ಬೆಂಗಳೂರಿನಿಂದ ಮಹಾರಾಷ್ಟ್ರ ಮಾಲೆಗಾಂವ್, ನಾಸಿಕ್‌ಗೂ ಸುರಂಗ ಮಾರ್ಗ; ವಿಸ್ತೃತ ವರದಿಯಲ್ಲಿ ಬಿಬಿಎಂಪಿ ಎಡವಟ್ಟು
ಬೆಂಗಳೂರು ಮಹಾನಗರದಲ್ಲಿ ರೂಪಿಸುತ್ತಿರುವ ಸುರಂಗ ಮಾರ್ಗ ಮಹಾರಾಷ್ಟ್ರದ ನಗರಗಳಿಗೂ ಸಂಪರ್ಕ ಕಲ್ಪಿಸಲಿದೆಯಾ ಎನ್ನುವ ಅನುಮಾನವನ್ನು ವಿಸ್ತೃತಾ ಯೋಜನಾ ವರದಿ ಹುಟ್ಟು ಹಾಕಿದೆ.
ಬೆಂಗಳೂರು: ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ದಿ ಸಚಿವ ಡಿ.ಕೆ.ಶಿವಕುಮಾರ್ ಅವರ ಬಹು ಕನಸಿನ ಯೋಜನೆ ಬೆಂಗಳೂರು ಸುರಂಗ ಮಾರ್ಗ ಯೋಜನೆ ಹಂತದಲ್ಲೇ ವಿವಾದಕ್ಕೆ ಸಿಲುಕಿದೆ. ಬೆಂಗಳೂರು ಸುರಂಗ ಮಾರ್ಗಕ್ಕೆ ಸಂಬಂಧಿಸಿದಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ರೂಪಿಸಿರುವ ವಿಸ್ತೃತ ಯೋಜನಾ ವರದಿ( ಡಿಪಿಆರ್) ಗೊಂದಲವನ್ನು ಸೃಷ್ಟಿಸುವಂತಿದೆ. ಎಲ್ಲಿಯ ಬೆಂಗಳೂರು ಮಹಾನಗರ, ಎಲ್ಲಿಯ ಮಹಾರಾಷ್ಟ್ರ ದ ಮಾಲೆಗಾಂವ್ ಹಾಗೂ ನಾಸಿಕ್ ನಗರಗಳು. ಬೆಂಗಳೂರಿನಿಂದ ಸುಮಾರು ಒಂದು ಸಾವಿರ ಕಿ.ಮಿ ದೂರ ಇರುವ ಮಾಲೆಗಾಂವ್ ಹಾಗೂ ನಾಸಿಕ್ ನಗರಕ್ಕೆ ಸುರಂಗ ಮಾರ್ಗ ನಿರ್ಮಿಸಲಾಗುತ್ತಿದೆಯಾ ಎನ್ನುವ ಅನುಮಾನವನ್ನು ಡಿಪಿಆರ್ ವರದಿ ಹುಟ್ಟು ಹಾಕಿದೆ.
ಬೆಂಗಳೂರಿನಲ್ಲಿ ಮಿತಿ ಮೀರಿರುವ ಸಂಚಾರ ದಟ್ಟಣೆಯನ್ನು ನಿಗ್ರಹಿಸುವ ನಿಟ್ಟಿನಲ್ಲಿ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈಗಾಗಲೇ ಮೆಟ್ರೋ ಬಂದಿದ್ದರೂ ದಟ್ಟಣೆಯೇನೂ ಕಡಿಮೆಯಾಗಿಲ್ಲ. ರಸ್ತೆಗಳಲ್ಲಿ ಗಂಟೆಗಟ್ಟಲೇ ಕಾದು ಸಂಚರಿಸಿ ಹೈರಾಣಾಗುವುದನ್ನು ತಪ್ಪಿಸಲು ಸುರಂಗ ಮಾರ್ಗದ ಯೋಜನೆಯನ್ನು ರೂಪಿಸಲಾಗಿದೆ. ಬೆಂಗಳೂರಿನ ಉತ್ತರದಿಂದ ದಕ್ಷಿಣಕ್ಕೆ ಸುರಂಗ ರಸ್ತೆ ನಿರ್ಮಾಣ ಯೋಜನೆಗೆ ಸರಿಸುಮಾರು 15 ಸಾವಿರ ಕೋಟಿ ರೂ. ವೆಚ್ಚವಾಗಲಿದೆ. ಹೆಬ್ಬಾಳದಿಂದ ಸಿಲ್ಕ್ ಬೋರ್ಡ್‌ವರೆಗಿನ 18.5 ಕಿ.ಮೀ ಸುರಂಗ ಮಾರ್ಗಕ್ಕೆ ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ. 120 ಅಡಿ ಆಳದಲ್ಲಿ 6 ಪಥ ನಿರ್ಮಾಣ ಮಾಡುತ್ತಿದ್ದು, ಭೂಸ್ವಾಧೀನಕ್ಕೆ 800 ಕೋಟಿ ಬೇಕಾಗುತ್ತದೆ. ಯೋಜನೆಗಾಗಿ 8000 ಸಾವಿರ ಕೋಟಿ ಸಾಲ ಪಡೆದುಕೊಳ್ಳಲು ಬಿಬಿಎಂಪಿ ಮುಂದಾಗಿದೆ.
