ರಣ್ಣ ನಾಗರಾಳ ( ಮಲ್ಲಣ್ಣರ ತಂದೆ) ಕೂಡ ಇದನ್ನೇ ಮುಂದುವರಿಸಿದರು.
ಮುಂದೆ ಇದು ಮಲ್ಲಣ್ಣ ಪರಂಪರಾಗತ ಜ್ಞಾನವಾಗಿ ಅವರಿಗೂ ಬಂದಿತು. ಇಂಥದೊಂದು ದೇಸಿ ಮಾರ್ಗವನ್ನು ಮಲ್ಲಣ್ಣ ಇನ್ನಷ್ಟು ಗಟ್ಟಿಗೊಳಿಸುತ್ತ ಬಂದರು. ಶಿವಯೋಗಿಗಳ ಕೃತಿಯನ್ನು ಜಮೀನುಗಳಲ್ಲಿ ಪ್ರಯೋಗಿಸಿ ಅನುಭವ ಪಡೆದಿದ್ದೂ ಅಲ್ಲದೇ ಯಶಸ್ವಿಯೂ ಆದರು. ನಾಲ್ಕು ದಶಕದಿಂದ ಸಾವಿರಾರು ಜಮೀನುಗಳಲ್ಲಿ ಮಲ್ಲಣ್ಣ ಅವರು ನಿರ್ಮಿಸಿರುವ ಒಡ್ಡುಗಳು, ಗುಂಡಾವರ್ತಿಗಳು, ಕೃಷಿ ಹೊಂಡಗಳು, ಕೆರೆಗಳು ಲಕ್ಷಾಂತರ ಕುಟುಂಬಗಳಿಗೆ ಬದುಕು ಕಟ್ಟಿಕೊಟ್ಟಿವೆ.
ಸ್ವತಃ ಕೃಷಿ ಖುಷಿ
ಮಲ್ಲಣ್ಣ ಇದನ್ನಷ್ಟೇ ಮಾಡಿಕೊಂಡು ಹೋಗುತ್ತಾರೆಯೇ ಎನ್ನುವ ಪ್ರಶ್ನೆಯೂ ನಿಮ್ಮಲ್ಲಿ ಮೂಡಬಹುದು. ಇಲ್ಲ ಮಲ್ಲಣ್ಣ ಮೂಲತಃ ಕೃಷಿಕರು. ಹುನಗುಂದ ಸಮೀಪವೇ ಇರುವ 16 ಎಕರೆ ಜಮೀನಿನಲ್ಲಿ ಯಥೇಚ್ಛವಾಗಿ ಬೆಳೆ ಬೆಳೆಯುತ್ತಿದ್ದರು. ಕಡಲೆ, ಜೋಳ, ತೊಗರಿ ಅವರ ಜಮೀನಿನಲ್ಲಿ ಸಮೃದ್ದವಾಗಿ ಬೆಳೆದು ಫಲ ನೀಡಲು ಕಾರಣ ಅಲ್ಲಿ ಅಳವಡಿಸಿಕೊಂಡಿರುವ ದೇಸಿ ಜಲ ಮರುಪೂರಣ ಪದ್ಧತಿ. ಜಮೀನಿನಲ್ಲಿಯೇ ಗಟ್ಟಿಯಾದ ಒಡ್ಡು ನಿರ್ಮಿಸಿ ಅಲ್ಲಿಂದ ನೀರು ಇಂಗುತ್ತಾ ಮುಂದೆ ಹರಿದು ಹೋಗಲು ಬೇಕಾದ ಪದ್ಧತಿ ಶತಮಾನದ ಹಿಂದೆಯೇ ರೂಪುಗೊಂಡಿದೆ. ಅದನ್ನು ಮಲ್ಲಣ್ಣ ಅವರು ಕಾಲಕಾಲಕ್ಕೆ ನಿರ್ವಹಣೆ ಮಾಡಿಕೊಂಡು ತಮ್ಮ ಜ್ಞಾನದಿಂದ ಇನ್ನಷ್ಟು ಅಭಿವೃದ್ಧಿಪಡಿಸಿದ್ದರು. ಅವರ ಜಮೀನಿಗೆ ಹೋದರೆ ಅಲ್ಲಿ ಒಡ್ಡು, ಗುಂಡಾವರ್ತಿ, ಹೊಂಡ ಹೀಗೆ ಬಗೆಬಗೆಯ ಜಲಮಾಪಕಗಳನ್ನು ತೋರಿಸುತ್ತಿದ್ದರು.
