Bangalore News: ಬೆಂಗಳೂರಲ್ಲಿ ಐವರು ದರೋಡೆಕೋರರ ಬಂಧಿಸಿದ ಪೊಲೀಸರು; 46 ಲಕ್ಷ ರೂ.ಮೌಲ್ಯದ 80 ಮೊಬೈಲ್ ಫೋನ್ ವಶ
ಕನ್ನಡ ಸುದ್ದಿ  /  ಕರ್ನಾಟಕ  /  Bangalore News: ಬೆಂಗಳೂರಲ್ಲಿ ಐವರು ದರೋಡೆಕೋರರ ಬಂಧಿಸಿದ ಪೊಲೀಸರು; 46 ಲಕ್ಷ ರೂ.ಮೌಲ್ಯದ 80 ಮೊಬೈಲ್ ಫೋನ್ ವಶ

Bangalore News: ಬೆಂಗಳೂರಲ್ಲಿ ಐವರು ದರೋಡೆಕೋರರ ಬಂಧಿಸಿದ ಪೊಲೀಸರು; 46 ಲಕ್ಷ ರೂ.ಮೌಲ್ಯದ 80 ಮೊಬೈಲ್ ಫೋನ್ ವಶ

Bangalore News: ಬೆಂಗಳೂರಿನಲ್ಲಿ ನಡೆದಿದ್ದ ಮೊಬೈಲ್‌ಗಳ ದರೋಡೆ, ಮನೆ ಕೆಲಸದಾಕೆ ನಡೆಸಿದ್ದ ಕಳ್ಳತನ ಪ್ರಕರಣಗಳನ್ನು ಬೆಂಗಳೂರು ನಗರ ಪೊಲೀಸರು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ವರದಿ:ಎಚ್‌.ಮಾರುತಿ.ಬೆಂಗಳೂರು

ಬೆಂಗಳೂರಿನಲ್ಲಿ ವಿವಿಧ ಅಪರಾಧ ಪ್ರಕರಣಗಳನ್ನು ಪೊಲೀಸರು ಬೇಧಿಸಿದ್ದಾರೆ.
ಬೆಂಗಳೂರಿನಲ್ಲಿ ವಿವಿಧ ಅಪರಾಧ ಪ್ರಕರಣಗಳನ್ನು ಪೊಲೀಸರು ಬೇಧಿಸಿದ್ದಾರೆ.

Bangalore News: ಬೆಂಗಳೂರಿನ ಆರ್ ಎಂಸಿ ಯಾರ್ಡ್ ಮತ್ತು ಪುಟ್ಟೇನಹಳ್ಳಿ ಠಾಣೆ ಪೊಲೀಸರು ಐವರು ದರೋಡೆಕೋರರನ್ನು ಬಂಧಿಸಿ ಒಟ್ಟು 45.73 ಲಕ್ಷ ರೂ. ಬೆಲೆಯ 80 ಮೊಬೈಲ್ ಫೋನ್‌ಗಳನ್ನು ಜಪ್ತಿ ಮಾಡಿದ್ದಾರೆ.

ಕೇರಳ, ತಮಿಳುನಾಡು ಹಾಗೂ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ನಾಲ್ವರು ಮತ್ತು ಓರ್ವ ಹಳೆಯ ಕಳ್ಳನನ್ನು ಬಂಧಿಸಲಾಗಿದೆ. ಆರ್ಎಂಸಿಯಾರ್ಡ್, ಮಲ್ಲೇಶ್ವರಂನ ಅಪಾರ್ಟ್ ಮೆಂಟ್ ವೊಂದರಲ್ಲಿ ವಾಸವಿರುವ ದಂಪತಿ ತರಕಾರಿ ತೆಗೆದುಕೊಳ್ಳಲು ಯಶವಂತಪುರ ಮಾರ್ಕೆಟ್‌ಗೆ ಹೋಗಿದ್ದಾಗ ಐ ಫೋನ್‌ ಕಳುವಾಗಿದೆ ಎಂದು ಆರ್‌ ಎಂಸಿ ಯಾರ್ಡ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪ್ಲಾಟಿನಂ ಸಿಟಿ ಅಪಾರ್ಟಮೆಂಟ್ ರಸ್ತೆಯಲ್ಲಿ ಇಬ್ಬರನ್ನು ಐದು ಮೊಬೈಲ್ ಸಹಿತ ವಶಕ್ಕೆ ಪಡೆದುಕೊಂಡಿದ್ದಾರೆ.

