ಕೌನ್ ಬನೇಗಾ ಕರೋಡ್‌ಪತಿಯಲ್ಲಿ 50 ಲಕ್ಷ ಗೆದ್ದ ಬಾಗಲಕೋಟೆ ಯುವಕ; ಅಮಿತಾಬ್ ಬಚ್ಚನ್ ಎದುರು ಹಾಟ್ ಸೀಟ್ ನಲ್ಲಿ ಕುಳಿತು ರಮ್ಜಾನ್ ಸಾಧನೆ
Kaun Banega Crorepati: ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದ ಯುವಕನೊರ್ವ ಕೌನ್ ಬನೇಗಾ ಕರೋಡ್‌ಪತಿ ಕಾರ್ಯಕ್ರಮದಲ್ಲಿ 50 ಲಕ್ಷ ರೂಪಾಯಿ ಗೆದ್ದಿದ್ದಾನೆ. ಬಿಗ್ ಬಿ ಅಮಿತಾಬ್ ಬಚ್ಚನ್ ಎದುರು ಹಾಟ್ ಸೀಟ್ ನಲ್ಲಿ ಕುಳಿತು ರಮ್ಜಾನ್ ಮಲಿಕಸಾಬ್ ಪೀರಜಾದೆ 15 ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿ ಈ ಸಾಧನೆ ಮಾಡಿದ್ದಾನೆ.

ಬಾಲಿವುಡ್ ಖ್ಯಾತ ನಟ ಬಿಗ್ ಬಿ ಅಮಿತಾಬ್ ಬಚ್ಚನ್ ನಿರೂಪಣೆಯ ಸೋನಿ ವಾಹಿನಿಯಲ್ಲಿ ಪ್ರಸಾರವಾಗುವ ಕೌನ್ ಬನೇಗಾ ಕರೋಡ್‌ಪತಿ ಕಾರ್ಯಕ್ರಮದಲ್ಲಿ ಬಾಗಲಕೋಟೆಯ ಯುವ 15 ಪ್ರಶ್ನೆಗಳಿಗೆ ಸರಿಯಾದ ಉತ್ತರ ಹೇಳುವ ಮೂಲಕ 50 ಲಕ್ಷ ರೂಪಾಯಿ ಗೆದ್ದಿದ್ದಾನೆ. ಬಾಗಲಕೋಟೆ ಜಿಲ್ಲೆ ರಬಕವಿ-ಬನಹಟ್ಟಿ ತಾಲೂಕಿನ ಮಹಾಲಿಂಗಪುರದ ರಮ್ಜಾನ್ ಮಲಿಕಸಾಬ್ ಪೀರಜಾದೆ ಎಂಬ ಯುವಕ ಈ ಸಾಧನೆ ಮಾಡಿ ಜಿಲ್ಲೆ ಹಾಗೂ ಕರ್ನಾಟಕಕ್ಕೆ ಕೀರ್ತಿ ತಂದಿದ್ದಾನೆ. ಚಹಾದ ಅಂಗಡಿಯಲ್ಲಿ ಕೆಲಸ ಮಾಡುವ ರಮ್ಜಾನ್ ಅವರ ಈ ಸಾಧನೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಇವರ ತಂದೆ ಮಲಿಕಸಾಬ್ ವೆಲ್ಡಿಂಗ್ ಕೆಲಸ ಮಾಡುತ್ತಾರೆ.
ಚಹಾ ಅಂಗಡಿಯಲ್ಲಿ ಕೆಲಸಕ್ಕೂ ಮೊದಲು ಬ್ಯಾಡ್ಮಿಂಟನ್ ಕೋರ್ಟ್ ನಲ್ಲಿ ವಾಚ್ ಮನ್ ಕೆಲಸ ಹಾಗೂ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡಿದ್ದಾರೆ. ಸದ್ಯ ಬಿಎ ಮುಗಿಸಿ ಧಾರವಾಡದಲ್ಲಿ ಕೆಎಎಸ್ ಪರೀಕ್ಷೆಗೆ ತರಬೇತಿಗೆ ಹೋಗಿದ್ದ. ಧಾರವಾಡಕ್ಕೆ ಹೋದ ಮೂರು ದಿನದಲ್ಲಿ ಕೆಬಿಸಿಗೆ ಆಯ್ಕೆ ಆಗಿದ್ದ. ಜಟಿಲ ಪ್ರಶ್ನೆಗಳಿಗೆ ಉತ್ತರಿಸಿರುವ ರಮ್ಜಾನ್, ಅಮಿತಾಬ್ ಬಚ್ಚನ್ ರಿಂದ ಶಹಬ್ಬಾಷ್ ಗಿರಿ ಪಡೆದಿದ್ದಾನೆ. ಸೋನಿ ವಾಹಿನಿಯಲ್ಲಿ ಜನವರಿ 13 ರಂದು ರಾತ್ರಿ 9 ಕ್ಕೆ ಈ ಸಂಚಿಕೆ ಪ್ರಸಾರವಾಗಲಿದೆ.