ಓದಿದ್ದು 10ನೇ ತರಗತಿಯಾದರೂ ಕೃಷಿ- ಜಲ ಚಟುವಟಿಕೆ ಮೂಲಕವೇ ಕೃಷಿ ಡಾಕ್ಟರ್ ಎನ್ನಿಸಿಕೊಂಡಿದ್ದಾರೆ ಮಲ್ಲಣ್ಣ. 2006ರಲ್ಲಿ ಕರ್ನಾಟಕ ಕೃಷಿ ವಿಶ್ವವಿದ್ಯಾನಿಲಯ ಇವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿತ್ತು 2015ರಲ್ಲಿ ರಾಜ್ಯ ಸರಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು. ಕೃಷಿ, ತೋಟಗಾರಿಕೆ ವಿಶ್ವವಿದ್ಯಾನಿಲಯಗಳವೂ ಗೌರವಿಸಿದ್ದವು.
ತಾವೇ ಜಮೀನಿಗೆ ಹೋಗೋರು
ಜಮೀನಿಗೆ ಹೋಗಿ ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿ ಹೀಗೆ ಮಾಡಬೇಕು ಎನ್ನುವ ಸೂಚನೆ ನೀಡುತ್ತಿದ್ದರು. ಅದರಂತೆ ಒಡ್ಡುಗಳನ್ನು ರಚಿಸಿಕೊಂಡು ನೀರು ಇಂಗಿಸಲು ಮಾರ್ಗದರ್ಶನ ಮಾಡುತ್ತಿದ್ದರು. ಅವರು ಆಸಕ್ತಿ ವಹಿಸಿದರೆ ಒಂದು ಭಾಗದಲ್ಲಿ ಕೆರೆ ಮಾಡಿಕೊಳ್ಳಲು ಸಹಕಾರ ನೀಡಿ ಇದರಿಂದ ಎಷ್ಟು ಪ್ರಮಾಣದ ನೀರು ಸಿಗಲಿದೆ ಎನ್ನುವ ನಿಖರ ಮಾಹಿತಿಯನ್ನು ಒದಗಿಸುತ್ತಿದ್ದರು. ಇದಕ್ಕಾಗಿ ಯಾರಿಂದಲೂ ಒಂದು ಪೈಸೆ ಹಣವನ್ನು ತೆಗೆದುಕೊಳ್ಳುತ್ತಿರಲಿಲ್ಲ. ಹುನಗುಂದ ಪಟ್ಟಣಕ್ಕೆ ಹೊಂದಿಕೊಂಡಿರುವ ಮಲ್ಲಣ್ಣ ಅವರ ಜಮೀನು ನೋಡಲು ವಿದೇಶಿ ಕೃಷಿಕರು, ಕೃಷಿ ವಿದ್ಯಾರ್ಥಿಗಳು, ರೈತರನ್ನು ಪ್ರೀತಿಯಿಂದ ಕರೆದುಕೊಂಡು ಹೋಗಿ ಕೃಷಿ ಪಾಠವನ್ನು ಹೇಳಿಕೊಡುತಿದ್ದರು ಮಲ್ಲಣ್ಣ
ಡಾ.ಮಲ್ಲಣ್ಣ ಅವರು ಆಶು ಕವಿಯೂ ಹೌದು. ಕೃಷಿ ಹಾಗೂ ಜಲಕ್ಕೆ ಸಂಬಂಧಿಸಿ ತಕ್ಷ ಣ ಸಾಲುಗಳನ್ನು ಸೃಷ್ಟಿಸಿ ಅದಕ್ಕೊಂದು ರೂಪ ನೀಡಬಲ್ಲವರು. ತಮ್ಮದೇ ಗಟ್ಟಿ ದನಿಯಲ್ಲಿ ಜನಪದೀಯ ಶೈಲಿಯಲ್ಲಿ ಮಲ್ಲಣ್ಣ ಅವರು ಹಾಡುತ್ತಿದ್ದರೆ ಎಂಥವರಿಗೂ ಕೃಷಿ ಬಗ್ಗೆ ಅಭಿಮಾನ ಉಕ್ಕುತ್ತಿತ್ತು. 74 ವರ್ಷಗಳಲ್ಲಿ ಆರು ದಶಕಗಳ ಕಾಲ ಕೃಷಿಗೆ ತಮ್ಮನ್ನು ಸಮರ್ಪಿಸಿಕೊಂಡ ಮಲ್ಲಣ್ಣ ಎಂದು ಮರೆಯಲಾಗದ ಪ್ರೀತಿಯ ಜೀವ.