ಇಬ್ಬರನ್ನೂ ವಿಚಾರಣೆ ನಡೆಸಿದಾಗ ಮೊಬೈಲ್ ಕಳವು ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಆರೋಪಿಗಳು ಸೋಲದೇವನಹಳ್ಳಿಯಲ್ಲಿ ವಾಸವಾಗಿದ್ದರು. ಇವರ ಮೂವರು ಸಹಚರರು ಭದ್ರಾವತಿಯಲ್ಲಿ ಮೊಬೈಲ್ ಫೋನ್ ಗಳನ್ನು ಕಳವು ಮಾಡಿ ತಮಗೆ ನೀಡುತ್ತಿದ್ದರು ಎಂದು ತಿಳಿಸಿದ್ದಾರೆ.

ಕಳವು ಮಾಡಿದ ಮೊಬೈಲ್ ಫೋನ್ ಗಳನ್ನು ತಮಿಳುನಾಡಿನಿಂದ ವ್ಯಕ್ತಿಯೊಬ್ಬ ಬಂದು ಖರೀದಿ ಮಾಡಿಕೊಂಡು ಹೋಗುತ್ತಿದ್ದ ಎಂದು ಹೇಳಿದ್ದಾರೆ. ಇವರ ಮಾಹಿತಿ ಆಧರಿಸಿ ಫೋನ್ ಗಳನ್ನು ಖರೀದಿಸಲು ಬಂದ ತಮಿಳುನಾಡಿನ ವ್ಯಕ್ತಿಯನ್ನು ಸೋಲದೇವನಹಳ್ಳಿಯ ಆರೋಪಿಯ ಮನೆಯಲ್ಲಿ ವಶಕ್ಕೆ ಪಡೆದಿದ್ದಾರೆ. ಗೊರಗುಂಟೆ ಪಾಳ್ಯದ ಮೆಟ್ರೋ ನಿಲ್ದಾಣದ ಬಳಿ ಭದ್ರಾವತಿಯ ಒಬ್ಬ ಸಹಚರನನ್ನು ವಶಕ್ಕೆ ಪಡೆದು 25 ಮೊಬೈಲ್, ಭದ್ರಾವತಿಯ ಮನೆಯಿಂದ 15 ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆದಿದ್ದು, 70 ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ದ್ವಿಚಕ್ರ, ಮೊಬೈಲ್‌ ಕಳ್ಳನ ಬಂಧನ

ಮೊಬೈಲ್ ಹಾಗೂ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಆರೋಪಿಯನ್ನು ಪುಟ್ಟೇನಹಳ್ಳಿ ಠಾಣೆ ಪೊಲೀಸರು ಬಂಧಿಸಿ 2.73 ಲಕ್ಷ ಮೌಲ್ಯದ 10 ಮೊಬೈಲ್ ಹಾಗೂ 2 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಜೆಪಿ ನಗರ ನಿವಾಸಿಯೊಬ್ಬರು ಕ್ಲಾರೆನ್ಸ್ ಶಾಲೆಯ ರಸ್ತೆಯಲ್ಲಿ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದಾಗ ದ್ವಿಚಕ್ರ ವಾಹನದಲ್ಲಿ ಬಂದ ಆರೋಪಿ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿರುತ್ತಾನೆ. ತಕ್ಷಣ ಅವರು ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ಕೈಗೊಂಡ ಪೊಲೀಸರು, ಸುಲಿಗೆ ಪ್ರಕರಣವೊಂದರಲ್ಲಿ ಕೇಂದ್ರ ಕಾರಾಗೃಹದಲ್ಲಿದ್ದ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಮೊಬೈಲ್ ಫೋನ್ ಕಳವು ಮಾಡಿರುವುದನ್ನುಒಪ್ಪಿಕೊಂಡಿದ್ದಾನೆ. ನಗರದ ವಿವಿಧ ಕಡೆ ಮೊಬೈಲ್ ಫೋನ್‌ ಮತ್ತು ದ್ವಿಚಕ್ರ ವಾಹನಗಳನ್ನು ಕಳವು ಮಾಡಿರುವುದನ್ನು ಒಪ್ಪಿಕೊಂಡಿದ್ದು, ಆತನಿಂದ 10 ಮೊಬೈಲ್ ಗಳನ್ನು ವಶಕ್ಕೆ ಪಡೆದು ಮರಳಿ ಕಾರಾಗೃಹಕ್ಕೆ ಕಳುಹಿಸಲಾಗಿದೆ.

