Bangalore News: ಬೆಂಗಳೂರಿನಲ್ಲಿ ಬರಲಿವೆ ಸ್ವಂತ, ಸುಸಜ್ಜಿತ ನೋಂದಣಿ ಕಚೇರಿ ಹೊಸ ಕಟ್ಟಡಗಳು; ಸಚಿವ ಸಂಪುಟ ಒಪ್ಪಿಗೆ
Bangalore News: ಬೆಂಗಳೂರಿನಲ್ಲಿರುವ ನೋಂದಣಿ ಹಾಗೂ ಮುದ್ರಾಂಕ ಇಲಾಖೆಯ ಕಚೇರಿಗಳಿಗೆ ಸ್ವಂತ ಕಟ್ಟಡ ಒದಗಿಸುವ ಯೋಜನೆಗೆ ಕರ್ನಾಟಕ ಸಚಿವ ಸಂಪುಟ ಒಪ್ಪಿಗೆ ನೀಡಿದೆ.

Bangalore News: ಬೆಂಗಳೂರಿನಲ್ಲಿ ಇರುವ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ 2 ಜಿಲ್ಲಾ ನೊಂದಣಿ ಕಚೇರಿ ಹಾಗೂ 34 ಉಪನೋಂದಣಿ ಕಚೇರಿಗಳನ್ನು ಸ್ವಂತ ಕಟ್ಟಡಗಳಿಗೆ ಸ್ಥಳಾಂತರಿಸಲು ಬೇಕಾದ ಆರ್ಥಿಕ ಅನುದಾನಕ್ಕೆ ಕರ್ನಾಟಕ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಬಿಬಿಎಂಪಿ/ಬೆಂಗಳೂರು ನಗರ ಜಿಲ್ಲಾಧಿಕಾರಿ/ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿಗಳಿಂದ ಹಂಚಿಕೆಯಾಗುವ ನಿವೇಶನದಲ್ಲಿ ತಲಾ ಒಂದು ಕಟ್ಟಡವನ್ನು ಗರಿಷ್ಠ ರೂ.2.50 ಕೋಟಿಗಳ ವೆಚ್ಚದಲ್ಲಿ ಹೊಸದಾಗಿ ನಿರ್ಮಾಣ ಮಾಡಲು ಅವಕಾಶ ಮಾಡಿಕೊಡಲಾಗಿದೆ. ಇಲ್ಲವೇ ನಿವೇಶನ ಲಭ್ಯವಾಗದಿದ್ದಲ್ಲಿ ಬಿಬಿಎಂಪಿ/ಬೆಂಗಳೂರು ನಗರ ಜಿಲ್ಲಾಧಿಕಾರಿ / ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿಗಳು ಹೊಂದಿರುವ ಕಟ್ಟಡಗಳಲ್ಲಿ ಸ್ಥಳಾವಕಾಶ ಲಭ್ಯವಾದಲ್ಲಿ ಕಚೇರಿಗಳನ್ನು ಸ್ಥಳಾಂತರಿಸಬಹುದು. ತಲಾ ಒಂದು ಕಛೇರಿಗಳನ್ನು ಗರಿಷ್ಠ ರೂ.50.00 ಲಕ್ಷಗಳ ವೆಚ್ಚದಲ್ಲಿ ನವೀಕರಿಸಲು ಅಥವಾ ಈಗಾಗಲೇ ನಿರ್ಮಾಣಗೊಂಡಿರುವ ಕಟ್ಟಡದ ಮೇಲೆ ಮತ್ತೊಂದು ಮಹಡಿಯನ್ನು ನಿರ್ಮಿಸಲು ತಗಲುವ ವಾಸ್ತವಿಕ ವೆಚ್ಚವನ್ನು ಭರಿಸಲು, ಗರಿಷ್ಠ ರೂ.1.50 ಕೋಟಿಗಳಿಗೆ ಸೀಮಿತಗೊಳಿಸಲು ಸೂಚಿಸಲಾಗಿದೆ.