ಇದೊಂದು ಫೇಕ್ ಆಟ ಅದಕ್ಕೆ ಹೋಗೋದು ಬೇಡ ಎಂದು ರಮ್ಜಾನ್ ತಂದೆ ಮಲಿಕಸಾಬ್ ಜಗಳ ಮಾಡ್ತಿದ್ದರಂತೆ. ಕೊನೆಗೆ ಈ ವಿಷಯವನ್ನು ಬಿಗ್ ಬಿ ಅವರ ಬಳಿ ಹೇಳಿಸಿ, ಅವರಿಂದಲೇ ಇವರ ತಂದೆಗೆ ಫೋನ್ ಮಾಡಿಸಿ ನಿಮ್ಮ ಮಗ ಕೌನ್ ಬನೇಗಾ ಕರೋಡ್‌ಪತಿ ಕಾರ್ಯಕ್ರಮಕ್ಕೆ ಆಯ್ಕೆಯಾಗಿರುವ ಬಗ್ಗೆ ಹೇಳಿದ್ದರಂತೆ. ಆ ಬಳಿಕ ಇನ್ನು ಮುಂದೆ ಅವನ ಆಟಕ್ಕೆ ಅಡ್ಡಿಪಡಿಸಲ್ಲ ಎಂದು ತಂದೆ ಹೇಳಿದರಂತೆ.
ಜೀವನದಲ್ಲಿ ಇಷ್ಟು ದೊಡ್ಡ ಮೊತ್ತದ ಚೆಕ್ ನೋಡಿರಲಿಲ್ಲ ಎಂದು ರಮ್ಜಾನ್ ಪ್ರತಿಕ್ರಿಯಿಸಿದ್ದಾನೆ. ಬಾಲ್ಯದಿಂದಲೂ ಕ್ವಿಜ್ ನಲ್ಲಿ ಆಸಕ್ತಿ ಇದ್ದ ಯುವಕ. ಪದವಿ ಓದುವಾಗ ಕೆಎಲ್ ಇ ಕಾಲೇಜಿನ ಗ್ರಂಥಾಲಯ ಬಳಕೆ ತನಗೆ ಹೆಚ್ಚು ಅನುಕೂಲ ಆಯ್ತು. ದಿನಪತ್ರಿಕೆಗಳು, ನೊಬೈಲ್ ನಲ್ಲಿ ನಿತ್ಯ ರಾಷ್ಟ್ರ, ಅಂತಾರಾಷ್ಟ್ರೀಯ ಬೆಳಗವಣಿಗೆ ಗಮನಸುತ್ತಿದ್ದ ರಮ್ಜಾನ್, 5ನೇ ತರಗತಿ ಇದ್ದಾಗಲೇ ಕೌನ್ ಬನೇಗಾ ಕರೋಡ ಪತಿ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದ. ಒಟ್ಟು 8 ಸಲ ಕೆಬಿಸಿಗೆ ಸಂದರ್ಶನ ನೀಡಿದ್ದ. ಮೂರನೇ ಪ್ರಯತ್ನದಲ್ಲಿ ಹಾಟ್ ಸೀಟ್ ನಲ್ಲಿ ಕೂಡುವ ಅವಕಾಶ ಗಿಟ್ಟಿಸಿಕೊಂಡಿದ್ದ, ಇದೀಗ 50 ಲಕ್ಷ ಗೆದ್ದು ಎಲ್ಲರ ಗಮನ ಸೆಳೆದಿದ್ದಾನೆ.
