ರೈಲ್ವೇ ಟಿಕೆಟ್ ಕಲೆಕ್ಟರ್ ಹುದ್ದೆ ಆಮಿಷ; 1 ಕೋಟಿ ರೂ. ವಂಚಿಸಿದ ವಿಜಯಪುರದ 7 ಮಂದಿ ಬಂಧನ, ಬೆಂಗಳೂರು ಸಿಸಿಬಿಯಲ್ಲಿ ಪ್ರಕರಣ
ರೈಲ್ವೆಯಲ್ಲಿ ಟಿಕೆಟ್ ಕಲೆಕ್ಟರ್ ಹುದ್ದೆ ಕೊಡಿಸುವುದಾಗಿ ಹಲವರಿಗೆ ವಂಚಿಸಿದ್ದ ವಿಜಯಪುರ ಮೂಲದವರನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.ವರದಿ: ಎಚ್.ಮಾರುತಿ,ಬೆಂಗಳೂರು
ಬೆಂಗಳೂರು: ರೈಲ್ವೇ ಇಲಾಖೆಯಲ್ಲಿ ಟಿಕೆಟ್ ಕಲೆಕ್ಟರ್ ಹುದ್ದೆ ಕೊಡಿಸುವುದಾಗಿ ಆಮಿಷವೊಡ್ಡಿ ಉದ್ಯೋಗ ಬೇಕಿದ್ದ ಆಕಾಂಕ್ಷಿಗಳಿಂದ 1 ಕೋಟಿ ರು. ಪಡೆದು ವಂಚಿಸಿದ್ದ ಆರೋಪದಡಿಯಲ್ಲಿ 7 ಮಂದಿ ಆರೋಪಿಗಳ ವಿರುದ್ಧ ಕೇಂದ್ರ ಅಪರಾಧ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ. ವಿಜಯಪುರ ಜಿಲ್ಲೆಯ ಲಕ್ಷ್ಮಿಕಾಂತ್ ಹೊಸಮನಿ, ಭೀಮರಾವ್ ಎಂಟಮಾನಿ, ವಿ.ಮುರಳಿ, ಬಸು ಕಾಸಪ್ಪ ಮಯೂರ, ಕೂಲಪ್ಪ ಸಿಂಗೆ, ಶ್ರೀಧರ್, ಸಂತೋಷ ನಾಯಕ್ ಬಂಧಿತ ಆರೋಪಿಗಳು. ವಂಚನೆಗೊಳಗಾಗಿದ್ದ ವಿಜಯಪುರ ಜಿಲ್ಲೆಯ ಆಲಮೇಲದ ಹುಸನಪ್ಪ ಮಾಡ್ಯಾಳ ಎಂಬುವರು ನೀಡಿದ್ದ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಉದ್ಯೋಗ ಆಕಾಂಕ್ಷಿಗಳು ಹಣ ಸಂದಾಯ ಮಾಡಿದ್ದಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಒದಗಿಸಿದ್ದಾರೆ. ಈ ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಶಿವಕುಮಾರ ಯಮನಪ್ಪ ಹೊಸಮನಿ, ಅಶೋಕ ಲಕ್ಕಪ್ಪ ವಾಲಿಕಾರ, ಗಣಪತಿ ಬಂಡಿಬಾ ವಾಗಮೊರೆ, ಸುನಿಲ್ ರಾಯಗೊಂಡ ಪೂಜಾರಿ ಸೇರಿದಂತೆ ಹಲವಾರು ಉದ್ಯೋಗ ಆಕಾಂಕ್ಷಿಗಳು ಇವರಿಗೆ ಹಣ ನೀಡಿ ಮೋಸ ಹೋಗಿದ್ದಾರೆ. ಉದ್ಯೋಗ ಆಕಾಂಕ್ಷಿಗಳಿಂದ 2022 ಹಾಗೂ 2023ನೇ ಸಾಲಿನಲ್ಲಿ ಒಬ್ಬೊಬ್ಬರಿಂದಲೂ ತಲಾ 20 ಲಕ್ಷದಂತೆ ಹಣ ಕಿತ್ತಿದ್ದಾರೆ. ಬೆಂಗಳೂರು ಹಾಗೂ ವಿಜಯಪುರದಲ್ಲಿ ಆರೋಪಿಗಳು ನಗದು ಹಾಗೂ ಬ್ಯಾಂಕ್ ಖಾತೆಗಳ ಮೂಲಕ ಹಣ ಪಡೆದುಕೊಂಡಿದ್ದಾರೆ ಮತ್ತು ಇದಕ್ಕೆ ಅಗತ್ಯವಿರುವ ಎಲ್ಲ ಸಾಕ್ಷ್ಯಾಧಾರಗಳನ್ನು ಒದಗಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಉತ್ತರ ಭಾರತದಲ್ಲಿ ಸುಳ್ಳು ತರಬೇತಿ
ಉದ್ಯೋಗಾಕಾಂಕ್ಷಿಗಳಿಗೆ ಆರೋಪಿಗಳು ಆನ್ ಲೈನ್ ಮೂಲಕ ನಕಲಿ ನೇಮಕಾತಿ ಪ್ರತಿಯನ್ನು ಕಳುಹಿಸಿದ್ದರು. ಇವರೆಲ್ಲರನ್ನು ತರಬೇತಿ ನೆಪದಲ್ಲಿ ಮುಂಬೈ ಹಾಗೂ ಉತ್ತರ ಪ್ರದೇಶದ ಕಾನ್ಪುರಕ್ಕೆ ಕರೆದುಕೊಂಡು ಹೋಗಿದ್ದರು. ಅಲ್ಲಿನ ಕಚೇರಿಯೊಂದರಲ್ಲಿ ಸುಳ್ಳು ತರಬೇತಿ ಕೊಡಿಸಿದ್ದರು ಎನ್ನುವುದು ತನಿಖೆಯಿಂದ ತಿಳಿದು ಬಂದಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ. ನೇಮಕಾತಿ ಆದೇಶದ ಪ್ರತಿ ನಕಲಿ ಎಂದು