ಕೆಲಸಕ್ಕೆ ಸೇರಿದ 10 ದಿನದಲ್ಲೇ ಕೈಚಳಕ ತೋರಿಸಿದ ಕೆಲಸದಾಕೆ; 253 ಗ್ರಾಂ ಚಿನ್ನಾಭರಣ ಜಪ್ತಿ

ಕೇರ್ ಟೇಕರ್ ಕೆಲಸಕ್ಕೆ ಸೇರಿದ ಕೇವಲ ಹತ್ತು ದಿನಗಳಲ್ಲೇ ಚಿನ್ನಾಭರಣ ಕಳ್ಳತನ ಮಾಡಿದ್ದ ಮನೆಕೆಲಸದ ಮಹಿಳೆ ಮತ್ತು ಆಕೆಯ ಪತಿಯನ್ನು ಬೆಂಗಳೂರಿನ ಹೆಣ್ಣೂರು ಠಾಣೆ ಪೊಲೀಸರು ಬಂಧಿಸಿ 20.24 ಲಕ್ಷ ಮೌಲ್ಯದ 253 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಅಪಾರ್ಟ್ ಮೆಂಟ್ ವೊಂದರಲ್ಲಿ ವಾಸವಿರುವ ನಿವಾಸಿಯೊಬ್ಬರ ಅಜ್ಜಿ ಆನಾರೋಗ್ಯದಿಂದ ಬಳಲುತ್ತಿದ್ದು, ಅವರ ಆರೈಕೆಗಾಗಿ ಕಳೆದ ಡಿ.31 ರಂದು ಓರ್ವ ಮಹಿಳೆಯನ್ನು ಕೇರ್ ಟೇಕರ್ ಕೆಲಸಕ್ಕೆ ನೇಮಕ ಮಾಡಿಕೊಂಡಿದ್ದರು. ಕೆಲಸದ ಅವಧಿಯಲ್ಲಿ ಮಾಲೀಕರಿಗೆ ತಿಳಿಯದಂತೆ ಈಕೆ ನಗದು ಮತ್ತು ಆಭರಣಗಳನ್ನು ಕಳ್ಳತನ ಮಾಡಿದ್ದಾಳೆ.

ಜ.11 ರಂದು ಈ ಮಹಿಳೆ ಮರಳಿ ಕೆಲಸಕ್ಕೆ ಬಂದಿರುವುದಿಲ್ಲ. ಆಕೆಯ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಕೆಲಸದಾಕೆಯ ಮೇಲೆ ಅನುಮಾನಗೊಂಡು, ಕೊಠಡಿಯ ಬೀರು ತೆಗೆದು ನೋಡಿದಾಗ ಅದರಲ್ಲಿದ್ದ ಚಿನ್ನಾಭರಣಗಳು ಹಾಗೂ ನಗದು ಕಾಣೆಯಾಗಿತ್ತು.

ಕೂಡಲೇ ಅವರು ಕೇರ್‌ ಟೇಕರ್ ವಿರುದ್ಧ ಹೆಣ್ಣೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಹೆಚ್ ಬಿ ಆರ್ ಲೇಔಟ್ ನಲ್ಲಿ ಮಹಿಳೆ ಹಾಗೂ ಆಕೆಯ ಪತಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಚಿನ್ನಾಭರಣ ಕಳವು ಮಾಡಿರುವುದಾಗಿ ಹೇಳಿದ್ದಾಳೆ. ನಗರದ ವಿವಿಧ ಮನೆಗಳಲ್ಲೂ ಕಳವು ಮಾಡಿರುವುದಾಗಿ ತಿಳಿಸಿದ್ದು, ಆಕೆಯಿಂದ 45 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.

ಈ ದಂಪತಿ ಕಳವು ಮಾಡಿದ ಚಿನ್ನಾಭರಣಗಳನ್ನು ಆಂಧ್ರಪ್ರದೇಶದ ನೆಲ್ಲೂರಿನ ಜ್ಯೂವೆಲರಿ ಅಂಗಡಿಯಲ್ಲಿ ಮಾರಾಟ ಮಾಡಿರುತ್ತಾರೆ. ನೋಟಿಸ್‌ ನೀಡಿದ ನಂತರ ಅಲ್ಲಿನ ಜ್ಯೂವೆಲರಿ ಮಾಲೀಕ 70 ಗ್ರಾಂ ಚಿನ್ನಾಭರಣವನ್ನು ಠಾಣೆಗೆ ತಂದು ಒಪ್ಪಿಸಿದ್ದಾರೆ.

