Aero India 2025: ಏರೋ ಇಂಡಿಯಾದಲ್ಲಿ ಬೆಂಗಳೂರು ಬಾನಂಗಳದ ರಂಗೇರಿಸಲು ಬರುತ್ತಿದೆ ಸೂರ್ಯಕಿರಣ್ ಏರೋಬ್ಯಾಟಿಕ್ ತಂಡ
Aero India 2025: ಬೆಂಗಳೂರು ಏರ್ ಶೋಗೆ ದಿನಗಣನೆ. ಮುಂದಿನ ವಾರ ಐದು ದಿನ ಬೆಂಗಳೂರಿನ ಬಾನಂಗಣದಲ್ಲಿ ಬಗೆಬಗೆಯ ಯುದ್ದವಿಮಾನಗಳ ಪ್ರದರ್ಶನ ಮೈ ನವಿರೇಳಿಸಲಿದೆ. ಇದರ ವಿವರ ಇಲ್ಲಿದೆ.

Aero India 2025: ಮುಂದಿನ ನಾಲ್ಕು ದಿನಗಳಲ್ಲಿ ಇದೇ ಸಮಯದಲ್ಲಿ ಬೆಂಗಳೂರಿನ ಆಗಸದಲ್ಲಿ ಲೋಹದ ಹಕ್ಕಿಗಳ ಸಂಚಾರ ಗಮನ ಸೆಳೆಯಲಿದೆ. ಬೆಂಗಳೂರಿನ ಬಾನಂಗಳದಲ್ಲಿ ಬೆರಗುಗೊಳಿಸುವ ದೃಶ್ಯವನ್ನು ವೀಕ್ಷಿಸುವ ಅವಕಾಶ ಎರಡು ವರ್ಷದ ನಂತರ ಮತ್ತೆ ಬಂದಿದೆ. ಫೆಬ್ರವರಿ 10-14 ರಿಂದ, ಪ್ರತಿಷ್ಠಿತ ಸೂರ್ಯ ಕಿರಣ್ ಏರೋಬ್ಯಾಟಿಕ್ ತಂಡ ಅದ್ಭುತ ವಾಯು ಪ್ರದರ್ಶನವನ್ನು ಪ್ರದರ್ಶಿಸುವ ಮೂಲಕ ಬೆಂಗಳೂರಿನ ಬಾನಂಗಳವನ್ನು ಬೆಳಗಲಿದೆ. ಬೆಂಗಳೂರು ಏರ್‌ಶೋಗೆ ಈಗಾಗಲೇ ಸಿದ್ದತೆಗಳು ಪೂರ್ಣಗೊಂಡಿದ್ದು. ಐದು ದಿನಗಳ ವಾಯು ಪ್ರದರ್ಶನ, ರಕ್ಷಣಾ ಉತ್ಪನ್ನಗಳ ಪ್ರದರ್ಶನ ಹಾಗೂ ಬಾನಂಗಳದಲ್ಲಿ ಹಾರಾಟಕ್ಕೆ ವೇದಿಕೆಯನ್ನು ಅಣಿಗೊಳಿಸಲಾಗಿದೆ. ಬೆಂಗಳೂರು ಮಾತ್ರವಲ್ಲದೇ ಭಾರತದ ನಾನಾ ಭಾಗಗಳಿಂದಲೂ ಆಸಕ್ತರು ಏರೋ ಇಂಡಿಯಾದ ಭಾಗವಾಗಲು ಆಗಮಿಸುತ್ತಿದ್ದಾರೆ.
