ಡ್ರೋಣ್‌ ಮೂಲಕ ಅಪಾರ್ಟ್‌ಮೆಂಟ್‌ ಬಾಗಿಲಿಗೆ ದಿನಸಿ, ಔಷಧ: ಬೆಂಗಳೂರಿನಲ್ಲಿ ಬಿಗ್‌ ಬ್ಯಾಸ್ಕೆಟ್‌ ಮೊದಲ ಪ್ರಯತ್ನ , ಹೇಗಿರಲಿದೆ ಸೇವೆ
ಕನ್ನಡ ಸುದ್ದಿ  /  ಕರ್ನಾಟಕ  /  ಡ್ರೋಣ್‌ ಮೂಲಕ ಅಪಾರ್ಟ್‌ಮೆಂಟ್‌ ಬಾಗಿಲಿಗೆ ದಿನಸಿ, ಔಷಧ: ಬೆಂಗಳೂರಿನಲ್ಲಿ ಬಿಗ್‌ ಬ್ಯಾಸ್ಕೆಟ್‌ ಮೊದಲ ಪ್ರಯತ್ನ , ಹೇಗಿರಲಿದೆ ಸೇವೆ

ಡ್ರೋಣ್‌ ಮೂಲಕ ಅಪಾರ್ಟ್‌ಮೆಂಟ್‌ ಬಾಗಿಲಿಗೆ ದಿನಸಿ, ಔಷಧ: ಬೆಂಗಳೂರಿನಲ್ಲಿ ಬಿಗ್‌ ಬ್ಯಾಸ್ಕೆಟ್‌ ಮೊದಲ ಪ್ರಯತ್ನ , ಹೇಗಿರಲಿದೆ ಸೇವೆ

ತಂತ್ರಜ್ಞಾನದ ಸೇವೆ ಮನೆ ಬಾಗಿಲಿಗೆ ಬಂದು ಎಷ್ಟೋ ವರ್ಷಗಳು ಆಗಿವೆ. ಅದು ಹೊಸ ಹೊಸ ರೂಪದಲ್ಲಿ ಬರುತ್ತಲೇ ಇರುತ್ತದೆ. ಬೆಂಗಳೂರಿನಲ್ಲಿ ಡ್ರೋಣ್‌ ಬಳಸಿ ದಿನಸಿ, ಮೆಡಿಸನ್‌ ಅನ್ನು ಮನೆಗೆ ತಲುಪಿಸುವ ಸೇವೆ ಶುರುವಾಗಿದೆ.ವರದಿ: ಎಚ್‌.ಮಾರುತಿ. ಬೆಂಗಳೂರು

ಬೆಂಗಳೂರಿನಲ್ಲಿ ಡ್ರೋಣ್‌ ಬಳಸಿ ಬಿಗ್‌ ಬ್ಯಾಸ್ಕೆಟ್‌ ಸೇವೆ ನೀಡಲಿದೆ.
ಬೆಂಗಳೂರಿನಲ್ಲಿ ಡ್ರೋಣ್‌ ಬಳಸಿ ಬಿಗ್‌ ಬ್ಯಾಸ್ಕೆಟ್‌ ಸೇವೆ ನೀಡಲಿದೆ.

ಬೆಂಗಳೂರು: ದಿನಸಿ, ಮೆಡಿಸಿನ್‌ ಮೊದಲಾದ ಅಗತ್ಯ ವಸ್ತುಗಳನ್ನು ಆರ್ಡರ್‌ ಮಾಡಿ ಕಾಯುತ್ತಿದ್ದೀರಾ? ಟ್ರಾಫಿಕ್‌ ಸಮಸ್ಯೆಯಿಂದಾಗಿ ಡೆಲಿವರಿ ತಡವಾಗುತ್ತಿದೆಯೇ? ಇನ್ನು ಮುಂದೆ ಅಂತಹ ಸಮಸ್ಯೆ ಕಾಣಲಿಕ್ಕಿಲ್ಲ. ನೀವು ಬುಕ್‌ ಮಾಡಿದ ವಸ್ತುಗಳು ನೇರವಾಗಿ, ತಡವಾಗದೆ ನಿಮ್ಮ ಮನೆ ಬಾಗಿಲಿಗೆ ಬರುತ್ತವೆ. ನಗರದ ಕನಕಪುರ ರಸ್ತೆಯ ಪ್ರತಿಷ್ಠಿತ ಪ್ರೆಸ್ಟೀಜ್‌ ಫಾಲ್ಕನ್‌ ಸಿಟಿ ಅಪಾರ್ಟ್‌ಮೆಂಟ್‌ ಬಿಗ್‌ ಬ್ಯಾಸ್ಕೆಟ್‌ ಜತೆ ಒಪ್ಪಂದ ಮಾಡಿಕೊಂಡಿದ್ದು, ಆರ್ಡರ್ ಮಾಡಿದ ವಸ್ತುಗಳು 5 ರಿಂದ 10 ನಿಮಿಷಗಳ ಒಳಗಾಗಿ ಡೆಲಿವರಿ ಕೊಡಲಾಗುತ್ತದೆ. ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಅಪಾರ್ಟ್‌ ಮೆಂಟ್‌ ಮತ್ತು ವಾಣಿಜ್ಯ ಡೆಲಿವರಿ ವೇದಿಕೆಯೊಂದರ ಜತೆ ಪಾಲುದಾರಿಕೆ ನಡೆದಿದೆ.ಮಾರ್ಚ್‌ ತಿಂಗಳಲ್ಲಿಯೇ ಈ ಯೋಜನೆಯ ಜಾರಿಗೆ ಟ್ರಯಲ್‌ ನಡೆದಿತ್ತದರೂ ಕಳೆದ ವಾರ ಅಧಿಕೃತವಾಗಿ ಜಾರಿಗೊಂಡಿದೆ ಎಂದು ಬಿಗ್‌ ಬ್ಯಾಸ್ಕೆಟ್‌ ತಿಳಿಸಿದೆ.

