Bangalore Water: ಬೆಂಗಳೂರು ನಗರಕ್ಕೆ 583 ಎಂಎಲ್‌ಡಿ ನೀರು, ಹೆಚ್ಚುವರಿ ಸಂಸ್ಕರಣೆ ಘಟಕಗಳಿಗೆ ಹಣಕಾಸು ನೀಡಲು ಅನುಮತಿ
ಕನ್ನಡ ಸುದ್ದಿ  /  ಕರ್ನಾಟಕ  /  Bangalore Water: ಬೆಂಗಳೂರು ನಗರಕ್ಕೆ 583 ಎಂಎಲ್‌ಡಿ ನೀರು, ಹೆಚ್ಚುವರಿ ಸಂಸ್ಕರಣೆ ಘಟಕಗಳಿಗೆ ಹಣಕಾಸು ನೀಡಲು ಅನುಮತಿ

Bangalore Water: ಬೆಂಗಳೂರು ನಗರಕ್ಕೆ 583 ಎಂಎಲ್‌ಡಿ ನೀರು, ಹೆಚ್ಚುವರಿ ಸಂಸ್ಕರಣೆ ಘಟಕಗಳಿಗೆ ಹಣಕಾಸು ನೀಡಲು ಅನುಮತಿ

ಬೆಂಗಳೂರು ನಗರದ ಜನತೆಯ ನೀರಿನ ಬೇಡಿಕೆಗಳನ್ನು ಪೂರೈಸಲು ಕರ್ನಾಟಕ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿದ್ದು ನೀರು ಸಂಸ್ಕರಣೆಯ ಘಟಕಗಳನ್ನು ರೂಪಿಸಲಾಗುತ್ತಿದೆ.

ಬೆಂಗಳೂರಿನ ಕುಡಿಯುವ ನೀರಿನ ಸಂಸ್ಕರಣೆಗೆ ಇನ್ನಷ್ಟು ಘಟಕಗಳು ಬರಲಿವೆ.
ಬೆಂಗಳೂರಿನ ಕುಡಿಯುವ ನೀರಿನ ಸಂಸ್ಕರಣೆಗೆ ಇನ್ನಷ್ಟು ಘಟಕಗಳು ಬರಲಿವೆ.

ಬೆಂಗಳೂರು: ಭವಿಷ್ಯದ ಬೆಂಗಳೂರಿಗೆ ನೀರು ಸರಬರಾಜು ಮಾಡುವ ಹಲವಾರು ಮಾರ್ಗಗಳನ್ನು ಕರ್ನಾಟಕ ಸರ್ಕಾರ ಕಂಡುಕೊಳ್ಳುತ್ತಲೇ ಇದೆ. ಕಾವೇರಿ ನದಿ ನೀರು ಬಳಕೆಯ ಪ್ರಮಾಣ ಹೆಚ್ಚಿಸುತ್ತಿರುವ ನಡುವೆ ಸಮೀಪದಲ್ಲಿ ಲಭ್ಯ ಇರುವ ನೀರಿನ ಮೂಲಗಳನ್ನು ಪತ್ತೆ ಹಚ್ಚಿ ಅದನ್ನು ಬಳಕೆ ಮಾಡಿಕೊಳ್ಳುವ ಪ್ರಯತ್ನಗಳು ಶುರುವಾಗಿವೆ. ಏಕೆಂದರೆ ಈಗಾಗಲೇ ಬೆಂಗಳೂರು ಜನಸಂಖ್ಯೆ ಎರಡು ಕೋಟಿಗೆ ಸಮೀಪಿಸಿದ್ದು ಮುಂದಿನ ಒಂದು ದಶಕದಲ್ಲಿ ಇದು ಇನ್ನಷ್ಟು ಹೆಚ್ಚಲಿದೆ. ಈ ಕಾರಣದಿಂದಲೇ ಬೆಂಗಳೂರು ಕೇಂದ್ರಿತ ನೀರಿನ ಯೋಜನೆಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ನೀರನ್ನು ಸಂಸ್ಕರಿಸಿ ಬೆಂಗಳೂರಿಗೆ ನೀಡುವ ಯೋಜನೆಯೂ ಇದರಲ್ಲಿ ಸೇರಿದೆ. ಮೊದಲ ಹಂತದಲ್ಲಿ 583 ಎಂಎಲ್‌ಡಿ ಸಂಸ್ಕರಿತ ನೀರನ್ನು ಕೊಡಲು ಘಟಕಗಳನ್ನು ಸ್ಥಾಪಿಸಲಾಗುತ್ತಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಕೃಷ್ಣಾದಲ್ಲಿ ನಡೆದ ಸಣ್ಣ ನೀರಾವರಿ ಇಲಾಖೆಯ ಪ್ರಗತಿ ಪರೀಶಿಲನಾ ಸಭೆಯಲ್ಲಿ ನೀರಿನ ವಿಚಾರದಲ್ಲಿ ವಿಸ್ತೃತವಾಗಿ ಚರ್ಚೆ ನಡೆಸಲಾಯಿತು.