ಭಾರತೀಯ ವಾಯುಪಡೆಯ ರಾಯಭಾರಿಗಳು" ಎಂದು ಕರೆಯಲ್ಪಡುವ ಸೂರ್ಯ ಕಿರಣ್ ತಂಡ ತನ್ನ ಅದ್ಭುತ ಕೌಶಲಕ್ಕೆ ಹೆಸರಾಗಿದೆ. ಕೆಂಪು ಮತ್ತು ಬಿಳಿ ಹಾಕ್ ಎಂಕೆ-132 ಜೆಟ್‌ಗಳನ್ನು ಹಾರಿಸುವ ಈ ತಂಡವು ಉಸಿರು ಬಿಗಿಹಿಡಿದಿಡುವಂಥ ಅದ್ಭುತ ಕುಶಲತೆಯನ್ನು ಪ್ರದರ್ಶಿಸುವ ಮೂಲಕ ಜನರನ್ನು ಬೆರಗುಗೊಳಿಸಲಿದೆ. ಆಕರ್ಷಕವಾದ ಲೂಪ್ ಮತ್ತು ರೋಮಾಂಚಕ ಬ್ಯಾರೆಲ್ ರೋಲ್‌ಗಳಿಂದ ಹಿಡಿದು ಗುರುತ್ವಾಕರ್ಷಣೆಗೇ ಸವಾಲು ಎಸಗುವ ರೀತಿಯಲ್ಲಿ ತಲೆಕೆಳಗಾಗಿ ಹಾರಾಟ ನಡೆಸಿ ಮೈ ಜುಮ್ಮೆನುವ ವಾತಾವರಣ ಸೃಷ್ಟಿಸಲಿದೆ. ಅಪ್ರತಿಮ ಪರಿಣತಿ ಹೊಂದಿರುವ ಪೈಲಟ್‌ಗಳ ಕೈಚಳಕವನ್ನು ಅಂದು ವೀಕ್ಷಿಸಬಹುದಾಗಿದೆ. ಪ್ರತಿಯೊಂದು ಪ್ರದರ್ಶನಗಳೂ ಪೈಲಟ್‌ಗಳ ಅಪ್ರತಿಮ ಪರಿಣತಿ ಮತ್ತು ಸಮನ್ವಯಕ್ಕೆ ಸಾಕ್ಷಿಯಾಗಿ ನಿಲ್ಲುತ್ತವೆ ಎನ್ನುವುದು ಹಿಂದಿನ ಏರ್ ಶೋಗಳಲ್ಲಿ ಆಗಿರುವ ಅನುಭವ. ಈ ಬಾರಿಯೂ ಇದೇ ಅನುಭವಕ್ಕೆ ಕ್ಷಣಗಣನೆ ಶುರುವಾಗಿದೆ.
ಸೂರ್ಯ ಕಿರಣ್ ಏರೋಬ್ಯಾಟಿಕ್ ತಂಡವನ್ನು ಮೊದಲು ಸ್ಥಾಪಿಸಿದ್ದು 1996 ರಲ್ಲಿ. ಈ ತಂಡವು ಒಂಬತ್ತು ವಿಮಾನಗಳನ್ನು ಹೊಂದಿರುವ ಏಷ್ಯಾದ ಏಕೈಕ ಏರೋಬ್ಯಾಟಿಕ್ ತಂಡ ಎಂಬ ವಿಶೇಷತೆ ತನ್ನದಾಗಿಸಿಕೊಂಡಿದೆ. ವಿಶ್ವದ ಕೆಲವೇ ಕೆಲವು ಗಣ್ಯ ಏರೋಬ್ಯಾಟಿಕ್ ತಂಡಗಳಲ್ಲಿ ಭಾರತದ ತಂಡವೂ ಒಂದು ಎನ್ನುವ ಹಿರಿಮೆಯನ್ನೂ ಹೊಂದಿದೆ. ಈ ಅಸಾಧಾರಣ ತಂಡವು ಭಾರತದಾದ್ಯಂತ 700 ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದ್ದು, ಚೀನಾ, ಶ್ರೀಲಂಕಾ, ಮ್ಯಾನ್ಮಾರ್, ಥಾಯ್ಲೆಂಡ್, ಸಿಂಗಪುರ ಮತ್ತು ಯುಎಇಯಂತಹ ದೇಶಗಳಲ್ಲಿ ಅಂತರರಾಷ್ಟ್ರೀಯ ವಾಯು ಪ್ರದರ್ಶನಗಳಲ್ಲಿ ಭಾರತೀಯ ವಾಯುಪಡೆಯ ಹಿರಿಮೆಯನ್ನು ಪ್ರದರ್ಶಿಸಿದೆ.