ನಿರ್ಮಾಣ/ನವೀಕರಣ ಕಾರ್ಯವನ್ನು ನಿರ್ವಹಿಸುವ ಕರ್ನಾಟಕ ಗೃಹ ಮಂಡಳಿಗೆ ಕೇಂದ್ರ ಸರ್ಕಾರದ ವಿಶೇಷ ಸಹಾಯ ಯೋಜನೆಯಡಿ ಬಿಡುಗಡೆ ಮಾಡಿರುವ ರೂ.71 ಕೋಟಿಗಳು ಹಾಗೂ 2024-25ನೇ ಸಾಲಿನಲ್ಲಿ ಲೆಕ್ಕಶೀರ್ಷಿಕೆ 4059-80-051-0-30-132 (ಬಂಡವಾಳ ವೆಚ್ಚ) ಅಡಿಯಲ್ಲಿ ಲಭ್ಯವಿರುವ ರೂ.5 ಕೋಟಿಗಳು, ಒಟ್ಟು ರೂ.76 ಕೋಟಿಗಳ ಅನುದಾನವನ್ನು ಸ್ಥಳ ಲಭ್ಯತೆಯನುಸಾರ ಪ್ರತಿಯೊಂದು ಕಛೇರಿಯ ವಿಸ್ತೃತ ಯೋಜನೆಯನ್ನು ಸಲ್ಲಿಸುವ ಷರತ್ತಿಗೊಳಪಟ್ಟು ಬಿಡುಗಡೆ ಮಾಡಲು ಸೂಚನೆ ನೀಡಲಾಗಿದೆ.
ಬಿಬಿಎಂಪಿ/ಬೆಂಗಳೂರು ನಗರ ಜಿಲ್ಲಾಧಿಕಾರಿ/ಬೆಂಗಳೂರು ನಗರ ಜಿಲ್ಲಾ ಪಂಚಾಯತಿಗಳಿಂದ ಲಭ್ಯವಾಗುವ ನಿವೇಶನ/ ಕಟ್ಟಡಗಳನ್ನಾಧರಿಸಿ ಬೆಂಗಳೂರಿನಲ್ಲಿ ಇರುವ ಜಿಲ್ಲಾ ನೋಂದಣಿ ಕಛೇರಿ / ಉಪ ನೋಂದಣಿ ಕಚೇರಿಗಳನ್ನು ಸ್ಥಳಾಂತರಿಸಲು, ಹೊಸ ಕಟ್ಟಡಗಳನ್ನು ನಿರ್ಮಾಣ ಮಾಡಲು / ಈಗಾಗಲೇ ನಿರ್ಮಾಣಗೊಂಡಿರುವ ಕಟ್ಟಡಗಳಲ್ಲಿ ಸ್ಥಳಾವಕಾಶ ಲಭ್ಯವಾದಲ್ಲಿ ಕಚೇರಿಗಳನ್ನು ನವೀಕರಿಸಲು, ಇಲಾಖಾ ಸಚಿವರ ಅನುಮೋದನೆಯೊಂದಿಗೆ ಇಲಾಖೆಯೇ ಉಪ ನೋಂದಣಿ ಕಚೇರಿಗಳನ್ನು ಗುರುತಿಸಿ, ಘಟಕವಾರು ಅನುದಾನ ಬಿಡುಗಡೆ ಮಾಡಲು ಸಚಿವ ಸಂಪುಟ ಒಪ್ಪಿದೆ.
