ಬೆಂಗಳೂರು ಪೊಲೀಸರ ಭರ್ಜರಿ ಬೇಟೆ, ಹೊಸ ವರ್ಷಾಚರಣೆ ವೇಳೆ ಮಾರಾಟಕ್ಕೆ ಡ್ರಗ್ಸ್ ಶೇಖರಣೆ; 2.70 ಕೋಟಿ ರೂ. ಮೌಲ್ಯದ ಡ್ರಗ್ಸ್ ಜಪ್ತಿ
ಬೆಂಗಳೂರಿನಲ್ಲಿ ಐದು ಕಡೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಭಾರೀ ಮೌಲ್ಯದ ಗಾಂಜಾ ಹಾಗೂ ಇತರೆ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.ವರದಿ: ಎಚ್. ಮಾರುತಿ, ಬೆಂಗಳೂರು
ಬೆಂಗಳೂರು: ಹೊಸ ವರ್ಷಾಚರಣೆ ಅಂಗವಾಗಿ ಬೆಂಗಳೂರಿನ ವಿವಿಧ ಭಾಗಗಳಲ್ಲಿ ನಿಷೇಧಿತ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಐದು ಪ್ರಕರಣಗಳನ್ನು ಭೇದಿಸಿರುವ ಪೊಲೀಸರು ಸುಮಾರು 2.70 ಕೋಟಿ ರೂ. ಮೌಲ್ಯದ ನಿಷೇಧಿತ ಮಾದಕ ವಸ್ತುಗಳು, ನಗದು ಮತ್ತು ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಹೊಸ ವರ್ಷದ ವೇಳೆ ನಶೆಗೆ ಒಳಗಾಗಿ ಸಂಭ್ರಮಾಚರಣೆ ಮಾಡುವವರನ್ನೇ ಗುರಿಯಾಗಿಟ್ಟುಕೊಂಡು ಮಾರಾಟ ಮಾಡಲು ಅಣಿಯಾಗಿದ್ದವರನ್ನು ಖಚಿತ ಮಾಹಿತಿ ಮೇರೆಗೆ ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಈ ವರ್ಷದಲ್ಲಿ ಬೆಂಗಳೂರಿನಲ್ಲಿ ಭಾರೀ ಮೌಲ್ಯದ ಡ್ರಗ್ಸ್ ಅನ್ನು ವಶಪಡಿಸಿಕೊಂಡ ಪ್ರಕರಣಗಳು ದಾಖಲಾಗಿವೆ.
ಅಪಾರ್ಟ್‌ಮೆಂಟ್‌ನಲ್ಲಿ ಪತ್ತೆ
ಮೊದಲ ಪ್ರಕರಣದಲ್ಲಿ ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಪೊಲೀಸರು ಡ್ರಗ್ಸ್ ಸರಬರಾಜು ಮಾಡಲು ಶೇಖರಿಸಿಟ್ಟಿದ್ದ ಓರ್ವ ಡ್ರಗ್ ಪೆಡ್ಲರ್ ನನ್ನು ಬಂಧಿಸಿ ಆತನಿಂದ 2.50 ಕೋಟಿ ರೂ. ಮೌಲ್ಯದ ನಿಷೇಧಿತ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಚೊಕ್ಕನಹಳ್ಳಿಯಲ್ಲಿರುವ ಅಪಾರ್ಟ್‌ಮೆಂಟ್ ವೊಂದರಲ್ಲಿ ನಿಷೇಧಿತ ಮಾದಕ ವಸ್ತು ಗಾಂಜಾವನ್ನು ಶೇಖರಿಸಿಡಲಾಗಿದೆ ಎಂಬ ಖಚಿತ ಮಾಹಿತಿ ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳಕ್ಕೆ ಲಭ್ಯವಾಗಿದೆ. ಈ ಮಾಹಿತಿಯನ್ನು ಆಧರಿಸಿ ಸಿಸಿಬಿ ಪೊಲೀಸ್ ಠಾಣೆಯಲ್ಲಿ ಎನ್.ಡಿ.ಪಿ.ಎಸ್ ಪ್ರಕರಣವನ್ನು ದಾಖಲಿಸಲಾಗಿದೆ. ಮಾದಕ ವಸ್ತು ಶೇಖರಿಸಿ ಇಡಲಾಗಿದ್ದ ಮನೆಯ ಮೇಲೆ ದಾಳಿ ನಡೆಸಿ ಓರ್ವ ಡ್ರಗ್ ಪೆಡ್ಲರ್ ನನ್ನು ಬಂಧಿಸಿ ಆತನಿಂದ 2.50 ಕೋಟಿ ರೂ. ಮೌಲ್ಯದ ನಿಷೇಧಿತ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಹೊರ ರಾಜ್ಯದಿಂದ ಸಾಗಣೆ