ಈ ಯೋಜನೆಗೆ ಸಂಬಂಧಿಸಿದಂತೆ ಬಿಬಿಎಂಪಿ ವಿಸ್ತೃತ ಯೋಜನಾ ವರದಿಯನ್ನು ಕಳೆದ ವರ್ಷವೇ ಸಿದ್ದಪಡಿಸಿದೆ. ಇದರಲ್ಲಿ ಯೋಜನೆಯ ಸಮಗ್ರ ಮಾಹಿತಿ ಇದೆ. ಬೆಂಗಳೂರಿನ ವಾಹನಗಳ ಸಂಖ್ಯೆ, ವಾಹನ ದಟ್ಟಣೆ ಪ್ರಮಾಣವನ್ನು ಅಂಕಿ ಸಂಖ್ಯೆ ಸಮೇತ ವರದಿಯಲ್ಲಿ ನೀಡಲಾಗಿದೆ. ಅದರಲ್ಲೂ ಸುರಂಗ ಮಾರ್ಗ ಹಾದು ಮಾರ್ಗದುದ್ದಕ್ಕೂ ನಿತ್ಯ ಸಂಚರಿಸುವ ವಾಹನಗಳ ವಿವರವನ್ನು ನೀಡಲಾಗಿದೆ.
ಒಟ್ಟು ಒಂಬತ್ತು ಮಾರ್ಗಗಳನ್ನು ಗುರುತಿಸಿ ಅಲ್ಲಿ ಸಂಚರಿಸುವ ವಾಹನಗಳ ನಿಖರ ಮಾಹಿತಿಯನ್ನು ವರದಿಯಲ್ಲಿ ಒದಗಿಸಲಾಗಿದೆ. ಅದು ಮಾಲೂರು ಬೈಯ್ಯಪ್ಪನಹಳಿ, ಎನ್ ಆರ್ ರಸ್ತೆ, ಸಿದ್ದಾಪುರ ರಸ್ತೆ, ಗುಟ್ಟಹಳ್ಳಿ ಮುಖ್ಯರಸ್ತೆ, ಮರಿಗೌಡ ರಸ್ತೆ,ಬೆಂಗಳೂರು ಚೆನ್ನೈ ಹೆದ್ದಾರಿಯ ವಿವರಗಳಿವೆ.