ಬೆಂಗಳೂರು ಅಪಾರ್ಟ್‌ ಮೆಂಟ್‌ ಫೆಡರೇಷನ್‌ ಫಾರ್‌ ಬೆಂಗಳೂರು ಸೌತ್‌ ಅಧ್ಯಕ್ಷ ಹಾಗೂ ಪ್ರೆಸ್ಟೀಜ್‌ ಫಾಲ್ಕನ್‌ ಸಿಟಿ ಅಧ್ಯಕ್ಷರೂ ಆಗಿರುವ ಅವಿನಾಶ್‌ ಎಚ್.ವಿ ಅವರು ಹೇಗೆ ಬಿಗ್‌ ಬ್ಯಾಸ್ಕೆಟ್‌ ಡೆಲಿವರಿ ಮಾಡಲಿದೆ ಎಂಬ ವಿವರಗಳನ್ನು ಹಂಚಿಕೊಂಡಿದ್ದಾರೆ.

ಡ್ರೋಣ್‌ ಮೂಲಕ ಅಗತ್ಯ ವಸ್ತುಗಳನ್ನು ಅಪಾರ್ಟ್‌ ಮೆಂಟ್‌ ಗೆ ತರಲಾಗುತ್ತದೆ. ಡ್ರೋಣ್‌ ಮೂಲಕ ಏಳು ಕೆಜಿಯಷ್ಟು ಮಾತ್ರ ವಸ್ತುಗಳನ್ನು ಸಾಗಣೆ ಮಾಡಬಹುದಾಗಿದೆ. ಟ್ರಾಫಿಕ್‌ ಸಮಸ್ಯೆಯಿಂದ ಪಾರಾಗಲು ನಾವು ಬಿಗ್‌ ಬ್ಯಾಸ್ಕೆಟ್‌ ಜತೆ ಹೊಂದಾಣಿಕೆ ಮಾಡಿಕೊಂಡಿದ್ದೇವೆ. ಈ ಮೂಲಕ ಇಲ್ಲಿನ ನಿವಾಸಿಗಳು ಆರ್ಡರ್‌ ಮಾಡಿದ ವಸ್ತುಗಳನ್ನು ತ್ವರಿತವಾಗಿ ತಲುಪಿಸಲಾಗುತ್ತದೆ ಮತ್ತು ಅನಾವಶ್ಯಕವಾಗಿ ಹೆಚ್ಚಿನ ಜನರು ಅಪಾರ್ಟ್‌ಮೆಂಟ್‌ ಪ್ರವೇಶ ಮಾಡುವುದಕ್ಕೆ ಕಡಿವಾಣ ಬಿದ್ದಿದೆ ಎನ್ನುತ್ತಾರೆ. ಈ ಅಪಾರ್ಟ್‌ಮೆಂಟ್‌ ನಲ್ಲಿ 2,500 ಮನೆಗಳಿವೆ. ಅಗತ್ಯ ಇರುವವರಿಗೆ ಡ್ರೋಣ್‌ ಬಳಸಿ ತ್ವರಿತ ಸೇವೆಯನ್ನು ನೀಡಲಾಗುತ್ತದೆ. ಈಗಷ್ಟೇ ಈ ಸೇವೆ ಆರಂಭಗೊಂಡಿರುವುದರಿಂದ ಇದರ ಕುರಿತು ಜನರಿಗೂ ಹೆಚ್ಚಿನ ಮಾಹಿತಿ ತಿಳಿಯಬೇಕಿದೆ.

