Bagalkot News: ಬಾಗಲಕೋಟೆ ತೋಟಗಾರಿಕೆ ವಿವಿ ಕುಲಪತಿ ಆಯ್ಕೆ ಸಮಿತಿ ಅಧ್ಯಕ್ಷರಿಗೆ ಕೊಕ್: ವಿವಿ ಹಿಂದಿನ ಕುಲಪತಿಗೆ ಹೊಣೆ
Bagalkot Horticulture University ಬಾಗಲಕೋಟೆಯಲ್ಲಿರುವ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯದ ಕುಲಪತಿ ಆಯ್ಕೆ ಸಮಿತಿ ಅಧ್ಯಕ್ಷರನ್ನು ಬದಲಾಯಿಸಲಾಗಿದ್ದು ಪ್ರೊ.ಎಸ್.ಬಿ.ದಂಡಿನ ಅವರನ್ನು ನೇಮಿಸಲಾಗಿದೆ.
ಬಾಗಲಕೋಟೆ: ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯದ ಕುಲಪತಿ ಆಯ್ಕೆ ಸಮಿತಿ ಅಧ್ಯಕ್ಷರನ್ನು ಬದಲಾಯಿಸಲಾಗಿದೆ.
ಈಗಾಗಲೇ ವಿಶ್ವವಿದ್ಯಾನಿಲಯದ ಕುಲಪತಿಯಾಗಿದ್ದ ಪ್ರೊ.ಕೆ.ಎಂ.ಇಂದಿರೇಶ ಅವರ ಅವಧಿ ಮುಗಿದಿದ್ದು, ಹೊಸ ಕುಲಪತಿ ಆಯ್ಕೆ ಪ್ರಕ್ರಿಯೆ ನಡೆದಿದೆ. ಇದಕ್ಕಾಗಿ ಆಯ್ಕೆ ಸಮಿತಿಯನ್ನೂ ರಚಿಸಲಾಗಿತ್ತು. ಆದರೆ ಸಮಿತಿ ಆಯ್ಕೆಯಲ್ಲಿ ಗೊಂದಲವಿದೆ ಎನ್ನುವ ಗಂಭೀರ ಆರೋಪಗಳು ಕೇಳಿ ಬಂದಿದ್ದರಿಂದ ಆಯ್ಕೆ ಸಮಿತಿ ಅಧ್ಯಕ್ಷರನ್ನು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಬದಲು ಮಾಡಿದ್ದಾರೆ. ವಿಶ್ವ ವಿದ್ಯಾನಿಲಯದ ಮೊದಲ ಕುಲಪತಿ ಪ್ರೊ.ಎಸ್.ಬಿ. ದಂಡಿನ್ ಅವರನ್ನು ಆಯ್ಕೆ ಸಮಿತಿ ಅಧ್ಯಕ್ಷರನ್ನಾಗಿ ನಿಯೋಜಿಸಲಾಗಿದೆ.
ಸಮಿತಿಗೆ ವಿರೋಧ
ತಿಂಗಳ ಹಿಂದೆಯೇ ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯದ ಕುಲಪತಿ ಆಯ್ಕೆಗೆ ಇಲ್ಲಿಯೇ ಪ್ರಾಧ್ಯಾಪಕರಾಗಿದ್ದು ಸದ್ಯ ಕೊಡಗು ವಿಶ್ವವಿದ್ಯಾನಿಲಯದ ಕುಲಪತಿಯಾಗಿಯಾಗಿರುವ ಪ್ರೊ. ಅಶೋಕ ಸಂಗಪ್ಪ ಆಲೂರನ್ನು ಅವರನ್ನು ನೇಮಿಸಲಾಗಿತ್ತು. ಆದರೆ ತಮ್ಮದೇ ವಿಶ್ವವಿದ್ಯಾನಿಲಯದ ಕುಲಪತಿ ಆಯ್ಕೆಗೆ ಅದೇ ವಿವಿ ಪ್ರಾಧ್ಯಾಪಕರನ್ನು ನೇಮಿಸುವಂತಿಲ್ಲ ಎನ್ನುವುದು ಯುಜಿಸಿ ನಿಯಮ. ಈ ಹಿನ್ನೆಲೆಯಲ್ಲಿ ತೋಟಗಾರಿಕೆ ವಿವಿ ಅಧ್ಯಾಪಕರು ಇದನ್ನು ಬಲವಾಗಿ ವಿರೋಧಿಸಿದ್ದರು. ರಾಜ್ಯಪಾಲರಿಗೂ ಪತ್ರ ಬರೆದಿದ್ದರು. ಒಂದು ತಿಂಗಳಿನಿಂದ ಈ ಹಗ್ಗ ಜಗ್ಗಾಟ ನಡೆದು ಕುಲಪತಿ ಆಯ್ಕೆ ವಿಳಂಬವಾಗಿತ್ತು.