ಪ್ರಸ್ತುತ ಬೆಂಗಳೂರು ಮಹಾನಗರಕ್ಕಾಗಿ ಒಟ್ಟು 1300 ಎಂಎಲ್‌ಡಿ ನೀರನ್ನು ಸಂಸ್ಕರಿಸಲಾಗುತ್ತಿದೆ. ಹೊಸದಾಗಿ 583 ಎಂಎಲ್‌ಡಿ ನೀರು ಸಂಸ್ಕರಿಸಲು ಪೂರಕವಾಗಿ ಹೊಸ ಎಸ್‌ಟಿಪಿಗಳನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಈ ಪ್ರಸ್ತಾವನೆಗಳಿಗೆ ಅನುಮೋದನೆ ನೀಡಲು ಹಣಕಾಸು ಇಲಾಖೆ ಅಧಿಕಾರಿಗಳಿಗೆ ನೀಡಲಾಗಿದೆ. ಇದರಿಂದ ಹೆಚ್ಚುವರಿಯಾಗಿ ಬೆಂಗಳೂರು ನಗರಕ್ಕೆ ನೀರು ಸರಬರಾಜು ಮಾಡಲು ಸುಲಭವಾಗಲಿದೆ. ಬೆಂಗಳೂರು ಜಲಮಂಡಳಿಯು ಶುದ್ದೀಕರಣ ಘಟಕಗಳನ್ನು ಹಲವು ಕಡೆ ರೂಪಿಸಿದೆ.

ಸಣ್ಣ ಕೆರೆಗಳಿಗೆ ನೀರು

ಕರ್ನಾಟಕ ರಾಜ್ಯದಲ್ಲಿ ಸಣ್ಣ ನೀರಾವರಿ ಇಲಾಖೆಯ 8.92 ಲಕ್ಷ ಹೆಕ್ಟೇರ್‌ ಅಚ್ಚುಕಟ್ಟು ಪ್ರದೇಶವಿದೆ. ಇದರಲ್ಲಿ 421 ಏತ ನೀರಾವರಿ ಯೋಜನೆಗಳ 94315 ಹೆಕ್ಟೇರ್‌, 3778 ಕೆರೆಗಳ 437086 ಹೆಕ್ಟೇರ್‌ ಅಚ್ಚುಕಟ್ಟು ಸೇರಿದೆ. ಪ್ರಸ್ತುತ ವರ್ಷ ಇಲಾಖೆಗೆ ಸಣ್ಣ ನೀರಾವರಿ ಇಲಾಖೆಗೆ ರೂ.1577 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದ್ದು, ಇದುವರೆಗೆ ರೂ.1468.17 ಕೋಟಿ ವೆಚ್ಚ ಮಾಡಲಾಗಿದೆ. ಪ್ರಸ್ತುತ ವರ್ಷ 9449 ಹೆಕ್ಟೇರ್‌ ಹೊಸ ಅಚ್ಚುಕಟ್ಟು ಸೃಷ್ಟಿಸಲಾಗಿದೆ.