ಡ್ರೋಣ್‌ ಮೂಲಕ ಬುಕ್ಕಿಂಗ್‌ ಮಾಡಿದಾಗ ಬಿಗ್‌ ಬ್ಯಾಸ್ಕೆಟ್‌ ನ ಒಬ್ಬ ಸಿಬ್ಬಂದಿ ಮಾತ್ರ ಅಪಾರ್ಟ್‌ ಮೆಂಟ್‌ ಪ್ರವೇಶಿಸುತ್ತಾರೆ. ಅವರು ಆರ್ಡರ್‌ ಮಾಡಿರುವ ಮನೆಗಳಿಗೆ ಡೆಲಿವರಿ ಕೊಡುತ್ತಾರೆ. ಈ ಸೇವೆಯು ಬೆಳಗ್ಗೆ 7 ರಿಂದ ರಾತ್ರಿ 8 ಗಂಟೆಯವರೆಗೂ ಲಭ್ಯ ಇರುತ್ತದೆ. ಏಳು ಕೆಜಿ ಒಳಗೆ ಬುಕ್ಕಿಂಗ್‌ ಮಾಡಿದ್ದರೆ ಐದು ನಿಮಿಷಗಳ ಒಳಗಾಗಿ ಡೆಲಿವರಿ ಕೊಡಲಾಗುತ್ತದೆ ಎಂದು ತಿಳಿಸಿದರು.

ಬಿಗ್‌ ಬ್ಯಾಸ್ಕೆಟ್‌ ನ ಡಾರ್ಕ್‌ ಸ್ಟೋರ್‌ (ಗೋಡೌನ್) ಈ ಅಪಾರ್ಟ್‌ ಮೆಂಟ್‌ ನಿಂದ ಆರು ಕಿಮೀ ದೂರದಲ್ಲಿದ್ದು, ಎರಡು ಡ್ರೋಣ್‌ ಗಳ ಮೂಲಕ ಡೆಲಿವರಿ ಮಾಡಲಾಗುತ್ತಿದೆ. ವೈಯಕ್ತಿಕ ಖಾಸಗಿತನವನ್ನು ರಕ್ಷಿಸುವ ನಿಟ್ಟಿನಲ್ಲಿ ಡ್ರೋಣ್‌ ನಲ್ಲಿ ಕ್ಯಾಮೆರಾ ಇರುವುದಿಲ್ಲ. ಜಿಪಿಎಸ್‌ ಆಧಾರದಲ್ಲಿ ಮಾತ್ರ ಸೇವೆ ಒದಗಿಸಲಾಗುತ್ತದೆ ಎಂದು ಬಿಗ್‌ ಬ್ಯಾಸ್ಕೆಟ್‌ ಪ್ರತಿನಿಧಿಯೊಬ್ಬರು ಹೇಳುತ್ತಾರೆ.

ಬಿಗ್‌ ಬ್ಯಾಸ್ಕೆಟ್‌ ಸ್ಕೈ ಏರ್‌ ಮೊಬಿಲಿಟಿ ಉತ್ಪಾದಿಸಿರುವ ಡ್ರೋಣ್‌ ಗಳನ್ನು ಬಳಸುತ್ತಿದೆ. ಪ್ರಸ್ತುತ ಎರಡು ಡ್ರೋನ್‌ ಗಳನ್ನು ಈ ಅಪಾರ್ಟ್‌ ಮೆಂಟ್‌ ಗಾಗಿಯೇ ಬಳಸಲಾಗುತ್ತಿದೆ. ಈ ಪ್ರಯತ್ನ ಮಾರುಕಟ್ಟೆ ತಂತ್ರದ ಭಾಗವೂ ಹೌದು. ಇದರಿಂದ ಸಮಯ ಮತ್ತು ಕಾರ್ಮಿಕರ ಬಳಕೆ ಎರಡೂ ಉಳಿತಾಯವಾಗುತ್ತದೆ. ಯಾವುದೇ ಅಡಚಣೆ ಇಲ್ಲದೆ ಟ್ರಾಫಿಕ್‌ ಸಮಸ್ಯೆ ಇಲ್ಲದೆ ಡೆಲಿವರಿ ಮಾಡಲಾಗುತ್ತಿದೆ. ಈ ಸೇವೆಯನ್ನು ನಗರದ ಇತರ ಭಾಗಗಳಿಗೂ ವಿಸ್ತರಿಸಲು ಸಾಕಷ್ಟು ತಯಾರಿ ಮಾಡಬೇಕಾಗಿದೆ ಎಂದು ಹೇಳುತ್ತಾರೆ.

ವರದಿ:ಎಚ್.‌ ಮಾರುತಿ, ಬೆಂಗಳೂರು

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.