ಕೆಲವು ಆಭರಣಗಳನ್ನು ಕೊತ್ತನೂರು ದಿಣ್ಣೆಯಲ್ಲಿ ವಾಸರುವ ಸ್ನೇಹಿತನಿಗೆ ನೀಡಿರುತ್ತಾರೆ. ಆತನಿಂದಲೂ 138 ಗ್ರಾಂ ಚಿನ್ನಾಭರಣವನ್ನು ಜಪ್ತಿ ಮಾಡಲಾಗಿದೆ. ಒಟ್ಟಾರೆ ಆರೋಪಿಗಳಿಂದ 253 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದು, ಇವುಗಳ ಮೌಲ್ಯ 20.24 ಲಕ್ಷ ರೂ. ಅಂದಾಜು ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಂಪನಿಗೆ ರೂ.96 ಲಕ್ಷ ವಂಚನೆ: ಮಾರಾಟ ಪ್ರತಿನಿಧಿ ಬಂಧನ

ಕಂಪನಿಯ ವೆಲ್ಡಿಂಗ್ ರಾಡ್‌ ಗಳನ್ನು ವಿವಿಧ ಅಂಗಡಿಗಳಿಗೆ ಮಾರಾಟ ಮಾಡಿದ್ದರಿಂದ ಬಂದ ಹಣವನ್ನು ತನ್ನ ವೈಯಕ್ತಿಕ ಖಾತೆ ಹಾಗೂ ನಗದು ರೂಪದಲ್ಲಿ ಪಡೆದು ರೂ.96 ಲಕ್ಷ ವಂಚಿಸಿದ ಪ್ರಕರಣದಲ್ಲಿ ಮಾರಾಟ ಪ್ರತಿನಿಧಿಯೊಬ್ಬನನ್ನು ಹಲಸೂರು ಗೇಟ್‌ ಪೊಲೀಸರು ಬಂಧಿಸಿದ್ದಾರೆ.

ವಿನಾಯಕ ಟ್ರೇಡಿಂಗ್ ಸೆಂಟರ್ ಪ್ರೈವೇಟ್ ಕಂಪನಿ ಮಾಲೀಕ ರಾಘವೇಂದ್ರ ಅವರು ದೂರು ನೀಡಿದ್ದರು. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು, ಹರಿಯಾಣದ ಹಿಸ್ಸಾರ್ ಜಿಲ್ಲೆಯ ದಯಾನಂದ್‌ ಅಗರ್‌ವಾಲ್ ಎಂಬಾತನನ್ನು ಬಂಧಿಸಿ, ಆತನಿಂದ ರೂ. 11,24,334 ಲಕ್ಷ ವಶಪಡಿಸಿಕೊಳ್ಳಲಾಗಿದೆ. ನಾಪತ್ತೆಯಾಗಿರುವ ಮತ್ತೊಬ್ಬ ಆರೋಪಿ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಕಂಪನಿಯಲ್ಲಿ ಮಾರಾಟ ಪ್ರತಿನಿಧಿಯಾಗಿದ್ದ ದಯಾನಂದ, ಬೆಂಗಳೂರು, ಮಂಡ್ಯ, ಚನ್ನಪಟ್ಟಣ ಸೇರಿದಂತೆ ಹಲವಾರು ಪಟ್ಟಣಗಳ ಅಂಗಡಿಗಳಿಗೆ ರೂ. 96 ಲಕ್ಷ ಮೌಲ್ಯದ ವೆಲ್ಡಿಂಗ್ ರಾಡ್‌ಗಳನ್ನು ಮಾರಾಟ ಮಾಡಿ ಬಂದ ಹಣವನ್ನು ಕಂಪನಿ ಬ್ಯಾಂಕ್ ಖಾತೆಗೆ ಜಮೆ ಮಾಡದೇ ತನ್ನ ವೈಯಕ್ತಿಕ ಖಾತೆಗೆ ಜಮಾ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ನಾಲ್ವರು ಮಾರಾಟ ಪ್ರತಿನಿಧಿಗಳ ವಿರುದ್ಧ ತನಿಖೆ ನಡೆಸಲಾಗಿದ್ದು,ಇವರಲ್ಲಿ ದಯಾನಂದ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಮಾರಾಟ ಮಾಡಿದ ಹಣವನ್ನು ನೀಡದೆ ಮೋಸ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ. ಆತನಿಂದ ರೂ. 11 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ. ಮತ್ತಿಬ್ಬರು ಆರೋಪಿಗಳು ಕೃತ್ಯದಲ್ಲಿ ಭಾಗಿಯಾಗಿರುವ ಬಗ್ಗೆ ಯಾವುದೇ ಸಾಕ್ಷ್ಯಾಧಾರಗಳು ಕಂಡು ಬಂದಿಲ್ಲದ ಕಾರಣ ಅವರಿಗೆ ನೋಟಿಸ್ ನೀಡಲಾಗಿದೆ. ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿಗಾಗಿ ಹುಡುಕಾಟ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.

ವರದಿ: ಎಚ್.‌ ಮಾರುತಿ, ಬೆಂಗಳೂರು

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.
Whats_app_banner