ತಿಳಿದು ಬಂದ ಬಳಿಕ ಹಣವನ್ನು ಮರಳಿಸುವಂತೆ ಆರೋಪಿಗಳಿಗೆ ಮನವಿ ಮಾಡಿದ್ದೆವು. ಹಣ ಕೇಳಿದ್ದಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದರು ಎಂದು ಉದ್ಯೋಗಾಕಾಂಕ್ಷಿಗಳು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಸೈಬರ್ ವಂಚನೆ; 13 ಲಕ್ಷ ಕಳೆದುಕೊಂಡ ಎಂಜಿನಿಯರ್
ಹಣ ಹೂಡಿಕೆ ಮಾಡಿದರೆ ಅಧಿಕ ಲಾಭಾಂಶ ನೀಡಲಾಗುವುದು ಎಂದು ಎಂಜಿನಿಯರ್ ಒಬ್ಬರಿಗೆ ಸೈಬರ್ ವಂಚಕರು ಆಮಿಷವೊಡ್ಡಿ ರೂ. 13 ಲಕ್ಷ ವಂಚಿಸಿರುವ ಪ್ರಕರಣ ಬೆಂಗಳೂರಿನಲ್ಲಿ ನಡೆದಿದೆ.
ಈ ಸಂಬಂಧ ಹಲಸೂರು ನಿವಾಸಿ ಎಂಜಿನಿಯರ್ ವಿ.ಎಂ.ನಾಗಮಣಿ ಎಂಬುವರು ಪೂರ್ವ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅವರು ನೀಡಿದ್ದ ದೂರು ಆಧರಿಸಿ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದೂರುದಾರಿಗೆ ಫೇಸ್‌ಬುಕ್‌ನಲ್ಲಿ ಟ್ರೇಡಿಂಗ್ ಕುರಿತು ಲಿಂಕ್ ವೊಂದು ಬಂದಿತ್ತು. ನಾಗಮಣಿ ಅವರು ಆ ಲಿಂಕ್ ಒತ್ತಿದ್ದರು. ಲಿಂಕ್ ಒತ್ತಿದ ಬಳಿಕ ಪ್ರಣೀತ್ ಜೋಶಿ ಹೆಸರಿನ ವಾಟ್ಸ್ಆ್ಯಪ್ ಗ್ರೂಪ್‌ಗೆ ಅವರ ಮೊಬೈಲ್ ಸಂಖ್ಯೆ ಸೇರ್ಪಡೆ ಆಗಿತ್ತು. ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ಪಾವತಿಸುವ ಆಮಿಷ ಒಡ್ಡಲಾಗಿತ್ತು ಎಂಬ ವಾಟ್ಸಾಪ್ ಸಂದೇಶ ಕಳುಹಿಸಲಾಗಿತ್ತು. ನಾಗಮಣಿ ಅವರು ಈ ಸಂದೇಶವನ್ನು ನಂಬಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಆರಂಭದಲ್ಲಿ ಹೂಡಿಕೆ ಮಾಡಿದ್ದ ಹಣಕ್ಕೆ ವಂಚಕರು ಸ್ವಲ್ಪ ಪ್ರಮಾಣದ ಲಾಭಾಂಶ ನೀಡಿದ್ದರು. ನಂತರ ಇನ್ನೂ ಹೆಚ್ಚಿನ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ದೊರೆಯಲಿದೆ ಎಂಬ ಆಮಿಷವೊಡ್ಡಲಾಗಿತ್ತು. ಈ ಆಮಿಷವನ್ನು ನಂಬಿದ ದೂರುದಾರರು ತಮ್ಮ ಎಸ್‌ಬಿಐ ಖಾತೆಯಿಂದ ರೂ.9.92 ಲಕ್ಷ ಹಾಗೂ ಎಚ್‌ಡಿಎಫ್‌ಸಿ ಖಾತೆಯಿಂದ ರೂ.3.14 ಲಕ್ಷವನ್ನು ಬಿಡಿಸಿ ಸೈಬರ್ ವಂಚಕರು ನೀಡಿದ್ದ ಖಾತೆಗೆ ವರ್ಗಾವಣೆ ಮಾಡಿದ್ದಾರೆ.
ತಾನು ಮೋಸಕ್ಕೆ ಒಳಗಾಗಿರುವುದು ನಂತರ ಅರಿವಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವರದಿ: ಎಚ್.ಮಾರುತಿ,ಬೆಂಗಳೂರು