ಬೆಂಗಳೂರಿನ ಪ್ರಮುಖ ಸ್ಥಳಗಳಲ್ಲಿ ಹೊಸ ವರ್ಷದ ಆಚರಣೆಯ ಸಲುವಾಗಿ, ನಿಷೇಧಿತ ಮಾದಕ ವಸ್ತುಗಳನ್ನು ಮಾರಾಟ ಮಾಡಲು ಸಂಚು ರೂಪಿಸಿರುತ್ತಾನೆ. ಆತನ ಮನೆಯಿಂದ ಹೈಡೋಗಾಂಜಾ (3 ಕೆ.ಜಿ 55 ಗ್ರಾಂ), ಗಾಂಜಾ (16 ಕೆ.ಜಿ 65 ಗ್ರಾಂ), ಎಲ್.ಎಸ್.ಡಿ ಸ್ಟ್ರಿಪ್ಸ್ (40. 4), ಚರಸ್(130 ಗ್ರಾಂ), 2.3 ಗ್ರಾಂ ಎಂ.ಡಿ.ಎಂ.ಎ ಕ್ರಿಸ್ಟಲ್, ಮೂರು ತೂಕದ ಯಂತ್ರಗಳು, 2 ಮೊಬೈಲ್ ಹಾಗೂ ರೂ. 1.30 ಲಕ್ಷ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳ ಒಟ್ಟು ಮೌಲ್ಯ 2,50,00,000 ಕೋಟಿ ರೂ ಎಂದು ಅಂದಾಜು ಮಾಡಲಾಗಿದೆ.
ಆರೋಪಿಯನ್ನು ಸುದೀರ್ಘವಾಗಿ ವಿಚಾರಣೆಗೊಳಪಡಿಸಿದಾಗ ಆತ ಸ್ಪೋಟಕ ಮಾಹಿತಿಯನ್ನು ಹೊರಗೆಡವಿದ್ದಾನೆ. ಈತ ಮತ್ತೊರ್ವ ಸಹಚರನ ಜೊತೆ ಸೇರಿಕೊಂಡು ಆರೋಪಿಗಳಿಗೆ ಪರಿಚಯವಿರುವ ಹೊರ ರಾಜ್ಯಗಳಾದ ಗೋವಾದಿಂದ ಎಲ್.ಎಸ್.ಡಿ, ಸ್ಟ್ರಿಪ್ಸ್, ಥೈಲ್ಯಾಂಡ್‌ನಿಂದ ಹೈಡ್ರೋ ಗಾಂಜಾ, ಹಿಮಾಚಲ ಪ್ರದೇಶದಿಂದ ಚರಸ್, ಹಾಗೂ ತೆಲಂಗಾಣದಿಂದ ಗಾಂಜಾವನ್ನು ಖರೀದಿ ಮಾಡಿರುವುದಾಗಿ ತಿಳಿಸಿದ್ದಾನೆ. ಆರೋಪಿಯ ಸಹಚರನು ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ಬಲೆ ಬೀಸಲಾಗಿದೆ.
ಎರಡನೇ ಪ್ರಕರಣದಲ್ಲಿ ಅಮೃತ್ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿಷೇದಿತ ಮಾದಕವಸ್ತು ಎಂ.ಡಿ.ಎಂ.ಎ ಕ್ರಿಸ್ಟಲ್ ಮಾರಾಟ ಮಾಡುತ್ತಿದ್ದ ಓರ್ವ ವ್ಯಕ್ತಿಯನ್ನು ಬಂಧಿಸಲಾಗಿದೆ. ಈತನಿಂದ 85 ಗ್ರಾಂ ಎಂ.ಡಿ.ಎಂ.ಎ ಕ್ರಿಸ್ಟಲ್ ವಶಪಡಿಸಿಕೊಳ್ಳಲಾಗಿದೆ. ಇದರ ಮೌಲ್ಯ 8.50 ಲಕ್ಷ ರೂ. ಎಂದು ಅಮೃತಹಳ್ಳಿ ಪೊಲೀಸ್ ಠಾಣೆ ಪೊಲೀಸರು ತಿಳಿಸಿದ್ದಾರೆ. ಆರೋಪಿಯು ಠಾಣಾ ವ್ಯಾಪ್ತಿಯ ವರ್ಮಾ ಲೇಔಟ್‌ನ ನಿರ್ಜನ ಪ್ರದೇಶದಲ್ಲಿ ಓರ್ವ ವ್ಯಕ್ತಿಯು ಎಂ.ಡಿ.ಎಂ.ಎ ಕ್ರಿಸ್ಟಲ್ ಅನ್ನು ಮಾರಾಟ ಮಾಡುತ್ತಿದ್ದಾನೆ ಎಂಬ ಖಚಿತ ಮಾಹಿತಿ ಲಭ್ಯವಾಗಿರುತ್ತದೆ. ಕೂಡಲೇ ದಾಳಿ ನಡೆಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಆತನನ್ನು ಬಂಧಿಸಿದ್ದಾರೆ.