ಆದರೆ ಡಿಪಿಆರ್ ನಲ್ಲಿ ಬೆಂಗಳೂರಿನ ಯಲಹಂಕ, ಹೆಬ್ಬಾಳ, ಯಶವಂತಪುರ, ವಿಲ್ಸನ್ ಗಾರ್ಡನ್, ಆಡುಗೋಡಿ, ಎಲೆಕ್ಟ್ರಾನಿಕ್ಸ್ ಸಿಟಿ ವರೆಗಿನ ವಾಹನ ದಟ್ಟಣೆ ಸಂಖ್ಯೆಯೂ ಇದೆ,
ಇದೇ ಅಂಶಗಳಲ್ಲಿ ಬೆಂಗಳೂರಿನ ಮಾರ್ಗ ಹಾಗೂ ಸ್ಥಳಗಳ ಬದಲು ಮಹಾರಾಷ್ಟ್ರದ ಮಾಲೆಗಾಂವ್ ಹಾಗೂ ನಾಸಿಕ್ ನಡುವಿನ ಆರು ಅಂಶಗಳು ಸೇರ್ಪಡೆಯಾಗಿವೆ. ಮಾಲೆಗಾಂವ್‌ನಿಂದ ನಾಸಿಕ್ ಹಾಗೂ ನಾಸಿಕ್ ನಿಂದ ಮಾಲೆಗಾಂವ್ ವರೆಗಿನ ರಸ್ತೆ ಮಾರ್ಗದ ವಾಹನಗಳ ಸಂಚಾರ ಸಂಖ್ಯೆ ವಿವರ ಇದೆ. ಬೆಂಗಳೂರು ಹಾಗೂ ನಾಸಿಕ್- ಮಾಲೇಗಾಂವ್ ನಗರಗಳಿಗೆ ಎಲ್ಲಿಯ ನಂಟು ಎಂದು ವರದಿ ಗಮನಿಸಿದವರಿಗೆ ಅನ್ನಿಸಿಬಿಡುತ್ತದೆ. ಅಲ್ಲಿನ ಮಾಹಿತಿ ಪಡೆಯುವಾದ ಇದನ್ನು ಹಾಗೆಯೇ ಉಳಿಸಿರುವ ಸಾಧ್ಯತೆಯಿದೆ. ಮಾರ್ಗ ಹಾಗೂ ವಾಹನಗಳ ಸಂಖ್ಯೆ ಬೇರೆ ಬೇರೆಯಾ ಅಥವಾ ನಾಸಿಕ್ -ಮಾಲೇಗಾಂವ್ ನಗರಗಳದ್ದ ಎನ್ನುವುದು ಮಾತ್ರ ಖಚಿತವಾಗಿಲ್ಲ.
ಈ ಮಾಹಿತಿಯನ್ನ ಪತ್ರಕರ್ತ ಹಾಗೂ ಬರಹಗಾರ ಕೃಷ್ಣಭಟ್ ಅವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಾಕಿದಾರೆ.
ಬೆಂಗಳೂರಿನಿಂದ ಮುಂಬೈನ ಮಾಲೆಗಾಂವ್‌ಗೆ ಸುರಂಗ ಮಾರ್ಗ!
ಮೂರೇ ಮೂರು ತಿಂಗಳಲ್ಲಿ ಸಿದ್ಧಪಡಿಸಿದ ಡಿಪಿಆರ್‌ನಲ್ಲಿ ಸ್ಫೋಟಕ ಮಾಹಿತಿ ಬಹಿರಂಗ. ಸುರಂಗ ಮಾರ್ಗ ನಿರ್ಮಾಣವಾಗುವವರೆಗೂ ಗೌಪ್ಯವಾಗಿಟ್ಟು, ಉದ್ಘಾಟನೆ ದಿನವೇ ಬೆಂಗಳೂರಿನ ಜನತೆಗೆ ಅಚ್ಚರಿ ಉಂಟು ಮಾಡಿ, ಸುರಂಗ ಹೊಕ್ಕರೆ ಮಾಳೆಗಾಂವ್‌ನಲ್ಲಿ ಹೊರಗೆ ಬೀಳುವ ಹಾಗೆ ಮಾಡಬೇಕು ಅಂದುಕೊಂಡಿದ್ದ ಬ್ರ್ಯಾಂಡ್ ಬೆಂಗಳೂರು ಬ್ರದರ್ಸ್‌ಗೆ ಆಘಾತವಾಗಿದೆ. ಈಗಾಗಲೇ ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಈ ಮಾಹಿತಿ ಬಹಿರಂಗವಾಗಿದ್ದರಿಂದ ಸುರಂಗ ಮಾರ್ಗದ ದಿಕ್ಕು ಬದಲಾಯಿಸುವ ಸಾಧ್ಯತೆ ಇದೆ. ಬಹುಶಃ ಈಗ ಸುರಂಗ ಮಾರ್ಗದ ಡಿಪಿಆರ್ ಬದಲಾವಣೆ ಆಗಿ ನ್ಯೂಯಾರ್ಕ್ ಕಡೆಗೆ ಮುಖ ಮಾಡಬಹುದು! ಎಂದು ತಮ್ಮ ಅಭಿಪ್ರಾಯ ದಾಖಲಿಸಿದ್ದಾರೆ ಕೃಷ್ಣಭಟ್.
ಈ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿರುವ ಬರಹಗಾರ ರಾಜೀವ್ ಹೆಗಡೆ, ಮಧ್ಯೆ ಬಂಡೆ ಸಿಕ್ಕಿರಬೇಕು, ಅದಕ್ಕಾಗಿ ದಿಕ್ಕು ತಪ್ಪಿದೆ ಎಂದು ವ್ಯಂಗವಾಡಿದ್ದಾರೆ.
ವಿಭಾಗ