ತಂಡದಲ್ಲಿ ಯಾರು ಇದ್ದಾರೆ
ಸೂರ್ಯ ಕಿರಣ್ ತಂಡವು ಭಾರತದಲ್ಲಿ ತಯಾರಿಸಿದ 9 ಹಾಕ್ ಎಂಕೆ 132 ವಿಮಾನಗಳನ್ನು ಪರವಾನಗಿ ಪಡೆದಿದ್ದು, 5 ಮೀಟರ್‌ಗಿಂತ ಕಡಿಮೆ ದೂರದಲ್ಲಿ ಅತ್ಯಂತ ಹತ್ತಿರದಲ್ಲಿ ಹಾರುತ್ತದೆ. ತಂಡದಲ್ಲಿ 14 ಪೈಲಟ್‌ಗಳಿದ್ದಾರೆ. ತಂಡದ ನಾಯಕ ಗ್ರೂಪ್ ಕ್ಯಾಪ್ಟನ್ ಅಜಯ್ ದಾಶರಥಿ, ಇವರು ಎಸ್‌ಯು-30 ಎಂಕೆಐ ಪೈಲಟ್. ಉಪ ನಾಯಕ ಗ್ರೂಪ್ ಕ್ಯಾಪ್ಟನ್ ಸಿದ್ಧೇಶ್ ಕಾರ್ತಿಕ್. ಇತರ ಪೈಲಟ್‌ಗಳು ಸ್ಕ್ವಾಡ್ರನ್ ಲೀಡರ್ ಜಸ್ದೀಪ್ ಸಿಂಗ್, ಸ್ಕ್ವಾಡ್ರನ್ ಲೀಡರ್ ಹಿಮಖುಷ್ ಚಾಂಡೆಲ್, ಸ್ಕ್ವಾಡ್ರನ್ ಲೀಡರ್ ಅಂಕಿತ್ ವಶಿಷ್ಠ, ಸ್ಕ್ವಾಡ್ರನ್ ಲೀಡರ್ ವಿಷ್ಣು, ಸ್ಕ್ವಾಡ್ರನ್ ಲೀಡರ್ ದಿವಾಕರ್ ಶರ್ಮಾ, ಸ್ಕ್ವಾಡ್ರನ್ ಲೀಡರ್ ಗೌರವ್ ಪಟೇಲ್, ಸ್ಕ್ವಾಡ್ರನ್ ಲೀಡರ್ ಎಡ್ವರ್ಡ್ ಪ್ರಿನ್ಸ್, ಸ್ಕ್ವಾಡ್ರನ್ ಲೀಡರ್ ಲಲಿತ್ ವರ್ಮಾ, ವಿಂಗ್ ಕಮಾಂಡರ್ ರಾಜೇಶ್ ಕಜ್ಲಾ, ಬೆಂಗಳೂರಿನ ಮೂಲದ ವಿಂಗ್ ಕಮಾಂಡರ್ ಅರ್ಜುನ್ ಪಟೇಲ್, ವಿಂಗ್ ಕಮಾಂಡರ್ ಕುಲದೀಪ್ ಹೂಡಾ ಮತ್ತು ವಿಂಗ್ ಕಮಾಂಡರ್ ಅಲೆನ್ ಜಾರ್ಜ್.