ಮೂರನೇ ಪ್ರಕರಣದಲ್ಲಿ ಜೆ.ಜೆ.ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎಂ.ಡಿ.ಎಂ.ಎ ಮಾರಾಟ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಬಂಧಿಸಿ ಅವರಿಂದ 20 ಗ್ರಾಂ ಎಂ.ಡಿ.ಎಂ.ಎ, 2 ಮೊಬೈಲ್ ಫೋನ್ ಮತ್ತು ರೂ.31,700 ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಒಟ್ಟು ಮೌಲ್ಯ 42 ಸಾವಿರ ರೂ.ಗಳಾಗಿರುತ್ತವೆ. ಹಳೇಗುಡ್ಡದಹಳ್ಳಿ ಮುಖ್ಯರಸ್ತೆಯ ಬಳಿ ಇರುವ ಸ್ಮಶಾನದ ಖಾಲಿ ಜಾಗದಲ್ಲಿ ಎಂ.ಡಿ.ಎಂ.ಎ ಮಾರಾಟ ಮಾಡುತ್ತಿದ್ದ ಇವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ಜೆ.ಜೆ.ನಗರ ಪೊಲೀಸ್ ಠಾಣೆಯಲ್ಲಿ ಎನ್.ಡಿ.ಪಿ.ಎಸ್ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಲಾಗಿದೆ.
ಕೊಠಡಿಗಳಲ್ಲಿ ಸಂಗ್ರಹ
ನಾಲ್ಕನೇ ಪ್ರಕರಣದಲ್ಲಿ ಬಾಗಲೂರು ಠಾಣೆ ಪೊಲೀಸರು ಡ್ರಗ್ಸ್ ಮಾರಾಟ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಬಂಧಿಸಿ ಅವರಿಂದ 28 ಸಾವಿರ ಮೌಲ್ಯದ 14 ಗ್ರಾಂ ಎಂ.ಡಿ.ಎಂ.ಎ, ವಶಪಡಿಸಿಕೊಂಡಿದ್ದಾರೆ. ಬಿದರಹಳ್ಳಿ ಹೋಬಳಿಯ ಎಸ್.ಆರ್.ಎನ್ ರೆಸಿಡೆನ್ಸಿ ಬಿಲ್ಡಿಂಗ್‌ನ 2ನೇ ಮಹಡಿಯ ರೂಮ್ ವೊಂದರಲ್ಲಿ ಇಬ್ಬರು ವ್ಯಕ್ತಿಗಳು ಎಂ.ಡಿ.ಎಂ.ಎ ಯನ್ನು ಮಾರಾಟ ಮಾಡುತ್ತಿರುವುದಾಗಿ ತಿಳಿದು ಬಂದಿರುತ್ತದೆ. ಕೂಡಲೇ ದಾಳಿ ನಡೆಸಿ ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆದು ಅವರ ಬಳಿ ಇದ್ದ 14 ಗ್ರಾಂ ಎಂ.ಡಿ.ಎಂ.ಎ, ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಐದನೇ ಪ್ರಕರಣದಲ್ಲಿ ಕೊಡಿಗೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎಂ.ಡಿ.ಎಂ.ಎ ಕ್ರಿಸ್ಟಲ್ ಮಾರಾಟ ಮಾಡುತ್ತಿದ್ದ ಓರ್ವ ವ್ಯಕ್ತಿಯನ್ನು ಬಂಧಿಸಿ ಆತನಿಂದ 3.5 ಲಕ್ಷ ರೂ. ಮೌಲ್ಯದ 34 ಗ್ರಾಂ ಎಂ.ಡಿ.ಎಂ.ಎ ಕ್ರಿಸ್ಟಲ್, ಒಂದು ಕಾರು ಮತ್ತು ನಗದು ಹಣವನ್ನು ಜಪ್ತಿ ಮಾಡಲಾಗಿದೆ. ಆರೋಪಿಗಳು ಅನ್ನೋ ಲೇಔಟ್‌ನ ಇಂಪ್ಯಾಕ್ಟ್ ಕಾಲೇಜಿನ ಹಿಂಭಾಗದ ರಸ್ತೆಯಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿರುವ ಮಾಹಿತಿ ಲಭ್ಯವಾಗಿದೆ. ಅರೋಪಿಯನ್ನು ಕಾರಿನ ಸಹಿತ ಬಂಧಿಸಿ ಆತನಿಂದ ಮಾದಕ ವಸ್ತು ಮತ್ತು ನಗದು ಹಣವನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವರದಿ: ಎಚ್. ಮಾರುತಿ, ಬೆಂಗಳೂರು