ಈ ಕಾರಣದಿಂದ ಅಶೋಕ ಆಲೂರ ಅವರನ್ನು ಬದಲಾಯಿಸಿ ಆದೇಶ ಹೊರಡಿಸಲಾಗಿದೆ. ಈಗ ತೋಟಗಾರಿಕೆ ವಿವಿ ಕುಲಪತಿಯಾಗಿದ್ದ ಪ್ರೊ.ಎಸ್.ಬಿ.ದಂಡಿನ ಅವರನ್ನು ನೇಮಿಸಲಾಗಿದೆ. ಇವರೂ ಕೂಡ ಇದೇ ವಿಶ್ವವಿದ್ಯಾನಿಲಯದಲ್ಲಿದ್ದವರೇ. ಇವರ ನೇಮಕವೂ ಸರಿಯಲ್ಲ ಎನ್ನುವುದು ಹಲವು ಅಧ್ಯಾಪಕರ ಬೇಸರದ ನುಡಿ.
ಈ ನಡುವೆ ಹಿಂದೂಸ್ತಾನ್ ಟೈಮ್ಸ್ ಕನ್ನಡ ಜತೆ ಮಾತನಾಡಿರುವ ಪ್ರೊ.ಎಸ್.ಬಿ.ದಂಡಿನ್, ತೋಟಗಾರಿಕೆ ವಿವಿ ಕುಲಪತಿ ಆಯ್ಕೆ ಅಧ್ಯಕ್ಷರಾಗಿ ನೇಮಿಸಿರುವ ಮಾಹಿತಿ ಬಂದಿದೆ. ಅಧಿಕೃತ ಆದೇಶಕ್ಕಾಗಿ ಕಾಯುತ್ತಿದ್ದೇನೆ. ದಸರಾ ಮುಗಿದ ನಂತರ ಪ್ರಕ್ರಿಯೆ ಆರಂಭಿಸಲಾಗುತ್ತದೆ ಎಂದು ಹೇಳಿದರು.
ಇಂಫಾಲ ಕೇಂದ್ರೀಯ ವಿವಿ ಕುಲಪತಿ, ಇಂದೋರ್ ವಿವಿಯ ಕುಲಪತಿ ಹಾಗೂ ಭಾರತೀಯ ಕೃಷಿ ಮಹಾ ಪರಿಷತ್‌ನ ಮಹಾನಿರ್ದೇಶಕರನ್ನು ಆಯ್ಕೆ ಸಮಿತಿ ಸದಸ್ಯರನ್ನಾಗಿ ನೇಮಿಸಲಾಗಿದೆ. ತೋಟಗಾರಿಕೆ ಇಲಾಖೆ ಕಾರ್ಯದರ್ಶಿ ಶಮ್ಲಾ ಇಕ್ಬಾಲ್ ಅವರು ಸದಸ್ಯ ಕಾರ್ಯದರ್ಶಿಯಾಗಿರಲಿದ್ದಾರೆ. ಈಗಾಗಲೇ ತೋಟಗಾರಿಕೆ ವಿವಿ ಕುಲಪತಿ ಹುದ್ದೆ ಆಯ್ಕೆ ಬಯಸಿ 46 ಪ್ರಾಧ್ಯಾಪಕರು ಅರ್ಜಿ ಸಲ್ಲಿಸಿದ್ದಾರೆ. ಇವರಲ್ಲಿ ಮೂವರ ಹೆಸರನ್ನು ಸಮಿತಿ ಶಿಫಾರಸು ಮಾಡಬೇಕಿದೆ ಎನ್ನುವುದು ದಂಡಿನ್ ಅವರ ವಿವರಣೆ.
ಜುಲೈ ಎರಡನೇ ವಾರದಲ್ಲಿಯೇ ತೋಟಗಾರಿಕೆ ವಿವಿ ಕುಲಪತಿ ನಿವೃತ್ತರಾಗಿದ್ದು ಆಗಿನಿಂದಲೇ ಹಿರಿಯ ಪ್ರಾಧ್ಯಾಪಕ ಪ್ರೊ. ಹೆಗ್ಡೆ ಅವರನ್ನು ಹಂಗಾಮಿ ಕುಲಪತಿಯಾಗಿ ನೇಮಿಸಲಾಗಿದೆ. ಮೂರು ತಿಂಗಳಿನಿಂದಲೂ ಈ ಹುದ್ದೆ ಖಾಲಿಯಿದೆ.