ಅವರ ತಾಂತ್ರಿಕ ತಂಡದಲ್ಲಿ ವಿಂಗ್ ಕಮಾಂಡರ್ ಅಭಿಮನ್ಯು ತ್ಯಾಗಿ, ಸ್ಕ್ವಾಡ್ರನ್ ಲೀಡರ್ ಸಂದೀಪ್ ಧಯಾಲ್ ಮತ್ತು ಫ್ಲೈಟ್ ಲೆಫ್ಟಿನೆಂಟ್ ಮಣಿಲ್ ಶರ್ಮಾ ನೇತೃತ್ವ ವಹಿಸಿದ್ದಾರೆ. ತಂಡದ ವೀಕ್ಷಣೆಗಾರ ಮತ್ತು ಆಡಳಿತಾಧಿಕಾರಿ ಫ್ಲೈಟ್ ಲೆಫ್ಟಿನೆಂಟ್ ಕನ್ವಾಲ್ ಸಂಧು ಮತ್ತು ತಂಡದ ವೈದ್ಯರು ಸ್ಕ್ವಾಡ್ರನ್ ಲೀಡರ್ ಸುದರ್ಶನ್ ಇದ್ದಾರೆ.
ಹೊಗೆ ಪಾಡ್‌ಗಳ ಹೊಸ ಸೇರ್ಪಡೆ
ಬಣ್ಣ ಬಣ್ಣದ ಹೊಗೆಯನ್ನು ಉತ್ಪಾದಿಸುವ ಸಾಮರ್ಥ್ಯವಿರುವ ಹಾಕ್ ಎಂಕೆ 132 ವಿಮಾನದೊಂದಿಗೆ ಹೊಗೆ ಪಾಡ್‌ಗಳು ಹೊಸ ಸೇರ್ಪಡೆ. ಇದನ್ನು ಭಾರತದಲ್ಲಿ ಭಾರತೀಯ ವಾಯುಪಡೆಯ ನೆಲೆಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ತಂಡವು ತಮ್ಮ ವೈಮಾನಿಕ ಪ್ರದರ್ಶನಗಳ ಸಮಯದಲ್ಲಿ ಆಕಾಶದಾದ್ಯಂತ ರಾಷ್ಟ್ರಧ್ವಜದ ಮೂರು ಬಣ್ಣಗಳನ್ನು ಪ್ರದರ್ಶಿಸಲು ಈ ಪಾಡ್ ಅನುವು ಮಾಡಿಕೊಡುತ್ತದೆ.
ಈ ಪ್ರದರ್ಶನಗಳಿಗೆ ದೃಶ್ಯ ಸಂಯೋಜನೆಯನ್ನೂ ಸೇರಿಸಲಾಗಿದೆ. ಇದು ಬಾಹ್ಯಾಕಾಶ ಎಂಜಿನಿಯರಿಂಗ್ ಮತ್ತು ನಾವೀನ್ಯತೆಯಲ್ಲಿ ಭಾರತದ ಸಾಧನೆಯನ್ನು ಅತಿ ಎತ್ತರಕ್ಕೆ ಕೊಂಡೊಯ್ಯುವುದಕ್ಕೆ ಸಾಕ್ಷಿಯಾಗಿದೆ.
ಮಾಹಿತಿ ಇಲ್ಲಿ ಪಡೆಯಿರಿ
ಹೆಚ್ಚಿನ ಮಾಹಿತಿ ಮತ್ತು ಎಲ್ಲಾ ಇತ್ತೀಚಿನ ನವೀಕರಣಗಳಿಗಾಗಿ, Instagram (@suryakiran_iaf), X(@Suryakiran_IAF) ಮತ್ತು Facebook (@Suryakiran Aerobatic Team) ಮತ್ತು Youtube (@Suryakiran_IndianAirForce) ನಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ತಂಡವನ್ನು ಅನುಸರಿಸಿ ಎನ್ನುವುದು ಏರೋ ಇಂಡಿಯಾ ಸಂಘಟಕರ ಮನವಿ.