ಪ್ರಸ್ತುತ ಹಣಕಾಸು ಸಾಲಿನಲ್ಲಿ ಒಟ್ಟು ರೂ.1112.59 ಕೋಟಿ ವೆಚ್ಚದಲ್ಲಿ 17 ಕಾಮಗಾರಿಗಳನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದ್ದು, ಕಾಮಗಾರಿಯನ್ನು ನಿಗದಿತ ಅವಧಿಯ ಒಳಗಾಗಿ ಪೂರ್ಣಗೊಳಿಸಬೇಕು. ಇದರಿಂದಾಗಿ 5989.64 ಹೆಕ್ಟೇರ್‌ ಅಚ್ಚುಕಟ್ಟು ಸೃಜನೆಯಾಗಲಿದೆ ಎನ್ನುವುದು ಅಧಿಕಾರಿಗಳು ನೀಡುವ ವಿವರಣೆ

ಕೆಸಿ ವ್ಯಾಲಿ ಯೋಜನೆ

ಕೋರಮಂಗಲ ಚಲ್ಲಘಟ್ಟ( ಕೆಸಿ) ವ್ಯಾಲಿ 1 ನೇ ಹಂತದಲ್ಲಿ ರೂ.1342 ಕೋಟಿ ವೆಚ್ಚದಲ್ಲಿ 145 ಕೆರೆಗಳನ್ನು ತುಂಬಿಸುವ ಯೋಜನೆ ಪೂರ್ಣಗೊಳಿಸಲಾಗಿದೆ. ಯೋಜನೆಯಡಿ ಬಿಡಬ್ಲುಎಸ್‌ಎಸ್‌ಬಿ 440 ಎಂಎಲ್‌ಡಿ ಸಂಸ್ಕರಿಸಿದ ನೀರನ್ನು ಒದಗಿಸಬೇಕಾಗಿದ್ದು, ಪ್ರಸ್ತುತ 265 ಎಂಎಲ್‌ಡಿ ಒದಗಿಸುತ್ತಿದೆ. ಪೂರ್ಣ ಪ್ರಮಾಣದ ನೀರು ಪೂರೈಕೆಗೆ ಅಗತ್ಯವಿರುವ ಸಂಸ್ಕರಣಾ ಘಟಕಗಳ ನಿರ್ಮಾಣ ಕಾರ್ಯವನ್ನು ಈ ವರ್ಷದ ಅಂತ್ಯದ ಒಳಗಾಗಿ ಪೂರ್ಣಗೊಳಿಸಬೇಕು ಎನ್ನುವ ಸೂಚನೆಯನ್ನು ನೀಡಲಾಗಿದೆ.

ಕೆಸಿ ವ್ಯಾಲಿ 2ನೇ ಹಂತದಲ್ಲಿ ರೂ.446 ಕೋಟಿ ವೆಚ್ಚದಲ್ಲಿ 272 ಕೆರೆಗಳನ್ನು ತುಂಬಿಸುವ ಕಾಮಗಾರಿ ಪ್ರಗತಿಯಲ್ಲಿದ್ದು, ಇದುವರೆಗೆ 32 ಕೆರೆಗಳನ್ನು ತುಂಬಿಸಲಾಗಿದೆ.ಕೆಸಿ ವ್ಯಾಲಿ, ಹೆಚ್‌ಎನ್‌ ವ್ಯಾಲಿ, ವೃಷಭಾವತಿ, ಹೊಸಕೋಟೆ, ಆನೆಕಲ್‌ ಯೋಜನೆಗಳಡಿ ಸಣ್ಣ ನೀರಾವರಿ ಇಲಾಖೆ ಕೆರೆಗಳನ್ನು ತುಂಬಿಸಲು ಅಗತ್ಯವಿರುವ ಸಂಪೂರ್ಣ ಪ್ರಮಾಣದ ನೀರನ್ನು ಒದಗಿಸಲು ಬಿಡಬ್ಲುಎಸ್‌ಎಸ್‌ಬಿ ಕ್ರಮ ಕೈಗೊಳ್ಳಬೇಕು. ಇದಕ್ಕೆ ಅಗತ್ಯವಿರುವ ಅನುದಾನ ಒದಗಿಸಲಾಗುವುದು ಎನ್ನುವ ಸೂಚನೆಯನ್ನು ಸಿಎಂ ಸಿದ್ದರಾಮಯ್ಯ ಅವರು ಸಣ್ಣ ನೀರಾವರಿ ಇಲಾಖೆಯ ಸಭೆಯಲ್ಲಿ ಅಧಿಕಾರಿಗಳಿಗೆ ನೀಡಿದ್ದಾರೆ.

Whats_app_banner