ನೋಂದಣಿ ಕಚೇರಿಗಳಲ್ಲಿ ಆಧುನಿಕ ತಂತ್ರಜ್ಞಾನ
ನೊಂದಣಿ ಮತ್ತು ಮುದ್ರಾಂಕ ಇಲಾಖೆಯ ಕಚೇರಿಗಳಿಗೆ ಖರೀದಿ ,ಅಳವಡಿಕೆ, ನಿರ್ವಹಣೆ ಆಧಾರದ ಮೇಲೆ ಬಳಸಲು ಅವಕಾಶ ನೀಡಲಾಗಿದೆ. ದಿನಾಂಕದಿಂದ 5 ವರ್ಷಗಳ ಅವಧಿಗೆ ಹಾಗೂ ಗೋ-ಲೈವ್ ಪೂರ್ವದ ಅವಧಿಯು ಸೇರಿದಂತೆ ಪೂರೈಸಲು, ಆರ್‌ಎಫ್‌ಪಿ ಹಾಗೂ ನೆಗೋಷಿಯೇಶನ್ ಮೂಲಕ ಸ್ಕಾö್ಯನ್ ಮಾಡಿದ ದಾಖಲೆಗಳ ಪ್ರತಿ ಪುಟಕ್ಕೆ ರೂ.47.20 ದರದಲ್ಲಿ (ಶೇ.18% ರಷ್ಟು ಜಿಎಸ್‌ಟಿ ಸೇರಿದಂತೆ) ರೂ.637.45 ಕೋಟಿಗಳ ಪರಿಷ್ಕೃತ ಅಂದಾಜಿಗೆ ಹಾಗೂ ಹಿಂದಿನ ಸಚಿವ ಸಂಪುಟ ಸಭೆಯಲ್ಲಿ ಗೋ-ಲೈವ್‌ಗಾಗಿ ನೀಡಿದ್ದ 90 ದಿನಗಳ ಅವಧಿಯನ್ನು 464 ದಿನಗಳಿಗೆ ವಿಸ್ತರಿಸಲು/ ಸ್ಥೀರಿಕರಿಸಲು, “ಕರ್ನಾಟಕ ಸರ್ಕಾರ (ವ್ಯವಹಾರ ನಿರ್ವಹಣೆ) ನಿಯಮಗಳು, 1977ರ ಮೊದಲ ಅನುಸೂಚಿ ಸಂಖ್ಯೆ: 15ರ ಪ್ರಕಾರ ಅನುಮೋದನೆ ನೀಡಲು; ಸಚಿವ ಸಂಪುಟ ನಿರ್ಧರಿಸಿದೆ.
ಆನೇಕಲ್ ಪ್ರಜಾಸೌಧ
ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲ್ಲೂಕಿನಲ್ಲಿ “ಪ್ರಜಾಸೌಧ” ಆನೇಕಲ್ ತಾಲ್ಲೂಕು ಆಡಳಿತ ಕೇಂದ್ರ ಕಟ್ಟಡಕ್ಕೆ ಅವಶ್ಯವಿರುವ ಎಲ್ಲಾ ಕಾಮಗಾರಿಗಳನ್ನು ಒಳಗೊಂಡಂತೆ ಟೈಪ್-ಸಿ ಮಾದರಿಯಲ್ಲಿ ರೂ.16.00 ಕೋಟಿಗಳ ಅಂದಾಜು ಮೊತ್ತದಲ್ಲಿ ನಿರ್ಮಿಸಲು ಅನುಮೋದನೆ ನೀಡಲು; ಸಚಿವ ಸಂಪುಟ ನಿರ್ಧರಿಸಿದೆ.
ವಿಕಾಸಸೌಧ ಎದುರು ಸ್ಪೂರ್ತಿಸೌಧ
ಅಂಬೇಡ್ಕರ್ ಜಯಂತಿ ಸಂದರ್ಭದಲ್ಲಿ ಆಚರಣೆ ಮಾಡಲು ದಲಿತ ಸಂಘಟನೆಗಳು ಬೇಡಿಕೆ ಸಲ್ಲಿಸಿದ್ದ ಮೇರೆಗೆ ಲೋಕೋಪಯೋಗಿ ಇಲಾಖೆ ವತಿಯಿಂದ ವಿಕಾಸಸೌಧದ ಮುಂದಿನ ಖಾಲಿ 29.85 ಗುಂಟೆ ಜಾಗದಲ್ಲಿ 87 ಕೋಟಿ ವೆಚ್ಚದಲ್ಲಿ ಸ್ಪೂರ್ತಿಸೌಧ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ.
